ಒಡಕಲು-ಬಡಕಲು

೧೯೭೮ರಲ್ಲಿ ಹೇಗೆಲ್ಲಾ ಯೋಚಿಸುತ್ತಿದ್ದರು-ಬರೆಯುತ್ತಿದ್ದರು ಎನ್ನುವ ಕುತೂಹಲವಿದ್ದಿರಬಹುದಾದವರಿಗೆ, ಇದ್ದರೆ ಇರಲಿ ಎಂದು ಇಲ್ಲಿ ಪ್ರಕಟಿಸಿದ್ದೇನೆ. ಇದರಾಚೆಗೆ ಇವುಗಳಿಗೆ ಯಾವುದೇ ಮಹತ್ವವಿಲ್ಲ-ಉದ್ದೇಶವೂ ಇಲ್ಲ.

Saturday, May 13, 2006

ಸಣ್ಣಕತೆ- ಸುಳ್ಳು ಸುಳ್ಳೇ ಒಂದು ಕತೆ

"ನನಗೆ ` ನಾನು ' ಅರ್ಥವಾಗಿದ್ದೇನೆಯೆ ಎಂದು ಹೇಳುತ್ತಾ ಹೋಗುವ ಕ್ರಮದಲ್ಲಿ , ` ಇತರರು' ನನಗೆ ಅರ್ಥವಾಗಿದ್ದಾರೆಯೆ ಎಂಬುದನ್ನು ಪರೀಕ್ಷಿಸುತ್ತಾ ಹೋದಾಗ, ಗ್ರಹಿಕೆಗೆಟುಕಿದುದನ್ನು ಬರವಣಿಗೆಗಿಳಿಸಿದಾಗ ಕತೆ ತನ್ನಂತೆ ತಾನೆ ಸಾಗುತ್ತದೆ. ಕತೆ ಎಂದರೆ ಬರೆಯುವವನ ನೋಟ, ಆಲೋಚನೆ, ನೆನೆಪುಗಳು, ಅನುಭವಗಳ ಪ್ರಾಮಾಣಿಕ ಚಿತ್ರಣವೆಂಬ ನಂಬಿಕೆಯೆ ಬರೆಯುವುದಕ್ಕೆ ಪ್ರಚೋದಿಸುತ್ತದೆ. ಇಲ್ಲಿ ನಾನಂತು ಬೆತ್ತಲಾಗುತ್ತೇನೆ. ಉಳಿದವರನ್ನು ಬಟಾಬಯಲಿಗೆ ತರುತ್ತೇನೊ ಇಲ್ಲವೋ , ಈ ಬಟಾಬಯಲಿಗೆಳೆಯುವ, ಬಟಾಬಯಲಿಗಿಳಿಯುವ ಕ್ರಮದಲ್ಲಿ ನಾನು ಕ್ರೂರಿಯಾಗಿರಬಹುದು. ಹಿಂಸಿಸಿ, ಹಿಂಸೆಗೊಳಗಾದಾಗ.....


ಎಲ್ಲವನ್ನೂ ಹೇಳಿಬಿಡುತ್ತಾಳೆ. ಆದರೆ ಯಾವುದನ್ನೂ ಹೇಳುವುದಿಲ್ಲ. ಹೇಳಿಯೂ ಹೇಳದಂತೆ ಇರುವ ಹಿನ್ನೆಲೆಯಲ್ಲಿ ಸಂಕೋಚ ತಡೆಯಾಗಿದೆ ಎಂದೇನು ಈ ನಿರೂಪಕನಿಗೆ ಅನ್ನಿಸುವುದಿಲ್ಲ. ಏಕೆಂದರೆ ಈ ಸಂಕೋಚವನ್ನು ಮೀರಿ ಬೆಳೆಯುವ ಹಠವನ್ನಂತೂ ಆಕೆಯಲ್ಲಿ ಕಂಡಿದ್ದಾನೆ. ಅವನಿಗೆ ಅರ್ಥವಾಗುತ್ತದೆ ಅರ್ಥವಾಗುವುದಿಲ್ಲ. ಅರ್ಥವಾಗಿದ್ದರ ಕುರಿತಂತೆ ನಕ್ಕುಬಿಡುವಂತಹ ಮಧ್ಯ ವಯಸ್ಸು ಅವನದು. ಪ್ರೌಢಿಮೆಯೆಂದೇನೂ ಅಲ್ಲ. ಆದರೂ ಚಂಚಲವಾಗುವ ಮನಸ್ಸನ್ನು ಮತ್ತಷ್ಟು ದುರ್ಬಲವಾಗಲಿಕ್ಕೆ ಬಿಡದಂತಹ ಪಕ್ವತೆಯಂತೂ ಇದೆ. ನಗುತ್ತಾನೆ. ಒಳಗೇ ನಗುತ್ತಾನೆ. ಬಹಿರಂಗವಾಗಿಯಲ್ಲ. ನಕ್ಕು ಬಿಟ್ಟರೆ "ಯಾಕ್ಸಾರ್, ನಗ್ತಿರೋದು?``ಅಂತ ಕೇಳಿ ಬಿಡುತ್ತಾಳೆ. ನಕ್ಕು- ನಂತರ ವಿಪರ್ಯಾಸಾರ್ಥಕ್ಕೆ ಈಡಾಗುವ ಸ್ಥಿತಿಗೆ ನೂಕಿಕೊಳ್ಳುವುದು ಇಷ್ಟವಿರೋದಿಲ್ಲ. ಅವಳ ಸಮ್ಮುಖದಲ್ಲಿ ಒಮ್ಮೆ ನಕ್ಕಾಗ ಅವಳು ಕೇಳಿಯೂ ಬಿಟ್ಟಳು.ತಬ್ಬಿಬ್ಬುಗೊಂಡ. ಸುಳ್ಳು ಹೇಳೋಕ್ಕಾಗೋಲ್ಲ. ಸುಳ್ಳು ಹೇಳಿದರೆ ಬಗೆದು ನೋಡಿಬಿಡುವ ಮೊನಚುಗಣ್ಣುಗಳು ಅವಳವು.

