ಒಡಕಲು-ಬಡಕಲು

೧೯೭೮ರಲ್ಲಿ ಹೇಗೆಲ್ಲಾ ಯೋಚಿಸುತ್ತಿದ್ದರು-ಬರೆಯುತ್ತಿದ್ದರು ಎನ್ನುವ ಕುತೂಹಲವಿದ್ದಿರಬಹುದಾದವರಿಗೆ, ಇದ್ದರೆ ಇರಲಿ ಎಂದು ಇಲ್ಲಿ ಪ್ರಕಟಿಸಿದ್ದೇನೆ. ಇದರಾಚೆಗೆ ಇವುಗಳಿಗೆ ಯಾವುದೇ ಮಹತ್ವವಿಲ್ಲ-ಉದ್ದೇಶವೂ ಇಲ್ಲ.

Saturday, May 13, 2006

ಸಣ್ಣಕತೆ-ಕನ್ಯಾಕುಮಾರಿ

ಅವಳಿಗೆ ಒಂದು ಮಾತು ಹೇಳದೆ ಅಲ್ಲಿಂದ ಹೊರಡುವುದು ಸಭ್ಯತೆಯಲ್ಲ ಎನಿಸಿ ಯಾವುದಕ್ಕೂ ಒಂದು ಮಾತು ಹೇಳಿಯೆ ಹೊರಡುವ ಎಂದುಕೊಂಡು ಅವಳು ಇಳಿದುಕೊಂಡಿದ್ದ ಹೋಟೆಲ್ ಕಡೆಗೆ ಹೊರಟೆ. ಮೂರೇ ದಿನದ ಪರಿಚಯವಾದ್ದರಿಂದ ಅವಳಿಗೆ ವಿದಾಯ ಹೇಳಿಯೇ ಹೊರಡಬೇಕೆಂಬ ಆಸಕ್ತಿ ಇರಲಿಲ್ಲವಾದರೂ - ಭಾರತೀಯತೆ- ಪಾಶ್ಚಾತ್ಯೀಕರಣ- ಆಂಗ್ಲೀಕರಣ ಇತ್ಯಾದಿಗಳ ಬಗೆಗೆ ನಮ್ಮ ನಡುವೆ ನಡೆದಿದ್ದ ಚರ್ಚೆಗಳನ್ನು ನಾನಾಗಲೀ ಆಕೆಯಾಗಲೀ ಲಘುವಾಗಿ ತೆಗೆದುಕೊಳ್ಳದೆ ಗಂಭೀರವಾಗಿಯೇ ತೆಗೆದುಕೊಂಡಿದ್ದೆವು. ನಮ್ಮ ದೇಶದ ಪರವಾಗಿಯೇ ವಾದಿಸಿದ್ದ ನಾನು ಪಾಶ್ಚಾತ್ಯೀಕರಣವನ್ನು ವಿರೋಧಿಸಿ ಕೊಂಚ ಆವೇಶಪೂರಿತವಾಗಿಯೆ ಮಾತನಾಡಿದ್ದೆ. ಅಷ್ಟೊಂದು ಕಠಿಣವಾಗಿರಬಾರದಿತ್ತು ಎಂದು ಅನಂತರ ಅನ್ನಿಸಿತ್ತು. ಪ್ರಮಾಣವಾಗಿ ಹೇಳಬೇಕೆಂದರೆ ಭಾರತೀಯತ್ವದ ಪರವಾಗಿ ಆಕೆಯ ಬಳಿ ವಾದ ಮಾಡಿದ್ದ ನಾನು ಆಕೆಯ ಬಗೆಯ ಪ್ರತ್ಯಯಗಳನ್ನು , ಅದರ ಮೂಲದ ಆಕೆಯ ಮುಕ್ತ ನಡವಳಿಕೆಯನ್ನು ನನಗೆ ಸಾಧಕವಾಗಿ ಉಪಯೋಗಿಸಿಕೊಂಡಿರಲಿಲ್ಲ. ಅಜೀರ್ಣವಾಗುವ "ನಾಗರೀಕತೆ""ಆಧುನಿಕತೆ"ಗಳ ಆಭಾಸಗಳ ನಡುವಿನ ಬೆಂಗಳೂರಿನಲ್ಲೇ ನಾನು ಬೆಳೆದಿದ್ದೆನಾದ್ದರಿಂದ "ನ್ಯೂಯಾರ್ಕ್ ಲಿಬರೇಟಡ್ ಸೊಸೈಟಿಯ ಪ್ಯಾಟ್ರನೈಜೇಶನ್"ಗಳ ಬಗೆಗೆ ಕಲ್ಪನೆ ಇಲ್ಲದಿಲ್ಲ; ಅವುಗಳು ನನಗೆ ಸಂಪೂರ್ಣ ಅಪರಿಚಿತವೂ ಅಲ್ಲ.

ಮೂರು ದಿನದ ಹಿಂದೆ ನಾನು ಬೆಂಗಳೂರಿನಿಂದ ಕನ್ಯಾಕುಮಾರಿಗೆ ರಾತ್ರಿ ಪ್ರಯಾಣದ ಲಕ್ಷುರಿ ಬಸ್ಸಿನಲ್ಲಿ ಸ್ಥಳವನ್ನು ಕಾಯ್ದಿರಿಸಿದ್ದೆ. ಆಕೆಗೆ ನನ್ನ ಸೀಟಿನ ಪಕ್ಕದಲ್ಲೇ ಸ್ಥಳ ದೊರೆತಿತ್ತು. ದೀರ್ಘವಾದ ಪ್ರಯಾಣವಾದ್ದರಿಂದ ಬೇಸರ ಕಳೆಯಲು ಯಾರದಾದರೂ ಸಾಂಗತ್ಯ ತೀರ ಅವಶ್ಯವೆನಿಸಿತ್ತೋ ಏನೋ ಆಕೆಯೇ ತನ್ನ ಪರಿಚಯವನ್ನು ಹೇಳಿಕೊಂಡಿದ್ದಳು. ತನ್ನ ಹೆಸರು ಪೆಟ್ರೀಷಿಯ ಎಂದೂ, ಎಲ್ಲರೂ ತನ್ನನ್ನು ಪೆಟ್ರಿ ಎಂದು ಕರೆಯುತ್ತಾರೆಂದು, ತಾನು ನ್ಯೂಯಾರ್ಕ್‌ನಿಂದ ಬಂದಿರುವುದಾಗಿ ಹೇಳಿದಳು. ಅನಂತರ ಈ ಮೂರು ದಿನಗಳ ಮಾತುಕತೆಗಳ ಮಧ್ಯೆ ತನ್ನದು ಇಪ್ಪತ್ತು ವರ್ಷಗಳ ಇಂಗ್ಲೆಂಡಿನ ಶ್ರೀಮಂತ ಕುಟುಂಬವೆಂತಲೂ, ದಿವಾಳಿಯೆದ್ದು ನ್ಯೂಯಾರ್ಕ್‌ಗೆ ವಲಸೆ ಬಂದುದಾಗಿಯೂ , ತನ್ನ ತಂದೆ ತೀವ್ರವಾಗಿ ಕುಡಿಯಲಾರಂಭಿಸಿದುದಾಗಿಯೂ, ತಾನು ಅಲ್ಲಿಯ ವಿಶ್ವವಿದ್ಯಾನಿಲಯವೊಂದರಲ್ಲಿ ಮಾಸ್ಟರ್‍ಸ್ ಡಿಗ್ರಿ ಪಡೆಯಲಿಚ್ಛಿಸಿ ಸಾಧ್ಯವಾಗದೆ ಜಾಹೀರಾತು ಕಂಪೆನಿಯೊಂದರಲ್ಲಿ ಮಾಡೆಲ್ ಆಗಿ ಸೇರಿ ಟಿ.ವಿ ಜಾಹೀರಾತುಗಳಲ್ಲಿ ಪ್ರಸಿದ್ಧಿ ಹೊಂದಿ ಕ್ರಮೇಣ ಖ್ಯಾತ ಚಲನಚಿತ್ರ ಸಂಸ್ಥೆಯ ಚಿತ್ರವೊಂದರಲ್ಲಿ ನಟಿಸಲು ಯತ್ನಿಸಿ ಶೀಲಭ್ರಷ್ಟಳಾದರೂ ಹೇರಳ ಹಣ ಗಳಿಸಿದುದು... ಇಷ್ಟೆಲ್ಲ ಸನ್ನಿವೇಶಗಳ, ಎಂಟು ವರ್ಷ ದೀರ್ಘ ಕಾಲಾವಧಿಯಲ್ಲಿ ನಡೆದ ಮನೋಘರ್ಷಣೆಗಳು, ಜಿಗುಪ್ಸೆ, ಅಸಹನೀಯವೆನ್ನಿಸಿ ಸ್ನೇಹಿತರೊಡಗೂಡಿ ಭಾರತಕ್ಕೆ ಬಂದು ಎರಡು ತಿಂಗಳ ಉತ್ತರ ಭಾರತ ಪ್ರವಾಸ ಮುಗಿಸಿ ಸ್ನೇಹಿತರಿಂದ ಬೇರ್ಪಟ್ಟು ಈಗ ದಕ್ಷಿಣ ಭಾರತಕ್ಕೆ ಬಂದಿದ್ದುದಾಗಿಯೂ , ಈ ಎಲ್ಲ ವಿವರಗಳನ್ನು ಯಾವ ವಿಶ್ವಾಸದಿಂದಲೋ [ ಬಹುಶಃ ಯಾರಲ್ಲಿಯಾದರೂ ಹೇಳಿಕೊಳ್ಳಬೇಕು ಎಂಬ ಒತ್ತಡದಿಂದಿರಬಹುದು] ಏನೋ ನನ್ನ ಅವಳ ನಡುವಿನ ಕಿರು ಪರಿಚಯದಲ್ಲೇ ಹೇಳಿಕೊಡಿದ್ದಳು.

