ಒಡಕಲು-ಬಡಕಲು

೧೯೭೮ರಲ್ಲಿ ಹೇಗೆಲ್ಲಾ ಯೋಚಿಸುತ್ತಿದ್ದರು-ಬರೆಯುತ್ತಿದ್ದರು ಎನ್ನುವ ಕುತೂಹಲವಿದ್ದಿರಬಹುದಾದವರಿಗೆ, ಇದ್ದರೆ ಇರಲಿ ಎಂದು ಇಲ್ಲಿ ಪ್ರಕಟಿಸಿದ್ದೇನೆ. ಇದರಾಚೆಗೆ ಇವುಗಳಿಗೆ ಯಾವುದೇ ಮಹತ್ವವಿಲ್ಲ-ಉದ್ದೇಶವೂ ಇಲ್ಲ.

Saturday, May 13, 2006

ಸಣ್ಣಕತೆ-ಸುಗೀತ

ಸುಗೀತ-
ಜೀವನದ ಗತದಲ್ಲೇ ಹೂತು ಹೋಗಿ ಗತಕ್ಕೆ ಮಾತ್ರ ಸೀಮಿತವಾದ ಹಲವಾರು ಸಂಬಂಧಗಳು ನೆನಪಿನ ಮೂಲಕ ಪ್ರಾಮುಖ್ಯ ಪಡೆದುಕೊಂಡು ಪ್ರಾಧಾನ್ಯ ಸ್ಥಾಪಿಸಿಕೊಳ್ಳುವ ಸಂದರ್ಭಗಳು ಅನೇಕ. ಅವುಗಳು ಪ್ರಸಕ್ತಕ್ಕೆ ಜೀವವಿಲ್ಲದ ಎಲುಬುಗೂಡಿನಂತೆ. ಶ್ರಾದ್ಧದಂತೆ, ಅಷ್ಟೆ. ಮುರ್‍ನಾಲ್ಕು ವರ್ಷಗಳ ಹಿಂದೆ ಅಂತ್ಯಗೊಂಡ ನನ್ನ ಹಾಗೂ ಅವಳ ಸಂಬಂಧ ಈಗ ಪುನಃ ನನ್ನತ್ತೆ [ ನನಗಿಂತ ಎರಡು ವರ್ಷ ದೊಡ್ಡವಳಷ್ಟೆ.] ಸತ್ಯಭಾಮಳ ಸಮಕ್ಷಮದಲ್ಲೇ ಪುನರ್ನವೀಕರಣ ಹೊಂದಬಹುದು - ಹೊಂದದೇ ಹೋಗಲೂ ಬಹುದು. ಈ ಸಂದರ್ಭ ಬಹುಶಃ ಮಾತುಕತೆಗೆ ಆಸ್ಪದವಿಲ್ಲದ ನೋಟಗಳಿಗೆ ಮಾತ್ರ ಕಟ್ಟುಬಿದ್ದ ಮೂಕ ಭೇಟಿಗಾಗಿ ನಾನು ಕಾಯುತ್ತಿದ್ದೆನೋ ಇಲ್ಲವೋ ತಿಳಿಯದು. ಕಾಯುತ್ತಿದ್ದೆ-ಕಾಯುತ್ತಿರಲಿಲ್ಲ.ಎರಡೂ ಇರಬಹುದು. ದೀರ್ಘ ಕಾಲದನಂತರ ಭೇಟಿಯಾಗುತ್ತಿನೇದ್ದರಿಂದ ಹಿಂದೆ ಆ ಸಂಬಂಧಕ್ಕಿದ್ದ ಮೌಲ್ಯ ಈಗ ಮಸುಕು ಮಸಕಾದ್ದರಿಂದ ಪ್ರಾಮಖ್ಯತೆಯೋ ಪ್ರಾಧಾನ್ಯತೆಯೋ ತೀರಾ ಕಮ್ಮಿಯಾದರೂ ಈಗ ಅವಳು ಹೇಗೆಲ್ಲಾ ಇರಬಹುದೆಂಬ ಕಲ್ಪನೆ ಮನಸ್ಸಿನ ತುಂಬಾ ಹರಡಿಕೊಳ್ಳಲು ಯತ್ನಿಸುತ್ತಿತ್ತು. ಸತ್ಯಭಾಮ ಮದುವೆಯಾದ ಹೊಸದರಲ್ಲಿ, ಅವಳು ಈಗ ಸಿಟಿಯ ಯಾವುದೋ ಒಂದು ಶಾಲೆಯಲ್ಲಿ ಟೀಚರಳಾಗಿದ್ದಾಳೆಂದು ತಿಳಿದು ಮಕ್ಕಳಿಗೆ ಅವಳು ಏನು ಪಾಠ ಹೇಳಿಕೊಟ್ಟಾಳೆಂದುಕೊಂಡಿದ್ದೆ. ಕುರಿ ಮಂದೆ ತುಂಬಿದಂತೆ ಜನಗಳನ್ನು ತುಂಬಿ ವೇಗವಾಗಿ ಹೋಗುತ್ತಿದ್ದ ಬಸ್ಸಿನಲ್ಲಿ ಕುಳಿತುಕೊಳ್ಳಲು ಜಾಗವೂ ಇಲ್ಲದೆ ಪ್ರಯಾಸ ಪಡುತ್ತಿದ್ದ ಈ ಸಮಯದಲ್ಲೂ ಅವಳ ಬಗೆಗಿನ ನೆನಪುಗಳು ಗತದ ಸಂಗತಿಗಳೊಡನೆ ಸಹಜವಾಗಿಯೆ ಬೆಸೆದುಕೊಂಡಿದ್ದು ನನಗೆ ಆಶ್ಚರ್ಯವಾಗಿತ್ತು.ನನಗೆ ಕೇವಲ ನಿರಾಶೆಯನ್ನುಳಿಸಿ ಮೌನವಾಗಿ ನನ್ನನ್ನುಪೇಕ್ಷಿಸಿ ಅವಳು ದೂರವಾಗುವುದಕ್ಕಿಂತ ಮುನ್ನ ನನ್ನ ಅವಳ ನಡುವೆ ನಡೆದಿದ್ದ ಮಾತುಕತೆಗಳು, ಸಂಗತಿಗಳು, ಒಡನಾಟಗಳು ಇವುಗಳೆಲ್ಲದರ ನೆನಪು ಪ್ರಾಮುಖ್ಯತೆ ಪಡೆದುಕೊಳ್ಳಲಾರಂಭಿಸಿದಾಗ ನಾನು ಕಿಟಕಿ ಕಂಬಿಗಳಿಗೆ ತಲೆಯಾನಿಸಿ ಕಣ್ಣು ಮುಚ್ಚಿದ್ದೆ...