``ಯಾಕ್ ನಕ್ರೀಂತ ಹೇಳ್ತಾನೆ ಇಲ್ವಲ್ಲ." - ಅವಳು ಹಠ ಹಿಡಿದಳು. ಹಠದೊಂದಿಗೆ ಅವಳ ಕೆನ್ನೆಗಳು ಉಬ್ಬುಬ್ಬು ಆದಾಗ ಅವುಗಳ ಮೋಡಿಗೆ ಸಿಲುಕುತ್ತಾನೆ. ನಿಜ ಹೇಳಿದರೆ ನಂಬುವಂತೆಯೂ ಇಲ್ಲ. ಆದರೂ ಧೈರ್ಯ ಒಗ್ಗೂಡಿಸಿಕೊಂಡು ಆ ಕ್ಷಣ ಅನ್ನಿಸಿದ್ದನ್ನು ಹೇಳುತ್ತಾನೆ.
``ನೀನು ಎಳೆ ಮಗು ಇದ್ದ ಹಾಗಿದ್ದೀಯ.."
ಅವನು ಹೇಳಿದ್ದು ಅರೆ ಸುಳ್ಳು- ಅರೆ ನಿಜ. ಪೂರ್ತಿ ನಿಜವನ್ನು ಹೇಳುವ ಧೈರ್ಯ ಇಲ್ಲ. ನನಗೆ ಗೊತ್ತಿದೆ, ನೀನು ಹೇಳುವುದನ್ನು ಹೇಳಿಬಿಡು ಎಂದೇನಾದರೂ ಹಠ ಹಿಡಿದರೆ ಎಂಬ ಆತಂಕ ಅವನದು.
ಕೇಳಿದಾಗ ಅವನೇನಾದರೂ ಹೇಳಿಬಿಟ್ಟರೆ..ಕೇಳುವ ಧೈರ್ಯ ಅವಳಿಗೂ ಇಲ್ಲ. ಹಾಗೆಂದೆ ಅವರಿಬ್ಬರ ಮಧ್ಯೆ , ಅರೆ ಸುಳ್ಳು- ಅರೆ ನಿಜ.
ಹಾಗೆಂದೆ: ``ನೀನು ಎಳೆ ಮಗು ಇದ್ದ ಹಾಗೆ ಇದ್ದೀಯ.."
``ನಾನೇನೂ ಎಳೆ ಮಗುವಲ್ಲ.."
ಅವಳ ಕೆನ್ನೆ ಉಬ್ಬು ಮತ್ತಷ್ಟು ಉರುಟುರುಟಾಗಿ, ಅದನ್ನು ನೋಡಿದ ಅವನಿಗೆ ಮತ್ತಷ್ಟು ನಗೆ ಬರುತ್ತದೆಯಲ್ಲದೆ ಅವನ ತಂಗಿ ಮಗು ರಾಜಿಯ ನೆನಪು ನುಗ್ಗಿ ಬರುತ್ತದೆ. ``ನಾನೇನೂ ಎಳೆ ಮಗುವಲ್ಲ``ಅವಳ ಸಾಲುಗಳನ್ನು ಮುಗಿಸಿದಾಗ ಅವಳ ಕೆನ್ನೆ ಉರುಟಾದದ್ದರ ಜೊತೆಜೊತೆಗೆಯೇ ಕಣ್ಣಲ್ಲಿ ದಳ್ಳುರಿಯೂ ಕಾಣಿಸಿಕೊಂಡಿತು.
ಎಳೆ ಮಗು ಅಲ್ಲ ಎಂದು ಹೇಳಿದರೆ ನಗುತ್ತಿದ್ದಾನಲ್ಲ- ದಳ್ಳುರಿಯ ಹೊಳಪು ಇಮ್ಮಡಿಸಿತು. ಅವನು ನಕ್ಕಾಗ ಅದು ನಗು ಅಲ್ಲ, ಅವಳು ಕೋಪಿಸಿಕೊಂಡಾಗ ಅದು ಕೋಪವೂ ಅಲ್ಲ ಎಂದು ಅವರಿಬ್ಬರಿಗೂ ಗೊತ್ತು. ನಗುವಿಗೆ ಹೆಚ್ಚು ಮೊನಚು ನೀಡಿದರೆ ಅವಮಾನವೆಂದು ಭಾವಿಸಿ ಕೂಗಾಡಿಯಾಳೆಂಬ ಮುನ್ನೆಚ್ಚರಿಕೆ ಅವನದಾದರೆ - ಕೋಪಿಸಿಕೊಂಡರೆ-ಕೂಗಾಡಿದರೆ- ಹಠ ಮಾಡಿದರೆ ಕ್ಷುಲ್ಲಕವಾದದ್ದನ್ನ ಸಹಿಸದಷ್ಟು ಸಣ್ಣಾಕೆ ಎಂದು ಭಾವಿಸಿಯಾನೆಂಬ ಆತಂಕ ಅವಳದ್ದು. ಅವರಿಬ್ಬರೂ ಸಣ್ಣವರಾಗಲು ಒಪ್ಪುವುದಿಲ್ಲ. ಹಿಂಸಿಸಲು ಬಯಸುವುದಿಲ್ಲ. ಆಗೊಮ್ಮೆ ಈಗೊಮ್ಮೆ ತುಟಿ ಜಾರುವ ಸುಕ್ಷ್ಮಾತಿಸೂಕ್ಷ್ಮ ಮಾತುಗಳನ್ನು ಹಿಡಿದು ಪರಸ್ಪರ ಅಂತರಂಗಗಳಿಗೆ ದಾರಿ ತೆಗೆಯುತ್ತಾ- ಗೋಚರಿಸಿದ ದಾರಿಯನ್ನು ಮುಚ್ಚುತ್ತಾ ಹೋಗುವ ಪರಿಕ್ರಮದಲ್ಲಿ ಹಿಂಸೆಗೊಳಗಾಗುತ್ತಾ......


``ಹೂಂ ಸುಮ್ಮನೆ ಹೇಳಿಬಿಡು."
ಟೆಲಿಫೋನಿನಲ್ಲಿ ಮಾತನಾಡುತ್ತಿದ್ದಾಗ ಒಂದು ದಿನ ಅವಳೆ ಧೈರ್ಯ ವಹಿಸಿದಳು. ಅವಳು ಏನು ಕೇಳುತ್ತಿದ್ದಾಳೆ ಎಂದು ಅವನಿಗೆ ಗೊತ್ತಿತ್ತು. ಅಥವ ಒಂದು ಅಂದಾಜಾದರೂ ಇತ್ತು. ಆ ಅಂದಾಜು ತಪ್ಪೇ ಇದ್ದಿರಬಹುದು ಎಂಬ ಪ್ರಜ್ಞೆಯೂ ಇತ್ತು. ಅವಳ ತುಂಟತನವನ್ನು-ಧೈರ್ಯವನ್ನು , ಕೀಟಲೆ ಧ್ವನಿಯನ್ನು, ಮೆಚ್ಚುತ್ತಲೇ ಕೇಳಿದ:
``ಏನನ್ನ ಹೇಳೂಂತೀಯ?``
"ಅವತ್ತು ಸಿನಿಮಾಕ್ಕೆ ಹೋದಾಗ ನೀನು ಏನನ್ನೋ ಹೇಳಲು ತವಕಿಸ್ತಾ ಇದ್ದೆ. ನನಗೆ ಅದರ ಸೂಚನೆಯೇ ಬಹಳ ಸಂತೋಷವಾಗಿದೆ. ನಾನು ಏನೂ ತಿಳ್ಕೋಳೋಲ್ಲ, ಹೇಳಿಬಿಡು. ನನಗೆ ಗೊತ್ತು ನೇರವಾಗಿ ಹೇಳೋಕ್ಕಾಗಲ್ಲ..... ಹೇಳ್ಬಿಡು..ನಾನೇನೂ ಅಂದ್ಕೊಳ್ಳೋಲ್ಲ..."
ಒತ್ತಾಯಿಸಿದಳು.
"ಇಲ್ಲ,ಇಲ್ಲ. ನೀನು ತಪ್ಪು ತಿಳ್ಕೊಂಡಿದ್ದೀಯ. ಅಂಥಾದ್ದೇನೂ ಇಲ್ಲ. ಮಗೂ ತರ ಇರೋ ನಿನ್ನಂತೋರು ನನ್ನ ಸುತ್ತಾ ಇರ್‍ಬೇಕೂನ್ನೋದೆ ನನ್ನ ಆಸೆ.ಬೇಕಾದರೆ ಸ್ವಾರ್ಥ ಅನ್ನು..."
ಪುನಃ ಅರೆ ಸುಳ್ಳು- ಅರೆ ನಿಜ
"ಒಂದ್ಕೆಲಸ ಮಾಡು, ಇನ್ನು ಹತ್ತೇ ನಿಮಿಷದಲ್ಲಿ ಅಲ್ಲಿರ್‍ತೀನಿ, ಆಮೇಲೆ ಮಾತಾಡೋಣ."
"ಆಯ್ತು."
ಚಡಪಡಿಕೆಯಿಂದ ಕಾದ. ಸೂಚಿಸಿದ್ದ ಸಮಯದೊಳಗೆ ಬರಲೇ ಇಲ್ಲ. ತಡವಾಗಿ ಬಂದದ್ದಲ್ಲದೆ ಏನೋಂದನ್ನೂ ಮಾತನಾಡದೆ ಬೇರೆ ಇನ್ನಿತರರ ನಡುವೆ ಕರಗಿಹೋದಳು. ಅವಳು ಕೂತಿದ್ದ ಕಡೆ ಹೋಗಿ ಕೇಳಿದ:
"ಇಪ್ಪತ್ತು ನಿಮಿಷ ಬಿಸಿಲಲ್ಲಿ ಹೊರಗಡೆಯೇ ಕಾಡಿದ್ದೆ..?``
"ಬೇಕೆಂದೇ ಬರಲಿಲ್ಲ."
"ಈಗ ಬಂದಿದೀಯಲ್ಲ, ಹೇಳು``
"ಈಗಲ್ಲ, ಐದು ಗಂಟೆಗೆ``
"ಆಯ್ತು``
ಐದು ಗಂಟೆಯಾದಾಗ``
"ದಯವಿಟ್ಟು, ಈಗ ನನ್ನನ್ನ ಏನೂ ಕೇಳಬೇಡ."
ಅವಳ ಮುಖದಲ್ಲಿ ಕಳೆ ಇರಲಿಲ್ಲ.ವಿವರ್ಣವಾಗಿತ್ತು.ಅವಳು ಉಳಿದವರನ್ನು ಸೇರಿಕೊಂಡಳು.