ಮೊದಲ ದಿನ ಬಸ್ಸಿನಲ್ಲಿ ವಿವೇಕಾನಂದ , ರಾಮಕೃಷ್ಣರ ಪುಸ್ತಕಗಳನ್ನು ಓದುತ್ತಿದ್ದಳು. ನಾನು ಸುಮ್ಮನೆ ಮಾತಿಗೆಂದು ನಿಮಗೂ ಆಧ್ಯಾತ್ಮಿಕತೆಯ ಬಗೆಗೆ ಆಸಕ್ತಿ ಇದೆಯೆ ಎಂದಾಗ ಆಕೆಯ ಉತ್ತರ ಕೇಳಿ ದಂಗು ಬಡಿದಂತಾಗಿತ್ತು. ಆಕೆ, ನಾನು ಅರ್ಥ ಮಾಡಿಕೊಳ್ಳಲು ಪ್ರಯಾಸವಾಗುವಂತಿದ್ದ ಆಕೆಯದೆ ಆದ ಇಂಗ್ಲೀಷಿನಲ್ಲಿ ಹೇಳಿದ್ದಳು: "ನನಗೆ ಆಧ್ಯಾತ್ಮಿಕತೆಯಲ್ಲಿ ನಿಜವಾದ ಆಸಕ್ತಿ ಇದೆಯೋ ಇಲ್ಲವೋ ನಾನಂತು ಹೇಳಲಾರೆ. ನಾನಿದ್ದ ಜೀವನದ ಪರಿಸರದಲ್ಲಿ ಇದೆಯೆಂದರೆ ಬಹುಶಃ ಸುಳ್ಳಾದೀತು. ಆದರೆ ಏನಾದರೂ ಮಾಡುತ್ತಿರಲೇಬೇಕಲ್ಲ. ನ್ಯೂಯಾರ್ಕ್‌ನಲ್ಲಿ ನನ್ನ ಜಾಹೀರಾತಿನ ಬದುಕಿಗೆ ಬೇರೊಂದು ಆಯಾಮ ಒದಗಿಸಲು ಯೋಗಾಸೆಂಟರ್‌ಗೆ ಸೇರಿದೆ. ಆಗ ಈ ತರದ ಪುಸ್ತಕಗಳು ಸಹಜವಾಗಿಯೋ ಅನಿವಾರ್ಯವಾಗಿಯೋ ನನಗೆ ಅಂಟಿಕೊಂಡವು. ಅಂದಿನಿಂದ ನನ್ನ ಮನಸ್ಸು ಯಾವುದೋ ಅವ್ಯಕ್ತವಾದ ಶಾಂತಿಯನ್ನು ಅನುಭವಿಸುತ್ತಿದೆ. ಬಹುಶಃ ಭ್ರಮೆಯೂ ಇರಬಹುದು. ಇನ್ನೊಂದು ವಿಚಾರಾಂದರೆ ನ್ಯೂಯಾರ್ಕ್‌ನಲ್ಲಿ ಭಾರತೀಯ ಗ್ರಂಥಗಳನ್ನು ಹಿಡಿದುಕೊಂಡು ಓಡಾಡುವುದು ಶ್ರೀಮಂತಿಕೆಯ- ನಾಗರೀಕತೆಯ- ನಾವೀನ್ಯತೆಯ ಲಕ್ಷಣ."

ದಾಷ್ಟಿಕತನವೂ ಸಂಕೋಚವೂ ಏನೂ ಇಲ್ಲದೆ ನನಗೆ ಅಂಟಿಕೊಂಡು ಕುಳಿತಿದ್ದ ಆಕೆ "ನಾನು ಸಿಗರೇಟ್ ಸೇದಿದರೆ ಆಕ್ಷೇಪಣೆ ಏನೂ ಇಲ್ಲ ಅಲ್ಲವೆ ?"ಎಂದು ಕೇಳಿ ನನ್ನ ಉತ್ತರಕ್ಕೆ ಕಾಯುವ ಗೋಜಿಗೂ ಹೋಗದೆ ತನ್ನ ಕೈಲಿದ್ದ ಸಿಗರೇಟ್ ಪ್ಯಾಕಿನಿಂದ ಒಂದನ್ನು ತೆಗೆದು ಅಂಟಿಸಿ ಜೋರಾಗಿ ಹೊಗೆ ಎಳೆದು ಆಚೆ ಬಿಟ್ಟಳು. ಬಸ್ಸಿನಲ್ಲಿದ್ದವರಲ್ಲಿ ಮುಕ್ಕಾಲು ಪಾಲು ಜನ ನಿದ್ರಿಸಿದ್ದರೆ, ಕೆಲವರು ದೊಡ್ಡ ದೊಡ್ಡ ಕಣ್ಣುಗಳನ್ನು ಬಿಟ್ಟುಕೊಂಡು ಎದ್ದಿದ್ದರು. ಆಕೆ ಕಿಟಕಿ ಬಾಗಿಲನ್ನು ಕೊಂಚವೆ ಸರಿಸಿ ಬಸ್ಸಿನ ವೇಗವನ್ನು ಸೀಳಿಕೊಂಡು ಒಳ ನುಗ್ಗುತ್ತಿದ್ದ ಕುಳಿರ್ಗಾಳಿಗೆ ಮುಖ ಒಡ್ಡಿ "ನೀನೊಂದು ಯಾಕೆ ಅಂಟಿಸಬಾರದು.."ಎಂದು ವಿದೇಶಿ ಸಿಗರೇಟಿನ ನೀಡಿದಾಗ ಸಿಗರೇಟ್ ಸೇಡುವ ಚಟವಿದ್ದರೂ ಬೇಡವೆಂದೆ , ಆತ್ಮವಂಚನೆ?
ಆಕೆ ನಿನ್ನ ಬಗ್ಗೆ ಏನೂ ಹೇಳಲಿಲ್ಲ ಎಂದಾಗ-"ನನ್ನನ್ನು ಎಲ್ಲರೂ ಚಂದ್ರೂಂತ ಕರೀತಾರೆ. ಬೆಂಗಳೂರಿನ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತ.."- ಎಂದ್ ಚುಟುಕಾಗಿ ಪರಿಚಯಿಸಿಕೊಂಡಿದ್ದೆ.

ಕನ್ಯಾಕುಮಾರಿ ತಲುಪಿದಾಗ ಸುಮಾರು ಹನ್ನೊಂದೂವರೆ- ಹನ್ನೆರಡು ಗಂಟೆ ಅಥವ ಇನ್ನೂ ಹೆಚ್ಚಾಗಿತ್ತೋ ಏನೋ, ಅಭ್ಯಾಸವಿಲ್ಲದ ಸುಡುಬಿಸಿಲು ಸ್ವಲ್ಪ ಹೊತ್ತಿದ್ದರೆ ನೆತ್ತಿ ಚಿಪ್ಪು ಒಡೆದು ಸೀಳಿ ಬಿಡುತ್ತದೋ ಎಂಬಷ್ಟು ಕಾಯುತ್ತಿತ್ತು. ಆಕೆ ಲಕ್ಷೂರಿಯಸ್ ಸೂಟ್‌ಗಳಿದ್ದ ಹೋಟೆಲ್ಲಿನ ಬಗೆಗೆ ಅಲ್ಲಿದ್ದ ಮಾರ್ಗದರ್ಶಿಯನ್ನು ವಿಚಾರಿಸುತ್ತಿದ್ದಾಗ ನಾನಾಗಲೇ ಸಣ್ಣ ಹೋಟೆಲ್ಲೊಂದರಲ್ಲಿ ಕೋಣೆಯನ್ನು ಕಾಯ್ದಿರಿಸಿರುವುದಾಗಿ ಹೇಳಿ ಮತ್ತೆ ಕಾಣುವೆನೆಂದು ತಿಳಿಸಿ ಬೀಳ್ಕೊಂಡಿದ್ದೆ. ನೀನು ಯಾಕೆ ಒಂಟಿಯಾಗಿ ರಾತ್ರಿ ಅದೂನು ಬಸ್ಸಿನಲ್ಲಿ ಬರ್‍ತಿದೀ ಎಂದು ಪ್ರಶ್ನಿಸಿದ್ದಕ್ಕೆ "ನನ್ನ ಬದುಕಿನಲ್ಲಿ ರಾತ್ರಿ ಇನ್ನೇನು ಹಗಲಿನ್ನೇನು- ಎಲ್ಲಾ ಒಂದೆ "- ಎಂದು ವಿಷಾದ ಸ್ವರದಲ್ಲಿ ಹೇಳಿ ಮುಂದುವರಿಸಿ "ಸರಳತೆ ಅನ್ನೋದನ್ನ ನಾನು ಭಾರತಕ್ಕೆ ಬಂದ ಮೇಲೆಯೇ ಕಲಿತಿದ್ದು.."ಎಂದಿ ಹೇಳಿದಾಗ ಆಕೆಯ ಸ್ವರದಲ್ಲಿ ಹೆಮ್ಮೆಯಿತ್ತು.

