ಮುನ್ನುಡಿ - ಮನುಚಕ್ರವರ್ತಿ
ಹೆಸರಾಂತ ಲೇಖಕರ ಕೃತಿಗಳಿಗೆ ಮುನ್ನುಡಿ ಬರೆಯುವುದು ಕಷ್ಟವೇನಲ್ಲ. ಏಕೆಂದರೆ ಓದುಗನ ಗಮನವನ್ನು ಕೃತಿಯ ಕಡೆಗೆ ಸೆಳೆಯುವಂತೆ ಲೇಖಕನ ಹೆಸರಿರುತ್ತದೆ. ಓದುಗ ತನಗೆಬೇಕಾದರೆ ಮಾತ್ರ ಮುನ್ನುಡಿ ಓದುತ್ತಾನೆ. ಹೆಸರಾಂತ ವ್ಯಕ್ತಿ ಮುನ್ನುಡಿ ಬರೆಯುವುದೂ ಸುಲಭ- ಅಂತಹ ವ್ಯಕ್ತಿಗೆ ಆತನ ಖ್ಯಾತಿಯೆ ನೆರವಿಗೆ ಬರುತ್ತದೆ. ಮೊಟ್ಟಮೊದಲ ಬಾರಿಗೆ ಮೊಟ್ಟಮೊದಲು ಕಥಾಸಂಕಲನ ತರುತ್ತಿರುವ ಲೇಖಕನ ಕೃತಿಗೆ ಮುನ್ನುಡಿ ಬರೆಯುವುದೆಂದರೆ, ಮುನ್ನುಡಿಯನ್ನು- ಕೃತಿಯನ್ನು ಒಟ್ಟೊಟ್ಟಿಗೆ ಪರೀಕ್ಷೆಗೊಡ್ಡಿದಂತೆಯೆ ಸರಿ. ಮುನ್ನುಡಿ ಬರೆಯುವಾತ ತನಗೆ ತಾನು ಪ್ರಾಮಾಣಿಕವಾಗುಳಿದು, ಕೃತಿಗೂ ಕತೃವಿಗೂ ಪ್ರಾಮಾಣಿಕವಾಗಿರಲೆಬೇಕು. ಈ ನೆಲೆಯಲ್ಲಿ ಊರ್ಜಿತವಾಗಬೇಕಾದ ಸಂದರ್ಭದಲ್ಲಿ ಹೆಸರು - ಖ್ಯಾತಿ ನಗಣ್ಯವೆಂದೆ ನನ್ನ ಭಾವನೆ. ಪ್ರಾಮಾಣಿಕವಾಗುಳಿಯುವುದೆಂದರೆ ಎರಡು ರೀತಿಯಲ್ಲಿ: ಕೃತಿಯನ್ನು ಓದುಗನ ನಿರ್ಣಯಕ್ಕೆ - ವಿಚಕ್ಷಣೆಗೆ ಬಿಡುವುದು ಮತ್ತು ಲೇಖಕನು ಕತೆಗಳನ್ನು ಕಟ್ಟಿಕೊಡುವ ಕ್ರಮವನ್ನು, ಅದರ ಒಟ್ಟಾರೆ ಸ್ವರೂಪವನ್ನು ಗುರುತಿಸುತ್ತಾ ಹೋಗುವುದು. ಈ ಎರಡರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದೆ ಮುನ್ನುಡಿಯ ಹೊಣೆಗಾರಿಕೆ. ಅದರ ಯಶಸ್ಸು-ವೈಫಲ್ಯ ಇಂತಹ ಸಮತೋಲನವನ್ನು ಆಧರಿಸಿದೆ- ಅವಲಂಬಿಸಿದೆ ಎಂಬುದೆ ನನ್ನ ಅಭಿಪ್ರಾಯ. ಮೌಲ್ಯವನ್ನು ನಿರ್ಣಾಯಕವಾಗಿ ಹೇಳುವುದಕ್ಕಿಂತಲು ಕತೆಗಳ ರಚನಾಕ್ರಮದ ಒಳ ಸ್ವರೂಪದತ್ತ ದೃಷ್ಟಿ ಹರಿಸುವುದೆ ಹೆಚ್ಚು ಪ್ರಯೋಜನಕಾರಿಯಾದೀತು. ಆದುದರಿಂದಲೇ, ಲೇಖಕನ ಯಾವ್ಯಾವ ಮುನ್ನೊಲವು , ಪ್ರವೃತ್ತಿ , ಸಂವೇದನೆಗಳು ಕತೆಗಳನ್ನು ಕಟ್ಟಿಕೊಟ್ಟಿದೆ- ಕಟ್ಟಿಕೊಡಲು ಕೆಲಸ ಮಾಡಿದೆ ಎಂಬುದನ್ನಷ್ಟೆ ನಾನು ಆರ್ಥ ಮಾಡಿಕೊಳ್ಳಲು ಯತ್ನಿಸಿದ್ದೇನೆ. ಈ ಗ್ರಹಿಕೆಯ ಕ್ರಮ ಓದುಗನ ಅಂತಿಮ ನಿರ್ಣಯಗಳಿಗೆ- ವಿವೇಚನೆಗೆ ಅಡ್ಡಿಯಾಗದೆಂದೇ ನನ್ನ ಭಾವನೆ. ಕತೆಗಳನ್ನು ಓದುಗನಿಗೆ- ಓದುಗ ಕತೆಗಳಿಗೆ ಮುಕ್ತವಾಗಿ ತೆರೆದುಕೊಳ್ಳಲು ಅಡ್ಡಿಯಾಗದಂತೆ ಕತೆಗಳ ನೇಯ್ಗೆಯನ್ನಷ್ಟೆ ಬಿಡಿಸುತ್ತಾ ಹೋಗುವ ಆಶಯದಿಂದ ಹೊರಟಾಗ ನನಗೆ ಗೋಚರಿಸುವುದೇನೆಂದರೆ.....