ಅವನಿಗೇನೋ ಅಚಾತುರ್ಯ ಘಟಿಸಿ ಹೋದಂತೆ ಭಾವನೆ. ಭಯ ವ್ಯಾಪಿಸಿಕೊಂಡಿತ್ತು. ಅವಳ ವಯಸ್ಸಿನವಳೆ ಅವಳ ಮನಸ್ಸಿನಂತೆ ಇದ್ದ ಮತ್ತೊಬ್ಬ ಸಹೊದ್ಯೋಗಿಯ ಮನೆಗೆ ಪಬ್ಲಿಕ್ ಬೂತ್‌ನಿಂದ ಫೋನ್ ಮಾಡಿದ. ಅವಳ ಬಗೆಗೆ ಇದ್ದಂತ ಆತ್ಮೀಯತೆ, ಸ್ನೇಹ ಈಕೆಯಲ್ಲೂ ಇತ್ತು.ಗೌರವವೂ ಇತ್ತು. ಹೆಚ್ಚೂ ಕಡಿಮೆ ಮೂವರೂ ಒಬ್ಬರಿಗೊಬ್ಬರು ಸಾಕ್ಷಿಯಂತೆ ಇದ್ದರು.
``ಅವಳು ತೀರಾ ಬೇಜಾರು ಮಾಡ್ಕೊಂಡಿದ್ದಾಳೆ, ಮಾತೇ ಆಡಲಿಲ್ಲ, ನೀನು ಅವಳಿಗೆ ಫೋನ್ ಮಾಡ್ತೀಯ?``ಸಹಾಯಕ್ಕಾಗಿ ಯಾಚಿಸಿದ.ಅವಳೇನಾದರೂ ನೊಂದು ಕೊಂಡಿದ್ದರೆ ಇವಳೊಬ್ಬಳು ಮಾತ್ರ ಉಪಶಮನ ನೀಡಬಲ್ಲಳೆಂಬ ಆಶಯ.

ಮಾರನೆ ದಿನ ಫೋನ್ ಮಾಡಿದ:
"ಫೋನ್ ಮಾಡಿದ್ದ?``
"ಹೂಂ."
"ಅವಳಿಗೇನಂತೆ ಬೇಜಾರು?``
ನನಗೇನೂ ಅನ್ನಿಸಿಲಿಲ್ಲಪ್ಪ, ಸರಿಯಾಗೆ ಇದ್ದಳು."
ಅವನು ನೆಮ್ಮದಿಯ ಉಸಿರು ಬಿಟ್ಟ. ಮನಸ್ಸು ನಿರಾಳವಾಯ್ತು. ಆದರೆ ಅಂದೂ ಅವಳೇನೂ ಮಾತನಾಡಲಿಲ್ಲ. ತಲೆ ಎತ್ತಿ ನೋಡಲಿಲ್ಲ. ಮುಖದಲ್ಲಿ ಕಳೆ ಇರಲಿಲ್ಲ.
ಮಾರನೆ ದಿನ ಅವಳ ಮನೆಗೆ ನೇರವಾಗಿ ಫೋನ್ ಮಾಡಿದ.
"ಏನು?``ಅವಳು ಕೇಳಿದಳು.
ಪ್ರಶ್ನೆ ನಿರೀಕ್ಷಿತವೆ. ಆದರೆ ಉತ್ತರ? ಏನೊಂದನ್ನೂ ಹೇಳಲಾಗದ, ಫೋನಿನಲ್ಲಿ ಪರಿಸ್ಥಿತಿ ಮನವರಿಕೆ ಮಾಡಿಕೊಡಲಾಗದ ಇಬ್ಬಂದಿಗೆ ನೂಕಿಕೊಂಡ ಸ್ಥಿತಿಯಲ್ಲಿ:
``ಏನೂ ಇಲ್ಲ ಬಿಡು."
"ಇರಲಿ, ಹೇಳು."
``ನೋಡು, ವೈಲ್ಡ್ ಇಮ್ಯಾಜಿನೇಶನ್ಸ್ ಯಾವುದೂ ಇಟ್ಕೋಬೇಡ..."
"ಅಂತಾದ್ದೇನೂ ಇಲ್ಲ. ಇವತ್ತಲ್ಲ ನಾಳೆ ನೀನಾದರೂ ಹೇಳಬೇಕು, ನಾನಾದರೂ ಹೇಳಬೇಕು.ನೀನು ಹೇಳ್ತಾ‌ಇಲ್ಲ, ನಾನು ಹೇಳ್ತೀನಿ. ನನಗೆ ಮೂರು ದಿನ ಉಸಿರಾಡೋಕ್ಕೆ ಅವಕಾಶ ಕೊಡು. ನನ್ನನ್ನ ನನ್ನ ಪಾಡಿಗೆ ಬಿಟ್ಟುಬಿಡು. ಆಮೇಲೆ ನಾನೇ ಹೇಳ್ತೀನಿ.."
"ಆಯ್ತು." - ಒಪ್ಪಂದಕ್ಕೆ ನಿರೂಪಕ ಬಂದ.


ಮೂರು ದಿನಗಳ ನಂತರ ಅವಳು ಏನೇ ಹೇಳಲಿ- ಹೇಳದಿರಲಿ, ಅಲ್ಲಿಯವರೆಗೆ ಕಾಯುವ ತಾಳ್ಮೆ ಈ ನಮ್ಮ ನಿರೂಪಕನಿಗಂತೂ ಇರಲಿಲ್ಲ.ಕತೆಗಾರನ ಬಳಿ ಓಡಿ ಬಂದು ನಡೆದ್ದನ್ನು ನಡೆದ ರೀತಿ- ತನ್ನ ಯಾವೊಂದು ವ್ಯಾಖ್ಯಾನವನ್ನೂ ಬೆರೆಸದೆ ನಡೆದಷ್ಟನ್ನೆ ನಿರೂಪಿಸಿ, ಇದನ್ನು ಹೇಗೆ ಬಗೆಹರಿಸಬಹುದು ಎಂದು ಕೇಳಿದ. ಎಲ್ಲವನ್ನೂ ಸಮಾಧಾನ ಚಿತ್ತದಿಂದ ಕೇಳಿಸಿಕೊಂಡ ಕತೆಗಾರ-
``ನನ್ನ ಮೇಲೆ ನಿನಗೆ ನಂಬಿಕೆ ಇದೆಯೋ ಇಲ್ಲವೋ?``ಕೇಳಿದ.
"ಹೂಂ, ಇದೆ." .
``ಹಾಗಾದರೆ ನನಗೆ ಈ ಸಮಸ್ಯೆ ಬಿಟ್ಟುಬಿಡು." ಎಂದು ಕತೆಗಾರ ಹೇಳಿದಾಗ, ನಿರೂಪಕ ಕತೆಗಾರನ ಬಳಿಯೂ ಒಪ್ಪಂದ ಮಾಡಿಕೊಂಡ.


