ಒಡಕಲು-ಬಡಕಲು

೧೯೭೮ರಲ್ಲಿ ಹೇಗೆಲ್ಲಾ ಯೋಚಿಸುತ್ತಿದ್ದರು-ಬರೆಯುತ್ತಿದ್ದರು ಎನ್ನುವ ಕುತೂಹಲವಿದ್ದಿರಬಹುದಾದವರಿಗೆ, ಇದ್ದರೆ ಇರಲಿ ಎಂದು ಇಲ್ಲಿ ಪ್ರಕಟಿಸಿದ್ದೇನೆ. ಇದರಾಚೆಗೆ ಇವುಗಳಿಗೆ ಯಾವುದೇ ಮಹತ್ವವಿಲ್ಲ-ಉದ್ದೇಶವೂ ಇಲ್ಲ.

Sunday, May 14, 2006

ಹಿಂದೆ ತಿರುಗಿ ನೋಡಿದಾಗ

ಈ ಕತೆಗಳನ್ನು ಮತ್ತೆ ಒಮ್ಮೆ ಓದಿದಾಗ "ಅಯ್ಯೋ ಇದೆಲ್ಲ ನಾನು ಬರೆದದ್ದ" ಎಂದು ಅಚ್ಚರಿ ಪಡುವಷ್ಟು ಕೆಟ್ಟದಾಗಿ ಕಾಣಿಸಿದವು. ಬರೆದದ್ದಾಗಿವೆ, ಪ್ರಕಟಿಸಿಯೂ ಆಗಿವೆ, ಕಾಲಗತಿಯಲ್ಲೂ ಇವು ಯವುದಕ್ಕೂ ಯಾವುದೇ ಸಾಹಿತ್ಯಾತ್ಮಕವಾಗಿ ಬೆಲೆ ಇಲ್ಲ ಎಂದು ನಾನೇ ವಿಮರ್ಶಾತ್ಮಕವಾದ ಮೌಲ್ಯಾಂಕನವನ್ನು ಮಾಡಿಬಿಡುವುದು ಆತುರದ ಕ್ರಮ. ಬರವಣಿಗೆಯ ಶೈಲಿ ಬದಲಾಗಿದೆ, ಇತ್ತೀಚೆಗೆ ಬರೆಯುತ್ತಿರುವವರ ಮೊನಚು ಖಂಡಿತವಾಗಿಯೂ ಈ ಕತೆಗಳಲ್ಲಿ ಇಲ್ಲ ಎಂದು ನನಗೆ ಅನ್ನಿಸಿದರು, ೧೯೭೮ ರಲ್ಲಿ ಹೇಗೆ ಅಲೋಚಿಸುತ್ತಿದ್ದೆವು, ನಮ್ಮ ಮೇಲಿದ್ದ ವೈಚಾರಿಕ ಪ್ರಭಾವಗಳೇನೇನು ಎವ್ವ್ನುವುದಕ್ಕೆ ಒಂದಷ್ಟು ರೆಫೆರೆನ್ಸ್ ಆದರೂ ಈ ಕತೆಗಳು ನೀಡಬಲ್ಲದು ಎನ್ನುವ ಆಲೋಚನೆಯಿಂದ ಅವುಗಳೆಲ್ಲವನ್ನು ಸಂಗ್ರಹಿಸಿ ಇಟ್ಟಿದ್ದೇನೆಯೇ ಹೊರತು, ಬೇರೆ ಯಾವ ಉದ್ದೇಶವೂ ಈ ಪ್ರಕಟಣೆಯ ಹಿನ್ನೆಲೆಯಲ್ಲಿ ಇಲ್ಲ. ಓದಿ, ನಕ್ಕು ಡಿಸ್‌ಮಿಸ್ ಮಾಡಬಹುದಾದ ಕೆಟ್ಟ ಅಪ್ರಬುದ್ಧ ಕತೆಗಳೂ ಇವೆ, ಅವುಗಳ ನಡುವೆಯೇ ಈಗ್ಯೆಗೂ ಪ್ರಸ್ತುತವಾದ ಒಂದೆರಡು ಅಂಶಗಳಾದರೂ ಇದ್ದೇ ಇದೆ ಎನ್ನುವ ವೈಚಾರಿಕ ಹುಂಬತನವೂ (ಹಠಮಾರಿತನ?)ಈ ಪ್ರಕಟಣೆಯ ಹಿನ್ನೆಲೆಯಲ್ಲಿ ಇದೆ. ಓದಿದಾಗ, ನಿಮಗೇನಾದರೂ ಅನ್ನಿಸಿದರೆ, ಎರಡು ಸಾಲು ಗೀಚಿ ನಿಮ್ಮ ರುಜು ಹಾಕಿಬಿಡಿ.

ಶೇಖರ್‌ಪೂರ್ಣ

Saturday, May 13, 2006

ಹೇಳಲೇ ಬೇಕಾದ್ದು...

ಎಷ್ಟೋ ಸುಳ್ಳಿನ ಅಂಶ ಬೆರೆತಿರುತ್ತದೆ. ಆದ್ದರಿಂದಲೇ ಇವುಗಳೆಲ್ಲ ಕತೆಗಳು-
ಬರಿಯ ಸುಳುಗಳೇ ಇರುವುದಿಲ್ಲ-ನಿಜಾಂಶವೂ ಇರುತ್ತದೆ. ಆದುದರಿಂದ ಇವುಗಳೆಲ್ಲ ಬರೀ ಕತೆಗಳೇ ಅಲ್ಲ-ವ್ಯಕ್ತಿಗತ ಅಂಶ-ವಾಸ್ತವ.

ಈ ಸುಳ್ಳು-ನಿಜಗಳ ನಡುವೆ ಏನಾದರೂ ಅರ್ಥಗಳಿದ್ದರೆ ಈ ಅರ್ಥಗಳನ್ನು ಕಟ್ಟಿದ್ದು, ರೂಪಿಸಿದ್ದು ನಾನೊಬ್ಬನೇ ಅಲ್ಲ. ಎಷ್ಟೋ ಜನ ಪರಿಸಿಚಿತರು-ಸ್ನೇಹಿತರು. ಜೀವನಕ್ಕೆ-ಬದುಕಿಗೆ ಅನಿವಾರ್ಯವಾಗಿರುವವರೂ ಇದ್ದಾರೆ.

ನನ್ನಾಕೆ ಸೀತ ನನ್ನೆಲ್ಲ ತಲೆತಿರುಕುತನವನ್ನು ಸಹಿಸಿಕೊಂದು ಬಂದಿದ್ದಾಳೆ. ತಾನು ದೊಡ್ಡ ಚೇತನವಾಗಿ, ನನ್ನಲ್ಲಿ ಬದುಕಿನ ಬಗೆಗೆ ಮಮಕಾರವನ್ನು ಉಳಿಸಿದ್ದಾಳೆ.

ಉಳಿದಂತೆ ಟಿ ಆರ್ ಸುಬ್ಬರಾವ್, ಅನ್ನಪೂರ್ಣ, ಎಂ ರಾಜಾಮಣಿ, ಎಂ ಪ್ರಕಾಶ್, ರಾಮಕೃಷ್ಣ, ವಿಶ್ವನಾಥ್ರಾವ್, ವಿಶ್ವನಾಥ್ ಹೆಚ್, ಸಮ್ತೋಷ್, ಎಸ್ ಪ್ರಸಾದ್ (ಪಚ್ಚಿ), ಮಾಧವಪ್ರಸಾದ್, ಎಂ ಕೆ ಅನಿಲ್, ಎಂ ರಮೇಶ್, ಮುಕುಂದ, ಶಿವಪ್ರಕಾಶ್, ಬಾಗೇಶ್ರೀ, ಕೇಶವಮಳಗಿ, ಮುರುಳೀಧರ ಖಜಾನೆ, ಗೋಪಾಲಹೆಗ್ಡೆ,..ಪಟ್ಟಿ ಉದ್ದಕ್ಕೂ ಬೆಳೆಸಬಹುದು. ಚಂದ್ರಶೇಖರ್‌ರಿಂದ ನಾನು ಕಲಿತದ್ದು, ಗಳಿಸಿದ್ದು ಅಪಾರ-ನೆನೆಯದಿರಲು ಸಾಧ್ಯವೇ ಇಲ್ಲ. `ಅದ್ವೈತ'ವನ್ನು ಇಂಗ್ಲಿಷ್‌ಗೆ ಅನುವಾದಿಸಿದ ಭರಧ್ವಾಜ್‌ರಿಗೆ ಕೃತಜ್ಞತೆಗಳು.