ಆ ನೆನಪುಗಳು ಮನಸ್ಸಿನಲ್ಲಿ ಮತ್ತೆ ಮತ್ತೆ ಹಾದುಹೋದನಂತರ - ಬಸ್ಸಿನಲ್ಲಿ ಕುಳಿತುಕೊಳ್ಳಲಾಗದ ತಳಮಳ. ಕಿಟಕಿ ಹೊರಗಿನ ದೃಶ್ಯಗಳನ್ನು, ಜನರ ಇರುವಿಕೆಯನ್ನು, ಬಸ್ಸಿನ ವೇಗವನ್ನು- ಏನನ್ನೂ ಅನುಭವಕ್ಕೆ ತಂದುಕೊಳ್ಳಲಾಗದಷ್ಟು ಚಡಪಡಿಕೆ. ಹೀಗೆ ಅವಳ ನೆನಪು, ಏನನ್ನೂ ನನ್ನ ಮೆದುಳು ಗ್ರಹಿಸಲಾರದಷ್ಟರಮಟ್ಟಿಗೆ ಭಾವುಕನನ್ನಾಗಿಸಿತ್ತು. ಹಾಗೆಂದು ಬರಿಯ ನೋವನ್ನೆ ಮಿಗಿಸಿದ ಅವಳ ಬಗೆಗಿನ ನೆನಪುಗಳು ಅಹ್ಲಾದಕರವಾಗೇನು ಇರಲಿಲ್ಲ. ಆದರೆ ಭಾರತೀಯ ಪ್ರೇಮವನ್ನು ಭಾವುಕತೆಯ ರೂಪವೆಂಬ ವ್ಯಾಖ್ಯಾನವನ್ನು ನಾನು ಒಪ್ಪಿದರೂ ಸಂಬಂಧಗಳಲ್ಲಿ ಪರಸ್ಪರ ಆರ್ದ್ರವತೆಯ , ವಾಸ್ತವ ಪ್ರಜ್ಞೆಯ ಅವಶ್ಯಕತೆಯನ್ನು ಗುರುತಿಸದೆ ದುಡುಕಿದಾಗ ಇಬ್ಬರಿಗೂ ಆ ಸಂದರ್ಭದಲ್ಲಿ ಉಳಿಯುವುದು ದುರಂತಭರಿತವಾದ ನೆನಪುಗಳಷ್ಟೆ ಎಂಬುದನ್ನೂ ಸಹ ಅರಿತಿದ್ದೆ. ಅವಳು ನನ್ನಿಂದ ದೂರಾದುದನ್ನೇನಾದರು ಮಹಾದುರಂತವೆಂದು ಪರಿಗಣಿಸಿದ್ದಿದ್ದರೆ ದೇವದಾಸನಾಗಿರುತ್ತಿದ್ದೆನೋ ಏನೋ [ ಸ್ವಲ್ಪ ದಿನ ಹಾಗೂ ಇದ್ದೆನೆನ್ನಿ, ಕುಡಿದಿರಲಿಲ್ಲವಾದರೂ ಅವಳ ವಿಮುಖತೆಯಿಂದಾದ ನಷ್ಟ ತುಂಬಲು ಬೇರಾರೂ ಇಲ್ಲದೆ ಕೊಂಚ ದಿನ ಜಿಗುಪ್ಸೆಯಿಂದಿದ್ದೆ.] ರಾಮಕೃಷ್ಣ, ರಮಣ, ಅರವಿಂದ, ಗಾಂಧೀಜಿ, ರಸಲ್, ಜೆ.ಕೃಷ್ಣಮೂರ್ತಿ, ಇತ್ತೀಚಿನ ವಿ.ಎಸ್.ನೈಪಾಲ್, ಆರ್.ಡಿ. ಲೈಂಗ್‌ರವರ ಪುಸ್ತಗಳ ಆಳವಾದ ಅಭ್ಯಾಸ ಜೀವನದ ಬೇರೊಂದು ಅಜ್ಞಾತ ಕ್ಷಿತಿಜಕ್ಕೆ ದಾರಿ ತೆಗೆದಿತ್ತಲ್ಲದೆ ಏಳುನೂರು ರೂಗಳ ಪಗಾರದ ಉದ್ಯೋಗವನ್ನೂ ದೊರಕಿಸಿಕೊಟ್ಟು ಜೀವನ ಮಾರ್ಗವನ್ನೂ ಕಲ್ಪಿಸಿಕೊಟ್ಟಿತ್ತು! ಗಂಭೀರವಾದ ವ್ಯಾಸಂಗದ ಮಧ್ಯೆ ಅವಳ ನೆನಪಿನ "ದೇವದಾಸ"ನಾಗಿರದೆ ಅಥವ ಅದರ ವಿರುದ್ಧವಾದ ಯಿಂದ ಸಂಪೂರ್ಣವಾಗಿ ಅವಳನ್ನು ಮರೆತಿದ್ದೆನೆಂದೂ ಹೇಳಲುಬಾರದು.

ನನ್ನ ಹಾಗು ಗೀತಳ ಪರಿಚಯಕ್ಕೆ ಮೂಲ ಕಾರಣಳಾಗಿದ್ದ ನನ್ನತ್ತೆ ಸತ್ಯಳು ನಮ್ಮ ಮನೆಗೆ ಬಂದಾಗಲೆಲ್ಲ ಗೀತಳ ಬಗೆಗೆ ಏನಾದರೂ ಮಾತು ಬಂದು ನನ್ನ ಹಾಗು ಅವಳ ಸಂಬಂಧವನ್ನು ವಿಶ್ಲೇಷುಸುತ್ತಿದ್ದೆವು. ಶಾಲೆಗೆ ಹೊಗಿ ಏನು ಕಲಿಯದಿದ್ದ ನಾನು ಅವಳಿಂದ ಆಕರ್ಷಿತನಾದ ಕಾರಣಗಳೆಂದರೆ : ಅವಳು ಕಾಲೇಜಿಗೆ ಹೋಗಿ ಶಿಕ್ಷಣ ಪಡೆಯುತ್ತಿದ್ದಳೆಂಬುದು, "ಸುಗೀತ" ಆ ಹೆಸರಿನಲ್ಲಿನ ವಿಶೇಷ ಧ್ವನಿಯನ್ನು ಎರಡನೆಯ ಕಾರಣವಾಗಿ ಸೇರಿಸಿ, ಮೂರನೆಯದಕ್ಕೆ ಬಂದರೆ ಅವಳ ಕಪ್ಪು ಮುಖದಲ್ಲಿ ಹೊಳೆಯುತ್ತಿದ್ದ ಕಪ್ಪುಕಣ್ಣುಗಳ ಬಗೆಗೆ ಮೆಚ್ಚುತ್ತಾ ಸಣ್ಣದಾಗಿ ಭಾಷಣ ಮಾಡಬೇಕಾಗುತ್ತದೆ.ಅವಳ ನಡೆ ಉಡೆ ಹಠಮಾರಿತನದ ಹಿಂದಿನ ಮುಗ್ಧತೆ ಹೀಗೆಯೇ ಪಟ್ಟಿ ಬೆಳೆಯಬಹುದು. ಒಮ್ಮೆ ಮೆಚ್ಚಿಕೊಂಡರೆ ಮುಗಿಯಿತು, ಮೆಚ್ಚಿಕೊಂಡ ವ್ಯಕ್ತಿಯ ಕಾಲಿನಿಂದ ಹಿಡಿದು ಶಿರದವರೆಗೂ " "ಕುಮಾರಸಂಭವದ ಕಾಳಿದಾಸ"ನಾಗಿಬಿಡುತ್ತೇವೆ...[ ಹೆದರಬೇಡಿ ]ಎಷ್ಟೇ ಓದಿದರೂ ಎಷ್ಟೇ ತಿಳಿದುಕೊಂಡಿದ್ದರೂ ನನ್ನ ಭಾವುಕ ಜೀವನದ ಗಾಢ ಅನುಭವಗಳ ತೀವ್ರತೆ ಗಾಢತೆಗೆಳಿಂದ ನಾನಿನ್ನೂ ಕಳಚಿಕೊಳ್ಳಲಾಗದಿರುವುದಕ್ಕೆ ಇತ್ತೀಚೆಗೆ ಮನಸ್ಸಿನಲ್ಲೇ ನಾಚಿಕೆಪಡುವಂತಾಗಿದ್ದೇನೆ...