ಕತೆಗಾರ ತನ್ನದೇ ರೀತಿಯಲ್ಲಿ ಕತೆ ಮುಂದವರಿಸಿದಾಗ- ಕತೆಯ ಅಂತ್ಯ:
ಆವಳಿಗೆ ಮದುವೆಯಾಯ್ತು.ಆರತಕ್ಷತೆಗೆ ನಮ್ಮ ನಿರೂಪಕ ಹೋದ. ಹುಳುಕು ಹಲ್ಲು ಕೀಳಿಸಿದ ನಲವತ್ತೈದು ವರ್ಷದ ಈ ನಮ್ಮ ನಿರೂಪಕ- ಒಳ್ಳೆ ಉಡುಪಿನಲ್ಲಿ- ಒಳ್ಳೆ ಉಮೇದಿನಿಂದ ಬಂದದ್ದನ್ನು ಕಂಡ ಅವಳ ಕಣ್ಣುಗಳುಮಿಂಚಲಾರಂಬಿಸಿದವು. ಮದುವೆ ಮನೆ ಗಜಿಬಿಜಿಯಲ್ಲಿ ಬೆಳಿಗ್ಗೆ ಅಪ್ಪ ಹಲ್ಲು ಸೆಟ್ಟುಗಳನ್ನು ಬಚ್ಚಲು ಮನೆಯಲ್ಲಿಟ್ಟು ಯಾರೋ ಕರೆದರೆಂದು ಹಡಾವಿಡಿಯಿಂದ ಓಡಿಬಂದು, ಆದು ಆ ಜಾಗದಿಂದ ನಾಪತ್ತೆಯಾಗಿ ಹಪಹಪಿಸಿಕೊಳ್ಳುತ್ತಿದ್ದುದು, ಮದುವೆ ಸಂಭ್ರಮದೂಟ ಸವಿಯಲಿಕ್ಕಾಗದೆ ಅವಸ್ಥೆ ಪಟ್ಟಿದ್ದು ಎಲ್ಲವೂ ಅವಳ ಮನಸ್ಸಿಗೆ ಬಂದು ಕಿಸಕ್ಕನೆ ನಗುವಂತಾಯಿತು.
ಅವನನ್ನು ನೋಡಿ ಮಿಂಚಲಾರಂಬಿಸಿದ್ದ ಕಣ್ಣುಗಳಲ್ಲಿ ಪರಿಶುಭ್ರತೆಯಿತ್ತು. ಅವನ ಬಗೆಗೆ ಅಪಾರ ಗೌರವವೂ ಇತ್ತು.ಅವನಿಗೂ ಅಷ್ಟೆ, ಹದಿನೆಂಟು ವರ್ಷಗಳ ಹಿಂದೆ ತನ್ನ ಮಗಳು ಚಾತು ಯಾನೆ ಸಾವಿತ್ರಿ ಮಗುವಾಗಿದ್ದಾಗ ತೆಗೆಸಿದ್ದ ಫೋಟೋದಲ್ಲಿ ಅವಳಿಗಿದ್ದ ಹಾಗೆಯೆ ಇವಳಿಗೂ ಉರುಟುರುಟು ಕೆನ್ನೆಗಳಿವೆಯಲ್ಲವೆ ಎಂದು ವಿಸ್ಮಿತನಾಗಿ, ಅವಳನ್ನು ಕನ್ನಡಕ ಉಜ್ಜಿ‌ಉಜ್ಜಿ ಶುಭ್ರಮಾಡಿ ನೋಡ ತೊಡಗಿದಾಗ...ಅವನ ಆ ನೋಟವನ್ನು, ಸೊಟ್ಟಗಿದ್ದ ಬಾಯಿಯನ್ನು ನೋಡುತ್ತಾ ಪಕ್ಕದಲ್ಲೇ ಇದ್ದ ಅಪ್ಪನನ್ನು ನೋಡುತ್ತಾ - ಕಿಸಕ್ಕನೆ ನಕ್ಕು ಗಂಡನಿಗೆ ಪರಿಚಯಿಸಿದಳು. ಅವನು ಇವನ ಕೈಗಳನ್ನು ಪ್ರೀತಿಯಿಂದ ಕೈಗೆ ತೆಗೆದುಕೊಂಡು ಹಿಸುಕಿ ಸುಮ್ಮನೆ ನಕ್ಕಾಗ ಅವನಿಗೆ ಆ ನಗುವಿನಲ್ಲಿ ` ಎಲಾಮುದುಕ ' ಎಂಬಂತ ವ್ಯಂಗ್ಯವೇನಾದರೂ ಕಂಡೀತೆ ಎಂದು ಕದ್ದು ನೋಡತೊಡಗಿದ.ವ್ಯಂಗ್ಯವೂ ಇತ್ತು-ಪ್ರೀತಿಯೂ ಇತ್ತು.


"ಸುಳ್ಳು , ಬರೀ ಸುಳ್ಳು``
ನಿರೂಪ^ಕ ಕತೆಗಾರನ ಬಳಿ ಅಬ್ಬರಸಿದ. ಏನು?- ಎಂಬಂತೆ ಕತೆಗಾರ ನಿರೂಪಕನನ್ನು ನೋಡತೊಡಗಿದ.
``ನಾನು ನಿನ್ನ ಬಳಿಗೆ ಎರಡೋ ಮೂರೋ ಪಾತ್ರಗಳನ್ನ ಜೀವಂತ ತಂದರೆ ನೀನು ಅವಕ್ಕೆ ಹಿಡಿಸಿರೋ ಗತಿ ನೋಡು...ಸುಳ್ಳು ಬರೀ ಸುಳ್ಳು..." ಮತ್ತಷ್ಟು ಅಬ್ಬಸಿಸಿದ.
ಶಾಂತ ಚಿತ್ತದಿಂದ ಕತೆಗಾರ ಹೇಳಿದ:
"ನಾನು ಎಷ್ಟು ಸುಳ್ಳು ಹೇಳ್ತಿದೀನೀಂತ ನಿನಗೇನು ಗೊತ್ತು? ಇದು ಸಾಧ್ಯವೋ ಇಲ್ಲವೋ ಅನ್ನೋದನ್ನ ಹೋಗಿ ನಿನ್ನನ್ನ ಹುಟ್ಟಿಸಿದ ನಿಮ್ಮಪ್ಪ ಅಮ್ಮನ್ನ,, ಇಲ್ಲವೆ ನಿನ್ತಾತ ಅಜ್ಜೀನ, ಅಷ್ಟೆ ಯಾಕೆ ನಿನ್ನ ಮಗಳು ಚಾತೂನ ಯಾರನ್ನು ಬೇಕಾದ್ರು ಕೇಳ್ಕೋ ಹೋಗು. ಸುಳ್ಳೆಷ್ಟು, ನಿಜ ಎಷ್ಟೂಂತ ನಿನಗೇ ಗೊತ್ತಾಗುತ್ತೆ..."
ಇಷ್ಟು ಹೇಳಿ ಕತೆಗಾರ ನಿರೂಪಕನ ಸಮ್ಮುಖದಿಂದ ಮರೆಯಾದ. ನಿರೂಪಕ-"ಸುಳ್ಳೂ ಸುಳ್ಳೂ..." ಎಂದು ಅಬ್ಬರಿಸುತ್ತಲೇ ಇದ್ದ. ಅವನ ಕಿವಿಗೆ ಮನಸ್ಸಿನ ರೋದನ ಕೇಳಿಸುತ್ತಿತ್ತು. ತಂದೆ ತಾಯಿ, ತೀರಿ ಹೋದ ಅಜ್ಜ, ಅಜ್ಜಿ, ಬದುಕಿರುವ ಹೆಂಡತಿ- ಮಗಳ ಆಕ್ರಂದನವೂ ಕೇಳಿಸುತ್ತಿತ್ತು. ಇಡಿಗೆ ಜಗತ್ತೆ ಇಡಿಯಾಗಿ ರೋದಿಸುತ್ತಿತ್ತು. ಭಗವಂತನೂ ಅಳುತ್ತಿದ್ದ. ಕನಿಷ್ಠ ಹಾಗೆಂದು ಬಾಸವಾದರೂ ಆಗುತ್ತಿತ್ತು.
ಸುಳ್ಳೆ? ನಿಜವೆ?
ಕತೆಗಾರನಿಗೂ ಗೊತ್ತಿತ್ತು. ತಾನು ನಿರೂಪಕನ ನಿರೂಪಣೆಯನ್ನು, ಕತೆಯನ್ನು ಮುಂದುವರಿಸಿ ಅಂತ್ಯಗೊಳಿಸಿದ ರೀತಿ ಸಮಜಸವಾಗಿಲ್ಲವೆಂದು.ಆದರೆ ನಿಜ ಹೇಳುವುದಾದರೆ ಕತೆಯ ಅಂತ್ಯ ಅವನಿಗೂ ಗೊತ್ತಿರಲಿಲ್ಲ. ಗೊತ್ತಿರಲಿಕ್ಕೆ ಸಾಧ್ಯವೂ ಇರಲಿಲ್ಲ. ಏಕೆಂದರೆ ಕತೆ ಅವನೊಬ್ಬನದೇ ಏನಲ್ಲವಲ್ಲ-
ಏನಂತೀರಿ?