ಕತೆಗಳನ್ನು ಪ್ರಕಟಿಸಿದ ಪ್ರಜಾವಾಣಿ ಬಿ ವಿ ವೈಕುಂಠರಾಜು, ವೈಎನ್‌ಕೆ, ತುಷಾರದ ಈಶ್ವರಯ್ಯ, ಸುದ್ಧಿಸಂಗಾತಿಯ ಲಕ್ಷ್ಮೀಪತಿ ಕೋಲಾರ, ಚಿರಂಜೀವಿ ಇವರೆಲರ ನಡುವೆ ನನ್ನ ಮಗ ಚೀನಿ, ಮಗಳು ನಂದಿನಿ, ಕಶ್ಯಪ ಪ್ರಿಂಟರ್ಸ್‌ನವರನ್ನೂ ನೆನೆಯುತ್ತಾ-
ವಿಶೇಷವಾಗಿ ಮುನ್ನುಡಿ ಬರೆದುಕೊಟ್ಟ ಎನ್‌ಎಂಕೆಅರ್‌ವಿ ಕಾಲೇಜಿನ ಮನುಚಕ್ರವರ್ತಿ, ರಕ್ಷಾಪುಟಕ್ಕೆ ತನ್ನದೇ ಮೆರಗು ಅರ್ಥ ನೀಡಿದ ಕಲಾವಿದ ಅರ್ ಸೂರಿ, ಇವರಿಗೆಲ್ಲ ಹೃತ್‌ಪೂರ್ವಕ ಕೃತಜ್ಞತೆಗಳು.

ಮತ್ತೂ ಒಂದು ವಿಷಯ-
ಈ ಸಂಕಲನದ್ಲ್ಲಿ ಎರಡು ಅಪ್ರಕಟಿತ ಕತೆಗಳನ್ನು- `ಸುಳ್ಳು ಸುಳ್ಳೇ ಒಂದು ಕತೆ', `ಟಿಪ್ಸ್ ಸುತ್ತ ಮುತ್ತ' ಸೇರಿಸಿದ್ದೇನೆ. ಟಿಪ್ಸ್...ಬಹಳ ಕಾಲದಿಂದಲೂ ವರ್ಷಾನುಕಾಲ ಒಳಗೇ ಗಿರಕಿ ಹೊಡೆಯುತ್ತಿದ್ದುದು ಹಿಡಿತಕ್ಕೆ ದೊರೆಯದೇ ಹೋಗಿತ್ತು. `ಸುಳ್ಳು ಸುಳ್ಳೇ ಒಂದು ಕತೆ' ಬರೆದು ಮುಗಿಸಿದ ನಂತರವೇ ಹಿಡಿತಕ್ಕೆ ಸಿಕ್ಕಿ ತನ್ನಂತೆ ತಾನೇ ಅಪ್ರಯತ್ನಕವಾಗಿ ಬರೆಸಿಕೊಂಡಿತು. ಸ್ಪೂರ್ತಿಯಾಗಿ ನಿಂತವರಿಗೆ ವಿಶೇಶ ಗೌರವ ಸೂಚಿಸಿ ಧನ್ಯವಾದಗಳನ್ನು ಹೇಳುತ್ತಿದ್ದೇನೆ.

ಶೇಖರ್‌ಪೂರ್ಣ

ಅರ್ಪಣೆ

ಹೆತ್ತ ತಾಯ್ತಂದೆಯರಾದ
ವಿ.ಸುಶೀಲಮ್ಮ [ ನಾಗಮ್ಮ] , ವಿ.ಗುಂಡಣ್ಣ
ಆರನೆ ತರಗತಿಗೆ ಶಾಲಾಭ್ಯಾಸ ನಿಲ್ಲಿಸಿ ಅಲೆಮಾರಿಯಾಗಿದ್ದ ನನ್ನೆಲ್ಲ ತೊದಲ್ನುಡಿಗಳಿಗೆ
ಅರ್ಥ ತುಂಬಿ ಗುರುಸಮಾನರಾದ
ಶ್ರೀ ಟಿ.ಜಿ.ವೈದ್ಯನಾಥನ್
ಹುಟ್ಟಿ ಬೆಳೆದು ಅಕ್ಷರ ಕಲಿತರಷ್ಟೆ ಸಾಕೆ?
ಕೇಳದೆಯೆ ಕರೆದು ಕೆಲಸ ಕೊಟ್ಟು ಧಣಿ ಸಾಲಿನಲ್ಲಿ
ನಿಂತು ಅನ್ನದಾತರಾದ
ಶ್ರೀ ಕೆ.ಎನ್. ಹರಿಕುಮಾರ್
ಇವರಿಗೆಲ್ಲ ಈ ಕೃತಿ ಅರ್ಪಣೆ.
ಶೇಖರ್‌ಪೂರ್ಣ

ಮುನ್ನುಡಿ - ಮನುಚಕ್ರವರ್ತಿ

ಹೆಸರಾಂತ ಲೇಖಕರ ಕೃತಿಗಳಿಗೆ ಮುನ್ನುಡಿ ಬರೆಯುವುದು ಕಷ್ಟವೇನಲ್ಲ. ಏಕೆಂದರೆ ಓದುಗನ ಗಮನವನ್ನು ಕೃತಿಯ ಕಡೆಗೆ ಸೆಳೆಯುವಂತೆ ಲೇಖಕನ ಹೆಸರಿರುತ್ತದೆ. ಓದುಗ ತನಗೆಬೇಕಾದರೆ ಮಾತ್ರ ಮುನ್ನುಡಿ ಓದುತ್ತಾನೆ. ಹೆಸರಾಂತ ವ್ಯಕ್ತಿ ಮುನ್ನುಡಿ ಬರೆಯುವುದೂ ಸುಲಭ- ಅಂತಹ ವ್ಯಕ್ತಿಗೆ ಆತನ ಖ್ಯಾತಿಯೆ ನೆರವಿಗೆ ಬರುತ್ತದೆ. ಮೊಟ್ಟಮೊದಲ ಬಾರಿಗೆ ಮೊಟ್ಟಮೊದಲು ಕಥಾಸಂಕಲನ ತರುತ್ತಿರುವ ಲೇಖಕನ ಕೃತಿಗೆ ಮುನ್ನುಡಿ ಬರೆಯುವುದೆಂದರೆ, ಮುನ್ನುಡಿಯನ್ನು- ಕೃತಿಯನ್ನು ಒಟ್ಟೊಟ್ಟಿಗೆ ಪರೀಕ್ಷೆಗೊಡ್ಡಿದಂತೆಯೆ ಸರಿ. ಮುನ್ನುಡಿ ಬರೆಯುವಾತ ತನಗೆ ತಾನು ಪ್ರಾಮಾಣಿಕವಾಗುಳಿದು, ಕೃತಿಗೂ ಕತೃವಿಗೂ ಪ್ರಾಮಾಣಿಕವಾಗಿರಲೆಬೇಕು. ಈ ನೆಲೆಯಲ್ಲಿ ಊರ್ಜಿತವಾಗಬೇಕಾದ ಸಂದರ್ಭದಲ್ಲಿ ಹೆಸರು - ಖ್ಯಾತಿ ನಗಣ್ಯವೆಂದೆ ನನ್ನ ಭಾವನೆ. ಪ್ರಾಮಾಣಿಕವಾಗುಳಿಯುವುದೆಂದರೆ ಎರಡು ರೀತಿಯಲ್ಲಿ: ಕೃತಿಯನ್ನು ಓದುಗನ ನಿರ್ಣಯಕ್ಕೆ - ವಿಚಕ್ಷಣೆಗೆ ಬಿಡುವುದು ಮತ್ತು ಲೇಖಕನು ಕತೆಗಳನ್ನು ಕಟ್ಟಿಕೊಡುವ ಕ್ರಮವನ್ನು, ಅದರ ಒಟ್ಟಾರೆ ಸ್ವರೂಪವನ್ನು ಗುರುತಿಸುತ್ತಾ ಹೋಗುವುದು. ಈ ಎರಡರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದೆ ಮುನ್ನುಡಿಯ ಹೊಣೆಗಾರಿಕೆ. ಅದರ ಯಶಸ್ಸು-ವೈಫಲ್ಯ ಇಂತಹ ಸಮತೋಲನವನ್ನು ಆಧರಿಸಿದೆ- ಅವಲಂಬಿಸಿದೆ ಎಂಬುದೆ ನನ್ನ ಅಭಿಪ್ರಾಯ. ಮೌಲ್ಯವನ್ನು ನಿರ್ಣಾಯಕವಾಗಿ ಹೇಳುವುದಕ್ಕಿಂತಲು ಕತೆಗಳ ರಚನಾಕ್ರಮದ ಒಳ ಸ್ವರೂಪದತ್ತ ದೃಷ್ಟಿ ಹರಿಸುವುದೆ ಹೆಚ್ಚು ಪ್ರಯೋಜನಕಾರಿಯಾದೀತು. ಆದುದರಿಂದಲೇ, ಲೇಖಕನ ಯಾವ್ಯಾವ ಮುನ್ನೊಲವು , ಪ್ರವೃತ್ತಿ , ಸಂವೇದನೆಗಳು ಕತೆಗಳನ್ನು ಕಟ್ಟಿಕೊಟ್ಟಿದೆ- ಕಟ್ಟಿಕೊಡಲು ಕೆಲಸ ಮಾಡಿದೆ ಎಂಬುದನ್ನಷ್ಟೆ ನಾನು ಆರ್ಥ ಮಾಡಿಕೊಳ್ಳಲು ಯತ್ನಿಸಿದ್ದೇನೆ. ಈ ಗ್ರಹಿಕೆಯ ಕ್ರಮ ಓದುಗನ ಅಂತಿಮ ನಿರ್ಣಯಗಳಿಗೆ- ವಿವೇಚನೆಗೆ ಅಡ್ಡಿಯಾಗದೆಂದೇ ನನ್ನ ಭಾವನೆ. ಕತೆಗಳನ್ನು ಓದುಗನಿಗೆ- ಓದುಗ ಕತೆಗಳಿಗೆ ಮುಕ್ತವಾಗಿ ತೆರೆದುಕೊಳ್ಳಲು ಅಡ್ಡಿಯಾಗದಂತೆ ಕತೆಗಳ ನೇಯ್ಗೆಯನ್ನಷ್ಟೆ ಬಿಡಿಸುತ್ತಾ ಹೋಗುವ ಆಶಯದಿಂದ ಹೊರಟಾಗ ನನಗೆ ಗೋಚರಿಸುವುದೇನೆಂದರೆ.....
*
*
*
ಕತೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ಪ್ರಾಮಾಣಿಕತೆಯನ್ನು, ನಿಷ್ಠೆಯನ್ನು ಪ್ರಶ್ನಿಸುತ್ತಾ ಹೋಗುವ ಕ್ರಮ. ಈ ಕ್ರಮದಲ್ಲೊಂದು ಕೇಂದ್ರ ಪ್ರಜ್ಞೆ ದುಡಿಯುತ್ತಲೇ, ಕೇಂದ್ರ ಪಾತ್ರವನ್ನು ಇವೆರಡು ಸೇರಿಕೊಂಡು ಕತೆಗಳ ಸ್ವರೂಪ-ಚೌಕಟ್ಟನ್ನು ರೂಪಿಸುತ್ತಾ ಹೋಗುತ್ತವೆ. ಇದು ಮೊದಲ ಹಂತದ ಕತೆಗಳಲ್ಲಿ ಸಮಾನ್ಯಾಂಶವೆಂದೆ ಹೇಳಬಹುದು. ವಿವಿಧ ಸನ್ನಿವೇಶಗಳಲ್ಲಿ , ಸಂಬಂಧಗಳಲ್ಲಿ ಆಗುವ ಮುಖಾಮುಖಿ ಮೂಲಕ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಾ ಸಾಗುವ ದೃಕ್ಪಥವಿದೆ.ಇದೆಲ್ಲವನ್ನು ಕೇಂದ್ರ ಪಾತ್ರದ ಅನುಭವಗಳ ನೆಲೆಯಲ್ಲಿ ವಯಸ್ಕ ಪ್ರಜ್ಞೆಯ [ಅಡಲ್ಟ್ ಕಾನ್ಷಿಯಸ್‌ನೆಸ್] ಮೂಲಕ ಕಟ್ಟಿಕೊಡಲಾಗಿದೆ. ಈ ವಯಸ್ಕ ಪ್ರಜ್ಞೆ , ಎದುರಿಸುವ ಸನ್ನಿವೇಶಗಳು, ಸಂಬಂಧಗಳು, ಮುಖಾ‌ಆಮುಖಿಗಳು ಕತೆಯಿಂದ ಕತೆಗೆ ಬೇರೆ ಬೇರೆಯೆ ಎಂಬುದು ಗಮನಾರ್ಹ.