ನಾನು ನಾಲ್ಕಾರು ಸಣ್ಣ ಹೋಟೆಲುಗಳನ್ನು ತಿರುಗಿ ಒಂದು ಹೋಟೆಲಲ್ಲಿ ಕೋಣೆ ಹಿಡಿದು ಸ್ನಾನ ಮುಗಿಸಿ ಉಪಹಾರ ತೆಗೆದುಕೊಂಡು ಕಣ್ಣು ಉರಿಯುತ್ತಿದ್ದರೂ ಲೆಕ್ಕಿಸದೆ ಕ್ಯಾಮರಾವನ್ನು ಹೆಗೆಲಿಗೇರಿಸಿ ಹೊರಬಂದು ಕೊಂಚ ಅಲ್ಲಿ ಇಲ್ಲಿ ಸುತ್ತಾಡಿ ವಿವೇಕಾನಂದ ಸ್ಮಾರಕದತ್ತ ಹೆಜ್ಜೆ ಹಾಕಿದೆ. ಆಗಲೆ ಪೆಟ್ರಿ ದೋಣಿಗಾಗಿ ಕಾಯುತ್ತಿದ್ದವರ ಸಾಲಿನಲ್ಲಿ ಆ ಬಿಸಿಲಿನಲ್ಲೂ ಸಿಗರೇಟ್ ಸೇದುತ್ತ ನಿಂತಿದ್ದಳು. ಅವಳನ್ನು ನೋಡಿದಾಕ್ಷಣ ನಾನು ಹಲೋ ಎಂದೆ. ಅವಳ ಹತ್ತಿರ ಹೋದೊಡನೆ ಸಣ್ಣ ದ್ವೀಪದಂತಿದ್ದ ವಿವೇಕಾನಂದ ಸ್ಮಾರಕದತ್ತ ನೋಡಿ -
"ಸ್ಪ್ಲೆಂಡಿಡ್- ಮಾರ್‌ವೆಲಸ್- ವಂಡರ್‌ಫುಲ್ ಈಸ್‌ನ್ಟ್ ಇಟ್ "ಎಂದಿದ್ದಳು. ನಾನು ಸುಮ್ಮನಿದ್ದೆ. ಬೇರೆ ಯಾರಾದರೂ ಆಗಿದ್ದಿದ್ದರೆ ಹೌದೆನ್ನುತ್ತಿದ್ದೆನೋ ಏನೋ.