*
*
*
ಕತೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ಪ್ರಾಮಾಣಿಕತೆಯನ್ನು, ನಿಷ್ಠೆಯನ್ನು ಪ್ರಶ್ನಿಸುತ್ತಾ ಹೋಗುವ ಕ್ರಮ. ಈ ಕ್ರಮದಲ್ಲೊಂದು ಕೇಂದ್ರ ಪ್ರಜ್ಞೆ ದುಡಿಯುತ್ತಲೇ, ಕೇಂದ್ರ ಪಾತ್ರವನ್ನು ಇವೆರಡು ಸೇರಿಕೊಂಡು ಕತೆಗಳ ಸ್ವರೂಪ-ಚೌಕಟ್ಟನ್ನು ರೂಪಿಸುತ್ತಾ ಹೋಗುತ್ತವೆ. ಇದು ಮೊದಲ ಹಂತದ ಕತೆಗಳಲ್ಲಿ ಸಮಾನ್ಯಾಂಶವೆಂದೆ ಹೇಳಬಹುದು. ವಿವಿಧ ಸನ್ನಿವೇಶಗಳಲ್ಲಿ , ಸಂಬಂಧಗಳಲ್ಲಿ ಆಗುವ ಮುಖಾಮುಖಿ ಮೂಲಕ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಾ ಸಾಗುವ ದೃಕ್ಪಥವಿದೆ.ಇದೆಲ್ಲವನ್ನು ಕೇಂದ್ರ ಪಾತ್ರದ ಅನುಭವಗಳ ನೆಲೆಯಲ್ಲಿ ವಯಸ್ಕ ಪ್ರಜ್ಞೆಯ [ಅಡಲ್ಟ್ ಕಾನ್ಷಿಯಸ್‌ನೆಸ್] ಮೂಲಕ ಕಟ್ಟಿಕೊಡಲಾಗಿದೆ. ಈ ವಯಸ್ಕ ಪ್ರಜ್ಞೆ , ಎದುರಿಸುವ ಸನ್ನಿವೇಶಗಳು, ಸಂಬಂಧಗಳು, ಮುಖಾಆಮುಖಿಗಳು ಕತೆಯಿಂದ ಕತೆಗೆ ಬೇರೆ ಬೇರೆಯೆ ಎಂಬುದು ಗಮನಾರ್ಹ.
ವಯಸ್ಕ ಪ್ರಜ್ಞೆಗಿರುವ ಪ್ರಾಧಾನ್ಯತೆಯಿಂದಾಗಿ ಹೆಚ್ಚಿನ ಮಟ್ಟದಲ್ಲಿ ಬಾಲ್ಯದ ನೆನಪುಗಳನ್ನು ಕತೆಗಳು ಅಷ್ಟಾಗಿ ಅವಲಂಬಿಸುವುದಿಲ್ಲ. ಕ್ರಿಯೋನ್ಮುಖವಾಗಿ ಬರುವುದಿಲ್ಲ. ಕಲಾಕೃತಿಯಲ್ಲಿ ಗತಸ್ಮರಣೆ [ನಾಸ್ಟಾಲಜಿಯ] ಕೇಂದ್ರವಾಗಬೇಕೆಂದು ನಾನು ಹೇಳುತ್ತಿಲ್ಲ. ಈ ಸಂಕಲನದ ಕತೆಗಳಲ್ಲಿ ವಯಸ್ಕ ಪ್ರಜ್ಞೆಯ ಮೂಲಕವೆ ಬಾಲ್ಯದ ನೆನಪುಗಳನ್ನು ಬರುತ್ತದೆ ಎಂಬುದರಿಂದಾಗಿ , ಆ ನೆನಪುಗಳೆಲ್ಲ ಸಶಕ್ತವಾಗಿಲ್ಲ ಎಂದೇ ನಾನು ಹೇಳುತ್ತಿರುವುದು. ಇಂತಹ ನೆನಪುಗಳು ಇಲ್ಲವೇ ಇಲ್ಲವೆಂದೇನು ಅಲ್ಲ, ಆ ನೆನಪುಗಳನ್ನು ಆಧರಿಸಿ ಗತಕ್ಕೆ ಹೋಗಿ ಗತವನ್ನಷ್ಟೆ ಪುನರ್ ಸೃಷ್ಟಿಸಿಬಿಡಬಹುದಿತ್ತು. ಹಾಗೆ ಮಾಡಿಲ್ಲ. ಕಾರಣ : ಪ್ರಸಕ್ತ ತಂದೊಡ್ಡಿರುವ ಮುಖಾಮುಖಿ, ಪ್ರಸಕ್ತಕ್ಕೆ ತುಡಿಯುವ ಜರೂರು , ಒಳಮುಖಿ ಸಂಘರ್ಷದತ್ತಲೇ ಗಮನವೆಲ್ಲ ಕೇಂದ್ರಸ್ಥವಾಗಿಬಿಡುವುದು. ಇದರಿಂದಾಗಿ ಕೇಂದ್ರ ಪಾತ್ರ ಅರಾಮಾಗುವುದೇ ಇಲ್ಲ- ನಿರುಮ್ಮಳವಾಗುವುದೇ ಇಲ್ಲ. ಅನೇಕ ವ್ಯಥೆಗಳನ್ನೊಡ್ಡುವ ನಗರಗಳ ಹಿನ್ನೆಲೆಯಲ್ಲಿ ಕತೆಗಳು ಅನ್ವೇಷಣಕಾರಿ ಗುಣವನ್ನು ಪಡೆಯುತ್ತವೆ. ಶೇಖರ್‌ಪೂರ್ಣ ತಮ್ಮ ಕತೆಗಾರಿಕೆಯನ್ನು ಈ ಕಲೆಯಲ್ಲಿ ಸಾಧಿಸಿದ್ದಾರೆ.
ಕತೆಗಳು ಸ್ವಯಂಮುಖಿ [ಮನೋಲಾಗ್] ಗುಣದತ್ತ ಗಮನ ಸೆಳೆಯುವ ನನ್ನ ಆಶಯವೇ ಗತಸ್ಮರಣೆ ನಗಣ್ಯವಾಗಿದೆ ಎಂಬುದನ್ನು ಹೇಳುವುದಕ್ಕೆ ಮತ್ತೊಂದು ಕಾರಣ. ಇದನ್ನೆ ಇನ್ನಷ್ಟು ವಿಸ್ತರಿಸುತ್ತಾ ಹೇಳುವುದಾದರೆ ತನ್ನ ಕತೆಯನ್ನು ತಾನೆ ನಿರೂಪಿಸುವ ಸ್ವಗತದ ಕ್ರಮದಲ್ಲಿದೆ-ಶೈಲಿಯಲ್ಲಿದೆ. ತಾಂತ್ರಿಕ ದೃಷ್ಟಿಯಿಂದಷ್ಟೇ ಇದನ್ನು ನಾನು ಹೇಳುತ್ತಿಲ್ಲ. ಕತೆಗಳು ತಮ್ಮಷ್ಟಕ್ಕೆ ತಾವೆ ಸ್ವಯಮಾಭಿವ್ಯಕ್ತಿಯಾಗಿ- ಕಾಣ್ಕೆಯನ್ನು- ನೋಟವನ್ನು [ವಿಷನ್] ನೀಡುತ್ತಾ ಹೋಗುತ್ತವ.