ವಯಸ್ಕ ಪ್ರಜ್ಞೆಗಿರುವ ಪ್ರಾಧಾನ್ಯತೆಯಿಂದಾಗಿ ಹೆಚ್ಚಿನ ಮಟ್ಟದಲ್ಲಿ ಬಾಲ್ಯದ ನೆನಪುಗಳನ್ನು ಕತೆಗಳು ಅಷ್ಟಾಗಿ ಅವಲಂಬಿಸುವುದಿಲ್ಲ. ಕ್ರಿಯೋನ್ಮುಖವಾಗಿ ಬರುವುದಿಲ್ಲ. ಕಲಾಕೃತಿಯಲ್ಲಿ ಗತಸ್ಮರಣೆ [ನಾಸ್ಟಾಲಜಿಯ] ಕೇಂದ್ರವಾಗಬೇಕೆಂದು ನಾನು ಹೇಳುತ್ತಿಲ್ಲ. ಈ ಸಂಕಲನದ ಕತೆಗಳಲ್ಲಿ ವಯಸ್ಕ ಪ್ರಜ್ಞೆಯ ಮೂಲಕವೆ ಬಾಲ್ಯದ ನೆನಪುಗಳನ್ನು ಬರುತ್ತದೆ ಎಂಬುದರಿಂದಾಗಿ , ಆ ನೆನಪುಗಳೆಲ್ಲ ಸಶಕ್ತವಾಗಿಲ್ಲ ಎಂದೇ ನಾನು ಹೇಳುತ್ತಿರುವುದು. ಇಂತಹ ನೆನಪುಗಳು ಇಲ್ಲವೇ ಇಲ್ಲವೆಂದೇನು ಅಲ್ಲ, ಆ ನೆನಪುಗಳನ್ನು ಆಧರಿಸಿ ಗತಕ್ಕೆ ಹೋಗಿ ಗತವನ್ನಷ್ಟೆ ಪುನರ್ ಸೃಷ್ಟಿಸಿಬಿಡಬಹುದಿತ್ತು. ಹಾಗೆ ಮಾಡಿಲ್ಲ. ಕಾರಣ : ಪ್ರಸಕ್ತ ತಂದೊಡ್ಡಿರುವ ಮುಖಾಮುಖಿ, ಪ್ರಸಕ್ತಕ್ಕೆ ತುಡಿಯುವ ಜರೂರು , ಒಳಮುಖಿ ಸಂಘರ್ಷದತ್ತಲೇ ಗಮನವೆಲ್ಲ ಕೇಂದ್ರಸ್ಥವಾಗಿಬಿಡುವುದು. ಇದರಿಂದಾಗಿ ಕೇಂದ್ರ ಪಾತ್ರ ಅರಾಮಾಗುವುದೇ ಇಲ್ಲ- ನಿರುಮ್ಮಳವಾಗುವುದೇ ಇಲ್ಲ. ಅನೇಕ ವ್ಯಥೆಗಳನ್ನೊಡ್ಡುವ ನಗರಗಳ ಹಿನ್ನೆಲೆಯಲ್ಲಿ ಕತೆಗಳು ಅನ್ವೇಷಣಕಾರಿ ಗುಣವನ್ನು ಪಡೆಯುತ್ತವೆ. ಶೇಖರ್‌ಪೂರ್ಣ ತಮ್ಮ ಕತೆಗಾರಿಕೆಯನ್ನು ಈ ಕಲೆಯಲ್ಲಿ ಸಾಧಿಸಿದ್ದಾರೆ.

ಕತೆಗಳು ಸ್ವಯಂಮುಖಿ [ಮನೋಲಾಗ್] ಗುಣದತ್ತ ಗಮನ ಸೆಳೆಯುವ ನನ್ನ ಆಶಯವೇ ಗತಸ್ಮರಣೆ ನಗಣ್ಯವಾಗಿದೆ ಎಂಬುದನ್ನು ಹೇಳುವುದಕ್ಕೆ ಮತ್ತೊಂದು ಕಾರಣ. ಇದನ್ನೆ ಇನ್ನಷ್ಟು ವಿಸ್ತರಿಸುತ್ತಾ ಹೇಳುವುದಾದರೆ ತನ್ನ ಕತೆಯನ್ನು ತಾನೆ ನಿರೂಪಿಸುವ ಸ್ವಗತದ ಕ್ರಮದಲ್ಲಿದೆ-ಶೈಲಿಯಲ್ಲಿದೆ. ತಾಂತ್ರಿಕ ದೃಷ್ಟಿಯಿಂದಷ್ಟೇ ಇದನ್ನು ನಾನು ಹೇಳುತ್ತಿಲ್ಲ. ಕತೆಗಳು ತಮ್ಮಷ್ಟಕ್ಕೆ ತಾವೆ ಸ್ವಯಮಾಭಿವ್ಯಕ್ತಿಯಾಗಿ- ಕಾಣ್ಕೆಯನ್ನು- ನೋಟವನ್ನು [ವಿಷನ್] ನೀಡುತ್ತಾ ಹೋಗುತ್ತವ.