ದೋಣಿಯಲ್ಲಿ ವಿವೇಕಾನಂದ ಸ್ಮಾರಕ ತಲುಪಿದೊಡನೆ ಅಲ್ಲಿನ ಸುಭಧ್ರ ಪಡೆಯವರು ಬಂದ ವೀಕ್ಷಕರನ್ನೆಲ್ಲ ಮುತ್ತಿ ಸ್ಮಾರಕದಲ್ಲಿ ಶಬ್ಧ ಮಾಡಬೇಡಿ, ಫೋಟೊ ತೆಗೆಯಬೇಡಿ, ಸ್ಥಳವನ್ನು ಶುಚಿಯಾಗಿಡಿ, ಚಪ್ಪಲಿ ಹಾಕಿಕೊಂಡು ಹೋಗಬೇಡಿ ಎಂದೆಲ್ಲ ವಿನಯದಿಂದ ಹೇಳಿದನಂತರ ಪೆಟ್ರಿ ಚಪ್ಪಲಿಯನ್ನು ಬಿಡಬೇಕಾದ ಸ್ಥಳದಲ್ಲಿ ಬಿಟ್ಟು ಅತ್ಯಂತ ಗೌರವ ಭಾವದಿಂದ ಸ್ಮಾರಕ ಪ್ರವೇಶಿಸಿದಳು. ನಾನು ಬೆಂಗಳೂರಿನಿಂದ ಬರುವಾಗ ಬೂಟುಗಳನ್ನು ಹಾಕಿಕೊಂಡು ಬಂದಿದ್ದು, ಜೀನ್ಸ್ ಪ್ಯಾಂಟನ್ನು ಕಳಚಿ ಹೋಟೆಲ್ಲಿನಲ್ಲೇ ಬಿಟ್ಟು ಇಲ್ಲಿಗೆ ಬರುವಾಗ ಪಂಚೆಯುಟ್ಟು ಬರಿಗಾಲಲ್ಲೇ ರಸ್ತೆಯಲ್ಲಿ ಪಾದಗಳನ್ನು ತಕಥೈ ಆಡಿಸಿ ಬಂದಿದ್ದೆ.ಸ್ಮಾರಕದಲ್ಲಿ ಅಲ್ಲಿ ಇಲ್ಲಿ ಸುತ್ತಾಡಿದ ನಂತರ ಪೆಟ್ರೀ ಸುಭದ್ರ ಪಡೆಯವನ ಕೈಗೆ ಹಸಿರು ನೋಟೊಂದನ್ನು ತುರುಕಿ ತನಗೆ ರಮಣೀಯವೆನ್ನಿಸಿದ ಸ್ಥಳವನ್ನು ತೋರಿಸಿ ನನಗೆ ಫೋಟೋ ತೆಗೆಯಲು ನಿರ್ದೇಶಿಸಿದಾಗ ನನ್ನ , ಲೇಖನಕ್ಕೆ ಪ್ರಯೋಜನವಿಲ್ಲವೆಂದು ನಾನು ಕಾರಣ ನೀಡಿದ್ದರಿಂದ ಆಕೆ ತನಗೆ ಸಾಕೆನ್ನಿಸುವಷ್ಟು ಫೋಟೊ ತೆಗೆದುಕೊಂಡಿದ್ದಳು. ನಂತರ ವಿವೇಕಾನಂದ ವಿಗ್ರಹದ ಮಂಟಪವನ್ನು ಹೊಕ್ಕು ಮೌನದಿಂದ ಅದರ ಮುಂದೆ ಎರಡು ನಿಮಿಷ ನಿಂತಾಗ ಆಕೆ ಭಾರತೀಯ ಕಲಾಪ್ರಾಕಾರಗಳನ್ನು ಮೆಚ್ಚಿಕೊಂಡು ವಿಮರ್ಶಿಸುತ್ತ ಎರಡು ಮಾತುಗಳನ್ನು ಪಿಸು ಧ್ವನಿಯಲ್ಲಿ ಹೇಳಿದ್ದಳು. ಧ್ಯಾನ ಮಂಟಪಕ್ಕೆ ಬಂದೆವು. ಆಕೆ ಧ್ಯಾನಕ್ಕೆ ಕೂತಾಗ ಅವಳ ಸಾಂಗತ್ಯ ನನಗೆ ಮುಜುಗರವೆನ್ನಿಸಿ ನಾನು ಅವಳಿಂದ ನುಣುಚಿಕೊಂಡು ಯಾರೂ ಇಲ್ಲದೆ ಇದ್ದ ತಗ್ಗು ಪ್ರದೇಶದ ಬಂಡೆಯ ಮೇಲೆ ಕುಳಿತು ಸಾಗರದ ಕಡೆಗೆ ದೃಷ್ಟಿ ನೆಟ್ಟಿದ್ದೆ. ಆ ಏಕಾಗ್ರ ದೃಷ್ಟಿಗೆ ಸಿಕ್ಕ ಯಾವ ದೃಶ್ಯಗಲೂ ಗ್ರಹಿಕೆಗೆಟುಕಿರಲಿಲ್ಲ. ಬಿಕ್ಕಿ ಬಿಕ್ಕಿ ಅಳಬೇಕೆನ್ನಿಸಿತ್ತು. ಬೆಂಗಳೂರಿನ ನಾಲ್ಕು ವರ್ಷದ ಒಂಟಿತನದ ಪ್ರಜ್ಞೆ ಈಗಿನ ಒಂದು ತೆರೆನಾದ ಅನಾಥ ಪ್ರಜ್ಞೆಯ್ನ್ನು ಇಮ್ಮಡಿಗೊಳಿಸಿದಂತಾಗಿ ಮಡುಗಟ್ಟಿತ್ತು. ಯಾವುದೋ ಒಂದು ಸಂದೇಶವನ್ನು ತಲುಪಿಸಲಿಕ್ಕೋಸುಗ ಬಂಡೆಗಳನ್ನು ಸಾಗರದಲೆಗಳು ಕುಟ್ಟುತ್ತಿದ್ದವು. ಬಂಡೆಗಳು ಎಚ್ಚೆತ್ತಿರುವಂತಿದ್ದು ಅಲೆಗಳು ಅಸ್ಪಷ್ಟವಾಗಿ , ಅಮೂರ್ತವಾಗಿ ಅರ್ಥಹೀನವಾಗಿಬಿಡುತ್ತಿದ್ದವು. ದಿಗ್ಗನೆ ಪೆಟ್ರೀಷಿಯಳ ನೀಲಿ ಕಣ್ಣುಗಳು ನೆನಪಿಗೆ ಬಂದು ಅವು ಸಾಗರದಲೆಗಳಂತೆ ಅಮೂರ್ತವೆಂದನ್ನಿಸಿಬಿಟ್ಟಿತು. ನನ್ನ ಗ್ರಹಚಾರಕ್ಕೆ ಇವಳೆಲ್ಲಿಂದ ವಕ್ರಿಸಿದಳು..ಬಂಕ ಪಿಶಾಚಿಯಂತೆ..ಎಂದೂ ಅನ್ನಿಸ ತೊಡಗಿತು. ಆ ಕ್ಷಣ "ಚಂದ್ರೂ.."ಹಿಂದಿನಿಂದ ಬಂದ ಪೆಟ್ರೀಷಿಯಳ ಕೂಗಿಗೆ ಎಚ್ಚೆತ್ತು ಹಿಂದೆ ತಿರುಗಿ ನೋಡಿದೆ. ಅವಳು ಎತ್ತರದ ಪ್ರದೇಶದ ಬಂಡೆಯೊಂದರ ಮೇಲೆ ಗೆಲುವಿನ ಮುಖದಲ್ಲಿ ಮಂದಸ್ಮಿತಳಸಗಿ ನಿಂತಿದ್ದಳು. ನಾನು ಪುನಃ ಸಾಗರದ ಕಡೆ ದೃಷ್ಟಿ ನೆಟ್ಟಿದ್ದೆ. ಜಾಗರೂಕತೆಯಿಂದ ಇಳಿದು ಬಂದ ಅವಳು ನನ್ನ ಪಕ್ಕದಲ್ಲಿ ಕುಳಿತು ಆತ್ಮೀಯಳಂತೆ ನನ್ನತ್ತ ನೋಡಿ "ಏನಾಯ್ತು?"ಎಂದಳು ನನ್ನ ಭುಜ ಅಲುಗಿಸುತ್ತ. ನಾನು ಏನೂ ಹೇಳಲಾಗದೆ ಎರಡು ನಿಮಿಷ ಅವಳ ಕಣ್ಣೂಗಳಲ್ಲಿ ದೃಷ್ಟಿ ನೆಟ್ಟೆ. ಜೋರಾಗಿ ಅಳಬೇಕೆನ್ನಿಸಿದರೂ ಅಳಲಾಗಿರಲಿಲ್ಲ. ಕಣ್ಣಲ್ಲಿ ನೀರು ತುಂಬಿತ್ತು. ನಗುತ್ತ ಐದು ನಿಮಿಷ ತದೇಕವಾಗಿ ಸಾಗರವನ್ನು ದಿಟ್ಟಿಸಿದ್ದರಿಂದ ಕಣ್ಣಲ್ಲಿ ನೀರು ತುಂಬಿತೆಂದು ಸುಳ್ಳು ಹೇಳಿದೆ. ಎದೆಯಲ್ಲಿನ ತಳಮಳವನ್ನು ಮುಚ್ಚಿಡುತ್ತ , ಅಲ್ಲಿಂದ ಹೊರಡಲು ಎದ್ದೆ. ಬಂಕ ಪಿಶಾಚಿಯು ನನ್ನನ್ನು ಅನುಸರಿಸುತ್ತಾ "ಜಾಗ ಹ್ಯಾಗನ್ನಿಸುತ್ತೆ?"ಎಂದು ಕೇಳಿದಾಗ ಆ ಪ್ರಶ್ನೆ ನಿರೀಕ್ಷಿಸಿದ್ಹೆನಾದರೂ ನನ್ನ ಮನಸ್ಸು ಪೂರ್ವಾಗ್ರಹ ಪೀಡಿತವಾದ್ದರಿಂದ ಉತ್ತರ ಸಿದ್ದವಾಗಿರಲಿಲ್ಲ. ಆದರೂ ಸುಳ್ಳು ಹೇಳದೆ ಆ ನಿಮಿಷ ಮನಸ್ಸಿಗೆ ತೋಚಿದ್ದನ್ನು ಮರೆ ಮಾಚದೆ ಹೇಳಿದೆ: "ಈ ಜಾಗ ನನಗೊಂದು ಚೂರು ಹಿಡಿಸಲಿಲ್ಲ. ಕುಳಿರ್ಗಾಳಿಯ ನಡುವೆಯೂ ಉಸಿರು ಕಟ್ಟುವಂತಿದೆ". ಅವಳು ಆಶ್ಚರ್ಯದಿಂದ ಕಾರಣ ಕೇಳಿದಾಗ "ಯಾಕೇಂತ ನನಗ್ಗೊತ್ತಿಲ್ಲ. ಯೋಚಿಸಲಿಕ್ಕಾಗದ ಶಿಶುವಿನಂತೆ ಇದೇ ಪ್ರಥಮ ಬಾರಿ ಆಗಿರುವುದು. ಕಾರಣ ಆನಂತರ ಹೊಳೆಯಬಹುದು"ಎಂದೆ. "ಹಾಗಾದರೆ ಯೋಚನೆ ಮಾಡಿ ಆನಂತರ ಹೇಳು ನನಗೂ ಕುತೂಹಲ ಇದೆ"ಎಂದಳು. ಈಚೆ ದಡವನ್ನು ತಲುಪಲು ದೋಣಿಗಾಗಿ ಕಾದಿದ್ದ ಸಾಲಿನಲ್ಲಿ ಸೇರಿದೆವು. ನಾನು ಏನನ್ನೂ ಮಾತಾಡದೆ ತೀರದ ದಡದಲ್ಲಿದ್ದ ಊರ ಕಡೆ ನೋಡುತ್ತಿದ್ದೆ. ಆಕೆಗೆ ನನ್ನ ಮನಸ್ಸು ಅರ್ಥವಾಯಿತೋ ಏನೋ ಸುಮ್ಮನಾದಳು. ದಡದಲ್ಲಿದ್ದ ಕನ್ಯಾಕುಮಾರಿ ದೇವಸ್ಥಾನ, ಗಾಂಧಿ ಮಂಟಪ, ಪ್ರವಾಸಿಮಂದಿರ, ಸೀಶೋರ್ ಟೀ ಕ್ಲಬ್ ಎಲ್ಲವನ್ನು ನೋಡುತ್ತಿದ್ದೆ. ನನ್ನ ನೋಟಕ್ಕೆ ಬೇರೊಂದು ದೃಶ್ಯ ಬೀಳಲಾರಂಭಿಸಿತು. ಏಳೆಂಟು ವರ್ಷದ ಕಪ್ಪು ಹುಡುಗನೊಬ್ಬ ಹಲಗೆಯೊಂದಕ್ಕೆ ತೆಕ್ಕೆ ಬಿದ್ದು ಅಷ್ಟೊಂದು ರಭಸವಿಲ್ಲದ ಅಲೆಗಳ ಮಧ್ಯೆ ಈಜುತ್ತ ಸ್ಮಾರಕದತ್ತ ಬರುತ್ತಿದ್ದ. ನಾವು ನಿಂತಿದ್ದ ಸಾಲಿನ ಪಕ್ಕದ ಸಾಗರ ಪ್ರದೇಶದಲ್ಲಿ ಐದಾರು ಸಣ್ಣ ಹುಡುಗರು ಈಜುತ್ತ ನಿಂತಿದ್ದ ಕಡೆಯೆ ನಿಂತು ನಮ್ಮತ್ತ ನೋಡುತ್ತಿದ್ದರು. ಪ್ರವಾಸಿಗರಲ್ಲಿ ಕೆಲವರು ಐದು ಹತ್ತು ಪೈಸೆಯನ್ನು ಸಾಗರಕ್ಕೆ ಎಸೆಯುತ್ತಿದ್ದರು. ಹುಡುಗರು ಬುಳುಕ್ಕನೆ ನೀರಿನಲ್ಲಿ ಮುಳುಗಿ ನಾಣ್ಯವನ್ನು ಹಿಡಿಯುತ್ತಿದ್ದರು. ಅದಕ್ಕಾಗಿ ಹುಡುಗರ ಮಧ್ಯೆ ಸ್ಪರ್ಧೆ- ಆ ಸ್ಪರ್ಧೆಯ ನಡುವೆಯೂ ವೃತ್ತಿಯಲ್ಲಿನ ಆತ್ಮೀಯತೆ. ಪೆಟ್ರೀಷಿಯಳು ಎಂಟಾಣೆ ನಾಣ್ಯವೊಂದನ್ನು ಎಸೆದಳು. ಹುಡುಗರು ಮುಳುಗಿದರು. ಅದು ದೊಡ್ಡ ಮೋಜೆಂಬಂತೆ, ಅದ್ಭುತವೆಂಬಂತೆ, ತಮಾಶೆಯೆಂಬಂತೆ ಅರಳಿದ ಕಣ್ಣುಗಳಿಂದ ನೋಡುತ್ತಿದ್ದಳು. ಅವಳ ಮೇಲೆ ಯಾಕೋ ಜಿಗುಪ್ಸೆ ಮೂಡಿಬಂತು. ಐದಾರು ಫೋಟೊಗಳನ್ನು ತೆಗೆದುಕೊಂಡೆ.