"ವರತೊರೆ"
ಕಂಡಕ್ಟರ್ ಜೋರು ಧ್ವನಿಯ ಕೂಗಿಗೆ ಎಚ್ಚೆತ್ತು ನಾನು ಕಿಟಕಿಯಿಂದಾಚೆ ದೃಷ್ಟಿ ಹಾಯಿಸಿದೆ. ಸತ್ಯ ತನ್ನ ಗಂಡನೊಂದಿಗೆ ಖಾಲಿ ಗದ್ದೆಯಿಂದ ಬಸ್ಸಿನ ಕಡೆಗೆ ನಡೆದುಕೊಂಡು ಬರುತ್ತಿದ್ದುದು ಗಮನಕ್ಕೆ ಬರುತ್ತಿದ್ದಂತೆ ಯಾರ್ರೀ ವರತೊರೆ ಬೇಗ ಇಳೀರಿ..ಎಂಬ ಕಂಡಕ್ಟರನ ಕೂಗಿಗೆ ಬೆಚ್ಚಿ ಬಿದ್ದು ಲಗುಬಗೆಯಿಂದ ಇಳಿದಾಗ ಬಸ್ಸು ಮುಂದಕ್ಕೆ ಹೋಯಿತು. ನನ್ನನ್ನು ಸಮೀಪಿಸಿದ ಸತ್ಯ ಹಾಗು ಆಕೆಯ ಗಂಡನನ್ನು ನೋಡಿ ಮುಗುಳ್ನಕ್ಕೆ. ಸತ್ಯಳು ನಗುತ್ತಾ " ನಾವು ನಿನ್ನೆ ಊರಿಗೆ ಬಂದ ತಕ್ಷಣ ನಿಮ್ಮಮ್ಮನ್ನ ಕೇಳ್ದಾಗ ನೀನು ಇವತ್ತು ಬರ್‍ತೀಯ ಅಂದರು.ನಾನು ನಂಬಿರಲಿಲ್ಲ.ಅಂತೂ ಬಂದೆಯಲ್ಲ..." ಎಂದು ಛೇಡಿಸುವ ಧ್ವನಿಯಲ್ಲಿ ಹೇಳಿ ತನ್ನ ಯಜಮಾನರ ಕಡೆಗೆ ತಿರುಗಿ "ಇವ್ನೆ ಚಂದ್ರು , ನಮ್ಮಣ್ಣನ ಮಗ" ಎಂದು ಚುಟುಕಿನಲ್ಲಿ ಪರಿಚಯಿಸಿ [ ಆಕೆ ಯಜಮಾನರನ್ನು ಒಮ್ಮೆ ಮಾತ್ರ ಮದುವೆ ಗಡಿಬಿಡಿಯಲ್ಲಿ ನೋಡಿದ್ದೆನಷ್ಟೆ], ಪುನಃ ನನ್ನ ಕಡೆ ತಿರುಗಿ "ಇವ್ರು ವಾಕಿಂಗ್ ಹೊರಟಿದ್ದರು, ನಾನು ಇವರ ಜೊತೇಲಿ ಬಂದು ಜಮೀನೆಲ್ಲ ತೋರ್‍ಸಿ, ನೀನು ಬರ್‍ತೀಯೇನೊ ನೋಡೋಣ ಅಂತ ಬಸ್ಸಿನ್ ಕಡೆ ಬಂದ್ವಿ..ಬರೋವಾಗ ದಾರೀಲೆಲ್ಲಾ ನಿನ್ ಬಗ್ಗೆ ಸುಗೀತನ್ ಬಗ್ಗೇನೆ ಮಾತು.." ಅವಳ ವಾಚಾಳಿತನ ಮದುವೆಯಾಗಿ ಗಂಡನ ಮನೆಗೆ ಹೋಗಿ ವರ್ಷವಾದರೂ ಹೋಗಿರಲಿಲ್ಲ. ಅಲ್ಲೇ ಇನ್ನೆಲ್ಲಿ ಮಾತನಾಡ್ತ ನಿಂತುಬಿಡ್ತಾಳೊ ಎಂದು ಹೆದರುತ್ತಿದ್ದ ಅವಳ ಯಜಮಾನರು ನಡೀರಿ ಬೇಗ ಹೋಗಿ ಕತ್ಲಾಗೋಕ್ಮುಂಚೇನೆ ಊರು ಸೇರ್‍ಕೊಳ್ಳೋಣ. ಮೂರು ಮೈಲಿ ನಡೆಯೋಷ್ಟೊತ್ತಿಗೆ...ಎಂದರು. ಕಳ್ಳಿ ಪಾಪಾಸುಗಳ ಇಕ್ಕೆಲದ ಬೆಣಚು ಕಲ್ಲಿನ ಹಾದಿಯನ್ನು ಹಿಡಿದು ಸವೆಸುತ್ತಾ ನಡೆಯುತ್ತಿದ್ದಂತೆ ನಾನು ಸತ್ಯಳ ಕಡೆಗೆ ನೋಡಿ " ನಾನು ಗಣೇಶನ ಪೂಜೆಗೋ ಅನಂತನ ವ್ರತಕ್ಕೋ ಬರ್‍ಲಿಲ್ಲ. ಅಪರೂಪಕ್ಕೆ ಎಲ್ಲಾ ಒಂದು ಕಡೆ ಸೇರಿರ್‌ತಾರೆ, ನೋಡಿದ್ ಹಾಗಾಗುತ್ತೇಂತ ಬಂದೆ.." ಎಂದೆ. " ನೀನು ಯಾಕೆ ಬಂದಿದ್ದೀಯಾಂತ ನನಗ್ಗೊತ್ತು ಕಣೊ, ಇರ್‍ಲಿ ಬಾ.." ಎಂದಳು ನಗುತ್ತ. ನಾನು ಬಾವಾಜಿ ಎದುರಿಗೆ ಬೇರೆ ಮಾತೆಲ್ಲಾ ಯಾಕೆ ಅಂತ ಮೌನಿಯಾದೆ. ಅರ್ಧ ಹಾದಿ ನಾನು ಬಾವಾಜಿ ನನ್ನ ಉದ್ಯೋಗ , ಪ್ರಸಕ್ತ ರಾಜಕೀಯ ಪಕ್ಷಗಳಲ್ಲಿನ ಕಸರತ್ತು ಇತ್ಯಾದಿಗಳನ್ನು ಚರ್ಚಿಸುತ್ತಿದ್ದಂತೆ ಮಾರಿಹಳ್ಳ ಬಂದಿತ್ತು. ಹಳ್ಳಿ ಹಾದಿ ಅಭ್ಯಾಸವಿಲ್ಲದ ಅವರಿಗೆ ಸುಸ್ತಾಯ್ತೇನೊ, ಸ್ವಲ್ಪ ಹೊತ್ತು ಕೂತ್ಕೊಂಡು ಹೋಗೋಣ ಎಂದವರೆ ಹಾದಿ ಬದಿಯ ದೊಡ್ಡ ಹೆಬ್ಬಂಡೆಯ ಮೇಲೆ ಕುಳಿತರು. ದಾರಿಯುದ್ದಕ್ಕೂ ನಮ್ಮ ಮಾತುಗಳನ್ನು ಕೇಳುತ್ತಾ ಬರುತ್ತಿದ್ದ ಸತ್ಯ ಅವರ ಪಕ್ಕದಲ್ಲೇ ಕುಳಿತಾಗ ನಾನು ಅವರ ಎದುರಿಗೆ ಸಣ್ಣ ಬಂಡೆಯೊಂದರ ಮೇಲೆ ಕುಳಿತು ಸಿಗರೇಟೊಂದನ್ನು ಹಚ್ಚಿ ಬಾವಾಜಿಯವರಿಗೊಂದು ಕೊಟ್ಟೆ. ಎರಡು ನಿಮಿಷ ಮೌನದನಂತರ ನಾನು ಸುಮ್ಮನಿರಲಾಗದೆ, ಕುತೂಹಲ ತಡೆಯಲಾಗದೆ ಸತ್ಯಳನ್ನು ಕುರಿತು ಏನು ನಿನ್ನ ಸ್ನೇಹಿತೆ ಉರಲ್ಲಿದ್ದಾಳೆಯೆ?