ಕತೆಗಳಲ್ಲಿ ಬರುವ ನಗರಗಳು, ಸಾಮಾನ್ಯ ಜನರು, ಸನ್ನಿವೇಶಗಳು ಕೇಂದ್ರ ಪಾತ್ರದ ಅಂತರಾಳಕ್ಕೆ ತಳಕು ಹಾಕಿಕೊಳ್ಳುತ್ತವೆ. ಅಂತರಾಳದ- ಪ್ರಜ್ಞೆಯಾಚೆಗಿನ ಬಾಹ್ಯ ವಿವರಗಳೆಲ್ಲ ಕೇಂದ್ರ ಪಾತ್ರದ ಪ್ರಜ್ಞೆಯಲ್ಲಿ ನಡೆಯುತ್ತಿರುವ ಸಂಘರ್ಷ ಸೂಚಿಯಾಗುತ್ತದೆ. ಏಕೆಂದರೆ ಅವೆಲ್ಲ ಅವನನ್ನು ಸಂಕಟಕ್ಕೀಡು ಮಾಡಿವೆ, ಕಾಡಿಸುತ್ತವೆ, ಭಾದಿಸುತ್ತವೆ, ಕಲಕುತ್ತವೆ. ಅವನ ಅಂತರಾಳದಾಚೆಗಿನ ಜಗತ್ತಿನ ಅಗತ್ಯವೆ ಕಾಣುವುದಿಲ್ಲ. ಕತೆಗಳು ಒತ್ತಾಯಿಸುವುದಿಲ್ಲ. ಹೀಗಾಗಿ ಕತೆಗಳೆ ಸ್ವಯಂಸ್ವಗತದ ನೋಟವೆಂದೆ ಹೇಳಬಹುದು. ಏನೆ ಆದರು ಕತೆಗಳು ಎಷ್ಟೇ ಆಸಕ್ತಿಯನ್ನು ಸೃಷ್ಟಿಸಿದರೂ ಈ ಏಕಪ್ರಕಾರವಾದ ಪ್ರಜ್ಞೆಯಿಂದಾಗಿ ವೈವಿಧ್ಯವನ್ನು-ಸರ್ವವ್ಯಾಪಕತೆಯನ್ನು -ಸಮಷ್ಠಿಯನ್ನು ಸಾಧಿಸುವುದಿಲ್ಲ. ತೀಕ್ಷ್ಣತೆಯೂ ಇದೆ. ಆದರೆ ವ್ಯಕ್ತಿಪ್ರಧಾನವಾಗುಳಿದು ಸಮಗ್ರ ನೋಟವನ್ನು ನೀಡುವ ಯತ್ನದಲ್ಲಿ ಸುಲಭ ಪರಿಹಾರೋಪಾಯಗಳಿಗೆ ತೆಕ್ಕೆ ಹಾಕಿಕೊಂಡುಬಿಡುವ ಆತುರಗಾರಿಕೆಯನ್ನು ತೋರುವುದಿಲ್ಲ. ಪರಿಹಾರಕ್ಕೆಳೆಸುವ ಹಂಬಲವನ್ನು ಉದ್ಡೇಶಪೂರ್ವಕವಾಗಿ ಕೈಬಿಡಲಾಗಿದೆ.

ಒಳಮುಖಿಯಾಗುವ ಕ್ರಮವೇ ಕತೆಗಳ ಸ್ವರೂಪವನ್ನು ಕಟ್ಟಿದೆ.ಪ್ರಜ್ಞೋನ್ಮುಖಿಯಾಗುಳಿಯುವುದರತ್ತಲೇ ಕತೆಗಳನ್ನು ರೂಪಿಸುವ ಯತ್ನದಲ್ಲಿ ಇತರೆಲ್ಲ ಪಾತ್ರಗಳು ನೈಪಥ್ಯಕ್ಕೆ ಸರಿದು ಕೇಂದ್ರಪಾತ್ರವು ತನಗೆ ತಾನು ಅರ್ಥವಾಗದೆ - ತನ್ನ ಸತ್ಯವನ್ನು ತಾನು ಕಂಡುಕೊಳ್ಳದೆ ಬಾಹ್ಯ ವಿವರಗಳನ್ನು ವಾಸ್ತವವನ್ನು ಸತ್ಯವನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ ಎಂಬ ನಂಬಿಕೆಯಿಂದ ಪ್ರಜ್ಞಾಕೇಂದ್ರ ಗಾಢವಾಗುತ್ತಾ ಹೋಗುತ್ತದೆ.

ಪ್ರಜ್ಞೋನ್ಮುಖಿ ಪ್ರಧಾನವಾಗಿರುವ ಕತೆಗಗಳು ಭಾವೋನ್ಮುಖಿವಾಗುವುದಿಲ್ಲ, ಭಾವೋನ್ಮುಖಿ ಚಿತ್ರಣ ತರಬಹುದಾದ ನೋಟವನ್ನು ಕತೆಗಳು ಕೊಡುವುದಿಲ್ಲ. ಭಾವನಾಮಯ ಸಂಬಧಗಳೇನೊ ಇವೆ. ಗಂಡು ಹೆಣ್ಣೀನ ಸಂಬಂಧವಿರಬಹುದು, ಗಂಡು ಗಂಡಿನ ಸಂಬಧವಿರಬಹುದು, ಆದರೆ ಪ್ರಜ್ಞೋನ್ಮುಖಿಯಾಗಿ ಬಿಡುವುದರಿಂದಾಗಿ ಆ ಎಲ್ಲಾ ಕತೆಗಳು ಸಂಬಂಧಗಳನ್ನು ಪೂರ್ಣಮಟ್ಟಕ್ಕೆ ಬೆಳೆಸುವ ಅಗತ್ಯವನ್ನು ಕತೆಗಳ ಚೌಕಟ್ಟೇ ಅಂಗೀಕರಿಸುವುದಿಲ್ಲ.

ನನ್ನ ಗಮನವನ್ನು ಸೆಳೆಯುವ ಅಂಶವೆಂದರೆ, ಎಷ್ಟೇ ಪ್ರಜ್ಞೋನ್ಮುಖಿಯಾದರೂ - ಅಷ್ಟರ ನಡುವೆಯು ಭಾವನಾಮಯ ಸಂಬಂಧಗಳನ್ನು ಹುದುಗಿಸಿಟ್ಟಿರುವ ರೀತಿ- ಇದೂ ಸಹ ಉದ್ದೇಶಪೂರ್ವಕ ಸಾಧನೆ. ಈ ಉದ್ದೇಶ ಎಷ್ಟು ಗಾಢವಾಗಿದೆಯೆಂದರೆ ಕತೆಗಳನ್ನು ಓದುತ್ತಾ ಹೋಗುತ್ತಿದ್ದಂತೆ ಕೇಂದ್ರ ಪಾತ್ರ ಭಾವನೆಗಳನ್ನು ಆಧರಿಸಿ ತನ್ನನ್ನು ತಾನು ತೆರೆದಿಡುವ ವಿಶ್ವಾಸವನ್ನು ತೋರುವುದಿಲ್ಲ ಎಂದೇ ಅನ್ನಿಸಿಬಿಡುತ್ತದೆ. ಭಾವನೆಗಳ ಬಗೆಗೆ ಸಂಶಯವಿದೆ. ಹೀಗಾಗಿ ಒಳ ಮತ್ತು ಹೊರ ಇವೆರಡರ ನಡುವೆ ಕಂದರ. ಶೇಖರ್‌ಪೂರ್ಣ ತೋರಿಸುವ ಆಂಶಿಕವಾದ ಭಾವ ಜಗತ್ತಿನಲ್ಲಿ ನಮ್ಮ ಆಸಕ್ತಿ ಕೆರಳಿದರು ಅದನ್ನು ಶೇಖರ್‌ಪೂರ್ಣ ಸನ್ನಿವೇಶದ ನಿರ್ವಹಣೆಯ , ಆಳವಾದ ಒತ್ತಡಕ್ಕೆ ಸಿಲುಕಿ ಒಳಗಡೆಯೆ ಬೇಕೆಂದೆ ಹುದುಗಿಸಿಬಿಡುತ್ತಾರೆ. ಈ ಭಾವ ಜಗತ್ತಿನ ಬೆಲೆಯನ್ನು ತೆತ್ತೇ ಮೊದಲಿನ ಕತೆಗಳಲ್ಲಿ ಪ್ರಾಮಾಣಿಕ ಕಾಳಜಿಗಳ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತಾರ.