ಕತೆಗಳಲ್ಲಿ ಬರುವ ನಗರಗಳು, ಸಾಮಾನ್ಯ ಜನರು, ಸನ್ನಿವೇಶಗಳು ಕೇಂದ್ರ ಪಾತ್ರದ ಅಂತರಾಳಕ್ಕೆ ತಳಕು ಹಾಕಿಕೊಳ್ಳುತ್ತವೆ. ಅಂತರಾಳದ- ಪ್ರಜ್ಞೆಯಾಚೆಗಿನ ಬಾಹ್ಯ ವಿವರಗಳೆಲ್ಲ ಕೇಂದ್ರ ಪಾತ್ರದ ಪ್ರಜ್ಞೆಯಲ್ಲಿ ನಡೆಯುತ್ತಿರುವ ಸಂಘರ್ಷ ಸೂಚಿಯಾಗುತ್ತದೆ. ಏಕೆಂದರೆ ಅವೆಲ್ಲ ಅವನನ್ನು ಸಂಕಟಕ್ಕೀಡು ಮಾಡಿವೆ, ಕಾಡಿಸುತ್ತವೆ, ಭಾದಿಸುತ್ತವೆ, ಕಲಕುತ್ತವೆ. ಅವನ ಅಂತರಾಳದಾಚೆಗಿನ ಜಗತ್ತಿನ ಅಗತ್ಯವೆ ಕಾಣುವುದಿಲ್ಲ. ಕತೆಗಳು ಒತ್ತಾಯಿಸುವುದಿಲ್ಲ. ಹೀಗಾಗಿ ಕತೆಗಳೆ ಸ್ವಯಂಸ್ವಗತದ ನೋಟವೆಂದೆ ಹೇಳಬಹುದು. ಏನೆ ಆದರು ಕತೆಗಳು ಎಷ್ಟೇ ಆಸಕ್ತಿಯನ್ನು ಸೃಷ್ಟಿಸಿದರೂ ಈ ಏಕಪ್ರಕಾರವಾದ ಪ್ರಜ್ಞೆಯಿಂದಾಗಿ ವೈವಿಧ್ಯವನ್ನು-ಸರ್ವವ್ಯಾಪಕತೆಯನ್ನು -ಸಮಷ್ಠಿಯನ್ನು ಸಾಧಿಸುವುದಿಲ್ಲ. ತೀಕ್ಷ್ಣತೆಯೂ ಇದೆ. ಆದರೆ ವ್ಯಕ್ತಿಪ್ರಧಾನವಾಗುಳಿದು ಸಮಗ್ರ ನೋಟವನ್ನು ನೀಡುವ ಯತ್ನದಲ್ಲಿ ಸುಲಭ ಪರಿಹಾರೋಪಾಯಗಳಿಗೆ ತೆಕ್ಕೆ ಹಾಕಿಕೊಂಡುಬಿಡುವ ಆತುರಗಾರಿಕೆಯನ್ನು ತೋರುವುದಿಲ್ಲ. ಪರಿಹಾರಕ್ಕೆಳೆಸುವ ಹಂಬಲವನ್ನು ಉದ್ಡೇಶಪೂರ್ವಕವಾಗಿ ಕೈಬಿಡಲಾಗಿದೆ.
ಒಳಮುಖಿಯಾಗುವ ಕ್ರಮವೇ ಕತೆಗಳ ಸ್ವರೂಪವನ್ನು ಕಟ್ಟಿದೆ.ಪ್ರಜ್ಞೋನ್ಮುಖಿಯಾಗುಳಿಯುವುದರತ್ತಲೇ ಕತೆಗಳನ್ನು ರೂಪಿಸುವ ಯತ್ನದಲ್ಲಿ ಇತರೆಲ್ಲ ಪಾತ್ರಗಳು ನೈಪಥ್ಯಕ್ಕೆ ಸರಿದು ಕೇಂದ್ರಪಾತ್ರವು ತನಗೆ ತಾನು ಅರ್ಥವಾಗದೆ - ತನ್ನ ಸತ್ಯವನ್ನು ತಾನು ಕಂಡುಕೊಳ್ಳದೆ ಬಾಹ್ಯ ವಿವರಗಳನ್ನು ವಾಸ್ತವವನ್ನು ಸತ್ಯವನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ ಎಂಬ ನಂಬಿಕೆಯಿಂದ ಪ್ರಜ್ಞಾಕೇಂದ್ರ ಗಾಢವಾಗುತ್ತಾ ಹೋಗುತ್ತದೆ.
ಪ್ರಜ್ಞೋನ್ಮುಖಿ ಪ್ರಧಾನವಾಗಿರುವ ಕತೆಗಗಳು ಭಾವೋನ್ಮುಖಿವಾಗುವುದಿಲ್ಲ, ಭಾವೋನ್ಮುಖಿ ಚಿತ್ರಣ ತರಬಹುದಾದ ನೋಟವನ್ನು ಕತೆಗಳು ಕೊಡುವುದಿಲ್ಲ. ಭಾವನಾಮಯ ಸಂಬಧಗಳೇನೊ ಇವೆ. ಗಂಡು ಹೆಣ್ಣೀನ ಸಂಬಂಧವಿರಬಹುದು, ಗಂಡು ಗಂಡಿನ ಸಂಬಧವಿರಬಹುದು, ಆದರೆ ಪ್ರಜ್ಞೋನ್ಮುಖಿಯಾಗಿ ಬಿಡುವುದರಿಂದಾಗಿ ಆ ಎಲ್ಲಾ ಕತೆಗಳು ಸಂಬಂಧಗಳನ್ನು ಪೂರ್ಣಮಟ್ಟಕ್ಕೆ ಬೆಳೆಸುವ ಅಗತ್ಯವನ್ನು ಕತೆಗಳ ಚೌಕಟ್ಟೇ ಅಂಗೀಕರಿಸುವುದಿಲ್ಲ.