- ಪ್ರಶ್ನಿಸಿದ್ದೆ. ಹೂಂ, ಬೆಳಿಗ್ಗೆ ನಾನೂ ಅವಳೂನು ಸೀನೀರಿಗೆ ಹೋಗಿದ್ವಿ.ಅಲ್ಲೂನು ನಿನ್ ಬಗ್ಗೇನೆ ಮಾತು.ಚಂದ್ರೂ ನಿಮ್ ಮನೆಗೆ ಇತ್ತೀಚೆಗೆ ಬಂದಿಲ್ಲಾಂತ ಕಾಣುತ್ತೆ ಅಂತ ನನ್ನನ್ನೇ ಕೇಳ್ತಾಳೆ, ಕತ್ತೆ. ನಾನು ಮದುವೆ ಮಾಡ್ಕೊಂಡು ಹೋದ್ ಮೇಲೆ ನನ್ನ ತವರು ಮನೆ ಮೇಲೆ ಅವಳಿಗೆಷ್ಟೊಂದು ಅಕ್ಕರೆ ಎಂದಳು ನಗುತ್ತ. ನನ್ನ ಅಂತರ್ಮುಖತೆಯನ್ನು ಗಮನಿಸಿಯೋ ಏನೊ ಕತ್ತಲಾಗುತ್ತ ಬಂತು ನಡೀರಿ ಹೋಗೋಣ ಎಂದರು ಬಾವಾಜಿ. ಉಳಿದ ಹಾದಿಯಲ್ಲಿ, ಆ ಮಾರ್ಗದಲ್ಲಿ ನಡೆಯುತ್ತಿದ್ದ ಭಯಂಕರ ಕೃತ್ಯಗಳು, ಅವುಗಳ ಬಗ್ಗೆ ಕೇಳಿದ್ದ ಅನುಭವಗಳ ವರದಿಗಳು, ಬೃಹದಾಕಾರದ ಹುಣಸೇಮರಗಳ ಸಾಲು, ಜಯಮಂಗಲಿ ನದಿ ದಂಡೆಗಳ ಸಾಲು, ಹಾಳು ಭಾವಿ, ದಯ್ಯದ ತೋಟದ ವದಂತಿಗಳು ಹೀಗೆ ಚರ್ಚಿಸುತ್ತಾ ಸವೆಸಿ ಮನೆ ತಲುಪುವ ವೇಳೆಗೆ ಸತ್ಯಳು ಹೆದರಿಕೆಯಿಂದ ನಡುಗುತ್ತಿದ್ದಳು. " ಅಮಾವಾಸ್ಯೆ ರಾತ್ರಿ ನಿಮಗೆ ಗಂಡಸರಿಗೆ ಮಾತಾಡೋಕ್ಕೆ ಬೇರೇನೂ ಸಿಗಲಿಲ್ವೇನೊ..." ಎಂದು ಒಳ ಓಡಿದಳು. ವಾಸ್ತವವಾಗಿ ನಾನು ಬಾವಾಜಿಗೆ ಆ ವಿವರಗಳನ್ನೆಲ್ಲ ಹೇಳೋಕ್ಕೆ ಹೆಚ್ಚಿನ ಗ್ರಾಸ ಒದಗಿಸಿದವಳೆ ಅವಳು.

ಮನೆ ಮುಂದೆ ಚಪ್ಪರ ಎದ್ದಿತ್ತು. ಒಳ ಹೊಕ್ಕಾಗ ಹಜಾರದ ನಡುವಿನಲ್ಲಿ ತರಕಾರಿ ಸುರುವಿಕೊಂಡು ಹೆಚ್ಚುತ್ತಾ ಕುಳಿತಿದ್ದ ಗುಂಪಿನಲ್ಲಿ ಅಜ್ಜಿ, ನಮ್ಮಮ್ಮ, ಅಂಪೂ ಅತ್ತಿಗೆ , ಆ ಊರಿನ ಹೆಂಗಸರಲ್ಲಿ ಯಾರ್‍ಯಾರೊ [ಅದರಲ್ಲಿ ಸುಗೀತನ ತಾಯಿಯನ್ನು ನೋಡಿದಂತಿದೆ ] ಇದ್ದರು. ಅಜ್ಜಿ ನನ್ನನ್ನು ನೋಡಿ " ಬಾರೊ ಗಂಡು, ಬಂದ್ಯಲ್ಲ ಇಲ್ಲಿ ನಗಿಸೋಕ್ಕೆ ಯಾರೂ ಇರಲಿಲ್ಲ. ಏನೂ ಕೆಲ್ಸ ಮಾಡೋಕ್ ತೋಚ್ತಾ ಇಲ್ಲ.." ಎಂದು ತಮಾಶೆ ಮಾಡಿದರು. ಕೂತಿದ್ದವರನ್ನೆಲ್ಲ ಮಾತನಾಡಿಸಿ ಹಿಂದೆ ಹೊಸದಾಗಿ ಕಟ್ಟಿದ್ದ ರೂಮಿಗೆ ಹೋಗಿ ಪ್ಯಾಂಟು ಕಳಚಿ ಪಂಚೆಯುಟ್ಟು ಬಚ್ಚಲಿಗೆ ಹೋಗಿ ಕೈಕಾಲು ತೊಳೆದು ಮತ್ತೆ ಆ ಗುಂಪನ್ನು ಸೇರಿ ಹರಟೆ ಹೊಡೆಯುತ್ತ ಒಂಭತ್ತು ಮೈಲಿ ನೂಕು ನುಗ್ಗಲಿನ ನಡುವಿನ ಬಸ್ ಪ್ರಯಾಣ, ಮೂರು ಮೈಲಿ ಕಾಲ್ನಡಿಗೆಯ ಪ್ರಯಾಸವನ್ನು ಮರೆಯುತ್ತಾ ಮನಸ್ಸಿನಲ್ಲಿ ಎರಡೂ ವ್ರತಗಳಿಗೆ ಸೇರಿದ್ದ ಜನರ ಲೆಕ್ಕ ಮಾಡಿ ಸುಮಾರು ಅರವತ್ತು ಜನ ಎಂದು ಅಂದಾಜನ್ನು ತಲುಪಿ ಎರಡು ವ್ರತಗಳ ಸಂತರ್ಪಣೆ ಸಾವಿರದೈನೂರ್ ರೂಪಾಯ್ ತಲುಪಿರಲಾರದೆ? ದಂಗಾಗಿ ಅಲ್ಲಿಂದ ಎದ್ದು ಪಡಸಾಲೆಗೆ ಬಂದೆ, ಅಲ್ಲಾಗಲೆ ಸಂಜೆಯೂಟ ಮುಗಿದಿತ್ತು. ಗಂಡಸರೆಲ್ಲ ಗುಂಪು ಸೇರಿ ಜಗುಲಿ ಮೇಲೆ ಕುಳಿತು