ಇಷ್ಟಾಗಿಯೂ ಕೂಡ ಮತ್ತೊಂದು ವಿಷಯದ ಬಗೆಗೆ ಹೇಳಬಹುದೇಯಾದರೆ ಅದು `ಸುಷುಪ್ತಿ' ಯ ಬಗೆಗೆ. ಇದನ್ನು ಬೇಕಾದರೆ ಕತೆಗಳಲ್ಲಿ ಪರ್ಯಾಯೋಪನ್ಯಾಸ [ಪ್ಯಾರಲೆಲ್ ಡಿಸ್‌ಕೋರ್ಸ್] ಎಂದೇ ಕರೆಯಬಹುದು. ಬೌದ್ಧಿಕಾನ್ವೇಷಣೆಯ ನಡುವೆ ಈ ಸುಷುಪ್ತಿಯ ಗುಣದಿಂದಾಗಿ ಭಾವ ಜಗತ್ತು ಸಹ ತಳಕು ಹಾಕಿಕೊಂಡು ಕತೆಗಳ ಒಡಲೊಳಗೆ ಅಂತರ್‌ಶಕ್ತಿಯನ್ನು ರೂಪಿಸಿಬಿಡುತ್ತದೆ. ಬಾಹ್ಯ ಪ್ರಜ್ಞೆಗೆ ಪೂರಕವಾಗಿ ಸಶಕ್ತವಾದ ತುಲನಾತ್ಮಕವಾಗಿ ಭಾವದ ಆಂತರಿಕ ಜಗತ್ತೂ ಇದೆ. ಮೇಲ್ನೋಟಕ್ಕೆ ಬೇಕೆಂದೆ ಭಾವವನ್ನು ಬಿಗಿಯಾಗಿ ಹಿಡಿದು ಹುದುಗಿಸಿಟ್ಟಿದ್ದರು, ಬೌದ್ಧಿಕ ಕಕ್ಷೆಯಲ್ಲೆ ಒಳ ಹೊರಗನ್ನು ಸಾಧಿಸಿಕೊಂಡಿದೆ. ಆದರೆ ಆಂತರಿಕ ಜಗತ್ತನ್ನು ಬೇಕೆಂದೆ ಬೆಳೆಯಲು ಬಿಡುವುದಿಲ್ಲ. ಕಾರಣವೆಂದರೆ, ಈಗಾಗಲೆ ನಾನು ಹೇಳಿರುವ ಹಾಗೆ ತನ್ನನ್ನು ತಾನು ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ಕೇಂದ್ರ ಪಾತ್ರ ತಾದಾತ್ಮ್ಯ ಹೊಂದಿಬಿಡುತ್ತದೆ. ತನ್ನನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ಒಳ ಮತ್ತು ಹೊರಗನ್ನು ನೋಡುತ್ತಾನೋಡಿಸುತ್ತಾ ಬಹುಮುಖಿ ಸತ್ಯವನ್ನು ಅನಾವರಣಗೊಳಿಸುತ್ತಾ ಹೋಗಿ ಅನೇಕ ಆಯಾಮಗಳನ್ನು ಪಡೆದುಬಿಡುತ್ತದೆ. ಆದರೆ ಏಕಾಗ್ರತೆಯಿಂದಾಗಿ ಮೊದಲ ಕತೆಗಳು ಅಂತಿಮವಾಗಿ ಏಕಮುಖ ಸತ್ಯದತ್ತಲೇ ಹೊರಳಿಬಿಡುತ್ತವೆ. ಕತೆಗಳನ್ನೆ ಉದಾಹರಿಸಿ ಹೇಳುವುದಾದರೆ ಸುಗೀತ, ಕನ್ಯಾಕುಮಾರಿ, ಚರಮಗೀತೆಯಲ್ಲೊಂದು ಅಳುಕು, ಮನ್ನಿ ಇವಿಷ್ಟರಲ್ಲಿ ಮೇಲೆ ಹೇಳಿರುವುದನ್ನು ಕಾಣಬಹುದು. ಇವಿಷ್ಟನ್ನು ನಾನು ಮೊದಲ ಹಂತದ ಕತೆಗಳೆಂದೇ ವರ್ಗಿಕರಿಸುತ್ತೇನೆ.
*
*
*
ಎರಡನೆ ಹಂತದ ಕತೆಗಳಾದ ವೈಟ್‌ಫೀಲ್ಡ್ , ಅದ್ವೈತ, ಟಿಪ್ಸ್ ಸುತ್ತ ಮುತ್ತ ಕತೆಗಳಲ್ಲಿ ಈ ಮೇಲೆ ಹೇಳಿರುವ ಬಿಗಿಯು ಸಡಿಲಗೊಳ್ಳುತ್ತದೆ. ಎಷ್ಟೇ ಸಂಕೋಚಗಳಿದ್ದರು, ಬೇಕಿಲ್ಲದಿದ್ದರು ಬಹಳ ಆತ್ಮೀಯವಾದ, ಬೆಚ್ಚನೆ ಭಾವನೆಗಳಿಂದ ಕೂಡಿದ ಸಂಬಂಧಗಳ ಚಿತ್ರಣ ಯಶಸ್ವಿಯಾಗಿದೆ. ಭಾವನಾತ್ಮಕ ನೆಲೆಯಲ್ಲಿ ಸಂಬಂಧಗಳನ್ನು ನಿರಾತಂಕವಾಗಿ ಮುಕ್ತವಾಗಿ ಕಟ್ಟಿ ಕೊಡಲಾಗಿದೆ. ಮೊದಲಿನ ಕತೆಗಳಲ್ಲಿ ಇದರ ಅಗತ್ಯ ಈ ಪ್ರಮಾಣದಲ್ಲಿ ಕಾಣಬರುವುದಿಲ್ಲ. ಪ್ರಜ್ಞೆ ಹಾಗು ಮುಕ್ತ-ಭಾವನಾ ಕಕ್ಷೆಯ ನಡುವೆ ಸಮನಾದ ಸಂಘರ್ಷ ಈ ಎರಡನೆ ಹಂತದ ಕತೆಗಳಲ್ಲಿ ಪ್ರಾರಂಭವಾಗುತ್ತದೆ ಎಂಬುದೇ ನನ್ನ ಬಾವನೆ. ಈ ಸಂಘರ್ಷವೆ ಕತೆಗಳನ್ನು ಒಂದು ಕಡೆಯಿಂದ ಅಂದರೆ ಪ್ರಜ್ಞೆಯ ಬೌದ್ಧಿಕ ಕಕ್ಷೆಯಿಂದ ಬಾವನಾ ಜಗತ್ತಿಗೆ, ಭಾವನಾ ಜಗತ್ತಿನಿಂದ ಬೌದ್ಧಿಕ ಕಕ್ಷೆಗೆ ನೂಕುತ್ತ ಹೋಗುತ್ತದೆ. ಹೆಚ್ಚಾಗಿ ಬೌದ್ಧಿ ಕ ಕಕ್ಷೆಯಲ್ಲೇ ತಿರುಗಿದರೂ ಶುಷ್ಕವಾಗಿ , ನಿರ್ಜೀವವಾಗಿ, ನಿರ್ದಯವಾಗಿ ಬೌದ್ಧಿಕ ಅನ್ವೇಷಣೆಯಲ್ಲಿ ಉಳಿಯುವುದಿಲ್ಲ ಎಂಬುದನ್ನು ಸಂಕೋಚವೇ ಇಲ್ಲದೆ ಹೇಳಬಹುದು. ಈ ಕಾರಣಕ್ಕಾಗಿಯೆ ಶೇಖರ್‌ಪೂರ್ಣರ ಈ ಎರಡನೆ ಹಂತದ ಕತೆಗಳನ್ನು ಪ್ರಮುಖವಾಗಿ ಪರಿಗಣಿಸಬೇಕೆಂದು ನನ್ನ ಅನ್ನಿಸಿಕೆ. ಭಾವನೆಗಳ ನೆಲೆಯಲ್ಲಿ ಸಂವೇದನಾಶೀಲ ಸತ್ಯವು ಪೂರಕವಾಗದೆ ಬೌದ್ಧಿಕ ಅನ್ವೇಷಣೆ ಪೂರ್ಣವಾಗಿ ನಿರರ್ಥಕವಾಗಿಬಿಡುತ್ತದೆ ಎಂಬ ಪ್ರಜ್ಞೆ ಈ ಕತೆಗಳಲ್ಲಿ ವ್ಯಕ್ತವಾಗುತ್ತದೆ. `ಸಂವೇದನಾಶೀಲ' ಸತ್ಯವನ್ನು ಸರಳ ರೀತಿಯಲ್ಲಿ ಬೆಳೆಯಬಿಡುವುದಿಲ್ಲ ಎಂಬುದೂ ನಿಜ. ತಾತ್ಕಾಲಿಕವಾಗಿ, ನಿರ್ಣಯಿಸಿ ಹೇಳುವುದೇ ಆದರೆ ಶೇಖರ್‌ಪೂರ್ಣ ಅಂತರಂಗ ಹಾಗು ಬಹಿರಂಗ, ಪ್ರಜ್ಞೆ ಹಾಗು ಸುಷುಪ್ತಿ, ಚಿಂತನೆ ಹಾಗು ಭಾವ ಈ ಎಲ್ಲಾ ವಿಭಿನ್ನ ಲೋಕಗಳನ್ನು ಬೆಸೆಯುವುದರಲ್ಲಿ ಹೋರಾಡುತ್ತಿದ್ದಾರೆ. ಈ ಹೋರಾಟವೆ ಇವರ ಸೃಜನಶೀಲ ಬರವಣಿಗೆಯನ್ನು ಬೆಳವಣಿಗೆಯನ್ನು ಕತೆಯೊಂದ ಕತೆಗೆ ಮುಂದುವರಿಸಿಕೊಂಡು ಬಂದಿದೆ. ಅನ್ವೇಷಣೆ ಸಾಗುತ್ತಲೆ ಹೋಗುತ್ತಿದ್ದಂತೆ ಕತೆಗಳ ಅಂತ್ಯವೂ ಸಹ ಹಠಾತ್ತನೆ ತುಂಡರಿಸಿ ಹೋಗುತ್ತದೆ. ಸಂಘರ್ಷ-ಅನ್ವೇಷಣೆ ಮತ್ತೊಂದು ಕತೆಗೆ ಮುಂದುವರಿಯುತ್ತದೆ.