ಈಚೆ ದಡ ತಲುಪಿದ ನಂತರ ಆಕೆಯೊಂದಿಗೆ ಊಟ ಮಾಡಲು ಆಗ್ರಹಪೂರ್ವಕವಾದ ಆಹ್ವಾನವನ್ನು ನೀಡಿದಳು. ನಾನು ಮೃದುವಾಗಿ ನಿರಾಕರಿಸಿದೆ. "ನಿನಗೇಕೊ ಮನಸ್ಸು ಸರಿಯಿದ್ದಂತಿಲ್ಲ. ಇರಲಿ ಜೊತೆಗೆ ಬಾ.."ಎಂದು ಆತ್ಮೀಯಳಂತೆ ಕರೆದಾಗ ಖಡಾಖಂಡಿತವಾಗಿ ಬೇಡವೆನ್ನಲಾಗದೆ ಹಿಂಬಾಲಿಸಿದ್ದೆ. ಹೋಟೆಲ್ಲಿನಲ್ಲಿ ಆಕೆಯ ಸೂಟ್‌ನಲ್ಲಿ ನನಗೆ ಊಟ, ಆಕೆಗೆ ಬ್ರೆಡ್ ಬಟರ್ ಜಾಂ ಇತ್ಯಾದಿಗಳನ್ನು ಆರ್ಡರ್ ಮಾಡಿ ಕಾಯುತ್ತ ಕುಳಿತೆವು. ಆಕೆ ಆ ಸಮಯದಲ್ಲಿ ತನ್ನ ಸ್ಪಾಂಜ್ ಬ್ಯಾಗ್‌ನಲ್ಲಿದ್ದ ಪುಟ್ಟ ಆಲ್ಬಂ ಒಂದನ್ನು ತೆಗೆದು ನ್ಯೂಯಾರ್ಕ್‌ನ ಜಾಹೀರಾತು ಸಂಸ್ಥೆಯಲ್ಲಿ, ಟಿ.ವಿ ಗೆ ತಾನು ಪ್ರತಿನಿಧಿಸಿದ್ದ ಜಾಹೀರಾತುಗಳ ಭಾವಭಂಗಿಗಳಿದ್ದ ಫೋಟೋಗಳನ್ನು , ತನ್ನ ತಂದೆ ತಾಯಿ ತಮ್ಮಂದಿರ ಭಾವಚಿತ್ರಗಳನ್ನು, ತಾನು ನಟಿಸಲು ಪ್ರಯತ್ನಿಸಿ ಅದಕ್ಕೆ ತೆಗೆಸಿದ್ದ ಹಲವಾರು ಭಂಗಿ ಚಿತ್ರಗಳನ್ನು, ತನ್ನನ್ನು ಮೊಸಗೊಳಿಸಿದ ಕ್ಯಾಮರಮನ್‌ನ ಚಿತ್ರಗಳನ್ನು ವಿವರಗಳ ಸಮೇತ ತೋರಿಸಿ "ಹ್ಯಾಗಿದೆ?"ಎಂದು ಕೇಳಿದ್ದಳು. ಆಗ ನನಗೆ ತಟ್ಟನೆ ವಿವೇಕಾನಂದ ಸ್ಮಾರಕದ ಅಸ್ವಸ್ಥ ಅನುಭವದ ಕಾರಣ ಪ್ರಜ್ಞೆಯ ಮಟ್ಟದಲ್ಲಿ ಮಸುಕು ಮಸುಕಾಗಿ ಹೊಳೆಯಾರಲಾಂಭಿಸಿತು, ನಾನು ಏನೂ ಮತಾಡಿರಲಿಲ್ಲ. ಸುಮ್ಮನೆ ಅವಳು ಹೇಳುತಿದ್ದುದನ್ನು ಕೇಳುತ್ತಿದ್ದೆ. ಊಟ ಬಂದ ನಂತರ ಇಬ್ಬರೊ ಊಟ ಮುಗಿಸಿದೆವು. ಆಕೆ ಆರಾಮಾಸನಕ್ಕೆ ಒರಗಿಕೊಂಡು ಸಿಗರೇಟೊಂದನ್ನು ಅಂಟಿಸಿ ಕಣ್ಣು ಮುಚ್ಚಿಕೊಂಡು "ಚಂದ್ರು ನನಗೆ ಈಗ ಏನನ್ನಿಸಿತ್ತಿದೆ ಗೊತ್ತಾ? ನ್ಯೂಯಾರ್ಕ್‌ಗೆ ದೂರದಲ್ಲಿರುವ ಸ್ವರ್ಗದಲ್ಲಿದ್ದೇನೆ ಎಂದನ್ನಿಸ್ತಾ ಇದೆ. ಯಾವುದೇ ಯೋಚನೆ ಇಲ್ಲದೆ ಸರಳವಾಗಿರುವ ನಿನ್ನ ದೇಶದಲ್ಲೇ ...ಸ್ವರ್ಗವಾಗಿರುವ ನಿನ್ನ ದೇಶದಲ್ಲೇ ನಿರಂತರವಾಗಿದ್ದುಬಿಡುವ ಯೋಚನೆ ಮೂಡ್ತಾ ಇದೆ ಎಂದಳು. ಇವಳೇನು ಭ್ರಮೆ- ಭಾವುಕತೆಗಳಿಂದ ಅಂಧಳಾ‌ಅಗಿಲ್ಲವಷ್ಟೆ ಎಂದನ್ನಿಸಿತ್ತು ನನಗೆ. ಪುನಃ ನೀರಿನಿಂದ ಪುಟಿಯುವ ಚೆಂಡಿನಂತೆ ಕೇಳಿದ್ದಳು ಗಕ್ಕನೆ: "ಚಂದ್ರೂ ನಿನಗೆ ಮದುವೆಯಾಗಿದೆಯ?"- ಆರಾಮಾಸನದಲ್ಲಿ ನೆಟ್ಟಗೆ ಕುಳಿತು ನನ್ನ ಕಡೆ ನೋಡುತ್ತ. ಈ ಪ್ರಶ್ನೆಯಂತೂ ನಾನು ಎದುರು ನೋಡಿರಲಿಲ್ಲ. ಆದರೂ ` ಆಗಿದೆ ' ಎಂದು ಸುಳ್ಳು ಹೇಳಿ ಯಾಕೆ? ಎಂದು ಪ್ರಶ್ನಿಸಿದ್ದೆ, ಕುತೂಹಲದಿಂದ. ಅವಳು ಎಚ್ಚೆತ್ತವಳಂತೆ "ಯಾಕೂ ಇಲ್ಲ, ಸುಮ್ಮನೆ ಕೇಳಿದೆನಷ್ಟೆ.."ಎಂದಳು. ಆನಂತರ ಕನ್ಯಾಕುಮಾರಿ ದೇವಸ್ಥಾನಕ್ಕೆ ಹೋಗೋಣವೆಂದು ತೀರ್ಮಾನಿಸಿ ಹೊರ ಬಂದೆವು. ಬರುವಾಗ ಪ್ರಸಿದ್ಧ ಸೂರ್ಯೋದಯದ ಬಗೆಗೆ ಹೋಟೆಲ್ ಮೇನೇಜರ್‌ನನ್ನು ವಿವರ ಕೇಳಿದಳು , ಅದಕ್ಕಾತ "ಮೇಡಂ, ನೀವು ಸರಿಯಾದ ಕಾಲದಲ್ಲಿ ಬಂದಿಲ್ಲ. ಈ ತಿಂಗಳೆಲ್ಲ ಸೂರ್ಯ ಕಡಲ ಕಡೆಯಿಂದ ಉದಯಿಸದೆ ಯಾವುದೋ ಬಂಡೆಗಳ ಮಧ್ಯೆದಲ್ಲಿ ಉದಯಿಸಿ ಮೇಲಕ್ಕೇರಿದನಂತರ ಕಾಣಿಸುತ್ತಾನೆ. ಅಷ್ಠೇನೂ ಅಹ್ಲಾದಕರವಾಗಿರುದಿಲ್ಲ"ಎಂದಿದ್ದ. ತಮಿಳಿನವನಾದರೂ ಸ್ವಚ್ಛ ಇಂಗ್ಲೀಶ್‌ನಲ್ಲಿಯೇ. ಬೇಸರದಿಂದಲೆ ಅವಳು ಆಚೆ ಬಂದಿದ್ದಳು.