ಎಲೆಯಡಿಕೆ ಮೆಲ್ಲುತ್ತಾ ಬೀಡಿ ಕಚ್ಚಿ ಹರಟೆಗೆ ತೊಡಗಿದ್ದರು, ನಾನು ಎಲ್ಲರನ್ನು ಸಣ್ಣದಾಗಿ ಮಾತನಾಡಿಸಿ ಬಾವಾಜಿ ಇಲ್ಲದುದನ್ನು ಗಮನಿಸಿ ಆಚೆ ಬಂದೆ. ಚಪ್ಪರದ ಎದುರಿನ ಒಂದು ಮೂಲೆಯಲ್ಲಿ ಹಾಕಿದ್ದ ಮರದ ದಿಮ್ಮಿಗಳ ಮೇಲೆ ಕುಳಿತು ಸಿಗರೇಟು ಸೇದುತ್ತಿದ್ದರು. ನನ್ನನ್ನು ನೋಡಿ ನನಗೊಂದನ್ನು ಕೊಟ್ಟು ಹೊಟ್ಟೆ ಹಸೀತಿದೆ ಮಾರಾಯ, ಕೇಳಿದರೆ ಲೇಟಾಗುತ್ತದಂತೆ. ಬಾ ಉಡುಪನ ಹೋಟ್ಲಿದೆಯಂತಲ್ಲ, ಕಾಫಿಯನ್ನಾದರು ಕುಡಿದು ಬರುವ ಎಂದರು. ಹೊರಟೆವು. ನಮ್ಮ ಪಕ್ಕದ್ಮನೆಯನ್ನೇ ನಾನು ನೊಡ್ತಿದ್ದನ್ನು ಗಮನಿಸಿ ಬಾವಾಜಿ ಏನು ನಿಮ್ಮ ಗೀತನ್ಮನೆ ನೋಡ್ತ ಇದ್ದೀಯ? ಎಷ್ಟು ಮಾಡರ್ನ್ ಆಗಿದೆ ನೋಡು. ಹೊಸದಾಗೆ ರಿಪೇರಿ ಮಾಡ್ಸಿದ್ದಂತೆ, ಅವರಪ್ಪನೆ ಹೇಳೀದರು ಎಂದರು. ನಿಮ್ಮ ಗೀತನ್ಮನೆ ಎಂದಾಗ `ನಿಮ್ಮ' ಅನ್ನೋ ಪದ ಯಾಕೋ ಹಿಡಿಸಲಿಲ್ಲ. ಆದರು ಏನಾದರು ಕಣ್ಣಿಗೆ ಬೀಳುತ್ತಾಳೇನೊ ಎಂದು ಆ ಕಡೆ ದೃಷ್ಟಿ ಹಾಯಿಸಿದೆ...ಮನಸ್ಸಿನಲ್ಲೇ ಇಟ್ಟಿಗೆ ಗೂಡಿನ ಗೂಡಿನ ಸರದಾರನಾದ ಗೀತಳ ಅಪ್ಪ ನಾಗೇಂದ್ರ ರಾಯನ ಹಳ್ಳಿಯಲ್ಲಿನ ಮಾಡ್ರನಿಟಿಯ ಬೆಗೆಗೆ ಭೇಷ್ ಎನ್ನುತ್ತಾ. ಸುಗೀತಾಳಂತೂ ಕಣ್ಣಿಗೆ ಕಾಣಿಸಲಿಲ್ಲ.

ಮಾರನೆ ದಿನ ಗಣೇಶನ ಪೂಜೆ ಮಾಡಲು ಹಿರಿಯರೆಲ್ಲರಿಂದಿಲೂ ಒತ್ತಾಯ ಬಂದರೂ ನಾನು ರಾತ್ರಿಯೆಲ್ಲಾ ಜ್ವರವಿತ್ತು, ಸ್ನಾನ ಮಾಡದೆ ಹಾಗೆ ಪೂಜೆ ಮಾಡುವಂತಿಲ್ಲವೆಂದು ಕಳ್ಳ ನೆವೆ ಹೇಳಿ ತಪ್ಪಿಸಿಕೊಂಡು ಟವೆಲೊಂದನ್ನು ಹೆಗಲ ಮೇಲೆ ಹಾಕೊಕೊಂಡು ಆಚೆ ಬಂದೆ. ಸತ್ಯಬಾಮ ಬೆಳಿಗ್ಗೆ ಕಾಫಿ ಕೊಡುವಾಗ ಸುಗೀತಳೊಂದಿಗೆ ಕಾಣಿಸಿಕೊಂಡು- ನೋಡು ನಿನ್ನ ಸುಗೀತನ್ನ, ಇದಕ್ತಾನೆ ನೀನು ಬಂದಿರೋದು ಎನ್ನುವಂತೆ ಕಣ್ಣಲ್ಲೇ ಸನ್ನೆ ಮಾಡಿದಳು. ಅವಳು ತಲೆ ತಗ್ಗಿಸಿಕೊಂಡಿದ್ದಳು. ಮಾತನಾಡಿಸಲಿಲ್ಲ. ನಾನೂ ಸಹ ಮಾತನಾಡಿಸಲಿಲ್ಲ. ಆದರೆ ಅವಳನ್ನು ನೋಡಿದ ತಕ್ಷಣ, ಏನು ಬಿ.ಎ. ಮುಗ್ಸಿರಬೇಕು, ಸ್ವೀಟ್ ಎಲ್ಲಿ ಅಂತ ಕೇಳೋಣ ಎಂದುಕೊಂಡು ರಾತ್ರಿಯೆಲ್ಲಾ ಯೋಜನೆ ಹಾಕಿದ್ದುದೆಲ್ಲಾ ನೀರಾಗಿ ಅವಳು ನನ್ನನ್ನು ಉಪೇಕ್ಷಿಸಿದ್ದು ಮನಸ್ಸಿಗೆ ಬಂದು ಮೌನ ಪುನಃ ಘನಿರ್ಭೂತವಾಗಿ ನಿಂತಿತ್ತು. ಕಾಫಿ ಕುಡಿದ ಲೋಟವನ್ನು ಅವಳೇ ಕೈಗೆತ್ತಿಕೊಂಡಾಗ ನಾನು ಮುಖ ತೊಳೆಯಲು ಬಚ್ಚಲು ಮನೆಗೆ ಎದ್ದು ಹೋಗಿದ್ದೆ. ಈಗ ಮನಸ್ಸಿನಲ್ಲಿ ಏನೋ ಅಸಮಾಧಾನ. ನಾನು ಬರಲೇಬಾರದಿತ್ತು, ಎಂದನ್ನಿಸಿತು. ಜಯಮಂಗಲಿ ಕಡೆ ಹೆಜ್ಜೆ ಹಾಕಿದೆ. ಅಲ್ಲಿ ನದಿ ಮಧ್ಯ ಬಂಡೆಕಲ್ಲೊಂದರ ಮೇಲೆ ಮೆಲೆ ಕುಳಿತು ಬಾವಾಜಿ ಪುಸ್ತಕ ಓದುತ್ತಿದ್ದರು. ಗುಡ್ ಮಾರ್ನಿಂಗ ಎಂದವನೆ, ನೀವು ಪೂಜೆ ಮಾಡೋಲ್ಲವೆ ವಿಚಾರಿಸಿದೆ.