ಈ ಸಂಘರ್ಷವನ್ನು ಮತ್ತಷ್ಟು ಪರೀಕ್ಷೆಗೊಡ್ಡಿದಾಗ " ಹೆಣ್ಣಿನ" ಪಾತ್ರಗಳಿಗೆ ವಿಶೇಷ ಗಮನ ನೀಡಲೆಬೇಕು. ನಿರೂಪಕನಿಗೆ ಅಥವ ಕೇಂದ್ರ ಪಾತ್ರಕ್ಕೆ ಹೆಣ್ಣು ಅನೇಕ ಗೊಂದಲಗಳನ್ನು, ಒಗಟುಗಳನ್ನು, ಪ್ರಶ್ನೆಗಳನ್ನು ಸೃಷ್ಟಿಸಿ ಸವಾಲು ಹಾಕುತ್ತಾಳೆ. ಉತ್ತರ - ಪರಿಹಾರ ಕಾಣಲು ಕೇಂದ್ರ ಪಾತ್ರಕ್ಕೆ ಸಾಧ್ಯವಿಲ್ಲದಂತಾಗಿಬಿಡುವ ಅಂತ್ಯ ಸೃಷ್ಟಿಯಾಗಿಬಿಡುತ್ತದೆ, ಪಾಕ್ಸ್‌ಬ್ರಿಟಾನಿಕದಲ್ಲಿ ನಾವು ಅಂತ್ಯದಲ್ಲಿ ಕಾಣುವ ಸಾವು ನಿರೂಪಕನಿಗೆ ಪರಿಹಾರ ಆಗುವುದೇ ಇಲ್ಲ. ಅವನು ತನ್ನ ಭಾರವನ್ನು ಹೊರುತ್ತಲೇ ಸಾಗುತ್ತಾನೆ, ಉತ್ತರ-ಪರಿಹಾರ ಕಾಣಲಾಗದ ಸ್ಥಿತಿಯಲ್ಲಿ ದುತ್ತನೆ ಒಂದು ತೆರನಾದ ಸ್ತಬ್ಧತೆ [ಪಾಸ್] ಬರುತ್ತದೆ. ` ಸಸ್ಪೆಂಡಡ್ ಆನಿಮೇಷನ್' ಸ್ಥಿತಿಯಿಂದ ನಿರೂಪಕ ಬಿಡಿಸಿಕೊಳ್ಳುವುದು ಅಸಾಧ್ಯವಾಗಿಬಿಡುತ್ತದೆ.ಈ ಅಸಾಧ್ಯ ಪರಿಸ್ಥಿತಿಯನ್ನು ಸೃಷ್ಟಿಸುವುದೇ "ಹೆಣ್ಣು" . ಕತೆಗಳು ಇದಕ್ಕಿಂತಲೂ ಆಚೆ ಬೆಳೆಯಹೋಗದೆ ಇರುವ ಕಾರಣ ನಿರೂಪಕ ತನ್ನೆಲ್ಲ ಒಳಗಿನ ಭಾವನೆಗಳಿಗೆ ಅಭಿವ್ಯಕ್ತಿ ಕೊಡದೆ ಪ್ರಜ್ಞಾಪೂರ್ವಕವಾಗಿ ಅದುಮಿಬಿಡುವುದೇ ಆಗಿದೆ. ತನ್ನೊಳಗಿನ ಪರಮಸತ್ಯ, ಬಾಹ್ಯಸತ್ಯ ಆಗುವುದಿಲ್ಲ ಎಂಬ ಪ್ರಜ್ಞೆ ಇದೆ. ಇದರಿಂದಾಗಿ "ಹೆಣ್ಣು" ಕತೆಯಿಂದ ಕತೆಗಳಿಗೆ ಪ್ರವೇಶಿಸುತ್ತಳೆ ಇರುತ್ತಾಳೆ. ಮುಂದೊಂದು ದಿನ ಕಾದಂಬರಿ ರುಪದಲ್ಲೋ, ಕಿರುಕಾದಂಬರಿ ರೂಪದಲ್ಲೋ ನಿರೂಪಕ ಹೆಣ್ಣನ್ನು ಸಂಪೂರ್ಣವಾಗಿ ಸಾಧಿಸುವ, ಸಮಾಗಮಗೊಳ್ಳಬೇಕಾದ ಅಗತ್ಯವನ್ನು, ಸಂಭವಿಸುವ ಸಾಧ್ಯತೆಯ ಸೂಚನೆಯನ್ನು ಈ ಸಣ್ಣಕತೆಗಳೇ ಕೊಡುತ್ತವ.

ಸಣ್ಣಕತೆಗಳಲ್ಲಿ ಹೆಣ್ಣನ್ನು ಸಂಪೂರ್ಣವಾಗಿ ಸಂಧಿಸಲು ಸಾಧ್ಯವಾಗದೆ ಹೋಗಿದೆ ಎಂದು ಹೇಳಿರುವುದಕ್ಕೆ ಕಾರಣ - ಸುಳ್ಳು ಸುಳ್ಳೇ ಒಂದು ಕತೆ, ಇದರ ಕಥನಕ್ರಮವು ಬಹುಮುಖಿ ರೂಪವನ್ನು ಪಡೆಯುತ್ತ ಕೇಂದ್ರ ಪ್ರಜ್ಞೆ ಸಾಪೇಕ್ಷ ಸತ್ಯಗಳನ್ನು ಶೋಧಿಸುತ್ತ ಹೋಗುವ ಮತ್ತು ಪರಮ ಸತ್ಯವನ್ನು ಕಂಡೇ ಕಾಣುತ್ತೇನೆ ಎಂಬ ಬುದ್ಧಿ ಛಲವಿಲ್ಲ. ಬದುಕಿನ ಸರ್ವವ್ಯಾಪಿ ವಿಪರ್ಯಾಸಗಳನ್ನು. ದ್ವಂದ್ವಗಳನ್ನು ಸ್ವೀಕರಿಸುವ ಪ್ರೌಢಿಮೆಯನ್ನು, ಸಂಯಮವನ್ನು ತೋರಿಸುತ್ತದೆ. ತನ್ನ ಹಠಮಾರಿತನವನ್ನು ಬಿಟ್ಟುಕೊಟ್ಟು ಒಂದು ರೀತಿಯ ಆಂಬಿವಲೆಂಟ್ ಸ್ಥಿತಿಗೆ ಹೋಗುತ್ತದೆ.

ಪಾಶ್ಚಾತ್ಯ ದಾರ್ಶನಿಕನೊಬ್ಬ ಹೇಳುವ ಹಾಗೆ ನಾವು ಈ ಪ್ರಪಂಚದೊಳಗೆ ಹುಟ್ಟಿದ್ದೇವೆ. ಇಲ್ಲಿ ಸುಳ್ಳು , ವಿಪರ್ಯಾಸ. ದ್ವಂದ್ವಗಳು ಮೊದಲೇ ಇವೆ. ಇವುಗಳನ್ನು ಅರ್ಥ ಮಾಡಿಕೊಳ್ಳದೆ ನಿಜ ಗೋಚರಿಸುವುದಿಲ್ಲ.