ನನ್ನ ಗಮನವನ್ನು ಸೆಳೆಯುವ ಅಂಶವೆಂದರೆ, ಎಷ್ಟೇ ಪ್ರಜ್ಞೋನ್ಮುಖಿಯಾದರೂ - ಅಷ್ಟರ ನಡುವೆಯು ಭಾವನಾಮಯ ಸಂಬಂಧಗಳನ್ನು ಹುದುಗಿಸಿಟ್ಟಿರುವ ರೀತಿ- ಇದೂ ಸಹ ಉದ್ದೇಶಪೂರ್ವಕ ಸಾಧನೆ. ಈ ಉದ್ದೇಶ ಎಷ್ಟು ಗಾಢವಾಗಿದೆಯೆಂದರೆ ಕತೆಗಳನ್ನು ಓದುತ್ತಾ ಹೋಗುತ್ತಿದ್ದಂತೆ ಕೇಂದ್ರ ಪಾತ್ರ ಭಾವನೆಗಳನ್ನು ಆಧರಿಸಿ ತನ್ನನ್ನು ತಾನು ತೆರೆದಿಡುವ ವಿಶ್ವಾಸವನ್ನು ತೋರುವುದಿಲ್ಲ ಎಂದೇ ಅನ್ನಿಸಿಬಿಡುತ್ತದೆ. ಭಾವನೆಗಳ ಬಗೆಗೆ ಸಂಶಯವಿದೆ. ಹೀಗಾಗಿ ಒಳ ಮತ್ತು ಹೊರ ಇವೆರಡರ ನಡುವೆ ಕಂದರ. ಶೇಖರ್‌ಪೂರ್ಣ ತೋರಿಸುವ ಆಂಶಿಕವಾದ ಭಾವ ಜಗತ್ತಿನಲ್ಲಿ ನಮ್ಮ ಆಸಕ್ತಿ ಕೆರಳಿದರು ಅದನ್ನು ಶೇಖರ್‌ಪೂರ್ಣ ಸನ್ನಿವೇಶದ ನಿರ್ವಹಣೆಯ , ಆಳವಾದ ಒತ್ತಡಕ್ಕೆ ಸಿಲುಕಿ ಒಳಗಡೆಯೆ ಬೇಕೆಂದೆ ಹುದುಗಿಸಿಬಿಡುತ್ತಾರೆ. ಈ ಭಾವ ಜಗತ್ತಿನ ಬೆಲೆಯನ್ನು ತೆತ್ತೇ ಮೊದಲಿನ ಕತೆಗಳಲ್ಲಿ ಪ್ರಾಮಾಣಿಕ ಕಾಳಜಿಗಳ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತಾರ.
ಇಷ್ಟಾಗಿಯೂ ಕೂಡ ಮತ್ತೊಂದು ವಿಷಯದ ಬಗೆಗೆ ಹೇಳಬಹುದೇಯಾದರೆ ಅದು `ಸುಷುಪ್ತಿ' ಯ ಬಗೆಗೆ. ಇದನ್ನು ಬೇಕಾದರೆ ಕತೆಗಳಲ್ಲಿ ಪರ್ಯಾಯೋಪನ್ಯಾಸ [ಪ್ಯಾರಲೆಲ್ ಡಿಸ್‌ಕೋರ್ಸ್] ಎಂದೇ ಕರೆಯಬಹುದು. ಬೌದ್ಧಿಕಾನ್ವೇಷಣೆಯ ನಡುವೆ ಈ ಸುಷುಪ್ತಿಯ ಗುಣದಿಂದಾಗಿ ಭಾವ ಜಗತ್ತು ಸಹ ತಳಕು ಹಾಕಿಕೊಂಡು ಕತೆಗಳ ಒಡಲೊಳಗೆ ಅಂತರ್‌ಶಕ್ತಿಯನ್ನು ರೂಪಿಸಿಬಿಡುತ್ತದೆ. ಬಾಹ್ಯ ಪ್ರಜ್ಞೆಗೆ ಪೂರಕವಾಗಿ ಸಶಕ್ತವಾದ ತುಲನಾತ್ಮಕವಾಗಿ ಭಾವದ ಆಂತರಿಕ ಜಗತ್ತೂ ಇದೆ. ಮೇಲ್ನೋಟಕ್ಕೆ ಬೇಕೆಂದೆ ಭಾವವನ್ನು ಬಿಗಿಯಾಗಿ ಹಿಡಿದು ಹುದುಗಿಸಿಟ್ಟಿದ್ದರು, ಬೌದ್ಧಿಕ ಕಕ್ಷೆಯಲ್ಲೆ ಒಳ ಹೊರಗನ್ನು ಸಾಧಿಸಿಕೊಂಡಿದೆ. ಆದರೆ ಆಂತರಿಕ ಜಗತ್ತನ್ನು ಬೇಕೆಂದೆ ಬೆಳೆಯಲು ಬಿಡುವುದಿಲ್ಲ. ಕಾರಣವೆಂದರೆ, ಈಗಾಗಲೆ ನಾನು ಹೇಳಿರುವ ಹಾಗೆ ತನ್ನನ್ನು ತಾನು ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ಕೇಂದ್ರ ಪಾತ್ರ ತಾದಾತ್ಮ್ಯ ಹೊಂದಿಬಿಡುತ್ತದೆ. ತನ್ನನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ಒಳ ಮತ್ತು ಹೊರಗನ್ನು ನೋಡುತ್ತಾನೋಡಿಸುತ್ತಾ ಬಹುಮುಖಿ ಸತ್ಯವನ್ನು ಅನಾವರಣಗೊಳಿಸುತ್ತಾ ಹೋಗಿ ಅನೇಕ ಆಯಾಮಗಳನ್ನು ಪಡೆದುಬಿಡುತ್ತದೆ. ಆದರೆ ಏಕಾಗ್ರತೆಯಿಂದಾಗಿ ಮೊದಲ ಕತೆಗಳು ಅಂತಿಮವಾಗಿ ಏಕಮುಖ ಸತ್ಯದತ್ತಲೇ ಹೊರಳಿಬಿಡುತ್ತವೆ. ಕತೆಗಳನ್ನೆ ಉದಾಹರಿಸಿ ಹೇಳುವುದಾದರೆ ಸುಗೀತ, ಕನ್ಯಾಕುಮಾರಿ, ಚರಮಗೀತೆಯಲ್ಲೊಂದು ಅಳುಕು, ಮನ್ನಿ ಇವಿಷ್ಟರಲ್ಲಿ ಮೇಲೆ ಹೇಳಿರುವುದನ್ನು ಕಾಣಬಹುದು. ಇವಿಷ್ಟನ್ನು ನಾನು ಮೊದಲ ಹಂತದ ಕತೆಗಳೆಂದೇ ವರ್ಗಿಕರಿಸುತ್ತೇನೆ.