ದೇವಸ್ಥಾನದ ಧ್ವಾರದಲ್ಲಿ ನನ್ನ ಅಂಗಿಯನ್ನು ಕಳಚಿ ಹೆಗಲ ಮೇಲೆ ಹಾಕಿಕೊಂಡು , ಆಕೆಯ ಚಪ್ಪಲಿಗಳನ್ನು ಕಾವಲಿನವನ ಸುಪರ್ದಿಗೊಪ್ಪಿಸಿ ಒಳ ಹೊಕ್ಕು ದರ್ಶನಾರ್ಥಿಗಳ ಸಾಲಿನಲ್ಲಿ ನಿಂತೆವು. ಶತಮಾನಗಳಿಂದಲೂ ಇವು ನನಗೆ ಹತ್ತಿರವಾದವು. ಇವಕ್ಕೂ ನನಗೂ ತೀರದ ಗಾಢವಾದ ಸಂಬಂಧ ಇದೆ ಎಂದನ್ನಿಸಿ ವಿವೇಕಾನಂದ ಸ್ಮಾರಕದಲ್ಲಿ ದೊರೆಯದ ಶಾಂತಿ, ತೃಪ್ತಿ ಸಮಾಧಾನಗಳು ದೊರೆತಿದ್ದವು. ಏಕೋ ಏನೋ ಆಕೆಯಂತೂ ನನಗಾಗಿ ಅಲ್ಲಿದ್ದವಳಂತೆ ತನ್ನ ಚಡಪಡಿಕೆಯೆಲ್ಲವನ್ನು ಅದುಮಿಟ್ಟವಳಂತಿದ್ದಳು. ದೇವಿ ದರ್ಶನವನ್ನು ಮುಗಿಸಿ ಕುಂಕುಮ ಪ್ರಸಾದವನ್ನು ಆಕೆಯ ಕೈಗೆ ಹಾಕಿದೆ. ಒಂದು ಹತ್ತು ನಿಮಿಷ ಅಲ್ಲಿಯೇ ಕುಳಿತಿದ್ದು ಅನಂತರ ಆಚೆ ಬಂದೆವು. ಆಕೆ ದೊಡ್ಡದಾಗಿ ನಿಟ್ಟುಸಿರು ಬಿಡುತ್ತ ಸಿಗರೇಟೊಂದನ್ನು ಅಂಟಿಸಿ ಆರ್ಟ್ ಎಂಪೋರಿಯಂಗೆ ಎಳೆದೊಯ್ದು ತನಗಿಷ್ಟ ಅನ್ನಿಸಿದ್ದೆಲ್ಲವನ್ನು ಕೊಂಡುಕೊಂಡಳು. ಬೇಡವೆಂದರೂ ಕೇಳದೆ ಉಂಗುರವೊಂದನ್ನು ಕೊಂಡು "ಉಡುಗೊರೆ"ಯೆಂದು ನನ್ನ ಕಣ್ಣಲ್ಲೇ ನೋಡುತ್ತ ನನಗೆ ತೊಡಿಸಿ "ನೀನು ಎಳೆ ಮಗುವಿನಂತಿದ್ದೀಯ"ಎಂದಳು. ಧ್ವನಿಯಲ್ಲಿ ಹಾಸ್ಯವಿರಲಿಲ್ಲ. ಹಾಗೆಂದು ಖಾತ್ರಿಯಾಗಿ ಹೇಳಲೂ ಸಹ ಬರುವುದಿಲ್ಲ. ಸೂರ್ಯ ಮುಳುಗುವ ಸಮಯವಾದ್ದರಿಂದ ಕಡಲ ತೀರಕ್ಕೆ ಬಂದು ಸೀಶೋರ್ ಟೀ ಕ್ಲಬ್‌ನಲ್ಲಿ ಕುಳಿತು ಸೂರ್ಯ ಕಣ್ಣೀಗೆ ಕಾಣದಿದ್ದರೂ ಆತ ಪಸರಿಸುತ್ತಿದ್ದ ಹೊನ್ನ ರಂಗಿನಲ್ಲಿ ಮೈಮರೆತು ಕುಳಿತಿದ್ದೆವು. ಮಾರನೆ ದಿನಸ್ ಬೆಳಿಗ್ಗೆ ಆರೂ ಹತ್ತಕ್ಕೆ ಸೂರ್ಯೋದಯವೆಂದು ಸೂರ್ಯ ಸರಿಯಾಗಿ ಕಾಣುವುದಿಲ್ಲವೆಂಬ ವಿಚಾರ ಕ್ಲಬ್ಬಿನವನನ್ನು ಪುನಃ ಕೇಳಿ ತಿಳಿದುಕೊಂಡು "ಸೂರ್ಯ ಕಾಣದಿದ್ದರೂ ಚಿಂತಿಲ್ಲ, ಭೇಟಿಯಾಗೋಣ ಕಡಲತೀರದಲ್ಲಿ."ಎಂದು ತೀರ್ಮಾನಿಸಿ ಬೀಳ್ಕೊಂಡಿದ್ದೆವು.

ಕೋಣೆಯಲ್ಲಿ ರಾತ್ರಿಯೆಲ್ಲ ನನಗೆ ನಿದ್ರೆ ಬರದೆ ಸಿಗರೇಟ್ ಸೇದುತ್ತ ಕಾಲ ಕಳೆದೆ. ನಡುಝಾಮದಲ್ಲಿ ಆರ್ಧಂಬರ್ಧ ನಿದ್ರೆಯಾವಸ್ಥೆಯಲ್ಲಿ ವಿವೇಕಾನಂದ ಸ್ಮಾರಕ ನೋಡಿದ್ದೆ. ಇಂಗ್ಲಿಷ್ ಸಿನಿಮಾಗಳ ಕ್ಲಬ್ಬಿನ ಸನ್ನಿವೇಶಗಳ ತುಣುಕುಗಳು ಇತ್ಯಾದಿಯೆಲ್ಲ ಕನಸಿನ ತುಂಬಾ ಹರಡಿಕೊಂಡಿದ್ದವು. ಆ ಕನಸಿನ ಸ್ಥಿತಿಯಲ್ಲಿದ್ದಾಗಲೆ ರೂಂ ಬಾಯ್ ಬಂದು ಎಬ್ಬಿಸಿದ.

ಐದು ಗಂಟೆಯಾಗಿತ್ತು. ಬಿದ್ದ ಕನಸಿನ ಬಗೆಗೆ ಯೋಚಿಸುತ್ತ ಸ್ನಾನ ಮಾಡಿ ಆರೂ ಹತ್ತಕ್ಕೆ ಸರಿಯಾಗಿ ಕಡಲತೀರದ ಕಡೆಗೆ ಬರುತ್ತಿದ್ದಂತೆ ಕನಸಿನಲ್ಲಿ ಪೆಟ್ರೀಷಿಯಳನ್ನು ಬೆತ್ತೆಲೆಯಾಗಿ ಕಲ್ಪಿಸಿಕೊಂಡದ್ದು ನೆನಪಿಗೆ ಬಂದಿತು. ತೀರದಲ್ಲಾಗಲೇ ಹೊನ್ನ ಕಿರಣಗಳು ಮೂಡಿದ್ದವು. ಅದರ ಮೂಲ ಕಣ್ಣಿಗೆ ಕಾಣುತ್ತಿರಲಿಲ್ಲ. ಪೆಟ್ರೀಷಿಯ ತನ್ನ ಹೊನ್ನ ಬಣ್ಣದ ಕೂದಲನ್ನು ಗಾಳಿಗೆ ಹಾರಾಡಲು ಬಿಟ್ಟು ನಿಂತಿದ್ದಳು. ನಾನು ಆಕೆಯತ್ತ ಬರುತ್ತಿದ್ದುದನ್ನು ಗಮನಿಸಿ ಗುಡ್‌ಮಾರ್‌ನಿಂಗ್ ಹೇಳಿ "ರಾತ್ರಿ ನಿದ್ರೆ ಬಂತ?"ಎಂದಳು. "ಇಲ್ಲ, ಏನೋ ಓದುತ್ತಾ ಕುಳಿತಿದ್ದೆ"ಎಂದೆ. "ನನಗೂ ನಿದ್ದೆ ಬರಲಿಲ್ಲ, ಆದರೆ ಓದಲಾಗಲಿಲ್ಲ."
ಎಂದು ಹೇಳಿ ಸಿಗರೇಟನ್ನು ಅಂಟಿಸಿದಾಗ , ಕನಸಿನಲ್ಲಿ ವಿವೇಕಾನಂದ ಸ್ಮಾರಕ ನೆನಪಿಗೆ ಬಂತು . ಕಲ್ಲು ಬಂಡೆಗಳ ನಡುವೆ ಎದ್ದ ಸೂರ್ಯನನ್ನು ನೋಡಿಕೊಂಡು ಮತ್ತೊಮ್ಮೆ ದೇವಸ್ಥಾನಕ್ಕೆ ಹೋಗಿಬರೋಣ ಎಂದು ಆಕೆಗೆ ಹೇಳಿ ಆಕೆಯನ್ನು ದೇವಸ್ಥಾನಕ್ಕೆ ಕರೆದೊಯ್ದು ಹತ್ತು ನಿಮಿಷ ಕುಳಿತು ಬಂದೆವು. ನನ್ನ ಮನಸ್ಸಿನಲ್ಲಿದ್ದ ವಿಚಾರವನ್ನು ಅವಳಿಗೆ ಹೇಗೆ ಹೇಳುವುದು ಎಂದು ದಾರಿ ಹುಡುಕುತ್ತಿದ್ದೆ.