ಭಾಗ-೨
"ಕತೆ ಒಬ್ಬನದಲ್ಲವೆಂದ ಮೇಲೆ ಅದರ ಮೇಲಿನ ಹಕ್ಕು, ಸಂಪೂರ್ಣ ಸ್ವಾಮ್ಯವನ್ನು ಸ್ಥಾಪಿಸಿ ಹೀಗೆ ದ್ರೋಹ ಮಾಡೋದು ಸರಿ ಅಲ್ಲ....ಬೋ..ಮಗನೆ "- ನಿರೂಪಕ ತೀರಾ ಗ್ರಾಂಥಿಕವಾಗಿ ಕತೆಗಾರನ ಮುಂದೆ ವಾದ ಮಾಡತೊಡಗಿದ.
"ಆಯ್ತು, ನನ್ನ ಅಂತ್ಯ ಸರಿ ಅಲ್ಲ ಅನ್ನೋದಾದ್ರೆ ನೀನು ನಿನ್ನ ಅಂತ್ಯವನ್ನು ಕಾಣೋಕ್ಕೆ ನನ್ನದೇನೂ ಅಡ್ಡಿಯಿಲ್ಲ. ನಾನು ನೀಡಿರೋ ಅಂತ್ಯವನ್ನ ವಾಪಸ್ ಬಿಸಾಕಿ ನೀನು ನಿನ್ನ ಅಂತ್ಯವನ್ನಾದ್ರೂ ಹುಡುಕ್ಕೋ, ಇಲ್ಲ ನರಕದಲ್ಲಾದ್ರೂ ಬೀಳು. ನನಗೇನಾಗ್ಬೇಕಿದೆ...?``
ನಿರೂಪಕ ಕೋಪದಿಂದ ಬುಸುಗುಟ್ಟುತ್ತ-
``ನನ್ನ ಕತೆಯ ಆರಂಭದ ಸಹವಾಸಕ್ಕೆ ನೀನು ಬರಬೇಡ.." ಎಂದು ಹೇಳಿದ. ಕತೆಗಾರ ತನ್ನ ಅಂತ್ಯವನ್ನು ಹಿಂದಕ್ಕೆ ತೆಗೆದ.
...ಎಲಾಮುದುಕ ಎಂಬಂತ ವ್ಯಂಗ್ಯವೇನಾದರೂ ಕಂಡೀತೆ ಎಂದು ಕದ್ದು ನೋಡತೊಡಗಿದ..ಎಂದು ಅಂತ್ಯಗೊಳಿಸಿದ್ದ ಕತೆಗಾರನ ಸಾಲುಗಳನ್ನು ಹಿಡಿದು ಹಿಂದಕ್ಕೆ ಹೋಗಿ-``ಅಂತಾದ್ದೇನೂ ಇಲ್ಲ. ಇವತ್ತಲ್ಲ ನಾಳೆ ನೀನಾದರೂ ಹೇಳಬೇಕು, ನಾನಾದರೂ ಹೇಳಬೇಕು.ನೀನು ಹೇಳ್ತಾ‌ಇಲ್ಲ, ನಾನು ಹೇಳ್ತೀನಿ. ನನಗೆ ಮೂರು ದಿನ ಉಸಿರಾಡೋಕ್ಕೆ ಅವಕಾಶ ಕೊಡು. ನನ್ನನ್ನ ನನ್ನ ಪಾಡಿಗೆ ಬಿಟ್ಟುಬಿಡು. ಆಮೇಲೆ ನಾನೇ ಹೇಳ್ತೀನಿ.." "ಆಯ್ತು." - ಒಪ್ಪಂದಕ್ಕೆ ನಿರೂಪಕ ಬಂದ ಎಂಬ ಸಾಲುಗಳ ತನಕ ಹಿಂತಿರುಗಿ ಬಂದಾಗ ಅವನಿಗೆ : ಅಬ್ಬಾ ಮೂರುದಿನಗಳೆ ಎಂದನ್ನಿಸಲಾರಂಬಿಸಿತು.
ಆಫಿಸಿಗೆ ಬಂದಳು, ಅವನ ಕಡೆ ತಲೆ ಎತ್ತಿಯೂ ನೋಡಲಿಲ್ಲ. ಇವನೂ ಸಹ ` ಹಲೋ' ಎನ್ನುವುದರ ಹೊರತಾಗಿ ಅವಳ ಕಡೆ ನೋಡಲಿಲ್ಲ. ನೋಡುವುದೆಂದರೆ ಸಂಕೋಚ, ಭಯ. ಅವಳಿಗೂ ಅಷ್ಟೆ. ಅವನ ಮುಖವನ್ನು ನೋಡಲಿಕ್ಕಾದಷ್ಟು ಲಜ್ಜೆ, ಅವನ ಮುಂದೆ ತಾನು ಕೀಳಾಗಿ ಹೋದೆ ಎಂಬ ಬಾವನೆ. ಆದ್ದರಿಂದ ನೋಡುತ್ತಿರಲಿಲ್ಲ. ಜೊತೆಗೆ ತನ್ನ ಭಾಂಗಡಿ- ಪ್ರಕರಣ ಬೇರೆ ಯಾರಿಗಾದರೂ ಗೊತ್ತಾದರೆ ಎಂಬ ಭಯ ಆವರಿಸಿತು. ಕನಿಷ್ಟ ಅವನ ಮುಂದಾದರೂ ಪ್ರಾಮಾಣಿಕಳಾಗದಿದ್ದರೆ ತಾನು ತನ್ನ ವಿದ್ಯೆ, ಸಂಸ್ಕಾರ, ಆಲೋಚನಾಕ್ರಮ, ಅಷ್ಟೆಲ್ಲಾ ಯಾಕೆ ತನ್ನ ಇಪ್ಪತ್ನಾಲ್ಕು ವರ್ಷಗಳ ತನ್ನ ಜೀವನಕ್ಕೆ ಆರ್ಥ ಕಾಣೋಕ್ಕೆ ಸಾದ್ಯವಾಗದು ಎಂಬ ಹಠ ಬೆಳೆಯತೊಡಗಿತು.

ಅವನಿಗೂ ಹಾಗನ್ನಿಸಿದ್ದರೆ ಆಶ್ಚರ್ಯವೇನೂ ಇಲ್ಲ. ಒಬ್ಬರ ಮುಂದೆ ಒಬ್ಬರು ನಿರ್ಲಜ್ಜಿತರಾಗಿ, ನಿಸ್ಸಂಕೋಚವಾಗಿ ಬೆತ್ತಲಾಗುವ ತೀರ್ಮಾನವನ್ನು ಹೆಚ್ಚೂ ಕಡಿಮೆ ಒಂದೇ ಕ್ಷಣದಲ್ಲಿ ಅಂದರೆ ಒಂದೇ ಸಮಯದಲ್ಲಿ ತೆಗೆದುಕೊಂಡರು. ಆ ಕ್ಷಣಕ್ಕಾಗಿ ಕಾದರು. ರಾತ್ರಿ ಬೆಳಗುಗಳಾದವು. ಇಬ್ಬರೂ ಸ್ನಾನ ಮಾಡಿ ಮಾಮೂಲಿಗಿಂತಲೂ ತುಸು ಶ್ರದ್ಧೆಯಿಂದ ಇದ್ದುದರಲ್ಲೇ ಉಡುಪುಗಳನ್ನು ಆಯ್ದು ಹಾಕಿಕೊಂಡರು. ಹೆಚ್ಚೂ ಕಡಿಮೆ ಒಂದೇ ಮುಹೂರ್ತದಲ್ಲಿ ಮನೆ ಬಿಟ್ಟರು.