ಸುಳ್ಳು ಸುಳ್ಳೇ ಒಂದು ಕಥೆಯಲ್ಲಿ ನಿರೂಪಕ ಒಂದು ವಸ್ತುನಿಷ್ಠವಾದ ಒಂದು ರೂಪವನ್ನು - ಚೌಕಟ್ಟನ್ನು ಹುಡುಕುವ ಯತ್ನದಲ್ಲಿ ಲೇಖಕನನ್ನು ಕತೆಗಾರನನ್ನು ಭೇಟಿಯಾಗತ್ತಾನೆ. ಅಲ್ಲಿಂದ ನಾವು ನೋಡುತ್ತಾ ಹೋಗುವುದೆಂದರೆ ವಿಕೃತವಲ್ಲದ ವಾಸ್ತವವನ್ನು ತೋರಿಸಲು ಯತ್ನಿಸುವ ನಿರಂತರ ಅನ್ವೇಷಣೆ. ಕಡೆಗೂ ಆ ರೂಪ ಚೌಕಟ್ಟು ಅಭಿವ್ಯಕ್ತಿ ದೊರಕುವುದಿಲ್ಲ. ಸಂವೇದನೆಗಳನ್ನು ಪ್ರಾಮಾಣಿಕವಾಗಿ ಅಭಿವ್ಯಕ್ತಿಸಲು ಸಾಧ್ಯವಾಗಿಲ್ಲ. ಇಲ್ಲಿ ನಿರೂಪಕನ ಪಾತ್ರ ಅಸ್ಪಷ್ಟವಾಗುಳಿಯುವುದಲ್ಲದೆ ಇತರ ಪಾತ್ರಗಳೂ ಗ್ರಹಿಕೆಗೆ ಎಟುಕದೆ ನುಣುಚಿಕೊಳ್ಳುತ್ತದೆ. `ನಾನು' ಕೂಡ ನಿಜ ಅಲ್ಲ ಎಂಬ ನಿರ್ಣಯದಲ್ಲಿ ಪ್ರಜ್ಞೆ ವಿಜಯವನ್ನು ಸಾಧಿಸಿ ತನ್ನನ್ನು ತಾನು ಮೀರಿ ಸಾಪೇಕ್ಷವಾಗಿ ಹೋರಗಿನ `ಸುಳ್ಳ'ನ್ನು ಕಂಡುಕೊಳ್ಳುವ ಪ್ರಯತ್ನವಿದೆ. ಈ ಪ್ರಯತ್ನದಲ್ಲಿ ` ಹೆಣ್ಣು' ಸಹ ಆಂಶಿಕವಾಗೆ ಉಳಿದು ಬಿಡುವುದರಿಂದ ಅವಳೂ ಸುಳ್ಳಾಗುತ್ತಾಳೆ. ಎರಡನೆ ಹಂತದ ಕತೆಗಳಲ್ಲಿ ವರ್ತುಲವೊಂದರಲ್ಲೇ ಗಸ್ತು ಹೊಡೆಯುತ್ತಿದ್ದ ಕತೆಗಳ ರೂಪ ಮತ್ತು ಕೇಂದ್ರ ಪ್ರಜ್ಞೆ ಎರಡೂ ಹೊಸ ಅನುಭವ ನೆಲೆಯನ್ನು ಕಂಡುಕೊಳ್ಳುತ್ತವ.

ಮೊದಲನೆ ಹಂತದ ಏಕಮುಖಿ ಧೋರಣೆಯಿಂದ - ಎರಡನೆ ಹಂತದ ಸಮನಾದ ಸಂಘರ್ಷಕ್ಕೆ ಬೆಳೆದು , ಮೂರನೆ ಹಂತದ ಕತೆಗಳಲ್ಲಿ ಬಹುಮುಖಿ ದೋರಣೆಗೆ - ಸತ್ಯಕ್ಕೆ ಕತಾಚೌಕಟ್ಟು ಚಾಚಿಕೊಳ್ಳುತ್ತದೆ- ವಿಸ್ತರಿಸಿಕೊಳ್ಳುತ್ತದೆ.. ಇದು ಕೇಂದ್ರ ಪ್ರಜ್ಞೆಯ ವಿಸ್ತಾರ ಕೂಡ ಆಗಿದೆ.

ಶೇಖರ್‌ಪೂರ್ಣ ತಮ್ಮ ಎಲ್ಲಾ ಹಳೆಯ ಕೌಶಲ್ಯದಿಂದಾಚೆಗೆ ಬಂದಿದ್ದಾರೆ. ಬೌದ್ಧಿ ಕ ಹಾಗೂ ಭಾವನಾ ಜಗತ್ತಿನಲ್ಲಿ ಸಮನಾಗಿ ಮುನ್ನಡೆಯುವ ನಿರ್ಣಯ ಮಾಡಿದ್ದಾರೆ. ಸೃಜನಶೀಲವಾಗಿ ಗಣನೀಯವಾದ ರೀತಿಯಲ್ಲಿ ಬೆಳೆದಿದ್ದಾರೆ. ಹಳೆಯ ಕತಾಸ್ವರೂಪದ ಬಗೆಗೆ ಅಸಮಧಾನ ಹೊಂದಿರುವುದೇ- ಅನುಭವ ಜನ್ಯವಾದ ವರ್ತುಲದಿಂದಾಚೆಗೆ, ಒಂದೇ ಕಡೆ ಸುತ್ತು ಹೊಡೆಯದೆ ಹೊಸ ಅನುಭವಗಳನ್ನು ಅರ್ಥಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಕತೆ ನವ್ಯಾಧುನಿಕವಾದ [ಪೋಸ್ಟ್‌ಮಾಡರ್ನಿಸಂ] ದೃಷ್ಟಿಕೋನವನ್ನು ಅತ್ಯಂತ ಸಮರ್ಥವಾಗಿ ನೀಡುತ್ತದೆ ಎಂಬುದನ್ನು ಗಮನಿಸಲೇಬೇಕು. ಗಂಡು ಹೆಣ್ಣಿನ ಮುಖಾಮುಖಿ ಈವರೆಗೂ ತಿಳಿಯದ ಕ್ಷೇತ್ರಗಳಿಗೆ ಪ್ರವೇಶಿಸಲಿದೆ ಎಂಬ ಸೂಚನೆ ಕಂಡು ಬರುತ್ತದೆ. ಈಗಾಗಲೆ ಈ ಕತೆಯಲ್ಲಿ ಸಾಧಿಸಲಾಗಿರುವ ವರ್ತುಲದಿಂದಾಚೆಗಿನ ಮುಕ್ತ ರೂಪ, ಮುಕ್ತ ನೋಟವನ್ನು ಸ್ಥಾಪಿಸಿದೆ. ಅಂದರೆ ` `ಮುಕ್ತ' ನೋಟ ಮತ್ತು ಅನುಭವ ಒಂದಕ್ಕೊಂದು ಹೆಣೆದುಕೊಂಡಿರುವುದರಿಂದ ಇದು ಸಾಧ್ಯವಾಗಿದೆ. ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾದಂಬರಿ ರೂಪದಲ್ಲಿ ಗಟ್ಟಿಯಾಗುವುದನ್ನು ನಾನು ಎದುರು ನೋಡುತ್ತಿದ್ದೇನೆ.

ಮುನ್ನುಡಿಯನ್ನು ನಾನು ಸ್ಥೂಲವಾಗಿ ವಿಸ್ತಾರವಾದ ತಾತ್ವಿಕ ನೆಲೆಯಲ್ಲೇ ಬರೆದಿದ್ದೇನೆ. ಗಂಭಿರವಾಗಿ ವಿವೇಚನೆಯಿಂದ ಓದುವ ಓದುಗರ ಪರವಾಗಿ ಎಲ್ಲ ಸೂಕ್ಷ್ಮಾರ್ಥಗಳನ್ನು ನಿರ್ಣಯಿಸುವ ಅಹಂಕಾರದಿಂದ ಕತೆಗಳ ವಿವರಗಳನ್ನು ವಿಶ್ಲೇಷಿಸಲು ಹೋಗಿಲ್ಲ. ಹೋಗಬಾರದೆಂಬುದೆ ನನ್ನ ಶ್ರದ್ಧೆ- ನಂಬಿಕೆ. ಈ ಮುನ್ನುಡಿಯನ್ನು ತಾತ್ವಿಕ ನೆಲೆಯನ್ನು ಕೂಡ ಕತೆಯ ಸಂದರ್ಭದಲ್ಲಿ ಓದುಗರೆ ಇಟ್ಟು ನೋಡಬೇಕು. ಈ ಮುನ್ನುಡಿಯ ಮೌಲ್ಯ ಓದುಗ ಮತ್ತು ಕತೆಗಳ ನಡುವಿನ ಸಂಬಂಧದಲ್ಲಿ ನಿರ್ಧಾರಿತವಾಗಬೇಕಿದೆ. ಮುನ್ನುಡಿ ತನ್ನ ಮೌಲ್ಯವನ್ನು ತಾನೆ ನಿರ್ಧರಿಸಿಕೊಳ್ಳಬಾರದು.- ಪ್ರಶ್ನೆಗಳಿಗೆ , ಜಿಜ್ಞಾಸೆಗೆ ಮುಕ್ತವಾಗುಳಿಯಬೇಕು. ಈ ಮೂಲಕವೆ ಮುನ್ನುಡಿ ಪ್ರಾಮಾಣಿಕವಾಗುಳಿಯಬಲ್ಲದು. ವಿವರವಾದ ಚರ್ಚೆ ಈ ಮುಕ್ತತೆಯನ್ನು ನಾಶ ಮಾಡಿಬಿಡಬಲ್ಲದು- ವಿವರವಾದ ಚರ್ಚೆಯನ್ನು ಏನಿದ್ದರೂ, ಸಾಹಿತ್ಯವನ್ನು ಗಂಭೀರವಾಗಿ ಭಾವಿಸಿರುವ ವಿದ್ವಾಂಸರು, ವಿಮರ್ಶಕರಿಗೆ ಬಿಟ್ಟುಬಿಡುತ್ತೇನೆ. ಈ ಮುನ್ನುಡಿಯ ಚೌಕಟ್ಟಿನಲ್ಲಿ ವಿಮರ್ಶಾತ್ಮಕವಾದ ನೆಲೆಯಲ್ಲಿ ಪ್ರಯೋಗವನ್ನು ಮಾಡದೆ ಇರುವುದೇ ಸರಿ ಎಂಬುದೇ ನನ್ನ ನಂಬಿಕೆ.