ನಾವು ಮಾಡೋ ಹಾಗಿಲ್ಲ, ಅಪ್ಪ ಹೋಗಿ ಇನ್ನೂ ವರ್ಷ ಕಳೆದಿಲ್ಲ, ಇಲ್ಲಿಗೆ ಬರೋದನ್ನ ತಪ್ಪಿಸಬಾರ್ದೂಂತ ಬಂದ್ವಿ. ಅದೂ ಅಲ್ಲದೆ ಅವಳು ನಿಮ್ಮನ್ನೆಲ್ಲ ನೋಡ್ಬೇಕೂಂತಿದ್ಲು ಎಂದು ವಿವರಣೆ ನೀಡಿದರು. ನಾನು ಸ್ನಾನ ಮುಗಿಸಿದೆ. ಊರೊಳಗೆ ಸುತ್ತಾಡಲಾರಂಭಿಸಿದೆವು. ಪುನಃ ದಾರಿಯಲ್ಲಿ ಏನೂ ಓದಿರದ ನಾನು ಸಾಹಿತ್ಯ, ತತ್ವ, ಮನಶಾಸ್ತ್ರ ಹೀಗೆ ವಿವಿಧ ವಿಚಾರಗಳನ್ನು ಅಭ್ಯಸಿಸಲು ಹೇಗೆ ಸಾಧ್ಯವಾಯ್ತು, ಆಸಕ್ತಿ ಹೇಗೆ ಬಂತು ಎಂಬುದರ ಬಗೆಗೆಲ್ಲಾ ಕೇಳುತ್ತಿದ್ದರು.ನಾನು ಬರೆಯುತ್ತಿದ್ದ ಗ್ರಂಥದ ಬಗೆಗಿನ ವಿಚಾರ ಎಲ್ಲವನ್ನು ಚರ್ಚಿಸುತ್ತಿದ್ದಂತೆ ಸಂತೆ ಬೀದಿಯಲ್ಲಿನ ಉಡುಪನ ಹೋಟೆಲ್ಲಿನ ಕಡೆ ಬಂದಿದ್ದೆವು. ಕಾಫಿ ಕುಡಿಯೋಣ ಎಂದುಕೊಂಡು ಒಳ ಬಂದು ಕುಳಿತನಂತರ ಬಾವಾಜಿ " ಸರಿ ಇದೆಲ್ಲಾ ಆಯ್ತು, ಇನ್ನೊಂದು ವಿಚಾರ. ನಿಮ್ಮ ಹಾಗು ಸುಗೀತನ ಬಗ್ಗೆ ನಿಮ್ಮ ಬಾಯಲ್ಲೇ ತಿಳ್ಕೋಬೇಕೂಂತ. ಹೇಳೋ ಹಾಗಿದ್ರೆ ಹೇಳಿ..ಎಂದಾಗ ನಾನು ಏನನ್ನೂ ಮುಚ್ಚಿಡದೆ ನಾನು ಸತ್ಯಳಿಗೆ ಪಾಠ ಹೇಳಿ ಕೊಡಲು ಆ ಊರಿಗೆ ದಿನಾ ಬರುತ್ತಿದ್ದುದು, ಆಗ ಪಿ.ಯು.ಸಿ ಓದುತ್ತಿದ್ದ ಅವಳ ಸ್ನೇಹಿತೆಯಾದ ಸುಗೀತಳನ್ನು ಭೇಟಿಯಾದುದು, ಸಿಟಿಯಲ್ಲಿದ್ದ ಕಾಲೇಜಿಗೆ ನಮ್ಮ ಊರಿನ ಮೇಲೆ [ ಅಪ್ಪ ಶಾಲಾಮಾಸ್ತರನಾದುದರಿಂದ ಅವನ ವರ್ಗವಾಗಿ, ಸ್ವಂತ ಸ್ಥಳದಿಂದ ಒಂಭತ್ತು ಮೈಲಿ ಈಚೆಗೆ ಬೇರೆ ಮನೆ ಮಾಡಿದ್ದೆವು.] ಹಾದು ಹೋಗುತ್ತಿದ್ದ ಬಸ್ಸಿನಲ್ಲಿ ಬರುತ್ತಿದ್ದ ಅವಳನ್ನು ನೋಡಲು ದಿನವೂ ನಾನು ಬಸ್‌ಸ್ಟಾಪಿನ ಬಳಿ ನಿಲ್ಲುತ್ತಿದ್ದುದು, ಅವಳೊಂದಿಗೆ ಕಾಡುಹರಟೆ ಹೊಡೆಯುತ್ತಿದ್ದುದು, ನಾನು ಅವಳಿಗೆ ತೀರಾ ಅಂಟಿಕೊಂಡಿದ್ದುದು, ನಾನು ನಿನ್ನನ್ನು ಪ್ರೇಮಿಸುತ್ತೇನೆಂದು ಪರ್ಯಾಯವಾಗಿ ಸೂಚಿಸಿ ಅವಳಿಗೆ ಪತ್ರ ಬರೆದುದು, ಆ ವೇಳೆಗೆ ಬಿ.ಎ ತಲುಪಿದ್ದ ಅವಳು ಅವಿಶ್ವಾಸ ವ್ಯಕ್ತ ಪಡಿಸಿದಂತೆ ದೂರಾದುದೆಲ್ಲ ಸಮೂಲಾಗ್ರವಾಗಿ ತಿಳಿಸಿದೆ. ಪ್ರೌಢಾವಸ್ಥೆಯ ಪ್ರೇಮದ ಬಗೆಗೆ ಚರ್ಚಿಸುತ್ತಾ ಅವರು ಸತ್ಯಳನ್ನು ಮದುವೆಯಾಗುವ ಮುನ್ನ ತಾವೊಂದು ಹುಡುಗಿಯನ್ನು ಪ್ರೀತಿಸಿ ನಿರಾಶೆ ಹೊಂದಿದ ಬಗೆಯನ್ನೆಲ್ಲಾ ತಿಳಿಸಿದರು. ಆ ವೇಳೇಗಾಗಲೆ ಎರಡು ಗಂಟೆ, ಮನೆ ಕಡೆ ಬರುತ್ತಿದ್ದಂತೆ ಬಾಗಿಲಲ್ಲಿ ಕಾಯುತ್ತಿದ್ದ ಸತ್ಯಳು ನನ್ನ ಕಡೆ ದುರುಗುಟ್ಟಿಕೊಂಡು ನೋಡುವವಳಂತೆ ನಟಿಸಿ, ನಿನಗೆ ಮಾತಿಗೆ ಸಿಕ್ಕರೂಂತ ಎಳಕೊಂಡು ಹೋಗ್ಬಿಟ್ಟಾ? ಬಯ್ದು , ಆಗತಾನೆ ಎಲೆ ಹಾಕಿದ್ದ ಮೂರನೆ ಪಂಕ್ತಿಯಲ್ಲಿನ ಮೂರನೆ ಸಾಲೊಂದರಲ್ಲಿ ಕೂಡಿಸಿದಳು. ಹೋಗುವಾಗ ನಿನ್ನ ಕರ್‍ಪೀನೆ ಬಡಿಸ್ತಿದಾಳೆ, ಎಂದು ಹೇಳಿ ಹೋದಳು. ನನ್ನ ಎದೆಯಲ್ಲಿ ನಗಾರಿ ಬಾರಿಸುತ್ತಿತ್ತು. ನಾನು ಬಾವಾಜಿ ಕಡೆ ತಿರುಗಿ ನಿಧಾನಕ್ಕೆ ನಕ್ಕು ಕುಳಿತುಕೊಳ್ಳಿ ಎಂದು ಉಪಚಾರ ಹೇಳುತ್ತಿದ್ದಂತೆ, ತಾತ ನಾನು ಪಂಕ್ತಿಯಲ್ಲಿದ್ದುದನ್ನು ನೋಡಿ `ಏನಯ್ಯಾ ಜ್ವರ ಹೋಯ್ತೊ, ಬರೆಗಿರೆ ಹಾಕಿಸ್ಬೇಕೊ?' ಎಂದಂದು ಬಾವಾಜಿಗೆ ಉಪಚಾರ ಹೇಳಿಹೋದರು.