ದಾರಿಯಲ್ಲಿ ಕತೆಗಾರನ ಕಣ್ತಪ್ಪಿಸಿ ಹೋಗುವುದಂತೂ ಸಾಧ್ಯವೇ ಇರಲಿಲ್ಲ. ಅವನು ಇವನನ್ನು ಹಿಡಿದುಕೊಂಡು, "ಬಪ್ಪರೆ ಮಗನೆ, ಚೆನ್ನಾಗಿ ಡ್ರೆಸ್ ಮಾಡಿಕೊಡು ಹೊರಟಿದ್ದೀಯ``ಎಂದು ನಾಟಕೀಯವಾಗಿ ಮುಗುಳ್ನಗುತ್ತಲೇ ಛೇಡಿಸಿದ.
"ನಿನಗೆ ನನ್ನಂತೋರನ್ನ ಕೀಟಳೆ ಮಾಡೋದೇ ಆಗೋಯ್ತು."
``ಹಾಗೇನೂ ಇಲ್ಲವೋ, ನನಗೆ ` ನೀನು' ಅರ್ಥವಾಗುತ್ತೀಯ, ನಿನ್ನ ಪ್ರಾಮಾಣಿಕತೇನ ಮೆಚ್ಚಿ, ನೀನು ನಂಬ್ತೀಯೊ ಬಿಡ್ತೀಯೋ, ನಿನ್ನನ್ನ ಅಂತಃಕರಣಪೂರ್ವಕವಾಗಿ ಅಭಿನಂದಿಸ್ತೀನಿ. ಆದರೆ ನಾನು ಹೇಳಿ ಕೇಳಿ ಕತೆಗಾರ, ಕತೆ ಅಂದರೆ ಯಾರದ್ದು? ನನ್ನದು- ನಿನ್ನದು-ಸುತ್ತಮುತ್ತಲಿನವರನ್ನೆಲ್ಲ ನೋಡಿ, ಸೂಕ್ಷ್ಮವಾಗಿ ಗಮನಿಸಿ ತಾರ್ಕಿಕವಾಗಿ ಬರೀತೀನಿ. ನನ್ನ ಕತೇನ ನಾನು ನಡೆಸೋಲ್ಲ. ಜನ ನಡೆಸ್ತಾರೆ.ಜನರಿಗಾಗಿ ನಾನು ನಡೆಸ್ತೀನಿ. ಜನ ಮೆಚ್ಚಲಿ ಬಿಡಲಿ ನೀನಂತೂ ನನ್ನ ಕತೆಗಳನ್ನ ಮೆಚ್ಚಿಕೋತ್ತಲೇ ಬಂದಿದ್ದೀಯ. ನಿನ್ನ ಕತೆ ಬೇರೆ ಅಲ್ಲ- ನನ್ನದು ಬೇರೆ ಅಲ್ಲ. ಕತೆ ಇದೇಂದ್ರೆ ಇದೇ ಅನ್ನು - ಇಲ್ಲಾಂದ್ರೆ ಇಲ್ಲಾನ್ನು.." ಸ್ವಲ್ಪ ಸುದೀರ್ಘವಾಗಿಯೆ ಭಾಷಣದಲ್ಲಿ ತನ್ನ ಸಿದ್ದಾಂತವನ್ನ ಮಂಡಿಸಿದ.
``ನಾನು ನಿನ್ನನ್ನ ದಿಕ್ಕರಿಸ್ತಾ ಇಲ್ಲ. ನನ್ನ ಕತೆಗೆ ನಿನ್ನ ಅಂತ್ಯ ಸರಿ ಇಲ್ಲ- ಕತೆ ಅಂದರೆ ಜೀವನದ ಬಗ್ಗೆ, ಜನರ ಬಗ್ಗೆ ಅಂತಾ ಹೇಳೋನು ಪ್ರಾಮಾಣಿಕವಾಗಿ ಬರೀಬೇಕು. ಹಾಗೆ ನಾನು ಆರಂಬಿಸಿದ ಕತೆಗೆ ಅಂತ್ಯ ಕೊಡೋಕ್ಕೂ ಧೈರ್ಯ ಬೇಕು. ಜೀವನ ನನ್ನನ್ನ ನಡೆಸಲಿ, ನಾನು ಕತೇನ ಸಡೆಸ್ತೀನಿ..ಅಂತ್ಯ ಏನಾದ್ರೂ ಆಗಲಿ, ಈಗಲೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದು ಬೇಡ..."
``ನಾನೂನು ಅದನ್ನೆ ಹೇಳ್ತಿರೋದು.ಕತೆಗೆ ಅಂದ್ರೆ ಬದುಕನ್ನ ಆಧರಿಸಿದ ಕತೆಗೆ ಅಂತ್ಯಕೊಡೋಕ್ಕೂ ಧೈರ್ಯ ಬೇಕು.ಆದರೆ ಅದು ಒಬ್ಬನ, ಅಂದರೆ ಒಬ್ಬೆ ಒಬ್ಬನ ಬಗೆಗೆ, ಅಂದರೆ ಒಂದೇ ಒಂದು ಪಾತ್ರವಿರಬೇಕು. ಅದಕ್ಕೆ ರಿಲೇಟಡ್ ಆದದ್ದು ಯಾವುದೂ ಇರಬಾರದು. ಆಗ ಅಂತ್ಯ ಕೊಡಬಹುದು. ಆಂತಹ ಏಕಪಾತ್ರದ ಕತೆಗೆ ಅಂತ್ಯ ಕೊಟ್ಟರೆಷ್ಟು ಬಿಟ್ಟರೆಷ್ಟು? ಎರಡು ಪಾತ್ರಗಳ ಸುತ್ತೂ ಕತೆ ಹೆಣೆದು ಅಂತ್ಯ ಕೊಡೋದು ಯಾರಿಂದಲೂ ಸಾಧ್ಯವೆ ಇಲ್ಲ. ಅಸಾಧ್ಯವಾದದ್ದರ ಬೆನ್ನು ಹತ್ತಬೇಡ. ನಾನಂತೂ ಎಚ್ಚರಿಸ್ತಿದೀನಿ...."
ಕತೆಗಾರನ ಹಿತೋಪವಚನ ಪಚನವಾಗದೆ ನಿರೂಪಕ ಅವಳನ್ನು ನೆನೆಯುತ್ತಾ ಕತೆಗಾರನ ಬೋರಿನಿಂದಾಚೆಗೆ ನುಗ್ಗಿ ಉತ್ಸಾಹದಿಂದ ಗಾಡಿ ಓಡಿಸತೊಡಗಿದ.