ಉಪಹಾರಕ್ಕೆಂದು ಹೋಟೆಲ್ಲಿಗೆ ಹೋಗಿ ತಿಂಡಿಗೆ ಹೇಳಿದನಂತರ ನಿಧಾನವಾಗಿ ಆಕೆಯನ್ನು ಕೇಳಿದೆ, "ವಿವೇಕಾನಂದ ಸ್ಮಾರಕದ ಬಗ್ಗೆ ನೀನು ಕೇಳಿದಾಗ ಆ ಜಾಗ ನನಗೆ ಒಂದು ಚೂರು ಹಿಡಿಸಲಿಲ್ಲ ಅಂತ ಹೇಳಿದೆ. ಯಾಕೆ ಗೊತ್ತೆ?"ಎಂದು ಕೇಳಿದೆ. ಮಾಣಿ ತಿಂಡಿ ತಂದಿಟ್ಟು ಹೋದ. ನನ್ನತ್ತ ಪ್ರಶ್ನಾರ್ಥಕವಾಗಿ ನೋಡಿದ ಆಕೆ ತಿಂಡಿಗೆ ಕೈ ಹಾಕಿದಳು. ನಾನು ತಿಂಡಿ ತಿನ್ನದೆ "ನೀನೆ ಕಾರಣ ."! ಎಂದೆ. ಜೋರಾಗಿ ನಕ್ಕಳು. ನಾನು ಹೇಳುತ್ತಿರುವುದು ತಮಾಷೆಯೆಂಬಂತೆ. ಬಾಯಲ್ಲಿದ್ದುದು ನೆತ್ತಿಗೇರಿತು. ತಲೆಯನ್ನು ತಟ್ಟಿಕೊಂಡು ಹೋಟೆಲ್ಲಿನ ಸೂರನ್ನೆ ಒಂದು ನಿಮಿಷ ನೋಡಿ ಅನಂತರ ನನ್ನ ಕಡೆ ತಿರುಗಿ "ನೀನೇನು ತಮಾಷೆ ಮಾಡ್ತಿಲ್ಲವಷ್ಟೆ?"ನಾನು ಇಲ್ಲವೆಂದು ಸೂಚಿಸುತ್ತ ತಲೆಯಾಡಿಸಿದೆ. ಅವಳು ಮತ್ತೂ ಗಂಭೀರಳಾಗಿ "ನನ್ನ ಕಾರಣದಿಂದ ನಿನಗೆ ಅಂತಹ ಪ್ರಶಾಂತವಾದ ಜಾಗ ಹಿಡಿಸಲಿಲ್ಲವೆ? ವಿವೇಕಾನಂದನಂತಹ ಮಹಾನುಭಾವ ಭಾರತದ ಬಗೆಗೆ ವ್ಯಾಕುಲನಾಗಿ ಅದರ ಕ್ಷೇಮಕ್ಕೆ ಸೊಂಟ ಕಟ್ಟಿ ನಿಲ್ಲಲು ಅಚಲವಾದ ನಿರ್ಧಾರ ಕೈಗೊಂಡ ಪುನೀತವಾದ ಜಾಗ , ನಿನ್ನ ಭಾರತ, ನಿನ್ನ ವಿವೇಕಾನಂದ ನನ್ನ ಕಾರಣದಿಂದ ಹಿಡಿಸಲಿಲ್ಲವೆ...?- ಎಂದಾಗ ಅವಳ ನೀಲಿ ಕಣ್ಣುಗಳ ಆಳದಲ್ಲಿ ಭೀತಿ ಇದ್ದಂತೆಯೂ ಮೇಲ್ಮುಖವಗಿ ಅವು ನಿರ್ಲಿಪ್ತವಾಗಿದ್ದಂತೆ ಕಂಡು ಬಂದವು. [ ಅಸಾಂದರ್ಭಿಕವಾಗಿ ಆಗ ನನಗೇಕೊ ಅವಳನ್ನು ತಬ್ಬಿ ಮುತ್ತಿಡಬೇಕು ಎಂದನ್ನಿಸಿಬಿಟ್ಟಿತು..] ನಾನು ಹೇಳಿದ್ದೆ: "ಪ್ರವಾಸಿಗಳಾಗಿ ಬರುವ ವಿದೇಶಿಯರಿಗಾಗಿ, ಅದರ ಆಕರ್ಷಣೆಗಾಗಿ ನಿರ್ಮಾಣವಾದ ಭಾಗ ಅದು. ಅದರ ನಿರ್ಮಾಣದ ಹಿನ್ನೆಲೆ, ಭಕ್ತಿಯಲ್ಲ ಗೌರವವಲ್ಲ. ಅಭಿಮಾನಗಳಲ್ಲ.ವ್ಯಾಪಾರಿ ದೃಷ್ಠಿ. ನಿನಗೂ ಆ ಜಾಗಕ್ಕೂ ವ್ಯತ್ಯಾಸವೇ ಇಲ್ಲ. ನೀನು ಜಾಹಿರಾತಿಗಾಗಿ ಮಾಡೆಲ್ ಆಗಿರಲು ಕೃತಕ ಸಾಧನಗಳಿಂದ - ಪ್ರಸಾದನಗಳನ್ನು ಉಪಯೋಗಿಸಿ ನಿನ್ನದೆ ಆದ ಕೃತಕ ಸೌಂದರ್ಯದಿಂದ ಜನರನ್ನು ಮರುಳು ಮಾಡುವುದಿಲ್ಲವೆ? ನೀನು ನಿಜವಾಗಿ ಸುಂದರಿಯಾಗಿರಬಹುದು. ಅದು ಬೇರೆ ವಿಚಾರ. ನಿನ್ನ ಕೃತಕತೆಯನ್ನು ಆ ಜಾಗದ ಕೃತಕತೆಯನ್ನು ಸಮೂಲಾಗ್ರವಾಗಿ ದ್ವೇಷಿಸುತ್ತೇನೆ. ತಿರಸ್ಕರಿಸುತ್ತೇನೆ..."ಕೊನೆಗೂ ಅನ್ನಿಸಿದ್ದೆಲ್ಲವನ್ನೂ ಅವಳಿಗೆ ಹೇಳಬೇಕನ್ನಿಸಿದ್ದೆಲ್ಲವನ್ನು ಹೇಳಿದ್ದೆ. ಅವಳು ಪೇಲವವಾಗಿದ್ದಳು- ಮಾತುಗಳನ್ನು ಕೇಳುತ್ತ.ನನಗೆ ಸಂತೋಷವಾಗಿತ್ತು. [ ಆದರೆ ನಾನು ಹೇಳಿದ್ದೆಲ್ಲ್ವು ಎಷ್ಟರ ಮಟ್ಟಿಗೆ ನಿಜ ಎಂಬ ಸಂದೇಹ ಈಗಲೂ ಇದೆ.] "ಮತ್ತೊಮ್ಮೆ ಅಲ್ಲಿಗೆ ಹೋಗಿ ಬರೋಣ , ಬರ್‍ತೀಯೇನು? "- ಪ್ರಶ್ನಿಸಿದ್ದೆ. ಮೌನದಿಂದ ಹಿಂಬಾಲಿಸಿದ್ದಳು. ಹೋಟೆಲ್ ಬಿಲ್ ಕೊಟ್ಟು ಆಚೆ ಬರುವಾಗ ಕೇಳಿದ್ದೆ: "ನೀನು ವಿ.ಎಸ್. ನೈಪಾಲನ ` ಏರಿಯ ಆಫ್ ಡಾರ್ಕ್‌ನೆಸ್ ' - `ಇಂಡಿಯಾ : ವೂಂಡಡ್ ಸಿವಿಲೈಸೇಷನ್' ಓದಿದ್ದೀಯ?"ಎಂದೆ. ಉತ್ತರಿಸಿದಳು: ಹೌದು- ಓದಿದ್ದೇನೆ. ಆತ ಭಾರತವನ್ನು ಅಷ್ಟು ಬೆತ್ತಲೆಯಾಗಿ ನೋಡಬಾರದಿತ್ತು. ಅದು ಯಾರಿಗೂ ಕ್ಷೇಮವಲ್ಲ."

ಸ್ಮಾರಕವನ್ನು ತಲುಪಿದ ನಂತರ ಮರಳಿ ಹಿಂತಿರುಗಲು ದೋಣಿಗಾಗಿ ಕಾಯುತ್ತಿದ್ದ ಸಾಲಿನತ್ತ ಕರೆದೊಯ್ದು ಸಾಗರ ಪ್ರದೇಶದಲ್ಲಿ ಈಜುತ್ತ ಬೇಡುತ್ತಿದ್ದ ಹುಡುಗರನ್ನು , ತೀರದಿಂದ ಸ್ಮಾರಕಕ್ಕೆ ಹಲಗೆಯ ಮೇಲೆ ಬೋರಲಾಗಿ ಇಲ್ಲಿಗೆ ಈಜುತ್ತ ಬರುತ್ತ ಇದ್ದ ಹುಡುಗರನ್ನು , ತೋರಿಸಿ "ಫೋಟೊ ತೆಗೆದುಕೋ"ಎಂದೆ. ಅವಳು ಮತ್ತೂ ಪೇಲವವಾಗಿ ನನ್ನತ್ತ ನೋಡಿದಳು. ನಾನು ಐದಾರು ಫೋಟೋಗಳನ್ನು ತೆಗೆದುಕೊಳ್ಳುತ್ತಾ "ನಾನು ನಿನ್ನ ಅರಿವಿಗೆಟುಕಿಸಲು ಪ್ರಯತ್ನಿಸುತ್ತಿರುವುದು ಸೈಂಟಿಫಿಕ್ ಕಮ್ಯೂನಿಸಂ ಅಲ್ಲ. ನೈಪಾಲನಿಂದ ನಾನು ಕಲಿತಿರುವ ಮಾನವೀಯ ದೃಷ್ಟಿಯಿಂದೊಡಗೂಡಿದ ವಿಶ್ಲೇಷಣ ವಿಧಾನ..."ಎಂದೆ. ಮಾತನಾಡಲಿಲ್ಲ ಅವಳು. ನಾನು ಸ್ವರದಲ್ಲಿ ಕಾಠೀಣ್ಯತೆಯ ಪರಮಾವಧಿ ತಲುಪಿ ಆವೇಶಭರಿತನಾಗಿ ಮುಂದುವರಿಸಿ, "ಕೋಟ್ಯಂತರ ರೂಪಾಯಿಗಳ ಖರ್ಚು ಮಾಡಿರೋ ಈ ಸ್ಮಾರಕ ಭಾರತವಲ್ಲ. ಆ ಹುಡುಗರು, ಕನ್ಯಾಕುಮಾರಿ ದೇವಸ್ಥಾನ ನಿಜವಾದ ಭಾರತ. ಇಂತಹ ಸ್ಮಾರಕಗಳು ಅವನ್ನ ಮುಚ್ಚಿ ಹಾಕ್ತವೆ. ಪಿಟ್ಸ್‌ಬರ್ಗ್‌ನ ವೆಂಕಟರಮಣನ ದೇವಸ್ಥಾನಕ್ಕೂ ಈ ಸ್ಮಾರಕಕ್ಕೂ ವ್ಯತ್ಯಾಸವಿಲ್ಲ..."ಇನ್ನೂ ಏನೇನೋ ತರ್ಕಬದ್ಧವಾಗಿಯೋ - ತರ್ಕಹೀನವಾಗಿಯೋ ಹೇಳಲಿದ್ದೆ. ಅವಳು ಅದಕ್ಕೆ ತಡೆ ಹಾಕಿ "ಚರ್ಚೆ ಬೇಡ."ಎಂದಳು ಉಗ್ರಳಾಗಿ.