ಸುಗೀತಳು ಬಡಿಸುವಾಗ ನನ್ನ ಕಡೆಗೆ ಬರುತ್ತಿದ್ದುದನ್ನು ಗಮನಿಸಿ ನಾನು ಇವಳನ್ನು ಮೆಚ್ಚಿಕೊಂಡೆನೆ, ಪ್ರೀತಿಸಿದೆನೆ, ಪ್ರೇಮ ಕುರುಡೂನ್ನೋದು ಸರಿ, ಎಂದೆಲ್ಲಾ ಯೋಚಿಸುತ್ತಿದ್ದ ಹಾಗೆ ಎದುರಿನ ಸಾಲಿನಲ್ಲಿ ಕುಳಿತಿದ್ದ ಅವಳಪ್ಪ ನಾಗೇಂದ್ರರಾಯ ` ಗೀತ ಇಲ್ಲಿ ಬಾಮ್ಮ, ಇವ್ರಿಗೆ ಬಡಿಸು, ಅವ್ರಿಗೆ ಬಡಿಸು' ಎಂದು ಅಕ್ಕಪಕ್ಕದವರು ಪರಿಚಯಸ್ತರಿಗೆಲ್ಲ ಉಪಚಾರ ನುಡಿದು ಬಡಿಸಲು ಹೇಳುತ್ತಿದ್ದ. ಬಾವಾಜಿ ನನಗೆ ಕಣ್ಣು ಹೊಡೆದು ಆಕೆಯನ್ನು ಕರೆದು ಸಿಹಿ ಬಡಿಸಲು ಒತ್ತಾಯಿಸಿದಾಗ ನಾನು ಬೇಡವೆಂದು ಲಘುವಾಗಿ ತಿರಸ್ಕರಿಸಿದೆ. ನನಗಂತೂ ಅನುಮಾನ ಆರಂಭವಾಯಿತು. ನೋ ಪ್ಲಾಟ್ ಎಗೈನ್‌ಸ್ಟ್ ಮೀ ಅನ್ನೋದನ್ನ ನಂಬೋದಾದರು ಹ್ಯಾಗೆ? ಅಂತೂ ಇಂತೂ ಊಟ ಮುಗಿಸಿ ಆಚೆ ಬಂದು ಸಿಗರೇಟ್ ಸೇದುತ್ತ ನಿಂತಿದ್ದೆ. ಗೋಪಿ [ ಬಾವಾಜಿ ತಮ್ಮ ] ಬಂದು ನಿಮ್ಮನ್ನು ಕರೀತಾರೆ ನೋಡಿ ಎಂದಾಗ ಸಿಗರೇಟನ್ನ ಆರಿಸಿ ಒಳ ಬಂದೆ. ಅಪ್ಪ , ಅಮ್ಮ , ತಾತ , ಅಜ್ಜಿ , ಸುಬ್ಬಣ್ಣ , ಅಂಪೂ ಅತ್ತಿಗೆ ಎಲ್ಲರೂ ರೌಂಡ್ ಟೇಬಲ್ ಕಾನ್‌ಫೆರನ್ಸ್ ನಡೆಸುತ್ತಿದ್ದವರಂತೆ ತಾಂಬೂಲ ಮೆಲ್ಲುತ್ತ ಮಾತನಾಡುತ್ತಿದ್ದರು. ನಾಗೇಂದ್ರ ರಾಯರು ಕುಳಿತಿದ್ದುದನ್ನು ಕಂಡಾಗ ಪ್ರಪೋಸಲ್ ಮೀಟಿಂಗ್ ಇರಬೇಕೆಂದುಕೊಂಡೆ. " ನೋಡೊ ನಮ್ಮ ನಾಗೂ ಮಗಳು ಗೀತಳನ್ನು ನೋಡಿದ್ದೀಯಲ್ಲ. ಗ್ರಾಜ್ಯುಯೇಟ್, ಹಾಗಂತ ಮನೆ ಕೆಲ್ಸಾನೆಲ್ಲ ಮಾಡ್ತ ನಿನ್ ಬರವಣಿಗೆಗೂ ಸಹಾಯವಾಗಿರ್‍ತಾಳೆ, ನಿನಗೆ ಕೊಡಬೇಕೂಂತಿದ್ದಾರೆ". ಎಂದು ಅಂದರು. ನಾನು ಅಪ್ಪನ ಕಡೆಗೆ ನೋಡಿದೆ. ಅವರು " ನೀನೂ ಆ ಹುಡುಗಿ ಒಪ್ಪಿಕೊಂಡರೆ ನಮ್ಮದೇನೂ ಅಭ್ಯಂತರವಿಲ್ಲಪ್ಪ." ಎಂದು ಅಂದಾಗ ಒಳಕ್ಕೆ ಬಂದ ಸತ್ಯಳು " ನೋಡಪ್ಪ ನಮ್ಮುಡುಗಿ, ಚಿನ್ನದಂತೋಳು, ಬಂಗಾರಾನ ಇಟ್ಕಂಡಿರಾಗಿದ್ರೆ ನೋಡು" ಎಂದಳು ಕಣ್ಣು ಮಿಟುಕಿಸಿ, ಎಲ್ಲರ ಮಾತಿಗೂ ಒಂದು ತನ್ನದೆಂಬಂತೆ. ನಾನು ಎಲ್ಲವನ್ನು ಗಂಟಲಿಗೆ ತಂದುಕೊಂಡು " ನನಗಿಷ್ಟವಿಲ್ಲ , ಈಗೇನೂ ಮದುವೆಗವಸರವಿಲ್ಲ.." ಎಂದೆ. ನನ್ನ ಭವಿಷ್ಯದ ಮೇಲಿನ ಸಂಪೂರ್ಣ ಹಕ್ಕನ್ನು ಧ್ವನಿಯಲ್ಲಿ ಪ್ರತಿನಿಧಿಸುತ್ತ. ತಕ್ಷಣ ಅಜ್ಜಿ " ಏನೋ, ನೀನೇನೂ ಓದಿಲ್ಲ, ಹುಡುಗಿ ಮಾತ್ರ ಓದಿದ್ದಾಳೆ. ಗ್ರಾಜ್ಯುಯೇಟ್ ಅಂತಾಲೆ.." ಎಂದಳು. ಸತ್ಯಳು ಸೇರಿದಂತೆ ಇನ್ನಿತರರು ಕಂಭದ ಹಾಗೆ ನಿಂತಿದ್ದರು. ನಾನು ಅಲ್ಲಿರುವುದೆ ಬೇಡವೆನ್ನಿಸಿ ` ಅದೆಲ್ಲ ಏನಿಲ್ಲ. ನಂಗೀಗ ಮದುವೆಯಾಗೋಕ್ ಇಷ್ಟವಿಲ್ಲ ಅಷ್ಟೆ." ಎಂದು ಹೇಳಿ ನಾಗೇಂದ್ರ ರಾಯರ ಕಡೆ ತಿರುಗಿ ನಿಮ್ಮ ಹುಡುಗಿಗೆ ಬೇರೆ ಗಂಡು ನೋಡ್ಕೊಳ್ಳಿ ಎಂದು ಚುಟುಕಾಗಿ ಹೇಳಿ ಎಲ್ಲರೂ ಕರೆಯುತ್ತಿದ್ದಂತೆ ಸರಸರ ಆಚೆ ಬಂದಿದ್ದೆ.