ಅವಳು ಬಂದಿದ್ದಳು.ಕಳೆಗುಂದಿದ್ದ ಮುಖದಲ್ಲಿ ಈಗ ಹುರುಪು ತುಂಬಿಕೊಂಡಿತ್ತು.ಕಣ್ಣುಗಳಲ್ಲಿ ಮಿಂಚು, ಆತ್ಮವಿಶ್ವಾಸ, ತುಟಿಯಂಚುಗಳಲ್ಲಿ ತುಂಬಿಕೊಡಿತ್ತು. ಅವಳು ತನ್ನ ಡೆಸ್ಕಿನತ್ತ ಬರುವ ನಡಿಗೆಯಲ್ಲೇ ಏನನ್ನಾದರೂ ಹೇಳಬಲ್ಲಳು ಎಂಬ ವಿಶ್ವಾಸವನ್ನು ಗುರುತಿಸಿದ. ಅವಳಲ್ಲಿ ಹುರುಪು ಇಮ್ಮಡಿಯಾಗಿ ಹಲೋ ಹೇಳುವುದರ ಔಪಚಾರಿಕತೆಯನ್ನು ಮೀರಿ ``ಇವತ್ತು ಒಟ್ಟಿಗೆ ಊಟಕ್ಕೆ ಹೋಘೋಣ.ಜೊತೇಲಿ ಬರೋಕ್ಕೆ ನಿನ್ನದ್ಜೇನು ಅಡ್ಡಿ ಇಲ್ಲವಲ್ಲ``ಎಂದು ಇಂಗ್ಲೀಷಿನಲ್ಲಿ ಕೇಳಿದಳು.
``ಅರೆ! ಅದನ್ನೆ ನಾನು ಹೇಳೋಣ ಅಂದುಕೊಡಿದ್ದೆ..." ಎಂದ.
ಹೋಟೆಲ್ಲಿನ ಮೇಜಿಗೆ ಫ್ರೈಡ್ ರೈಸ್, ಚಿಲ್ಲಿಚಿಕನ್ ಅವಳಿಗೆ, ಅವನಿಗೆ ವೆಜಿಟೇಬಲ್ ಸ್ಯಾಂಡ್ವಿಚ್ ಬಂದಿತು. ಅವನು ಶುದ್ಧ ಶಾಖಾಹಾರಿ. ಮತ್ತಿನ್ನೇನು ಸಮಸ್ಯೆ?
"ನೊಡು ನಾನೆ ಹೇಳ್ತೀನಿ ಅಂತ ಹೇಳಿದ್ದೆ...."
ಅವನ ಹೃದಯ ಹೊಡೆದುಕೊಳ್ಳತೊಡಗಿತು. ರಕ್ತದೊತ್ತಡ ಹೆಚ್ಚಾದದ್ದು ಅವನ ಮುಖದಲ್ಲಿ, ಕಣ್ಣಲ್ಲಿ ಕಾಣಿಸುತ್ತಿತ್ತು. ಸ್ಯಾಂಡ್ವಿಚ್ ಅಗಿಯುತ್ತಾ-
``ಗೋ ಅಹೆಡ್"- ಅವನ ಭಾಷೆಯೂ ಇಂಗ್ಲೀಷಿಗೆ ಬದಲಾಗಿತ್ತು.
``ಹೇಳ್ತೀನಿ, ನಿನ್ನಲ್ಲಿನ ಪ್ರಾಮಾಣಿಕತೆಯ ಬಗೆಗೆ ನನಗೆ ಸಂಶಯವೇನೂ ಇಲ್ಲ. ಮನುಷ್ಯ ಸದಾಕಾಲದಲ್ಲೂ ಪ್ರಾಮಾಣಿಕನಾಗಿರ್‍ತಾನೇಂತ ನಾನು ನಿರೀಕ್ಷಿಸೋದಿಲ್ಲ. ಸುಳ್ಳೇ ಹೆಳಬಹುದು. ಸುಳ್ಳು ಹೇಳಿದ್ದನ್ನ ಕೇಳಿ ಸಹಿಸಿಕೊಂಡಿದ್ದೂ ಇದೆ. ಆದರೆ ಈಗ ನಾನು ನಿನ್ನ ಕೇಳ್ಕೊಳ್ಳೋದು ಪ್ರಾಮಾಣಿಕವಾಗಿರ್‍ತೀಯಾಂತ?``
``ಹೂಂ, ಹೇಳು."
"ಐ ತಿಂಕ್ ಐಯಾಂ ಇನ್..."
"ತಡಿ ..ತಡೀ.. ಯೂ ತಿಂಕ್, ಆರ್ ಎಲ್ಸ್ ರಿಯಲ್ಲಿ ಆರ್ ಯೂ..."
ಅವಳು ಏನೂ ಹೇಳಲಿಲ್ಲ. ಬರಿಯದೇ ಅವನ ಮುಖ ನೋಡಿದಳು. ಹೇಳುವುದೇ ಬೇಕಾಗಿರಲಿಲ್ಲ.
``ಈಗ ನಿನ್ನ ಸರದಿ. ಹೇಳಬೇಕಾಗಿರೋದನ್ನ ನೀನು ಪ್ರಾಮಾಣಿಕವಾಗಿ ಹೇಳು.."
ಅವನಿಗೆ ಅವಳಷ್ಟೇ ನಿರಾಳವಾಗಿ ಸರಾಗವಾಗಿ ಹೇಳುವುದಕ್ಕೆ ಸಾಧ್ಯವಾಗಲಿಲ್ಲ. ಪದಗಳಿಗೆ ತಡಕಾಡಿದ. ಭಾವವನ್ನು ತಡಕಾಡಿದ. ಭಾವಕ್ಕೆ ತಕ್ಕ ಪದಗಳು ದೊರೆಯಲಿಲ್ಲ. ಏನೇ ಹೇಳಿದರೂ ಅಪ್ರಾಮಾಣಿಕವಾಗಿ ಉಳಿಯುವ ಸ್ಥಿತಿ. ಕತೆಗಾರ ಎಲ್ಲೋ ಮರೆಯಲ್ಲಿ ನೊಡುತ್ತಿದ್ದಾನೆ ಎಂಬ ಅಳುಕು. ಕತೆ ತಾನೆ ಮುಂದುವರಿಸುತ್ತೇನೆ ಎಂದು ಹೇಳಿ ಬಂದದ್ದಂತೂ ಆಯ್ತು. ಈಗ ಹಿಂಜರಿಯುವ ಸ್ಥಿತಿ. ಕಟಕಿಯಾಡಲು ಮೊದಲೇ ಅವನು ಕಾಯುತ್ತಿರುತ್ತಾನೆ. ಈಗ ಈ ಧೈರ್ಯಗೇಡಿ ಪ್ರಸಂಗ ತಿಳಿದರಂತೂ...
ಅವನು ಹಿಂಜರಿಯುತ್ತಿರುವುದು ಅವಳ ಗಮನಕ್ಕೆ ಬಂತು. ಥೂ ಎಂದು ಅವನ ಮುಖಕ್ಕೆ ಉಗಿಯುವಷ್ಟು ಕೋಪ. ಐಯಾಂ ಇನ್.. ಒಳಗಿನ ಭಾವ ಧ್ವನಿಯಾಗುವಷ್ಟರಲ್ಲೇ ಅವನ ಕೆಟ್ಟ ಕುತೂಹಲ. ಅವುಡುಗಚ್ಚಿ ಅವನ ಕಪಾಳಕ್ಕೆ ಹೊಡೆಯಬೇಕೆಂಬಷ್ಟು ಕೋಪ. ಅದು ಹೋಟೆಲ್ ಅಲ್ಲದೆ ಹೋಗಿದ್ದಿದ್ದರೆ....
ಐಯಾಂ ಇನ್..., ಎಂದಷ್ಟಕ್ಕೆ- ಆರ್ ಯೂ ರಿಯಲ್? ಎಂದು ಪ್ರಶ್ನಿಸಿದ್ದ.
``ಊಂ, ಹೇಳು``ಹಠ ಹಿಡಿದ.
ಅವಳು ಒಳಗಡೆ ತಡಕಿಕೊಂಡು ನೋಡಿದಳು. ಖಚಿತವಾದ ಉತ್ತರ ಬಯಸುತ್ತಿರುವ ಅವನಿಗೆ``ಐಯಾಂ ಇನ್..." ಎಂದು ಈಗಾಗಲೇ ಹೇಳಿರುವುದಕ್ಕೆ ಏನೇ ಸೇರಿಸಿದರೂ ಸುಳ್ಳಾಗುವುದಿಲ್ಲವೆ? ಪ್ರಶ್ನೆಗೆ ಪ್ರಾಮಾಣಿಕವಾಗಿ ತಡಕಿಕೊಂಡು ನೋಡಿದಳು. ನಿಜ, ಗೊಂದಲ. ಯಾವುದೇ ಉತ್ತರ ಹೇಳಿ ಆ ಉತ್ತರಕ್ಕೆ ತಕ್ಕಂತೆ ತಮ್ಮ ಸಂಬಂಧವನ್ನು ರೂಪಿಸುತ್ತಾ ಹೋದರೆ ಅದೂ ಸುಳ್ಳಾಗುವುದಿಲ್ಲವೆ? ಉತ್ತರ ಹೇಳಲು ತೋಚದೆ ಸುಮ್ಮನೆ ಅವನನ್ನೆ ನೋಡುತ್ತಿದ್ದಳು.
ಅವಳಿಂದ ತಾನು ನಿರೀಕ್ಷಿಸುತ್ತಿರುವುದಾದರೂ ಏನನ್ನು? ತನ್ನೊಳಗಿನ ಭಾವವನ್ನು ಅವನೂ ತಡಕಿಕೊಂಡ. ತಟಕ್ಕನೆ ಬಾಯ್ಮಾತುಗಳಲ್ಲಿ ಒಂದು ದಿಕ್ಕನ್ನು ಹಿಡಿದು- ಅದನ್ನೆ ಗಟ್ಟಿ ಮಾಡಲು ಹಂಬಲಿಸಿ- ಹಿಂಸಿಸುತ್ತಾ- ಹಿಂಸೆಗೊಳಗಾಗುತ್ತಾ..ಭೀಕರ, ಭೀಭತ್ಸ. ಅವಳು ಏನೂ ಹೇಳದಿರಲಿ ದೇವರೆ...ತಾನು ನಂಬದ ಆದರೆ ತನ್ನೊಳಗಡೆಯೇ ನಂಬಿಕೆಯಾಗಿ ಬೆಳೆದಿದ್ದ ದೇವರನ್ನು ಪ್ರಾರ್ಥಿಸಿದ. ಏನೂ ಹೇಳದಿರಲಿ ದೇವರೆ...ಆವಳನ್ನೇ ನೋಡತೊಡಗಿದ, ಕತೆಗಾರ ಒಳ ಹೊಕ್ಕಂತೆ ಭಾಸವಾಗಿ ಅವನ ತಲೆ ತಿರುಗತೊಡಗಿತು.
"ಏಯ್, ಏನಾಯ್ತು ನಿನಗೆ?"- ಅವಳ ಧ್ವನಿ ಎಲ್ಲೋ ದೂರದಲ್ಲಿ ಮೆಲು ಧ್ವನಿಯಲ್ಲಿ ಕೇಳಿಸಿದರೂ ಪ್ರತಿಕ್ರಿಯಿಸಲಾಗಲಿಲ್ಲ. ಅವಳಿಗೂ ತಲೆ ಸುತ್ತುತ್ತಿತ್ತು.
``ಏಯ್ ನಿನಗೇನಾಯ್ತು..?``ಅವನ ಧ್ವನಿ ಅವಳಿಗೆ ಕೇಳಿಸಿ ` ಅಯ್ಯೋ' ಎಂದು ಮನಸ್ಸು ರೋದಿಸುತ್ತಿತ್ತು. ಅವನೂ ಒಳಗೆ ರೋದಿಸುತ್ತಿದ್ದ.
ಇಬ್ಬರಿಗೂ ಒಟ್ಟಿಗೆ ತಲೆ ತಿರುಗುತ್ತಿದ್ದುದು ಸ್ಥಿಮಿತಕ್ಕೆ ಬಂದಾಗ....