*
*
*
ಎರಡನೆ ಹಂತದ ಕತೆಗಳಾದ ವೈಟ್‌ಫೀಲ್ಡ್ , ಅದ್ವೈತ, ಟಿಪ್ಸ್ ಸುತ್ತ ಮುತ್ತ ಕತೆಗಳಲ್ಲಿ ಈ ಮೇಲೆ ಹೇಳಿರುವ ಬಿಗಿಯು ಸಡಿಲಗೊಳ್ಳುತ್ತದೆ. ಎಷ್ಟೇ ಸಂಕೋಚಗಳಿದ್ದರು, ಬೇಕಿಲ್ಲದಿದ್ದರು ಬಹಳ ಆತ್ಮೀಯವಾದ, ಬೆಚ್ಚನೆ ಭಾವನೆಗಳಿಂದ ಕೂಡಿದ ಸಂಬಂಧಗಳ ಚಿತ್ರಣ ಯಶಸ್ವಿಯಾಗಿದೆ. ಭಾವನಾತ್ಮಕ ನೆಲೆಯಲ್ಲಿ ಸಂಬಂಧಗಳನ್ನು ನಿರಾತಂಕವಾಗಿ ಮುಕ್ತವಾಗಿ ಕಟ್ಟಿ ಕೊಡಲಾಗಿದೆ. ಮೊದಲಿನ ಕತೆಗಳಲ್ಲಿ ಇದರ ಅಗತ್ಯ ಈ ಪ್ರಮಾಣದಲ್ಲಿ ಕಾಣಬರುವುದಿಲ್ಲ. ಪ್ರಜ್ಞೆ ಹಾಗು ಮುಕ್ತ-ಭಾವನಾ ಕಕ್ಷೆಯ ನಡುವೆ ಸಮನಾದ ಸಂಘರ್ಷ ಈ ಎರಡನೆ ಹಂತದ ಕತೆಗಳಲ್ಲಿ ಪ್ರಾರಂಭವಾಗುತ್ತದೆ ಎಂಬುದೇ ನನ್ನ ಬಾವನೆ. ಈ ಸಂಘರ್ಷವೆ ಕತೆಗಳನ್ನು ಒಂದು ಕಡೆಯಿಂದ ಅಂದರೆ ಪ್ರಜ್ಞೆಯ ಬೌದ್ಧಿಕ ಕಕ್ಷೆಯಿಂದ ಬಾವನಾ ಜಗತ್ತಿಗೆ, ಭಾವನಾ ಜಗತ್ತಿನಿಂದ ಬೌದ್ಧಿಕ ಕಕ್ಷೆಗೆ ನೂಕುತ್ತ ಹೋಗುತ್ತದೆ. ಹೆಚ್ಚಾಗಿ ಬೌದ್ಧಿ ಕ ಕಕ್ಷೆಯಲ್ಲೇ ತಿರುಗಿದರೂ ಶುಷ್ಕವಾಗಿ , ನಿರ್ಜೀವವಾಗಿ, ನಿರ್ದಯವಾಗಿ ಬೌದ್ಧಿಕ ಅನ್ವೇಷಣೆಯಲ್ಲಿ ಉಳಿಯುವುದಿಲ್ಲ ಎಂಬುದನ್ನು ಸಂಕೋಚವೇ ಇಲ್ಲದೆ ಹೇಳಬಹುದು. ಈ ಕಾರಣಕ್ಕಾಗಿಯೆ ಶೇಖರ್‌ಪೂರ್ಣರ ಈ ಎರಡನೆ ಹಂತದ ಕತೆಗಳನ್ನು ಪ್ರಮುಖವಾಗಿ ಪರಿಗಣಿಸಬೇಕೆಂದು ನನ್ನ ಅನ್ನಿಸಿಕೆ. ಭಾವನೆಗಳ ನೆಲೆಯಲ್ಲಿ ಸಂವೇದನಾಶೀಲ ಸತ್ಯವು ಪೂರಕವಾಗದೆ ಬೌದ್ಧಿಕ ಅನ್ವೇಷಣೆ ಪೂರ್ಣವಾಗಿ ನಿರರ್ಥಕವಾಗಿಬಿಡುತ್ತದೆ ಎಂಬ ಪ್ರಜ್ಞೆ ಈ ಕತೆಗಳಲ್ಲಿ ವ್ಯಕ್ತವಾಗುತ್ತದೆ. `ಸಂವೇದನಾಶೀಲ' ಸತ್ಯವನ್ನು ಸರಳ ರೀತಿಯಲ್ಲಿ ಬೆಳೆಯಬಿಡುವುದಿಲ್ಲ ಎಂಬುದೂ ನಿಜ. ತಾತ್ಕಾಲಿಕವಾಗಿ, ನಿರ್ಣಯಿಸಿ ಹೇಳುವುದೇ ಆದರೆ ಶೇಖರ್‌ಪೂರ್ಣ ಅಂತರಂಗ ಹಾಗು ಬಹಿರಂಗ, ಪ್ರಜ್ಞೆ ಹಾಗು ಸುಷುಪ್ತಿ, ಚಿಂತನೆ ಹಾಗು ಭಾವ ಈ ಎಲ್ಲಾ ವಿಭಿನ್ನ ಲೋಕಗಳನ್ನು ಬೆಸೆಯುವುದರಲ್ಲಿ ಹೋರಾಡುತ್ತಿದ್ದಾರೆ. ಈ ಹೋರಾಟವೆ ಇವರ ಸೃಜನಶೀಲ ಬರವಣಿಗೆಯನ್ನು ಬೆಳವಣಿಗೆಯನ್ನು ಕತೆಯೊಂದ ಕತೆಗೆ ಮುಂದುವರಿಸಿಕೊಂಡು ಬಂದಿದೆ. ಅನ್ವೇಷಣೆ ಸಾಗುತ್ತಲೆ ಹೋಗುತ್ತಿದ್ದಂತೆ ಕತೆಗಳ ಅಂತ್ಯವೂ ಸಹ ಹಠಾತ್ತನೆ ತುಂಡರಿಸಿ ಹೋಗುತ್ತದೆ. ಸಂಘರ್ಷ-ಅನ್ವೇಷಣೆ ಮತ್ತೊಂದು ಕತೆಗೆ ಮುಂದುವರಿಯುತ್ತದೆ.