ಅವ್ರಿಗೇನು ಇಷ್ಟ ಇಲ್ಲಾಂದ್ರೆ ಬಲವಂತ ಯಾಕೆ ಬಿಡಿ ಎಂದು ನಾಗೇಂದ್ರರಾಯರು ಹೇಳುತ್ತಿದ್ದ ಮಾತುಗಳು ನನ್ನ ಬೆನ್ನು ತಾಗಿದವು. ನನ್ನನ್ನು ಹಿಂಬಾಲಿಸಿದಂತೆ ದುಡುದುಡು ಎಂದು ಬಂದ ಸತ್ಯ ಮರದ ದಿಮ್ಮಿ ಬಳಿ ನಿಂತಿದ್ದ ನನ್ನ ಹತ್ತಿರ ಬಂದು " ನಿಂಗೇನಾರ ತಲೆ ಕೆಟ್ಟಿದ್ಯೋ ಹ್ಯಾಗೆ? ಮೂರು ವರ್ಷದ ಹಿಂದೆ ಅವಳನ್ನು ಎಲ್ಲೂ ಇಕ್ಲಾರ್‌ದವನಂಗೆ ಆಡ್ತಿದ್ದೆ. ಈಗೇನಾಯ್ತು?" ಎಂದು ಸಿಡಿಮಿಡಿ ರೇಗತೊಡಗಿದಳು. ಕಲ್ಪನೆ ಹೆಚ್ಚಾಗಿದ್ದ ಆಗಿನ ಭಾವನೆಗಳಿಗು, ಇಂದಿನ ವಾಸ್ತವ ಪ್ರಜ್ಞೆಯ ಬೌದ್ಧಿಕ ಬೆಳವಣಿಗೆಯ ನಡುವಿನ ಅಂತರ, ನನ್ನ ಬರವಣಿಗೆ, ವಿಚಾರಶಕ್ತಿ, ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿ ಬರದ ಸುಗೀತಳ ಮನೋಭಾವ ಇತ್ಯಾದಿಗಳನ್ನು ಅವಳಿಗೆ ಬಿಡಿಸಿ ಹೇಳಲಾರದವನಾಗಿದ್ದೆ. " ಅಲ್ಲಾ ಕಣೊ, ಇಲ್ಲಿಗೆ ನೀನು ಬರೋಕ್ಮುಂಚೇನೆ ಈ ಮದುವೆ ಹೊಂದಿಸ್‌ಬೇಕೂಂತ ಎಲ್ಲರೂ ಮಾತನಾಡಿದ್ದರು. ಬೇಕಾರೆ ನಿಮ್ ಬಾವನ್ನೆ ಕೇಳು. ನಾನು ಆಮೇಲೆ ಸುಗೀತನ್ನ ಕೇಳಿದ್ದಕ್ಕೆ ಎಷ್ಟು ಸಂತೋಷದಿಂದ ಒಪ್ಪಿಗೆ ಕೊಟ್ಟಿದ್ದಳು ಗೊತ್ತೆ , ಮೊದಲಿನಿಂದಲೂ ನೀನೂಂದ್ರೆ ಅವಳಿಗೆ ಪ್ರಾಣ ಕಣೊ.." ಎಂದು ಇನ್ನೂ ಏನೇನೊ ಹೇಳುತ್ತಿದ್ದುದನ್ನು ಗಮನಕ್ಕೆ ತಂದುಕೊಳ್ಳದೆ ಅವಳು ಕೂಗುತ್ತಿದ್ದುದನ್ನೂ ಕೇಳಿಸಿಕೊಳ್ಳದವನಂತೆ ಸರಸರ ಬಂದಿದ್ದೆ ಆಚೆಗೆ.

ಮಾರನೆ ದಿನ ನಾನು ಸಿಟಿ ಬಸ್ ಹತ್ತಿದಾಗ ಏನೂ ನಡೆದೆ ಇಲ್ಲವೇನೊ ಎಂಬಷ್ಟು ಸಾಧಾರಣವಾಗಿ ಬಸ್‌ಸ್ಟಾಂಡಿನ ಸಂತೆಬೀದಿಯಲ್ಲಿ ಏನೋ ವ್ಯಾಪಾರ ನಡೆಸುತ್ತಿದ್ದ ಸುಗೀತ ನಾನು ಬಸ್ ಹತ್ತುತಿದ್ದುದನ್ನು ಗಮನಿಸಿ ಸತ್ಯ ಬಾವಾಜಿಯನ್ನು ಬಂದು ಸೇರಿಕೊಂಡಳು. ಬಸ್ ಹೊರಟು ನಿಂತಾಗ ಸುಮ್ಮನೆ ಮೂಕಳಾಗಿ ನೋಡುತ್ತ ನಿಂತಿದ್ದ ಅವಳ ಕಪ್ಪು ಕಣ್ಣುಗಳಲ್ಲಿನ ವೇದನೆಯನ್ನು , ಅಂತರ್ಮುಖತೆಯನ್ನು, ತಾಳ್ಮೆಯನ್ನು ಗಮನಿಸಿದ ನನಗೆ ಈಗಲೂ ಇವಳನ್ನು ಪ್ರೇಮಿಸುತ್ತಿದ್ದೇನೆಯೆ? ಎಂಬ ಸಮಸ್ಯೆ ಎದುರಾಗಿ ಹೃದಯ "ಪ್ರೇಮಿಸುತ್ತಿದ್ದೇನೆ" ಎಂದು ಚೀರುತ್ತಿದ್ದರೆ, ಬುದ್ಧಿ ಯಾ ಮೆದುಳು " ಪ್ರೇಮಿಸಿದ್ದೆ ಮಾತ್ರ.." ಎಂದು ಚೀರುತ್ತಿತ್ತು. ಬಸ್ಸು ಮುಂದೆ ಮುಂದೆ ಹೋಗುತ್ತಿದ್ದಂತೆ ಕಿಟಕಿಯಾಚೆ ಸುಗೀತಳು ಸೇರಿದಂತೆ ಸತ್ಯ, ಬಾವಾಜಿ ಎಲ್ಲರೂ ಕೈ ಬಿಸುತ್ತಿದ್ದುದನ್ನು ಕಂಡು ನಾನೂ ಕೈ ಬೀಸಿದೆ. ಬಸ್ಸು ತನ್ನ ವೇಗ ಹೆಚ್ಚಿಸಿತ್ತು.

೧೯೭೯ ರ ಜುಲೈ ೧೫ನೇ ಪ್ರಜಾವಾಣಿ ಸಂಚಿಕೆಯಲ್ಲಿ ಪ್ರಕಟವಾದ ಕತೆ

0 Comments:

Post a Comment

Subscribe to Post Comments [Atom]

<< Home