"ಹಾಜರಾದೆಯ?- ನಿರೂಪಕ ಕೇಳಿದ, ನಿನ್ನ ಉಪನ್ಯಾಸ ಕೇಳೋಕ್ಕೆ ತಾಳ್ಮೆ ಇಲ್ಲ ಎಂಬ ಧ್ವನಿಯಲ್ಲಿ.
``ಅಲ್ಲಯ್ಯ , ನಿನ್ನ ವಾದ ಕೇಳಿ ನಾನು ನಿನ್ನ ಪಾಡಿಗೆ ನಿನ್ನನ್ನ ಬಿಟ್ಟೆ. ಸಮಸ್ಯೆ ನಿರ್ವಹಿಸೋಕ್ಕೆ ಆಗದೆ, ನಿಜವೂ ಆಗದೆ- ಸುಳ್ಳೂ ಆಗದೆ ಎಚ್ಚರ ತಪ್ಪಿದರೆ ಸಹಾಯಕ್ಕೆ ಬಂದದ್ದು ತಪ್ಪಾಯ್ತ?."
"ನಿನಗೆ ಹ್ಯಾಗೆ ಗೊತ್ತಾಯ್ತು?``
``ಎಚ್ಚರ ತಪ್ಪಿದೋನಿಗೆ ಏನೂ ಗೊತ್ತಾಗೋಲ್ಲ. ಆರಂಭಿಸಿದೋನೆ ಅಂತ್ಯ ಮಾಡೋದು ಸುಲಭ ಅಲ್ಲ. ಅಂತ್ಯದ ಬಗೆಗೆ ಖಚಿತವಾಗಿ ತಿಳಿದಿರೋನಿಗೆ ಅಂತಃಕರಣವಿರುತ್ತೆ. ನಿನ್ನ ಬಗೆಗೆ ಅಂತಃಕರಣವಿರೋ ನನ್ನನ್ನೇ ನೀನು ಹುಗಿದು ಹಾಕ್ತೀನಿ - ಸೀಳಿ ಹಾಕ್ತೀನೀಂತ ಕನಸ್ನಲ್ಲಿ ಬಡಬಡಿಸ್ತಾ ಇದ್ದೀಯಲ್ಲ. ಸಾಧ್ಯವಾ? ಅಂತ್ಯ ಏನೂನ್ನೋದನ್ನ ಹೇಳ್ತೀನಿ ಕೇಳು..."
``ನೀನು ಬರೀ ಸುಳ್ಳು ಹೇಳ್ತೀಯ." - ನಿರೂಪಕ ಆಕ್ಷೇಪಿಸಿದರೂ ಕತೆಗಾರ ಅಂತ್ಯ ಹೇಳದೆ ಬಿಡಲಿಲ್ಲ.
ಅಂತ್ಯ: ``ಅವಳು ಕೆಲಸ ಬಿಟ್ಟು ಹೋದಳು."
``ನಾನು ಹೀಗೆ ಆಸ್ಪತ್ರೇಲಿ ಹಾಸಿಗೇಲಿ ಬಿದ್ದಿರೋವಾಗ ನೀನು ಸುಳ್ಳು ಹೇಳಿ ಹೆಚ್ಚೂ ಕಡಿಮೆ ನೀನು ಕೊಟ್ಟ ಮೊದಲಿನ ಅಂತ್ಯವನ್ನೇ ಹೇರೋಕ್ಕೆ ಹೋಗ್ತೀಯ. ಮನಸ್ಸು ಮಾಡಿದರೆ ನಿನ್ನ ಅಂತ್ಯವನ್ನ ಬದಲಾಯಿಸೋದು ಸಾಧ್ಯ ಅಂತನ್ನೋದು ನಿಜ ತಾನೆ?
``ಆರಂಭಕ್ಕೆ ಒಂದು ಬಿಂದುವಾದರೆ ಅಂತ್ಯ ಹ್ಯಾಗೂ ಆಗುತ್ತೆ``
"ಹಾಗಾದರೆ ನಿನ್ನ ಅಂತ್ಯ ಸರೀಂತ ನಂಬೋದಾದ್ರೂ ಹ್ಯಾಗೆ?"- ನಿರೂಪಕ ಕಣ್ಣಲ್ಲಿ ಮಿಂಚು ತುಂಬಿಸಿಕೊಂಡು ವಿಜಯೋತ್ಸಾಹದಿಂದ ಕೇಳಿದ.
"ಸೂಕ್ತವಾದದ್ದನ್ನ ಆಯ್ಕೆ ಮಾಡಿಕೊಳ್ಳಲೇಬೇಕು..'
"ಅದಕ್ಕೆ ಆರಂಭವಿದ್ದಾಗ ಮಾತ್ರ. ಅದೂ ಅಲ್ಲದೆ ಎಲ್ಲಾ ಅಂತ್ಯವೂ ಸುಳ್ಳಾಗುತ್ತೆ."
-ಕತೆಗಾರನ ಅಹಂಕಾರ ಮುದುರಿಕೊಂಡಿತು.
``ಸರಿ, ನೀನು ನಿದ್ದೆ ಮಾಡು. ನಾನು, ನಾನು ಹೋಗ್ತೀನಿ." ನಿಂತ ಕಡೆಯೇ ನಿಂತಾಗ:
ಪಾತ್ರಗಳು, ಮಾತುಗಳು, ಭಾವಗಳು ಎಲ್ಲಾ ಸುಳ್ಳಾಗಿ-
"ನನಗೆ ` ನಾನು ' ಅರ್ಥವಾಗಿದ್ದೇನೆಯೆ ಎಂದು ಹೇಳುತ್ತಾ ಹೋಗುವ ಕ್ರಮದಲ್ಲಿ , ` ಇತರರು' ನನಗೆ ಅರ್ಥವಾಗಿದ್ದಾರೆಯೆ ಎಂಬುದನ್ನು ಪರೀಕ್ಷಿಸುತ್ತಾ ಹೋದಾಗ, ಗ್ರಹಿಕೆಗೆಟುಕಿದುದನ್ನು ಬರವಣಿಗೆಗಿಳಿಸಿದಾಗ ಕತೆ ತನ್ನಂತೆ ತಾನೆ ಸಾಗುತ್ತದೆ." -
ಎಂದು ತಾನು ಆರಂಭಿಸಿದ್ದ ಸಾಲುಗಳೆಲ್ಲ ಸುಳ್ಳಾಗತೊಡಗಿತ್ತು. ಸುಳ್ಳು ಕಾಣಲು ಪ್ರೇರಣೆಯಾದ ಸುಳ್ಳು ಪಾತ್ರಗಳನ್ನು ಕೃತಜ್ಞತೆಯಿಂದ ನೆನೆದ.

0 Comments:

Post a Comment

Subscribe to Post Comments [Atom]

<< Home