ಈ ಸಂಘರ್ಷವನ್ನು ಮತ್ತಷ್ಟು ಪರೀಕ್ಷೆಗೊಡ್ಡಿದಾಗ " ಹೆಣ್ಣಿನ" ಪಾತ್ರಗಳಿಗೆ ವಿಶೇಷ ಗಮನ ನೀಡಲೆಬೇಕು. ನಿರೂಪಕನಿಗೆ ಅಥವ ಕೇಂದ್ರ ಪಾತ್ರಕ್ಕೆ ಹೆಣ್ಣು ಅನೇಕ ಗೊಂದಲಗಳನ್ನು, ಒಗಟುಗಳನ್ನು, ಪ್ರಶ್ನೆಗಳನ್ನು ಸೃಷ್ಟಿಸಿ ಸವಾಲು ಹಾಕುತ್ತಾಳೆ. ಉತ್ತರ - ಪರಿಹಾರ ಕಾಣಲು ಕೇಂದ್ರ ಪಾತ್ರಕ್ಕೆ ಸಾಧ್ಯವಿಲ್ಲದಂತಾಗಿಬಿಡುವ ಅಂತ್ಯ ಸೃಷ್ಟಿಯಾಗಿಬಿಡುತ್ತದೆ, ಪಾಕ್ಸ್‌ಬ್ರಿಟಾನಿಕದಲ್ಲಿ ನಾವು ಅಂತ್ಯದಲ್ಲಿ ಕಾಣುವ ಸಾವು ನಿರೂಪಕನಿಗೆ ಪರಿಹಾರ ಆಗುವುದೇ ಇಲ್ಲ. ಅವನು ತನ್ನ ಭಾರವನ್ನು ಹೊರುತ್ತಲೇ ಸಾಗುತ್ತಾನೆ, ಉತ್ತರ-ಪರಿಹಾರ ಕಾಣಲಾಗದ ಸ್ಥಿತಿಯಲ್ಲಿ ದುತ್ತನೆ ಒಂದು ತೆರನಾದ ಸ್ತಬ್ಧತೆ [ಪಾಸ್] ಬರುತ್ತದೆ. ` ಸಸ್ಪೆಂಡಡ್ ಆನಿಮೇಷನ್' ಸ್ಥಿತಿಯಿಂದ ನಿರೂಪಕ ಬಿಡಿಸಿಕೊಳ್ಳುವುದು ಅಸಾಧ್ಯವಾಗಿಬಿಡುತ್ತದೆ.ಈ ಅಸಾಧ್ಯ ಪರಿಸ್ಥಿತಿಯನ್ನು ಸೃಷ್ಟಿಸುವುದೇ "ಹೆಣ್ಣು" . ಕತೆಗಳು ಇದಕ್ಕಿಂತಲೂ ಆಚೆ ಬೆಳೆಯಹೋಗದೆ ಇರುವ ಕಾರಣ ನಿರೂಪಕ ತನ್ನೆಲ್ಲ ಒಳಗಿನ ಭಾವನೆಗಳಿಗೆ ಅಭಿವ್ಯಕ್ತಿ ಕೊಡದೆ ಪ್ರಜ್ಞಾಪೂರ್ವಕವಾಗಿ ಅದುಮಿಬಿಡುವುದೇ ಆಗಿದೆ. ತನ್ನೊಳಗಿನ ಪರಮಸತ್ಯ, ಬಾಹ್ಯಸತ್ಯ ಆಗುವುದಿಲ್ಲ ಎಂಬ ಪ್ರಜ್ಞೆ ಇದೆ. ಇದರಿಂದಾಗಿ "ಹೆಣ್ಣು" ಕತೆಯಿಂದ ಕತೆಗಳಿಗೆ ಪ್ರವೇಶಿಸುತ್ತಳೆ ಇರುತ್ತಾಳೆ. ಮುಂದೊಂದು ದಿನ ಕಾದಂಬರಿ ರುಪದಲ್ಲೋ, ಕಿರುಕಾದಂಬರಿ ರೂಪದಲ್ಲೋ ನಿರೂಪಕ ಹೆಣ್ಣನ್ನು ಸಂಪೂರ್ಣವಾಗಿ ಸಾಧಿಸುವ, ಸಮಾಗಮಗೊಳ್ಳಬೇಕಾದ ಅಗತ್ಯವನ್ನು, ಸಂಭವಿಸುವ ಸಾಧ್ಯತೆಯ ಸೂಚನೆಯನ್ನು ಈ ಸಣ್ಣಕತೆಗಳೇ ಕೊಡುತ್ತವ.