ಮಾರನೆ ದಿನ ಅವಳು ನನ್ನ ಬಳಿ ಹೆಚ್ಚು ಮಾತಾಡಿರಲಿಲ್ಲ. ಶೂನ್ಯಳಾಗಿ ಏನೋ ಕಳೆದುಕೊಂಡಂತಿದ್ದಳು. ನಾಗರ್ ಕೋಯಿಲ್, ಸುಚೀಂದ್ರಂಗೂ ಹೋಗಿ ಬಂದೆವು. ಆಗಲೂ ಎಣೂ ಮಾತನಾಡಲಿಲ್ಲ. ನನ್ನ ರಜೆ ಮುಗಿದು ಬಂದಿತ್ತಾದ್ದರಿಂದ ನಾನು ಬೆಂಗಳೂರಿಗೆ ಹಿಂತಿರುಗುವುದು ಅನಿವಾರ್ಯವಾಗಿತ್ತು...
ಹೋಟೆಲ್ಲಿಗೆ ಬಂದು ಅವಳು ಉಳಿದುಕೊಂಡಿದ್ದ ಸೂಟ್ ಕಡೆ ಹೆಜ್ಜೆ ಹಾಕಿದೆ. ನನ್ನ ಆಶ್ಚರ್ಯಕ್ಕೆಂಬಂತೆ ಬೀಗ ಹಾಕಿತ್ತು. ಎಲ್ಲಿ ಹೋಗಿದ್ದಾಳು ಎಂದು ತೀಳಿಯದೆ ಮ್ಯಾನೇಜರ್ ಬಳಿ ವಿಚಾರಿಸಿದಾಗ "ಆಕೆ ಬೆಳಿಗ್ಗೇನೆ ಖಾಲಿ ಮಾಡಿ ಹೋದರು. ಈ ಕಾಗದ ನೀವೀನಾದರೂ ಬಂದರೆ ಕೊಡು ಎಂದು ಕೊಟ್ಟು ಹೋಗಿದ್ದಾರೆ..."ಎಂದು ಹೇಳಿ ಲಕೋಟೆಯೊಂದನ್ನು ನನ್ನ ಕೈಗೆ ಕೊಟ್ಟ. ನಾನು ಹೋಟೆಲ್ಲಿಂದೀಚೆಗೆ ಬಂದು ಅದನ್ನು ಬಿಸಿಸಿದಾಗ ಅದರಲ್ಲಿದ್ದ ಒಕ್ಕಣೆ:

ಚಂದ್ರೂ ,ನಾನು ಪುನಃ ಹಿಂತಿರುಗಿ ನ್ಯೂರ್ಯಾಕ್‌ಗೆ ಹಿಂತಿರುಗುವ ನಿರ್ಧಾರ ಮಾಡಿದ್ದೇನೆ. ಸದ್ಯಕ್ಕೆ ನನ್ನ ಸ್ನೇಹಿತರ ಬಳಿ ಹೋಗುತಿದ್ದೇನೆ. ನಿನಗೆ ವೈಯುಕ್ತಿಕವಾಗಿ ಹೇಳದೆ ಹೋಗುತ್ತಿದ್ದೇನೆಂದು ನನ್ನನ್ನು ಮರೆಯದಿರು. ಆದರೆ ಮೂರು ದಿನದ ಸಾಂಗತ್ಯದಲ್ಲಿ ನೀನೆಂದೂ ಮನುಷ್ಯನಾಗಿರಲೇ ಇಲ್ಲ. ಹಾಗಿದ್ದರೂ ಒಂದಂತೂ ನಿಜ. ಬಾಬಾಗಳು ಯೋಗಿಗಳ ಭ್ಹಾರತ ಕರಗಿ "ನ್ಯೂರ್ಯಾಕ್‌ನಂತಹ ಭ್ಹಾರತ "ಇಲ್ಲೂ ಎದ್ದಿತು. ಒಟ್ಟಾರೆ ನಾನು ಎಲ್ಲಿ ಹೋದರೂ ಶಾಂತಿ ಎಂಬುದಂತೂ ದೊರೆಯದಾಗಿದೆ. (ಹುಡುಕಿದರೆ ಸಿಗುವಂತಹದಲ್ಲ. ನಮ್ಮ ಬಳಿಯೇ ಇರಬೇಕು, ಆದೇನಾದರೂ ಇದ್ದರೆ .....! ತಾತ್ವಿಕವಾಗಿದೆಯಲ್ಲವೆ ಈ ಯೋಚನೆ!)
ನಿನ್ನನ್ನು ನೋಡಲು ವಿದಾಯ ಹೇಳಲು ನನಗೇಕೋ ನೈತಿಕ ದೈರ್ಯ ಕಳೆದು ಕೊಂಡಂತಾಗಿದೆ. ಕ್ಷಮೆ ಇರಲಿ;
ನಿನ್ನ ಸ್ನೇಹಿತೆ
ಪೆಟ್ರಿವಿ.
ಸೂ. ನಾನು ನಿನ್ನನ್ನು ದ್ವೇಷಿಸುತ್ತೇನೆ,ತಿರಸ್ಕರಿಸುತ್ತೇನೆ.

ಓದಿ ಮುಗಿಸಿದ ನಂತರ ನನಗೆ ಎರಡು ನಿಮಿಷ ಏನೂ ತೊಚಲಿಲ್ಲ. ಆದರೆ ಈಗ ಬೆಂಗಳೂರಿಗೆ ಹೊರಟಿರುವ ಬಸ್ಸಿನಲ್ಲಿ ಕುಳಿತಿರುವ ನನ್ನನ್ನು ಅವಳ ನೀಲಿ ಕಣ್ಣುಗಳ ಶಿಶುತನದ ನಗು, ಜಿಗುಪ್ಸೆಯ ನೋಟ ಇತ್ಯಾದಿಗಳು, ಅಷ್ಟೆಲ್ಲ ಯಾಕೆ ಅವಳ ಇಡಿಯ ವ್ಯಕ್ತಿತ್ವವೇ ಕಣ್ಣುಗಳಲ್ಲಿ ಮೂರ್ತವಾಗಿ ಘನೀರ್ಭೂತವಾದಂತಿದೆ. ಆಕೆಯ ಕಣ್ಣುಗಳೇ ನನಗೆ "ಏನೇನನ್ನೋ"ಹೇಳುತ್ತ ಹಿಂಬಾಲಿಸಿದ್ದವು. ಜೊತೆಗೆ ಕಡಲು.... ನೀಲಿಬಣ್ಣ.... ಆರ್ಭಟ.... ಮೂಕಭಾವ...ಅಮೂರ್ತತೆ ಎಲ್ಲವೂ ಅವಳ ಸೌಂದರ್ಯದೊಂದಿಗೆ ಸೇರಿ ನನ್ನನ್ನು ಹಿಂಬಾಲಿಸುವಂತಿದೆ...

(ಗುಟ್ಟು: ಈಗ ಕನ್ಯಾಕುಮರಿಯಲ್ಲೇ, ಸ್ಮಾರಕಕ್ಕೆ ಹತ್ತಿರವಾಗಿ ಎಲ್ಲಾದರೂ ಮನೆ ಮಾಡಿಕೊಂಡು ಇದ್ದು ಬಿಡಬೇಕೆಂಬ ಅನಿಸಿಕೆಗಳು ಮೂಡುತ್ತಿವೆ...)

ಪ್ರಜಾವಾಣಿ ೧೪.೧೦. ೧೯೭೯ ಪ್ರಕಟ....

0 Comments:

Post a Comment

Subscribe to Post Comments [Atom]

<< Home