ಸಣ್ಣಕತೆಗಳಲ್ಲಿ ಹೆಣ್ಣನ್ನು ಸಂಪೂರ್ಣವಾಗಿ ಸಂಧಿಸಲು ಸಾಧ್ಯವಾಗದೆ ಹೋಗಿದೆ ಎಂದು ಹೇಳಿರುವುದಕ್ಕೆ ಕಾರಣ - ಸುಳ್ಳು ಸುಳ್ಳೇ ಒಂದು ಕತೆ, ಇದರ ಕಥನಕ್ರಮವು ಬಹುಮುಖಿ ರೂಪವನ್ನು ಪಡೆಯುತ್ತ ಕೇಂದ್ರ ಪ್ರಜ್ಞೆ ಸಾಪೇಕ್ಷ ಸತ್ಯಗಳನ್ನು ಶೋಧಿಸುತ್ತ ಹೋಗುವ ಮತ್ತು ಪರಮ ಸತ್ಯವನ್ನು ಕಂಡೇ ಕಾಣುತ್ತೇನೆ ಎಂಬ ಬುದ್ಧಿ ಛಲವಿಲ್ಲ. ಬದುಕಿನ ಸರ್ವವ್ಯಾಪಿ ವಿಪರ್ಯಾಸಗಳನ್ನು. ದ್ವಂದ್ವಗಳನ್ನು ಸ್ವೀಕರಿಸುವ ಪ್ರೌಢಿಮೆಯನ್ನು, ಸಂಯಮವನ್ನು ತೋರಿಸುತ್ತದೆ. ತನ್ನ ಹಠಮಾರಿತನವನ್ನು ಬಿಟ್ಟುಕೊಟ್ಟು ಒಂದು ರೀತಿಯ ಆಂಬಿವಲೆಂಟ್ ಸ್ಥಿತಿಗೆ ಹೋಗುತ್ತದೆ.
ಪಾಶ್ಚಾತ್ಯ ದಾರ್ಶನಿಕನೊಬ್ಬ ಹೇಳುವ ಹಾಗೆ ನಾವು ಈ ಪ್ರಪಂಚದೊಳಗೆ ಹುಟ್ಟಿದ್ದೇವೆ. ಇಲ್ಲಿ ಸುಳ್ಳು , ವಿಪರ್ಯಾಸ. ದ್ವಂದ್ವಗಳು ಮೊದಲೇ ಇವೆ. ಇವುಗಳನ್ನು ಅರ್ಥ ಮಾಡಿಕೊಳ್ಳದೆ ನಿಜ ಗೋಚರಿಸುವುದಿಲ್ಲ.
ಸುಳ್ಳು ಸುಳ್ಳೇ ಒಂದು ಕಥೆಯಲ್ಲಿ ನಿರೂಪಕ ಒಂದು ವಸ್ತುನಿಷ್ಠವಾದ ಒಂದು ರೂಪವನ್ನು - ಚೌಕಟ್ಟನ್ನು ಹುಡುಕುವ ಯತ್ನದಲ್ಲಿ ಲೇಖಕನನ್ನು ಕತೆಗಾರನನ್ನು ಭೇಟಿಯಾಗತ್ತಾನೆ. ಅಲ್ಲಿಂದ ನಾವು ನೋಡುತ್ತಾ ಹೋಗುವುದೆಂದರೆ ವಿಕೃತವಲ್ಲದ ವಾಸ್ತವವನ್ನು ತೋರಿಸಲು ಯತ್ನಿಸುವ ನಿರಂತರ ಅನ್ವೇಷಣೆ. ಕಡೆಗೂ ಆ ರೂಪ ಚೌಕಟ್ಟು ಅಭಿವ್ಯಕ್ತಿ ದೊರಕುವುದಿಲ್ಲ. ಸಂವೇದನೆಗಳನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸಲು ಸಾಧ್ಯವಾಗಿಲ್ಲ. ಇಲ್ಲಿ ನಿರೂಪಕನ ಪಾತ್ರ ಅಸ್ಪಷ್ಟವಾಗುಳಿಯುವುದಲ್ಲದೆ ಇತರ ಪಾತ್ರಗಳೂ ಗ್ರಹಿಕೆಗೆ ಎಟುಕದೆ ನುಣುಚಿಕೊಳ್ಳುತ್ತದೆ. `ನಾನು' ಕೂಡ ನಿಜ ಅಲ್ಲ ಎಂಬ ನಿರ್ಣಯದಲ್ಲಿ ಪ್ರಜ್ಞೆ ವಿಜಯವನ್ನು ಸಾಧಿಸಿ ತನ್ನನ್ನು ತಾನು ಮೀರಿ ಸಾಪೇಕ್ಷವಾಗಿ ಹೋರಗಿನ `ಸುಳ್ಳ'ನ್ನು ಕಂಡುಕೊಳ್ಳುವ ಪ್ರಯತ್ನವಿದೆ. ಈ ಪ್ರಯತ್ನದಲ್ಲಿ ` ಹೆಣ್ಣು' ಸಹ ಆಂಶಿಕವಾಗೆ ಉಳಿದು ಬಿಡುವುದರಿಂದ ಅವಳೂ ಸುಳ್ಳಾಗುತ್ತಾಳೆ. ಎರಡನೆ ಹಂತದ ಕತೆಗಳಲ್ಲಿ ವರ್ತುಲವೊಂದರಲ್ಲೇ ಗಸ್ತು ಹೊಡೆಯುತ್ತಿದ್ದ ಕತೆಗಳ ರೂಪ ಮತ್ತು ಕೇಂದ್ರ ಪ್ರಜ್ಞೆ ಎರಡೂ ಹೊಸ ಅನುಭವ ನೆಲೆಯನ್ನು ಕಂಡುಕೊಳ್ಳುತ್ತವ.
ಮೊದಲನೆ ಹಂತದ ಏಕಮುಖಿ ಧೋರಣೆಯಿಂದ - ಎರಡನೆ ಹಂತದ ಸಮನಾದ ಸಂಘರ್ಷಕ್ಕೆ ಬೆಳೆದು , ಮೂರನೆ ಹಂತದ ಕತೆಗಳಲ್ಲಿ ಬಹುಮುಖಿ ದೋರಣೆಗೆ - ಸತ್ಯಕ್ಕೆ ಕತಾಚೌಕಟ್ಟು ಚಾಚಿಕೊಳ್ಳುತ್ತದೆ- ವಿಸ್ತರಿಸಿಕೊಳ್ಳುತ್ತದೆ.. ಇದು ಕೇಂದ್ರ ಪ್ರಜ್ಞೆಯ ವಿಸ್ತಾರ ಕೂಡ ಆಗಿದೆ.
ಶೇಖರ್‌ಪೂರ್ಣ ತಮ್ಮ ಎಲ್ಲಾ ಹಳೆಯ ಕೌಶಲ್ಯದಿಂದಾಚೆಗೆ ಬಂದಿದ್ದಾರೆ. ಬೌದ್ಧಿ ಕ ಹಾಗೂ ಭಾವನಾ ಜಗತ್ತಿನಲ್ಲಿ ಸಮನಾಗಿ ಮುನ್ನಡೆಯುವ ನಿರ್ಣಯ ಮಾಡಿದ್ದಾರೆ. ಸೃಜನಶೀಲವಾಗಿ ಗಣನೀಯವಾದ ರೀತಿಯಲ್ಲಿ ಬೆಳೆದಿದ್ದಾರೆ. ಹಳೆಯ ಕತಾಸ್ವರೂಪದ ಬಗೆಗೆ ಅಸಮಧಾನ ಹೊಂದಿರುವುದೇ- ಅನುಭವ ಜನ್ಯವಾದ ವರ್ತುಲದಿಂದಾಚೆಗೆ, ಒಂದೇ ಕಡೆ ಸುತ್ತು ಹೊಡೆಯದೆ ಹೊಸ ಅನುಭವಗಳನ್ನು ಅರ್ಥಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಕತೆ ನವ್ಯಾಧುನಿಕವಾದ [ಪೋಸ್ಟ್‌ಮಾಡರ್ನಿಸಂ] ದೃಷ್ಟಿಕೋನವನ್ನು ಅತ್ಯಂತ ಸಮರ್ಥವಾಗಿ ನೀಡುತ್ತದೆ ಎಂಬುದನ್ನು ಗಮನಿಸಲೇಬೇಕು. ಗಂಡು ಹೆಣ್ಣಿನ ಮುಖಾಮುಖಿ ಈವರೆಗೂ ತಿಳಿಯದ ಕ್ಷೇತ್ರಗಳಿಗೆ ಪ್ರವೇಶಿಸಲಿದೆ ಎಂಬ ಸೂಚನೆ ಕಂಡು ಬರುತ್ತದೆ. ಈಗಾಗಲೆ ಈ ಕತೆಯಲ್ಲಿ ಸಾಧಿಸಲಾಗಿರುವ ವರ್ತುಲದಿಂದಾಚೆಗಿನ ಮುಕ್ತ ರೂಪ, ಮುಕ್ತ ನೋಟವನ್ನು ಸ್ಥಾಪಿಸಿದೆ. ಅಂದರೆ ` `ಮುಕ್ತ' ನೋಟ ಮತ್ತು ಅನುಭವ ಒಂದಕ್ಕೊಂದು ಹೆಣೆದುಕೊಂಡಿರುವುದರಿಂದ ಇದು ಸಾಧ್ಯವಾಗಿದೆ. ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾದಂಬರಿ ರೂಪದಲ್ಲಿ ಗಟ್ಟಿಯಾಗುವುದನ್ನು ನಾನು ಎದುರು ನೋಡುತ್ತಿದ್ದೇನೆ.
ಮುನ್ನುಡಿಯನ್ನು ನಾನು ಸ್ಥೂಲವಾಗಿ ವಿಸ್ತಾರವಾದ ತಾತ್ವಿಕ ನೆಲೆಯಲ್ಲೇ ಬರೆದಿದ್ದೇನೆ. ಗಂಭಿರವಾಗಿ ವಿವೇಚನೆಯಿಂದ ಓದುವ ಓದುಗರ ಪರವಾಗಿ ಎಲ್ಲ ಸೂಕ್ಷ್ಮಾರ್ಥಗಳನ್ನು ನಿರ್ಣಯಿಸುವ ಅಹಂಕಾರದಿಂದ ಕತೆಗಳ ವಿವರಗಳನ್ನು ವಿಶ್ಲೇಷಿಸಲು ಹೋಗಿಲ್ಲ. ಹೋಗಬಾರದೆಂಬುದೆ ನನ್ನ ಶ್ರದ್ಧೆ- ನಂಬಿಕೆ. ಈ ಮುನ್ನುಡಿಯನ್ನು ತಾತ್ವಿಕ ನೆಲೆಯನ್ನು ಕೂಡ ಕತೆಯ ಸಂದರ್ಭದಲ್ಲಿ ಓದುಗರೆ ಇಟ್ಟು ನೋಡಬೇಕು. ಈ ಮುನ್ನುಡಿಯ ಮೌಲ್ಯ ಓದುಗ ಮತ್ತು ಕತೆಗಳ ನಡುವಿನ ಸಂಬಂಧದಲ್ಲಿ ನಿರ್ಧಾರಿತವಾಗಬೇಕಿದೆ. ಮುನ್ನುಡಿ ತನ್ನ ಮೌಲ್ಯವನ್ನು ತಾನೆ ನಿರ್ಧರಿಸಿಕೊಳ್ಳಬಾರದು.- ಪ್ರಶ್ನೆಗಳಿಗೆ , ಜಿಜ್ಞಾಸೆಗೆ ಮುಕ್ತವಾಗುಳಿಯಬೇಕು. ಈ ಮೂಲಕವೆ ಮುನ್ನುಡಿ ಪ್ರಾಮಾಣಿಕವಾಗುಳಿಯಬಲ್ಲದು. ವಿವರವಾದ ಚರ್ಚೆ ಈ ಮುಕ್ತತೆಯನ್ನು ನಾಶ ಮಾಡಿಬಿಡಬಲ್ಲದು- ವಿವರವಾದ ಚರ್ಚೆಯನ್ನು ಏನಿದ್ದರೂ, ಸಾಹಿತ್ಯವನ್ನು ಗಂಭೀರವಾಗಿ ಭಾವಿಸಿರುವ ವಿದ್ವಾಂಸರು, ವಿಮರ್ಶಕರಿಗೆ ಬಿಟ್ಟುಬಿಡುತ್ತೇನೆ. ಈ ಮುನ್ನುಡಿಯ ಚೌಕಟ್ಟಿನಲ್ಲಿ ವಿಮರ್ಶಾತ್ಮಕವಾದ ನೆಲೆಯಲ್ಲಿ ಪ್ರಯೋಗವನ್ನು ಮಾಡದೆ ಇರುವುದೇ ಸರಿ ಎಂಬುದೇ ನನ್ನ ನಂಬಿಕೆ.
-ಮನುಚಕ್ರವರ್ತಿ
0 Comments:
Post a Comment
Subscribe to Post Comments [Atom]
<< Home