-ಮನುಚಕ್ರವರ್ತಿ

ಸಣ್ಣಕತೆ-ಸುಗೀತ

ಸುಗೀತ-
ಜೀವನದ ಗತದಲ್ಲೇ ಹೂತು ಹೋಗಿ ಗತಕ್ಕೆ ಮಾತ್ರ ಸೀಮಿತವಾದ ಹಲವಾರು ಸಂಬಂಧಗಳು ನೆನಪಿನ ಮೂಲಕ ಪ್ರಾಮುಖ್ಯ ಪಡೆದುಕೊಂಡು ಪ್ರಾಧಾನ್ಯ ಸ್ಥಾಪಿಸಿಕೊಳ್ಳುವ ಸಂದರ್ಭಗಳು ಅನೇಕ. ಅವುಗಳು ಪ್ರಸಕ್ತಕ್ಕೆ ಜೀವವಿಲ್ಲದ ಎಲುಬುಗೂಡಿನಂತೆ. ಶ್ರಾದ್ಧದಂತೆ, ಅಷ್ಟೆ. ಮುರ್‍ನಾಲ್ಕು ವರ್ಷಗಳ ಹಿಂದೆ ಅಂತ್ಯಗೊಂಡ ನನ್ನ ಹಾಗೂ ಅವಳ ಸಂಬಂಧ ಈಗ ಪುನಃ ನನ್ನತ್ತೆ [ ನನಗಿಂತ ಎರಡು ವರ್ಷ ದೊಡ್ಡವಳಷ್ಟೆ.] ಸತ್ಯಭಾಮಳ ಸಮಕ್ಷಮದಲ್ಲೇ ಪುನರ್ನವೀಕರಣ ಹೊಂದಬಹುದು - ಹೊಂದದೇ ಹೋಗಲೂ ಬಹುದು. ಈ ಸಂದರ್ಭ ಬಹುಶಃ ಮಾತುಕತೆಗೆ ಆಸ್ಪದವಿಲ್ಲದ ನೋಟಗಳಿಗೆ ಮಾತ್ರ ಕಟ್ಟುಬಿದ್ದ ಮೂಕ ಭೇಟಿಗಾಗಿ ನಾನು ಕಾಯುತ್ತಿದ್ದೆನೋ ಇಲ್ಲವೋ ತಿಳಿಯದು. ಕಾಯುತ್ತಿದ್ದೆ-ಕಾಯುತ್ತಿರಲಿಲ್ಲ.ಎರಡೂ ಇರಬಹುದು. ದೀರ್ಘ ಕಾಲದನಂತರ ಭೇಟಿಯಾಗುತ್ತಿನೇದ್ದರಿಂದ ಹಿಂದೆ ಆ ಸಂಬಂಧಕ್ಕಿದ್ದ ಮೌಲ್ಯ ಈಗ ಮಸುಕು ಮಸಕಾದ್ದರಿಂದ ಪ್ರಾಮಖ್ಯತೆಯೋ ಪ್ರಾಧಾನ್ಯತೆಯೋ ತೀರಾ ಕಮ್ಮಿಯಾದರೂ ಈಗ ಅವಳು ಹೇಗೆಲ್ಲಾ ಇರಬಹುದೆಂಬ ಕಲ್ಪನೆ ಮನಸ್ಸಿನ ತುಂಬಾ ಹರಡಿಕೊಳ್ಳಲು ಯತ್ನಿಸುತ್ತಿತ್ತು. ಸತ್ಯಭಾಮ ಮದುವೆಯಾದ ಹೊಸದರಲ್ಲಿ, ಅವಳು ಈಗ ಸಿಟಿಯ ಯಾವುದೋ ಒಂದು ಶಾಲೆಯಲ್ಲಿ ಟೀಚರಳಾಗಿದ್ದಾಳೆಂದು ತಿಳಿದು ಮಕ್ಕಳಿಗೆ ಅವಳು ಏನು ಪಾಠ ಹೇಳಿಕೊಟ್ಟಾಳೆಂದುಕೊಂಡಿದ್ದೆ. ಕುರಿ ಮಂದೆ ತುಂಬಿದಂತೆ ಜನಗಳನ್ನು ತುಂಬಿ ವೇಗವಾಗಿ ಹೋಗುತ್ತಿದ್ದ ಬಸ್ಸಿನಲ್ಲಿ ಕುಳಿತುಕೊಳ್ಳಲು ಜಾಗವೂ ಇಲ್ಲದೆ ಪ್ರಯಾಸ ಪಡುತ್ತಿದ್ದ ಈ ಸಮಯದಲ್ಲೂ ಅವಳ ಬಗೆಗಿನ ನೆನಪುಗಳು ಗತದ ಸಂಗತಿಗಳೊಡನೆ ಸಹಜವಾಗಿಯೆ ಬೆಸೆದುಕೊಂಡಿದ್ದು ನನಗೆ ಆಶ್ಚರ್ಯವಾಗಿತ್ತು.ನನಗೆ ಕೇವಲ ನಿರಾಶೆಯನ್ನುಳಿಸಿ ಮೌನವಾಗಿ ನನ್ನನ್ನುಪೇಕ್ಷಿಸಿ ಅವಳು ದೂರವಾಗುವುದಕ್ಕಿಂತ ಮುನ್ನ ನನ್ನ ಅವಳ ನಡುವೆ ನಡೆದಿದ್ದ ಮಾತುಕತೆಗಳು, ಸಂಗತಿಗಳು, ಒಡನಾಟಗಳು ಇವುಗಳೆಲ್ಲದರ ನೆನಪು ಪ್ರಾಮುಖ್ಯತೆ ಪಡೆದುಕೊಳ್ಳಲಾರಂಭಿಸಿದಾಗ ನಾನು ಕಿಟಕಿ ಕಂಬಿಗಳಿಗೆ ತಲೆಯಾನಿಸಿ ಕಣ್ಣು ಮುಚ್ಚಿದ್ದೆ...
ಆ ನೆನಪುಗಳು ಮನಸ್ಸಿನಲ್ಲಿ ಮತ್ತೆ ಮತ್ತೆ ಹಾದುಹೋದನಂತರ - ಬಸ್ಸಿನಲ್ಲಿ ಕುಳಿತುಕೊಳ್ಳಲಾಗದ ತಳಮಳ. ಕಿಟಕಿ ಹೊರಗಿನ ದೃಶ್ಯಗಳನ್ನು, ಜನರ ಇರುವಿಕೆಯನ್ನು, ಬಸ್ಸಿನ ವೇಗವನ್ನು- ಏನನ್ನೂ ಅನುಭವಕ್ಕೆ ತಂದುಕೊಳ್ಳಲಾಗದಷ್ಟು ಚಡಪಡಿಕೆ. ಹೀಗೆ ಅವಳ ನೆನಪು, ಏನನ್ನೂ ನನ್ನ ಮೆದುಳು ಗ್ರಹಿಸಲಾರದಷ್ಟರಮಟ್ಟಿಗೆ ಭಾವುಕನನ್ನಾಗಿಸಿತ್ತು. ಹಾಗೆಂದು ಬರಿಯ ನೋವನ್ನೆ ಮಿಗಿಸಿದ ಅವಳ ಬಗೆಗಿನ ನೆನಪುಗಳು ಅಹ್ಲಾದಕರವಾಗೇನು ಇರಲಿಲ್ಲ. ಆದರೆ ಭಾರತೀಯ ಪ್ರೇಮವನ್ನು ಭಾವುಕತೆಯ ರೂಪವೆಂಬ ವ್ಯಾಖ್ಯಾನವನ್ನು ನಾನು ಒಪ್ಪಿದರೂ ಸಂಬಂಧಗಳಲ್ಲಿ ಪರಸ್ಪರ ಆರ್ದ್ರವತೆಯ , ವಾಸ್ತವ ಪ್ರಜ್ಞೆಯ ಅವಶ್ಯಕತೆಯನ್ನು ಗುರುತಿಸದೆ ದುಡುಕಿದಾಗ ಇಬ್ಬರಿಗೂ ಆ ಸಂದರ್ಭದಲ್ಲಿ ಉಳಿಯುವುದು ದುರಂತಭರಿತವಾದ ನೆನಪುಗಳಷ್ಟೆ ಎಂಬುದನ್ನೂ ಸಹ ಅರಿತಿದ್ದೆ. ಅವಳು ನನ್ನಿಂದ ದೂರಾದುದನ್ನೇನಾದರು ಮಹಾದುರಂತವೆಂದು ಪರಿಗಣಿಸಿದ್ದಿದ್ದರೆ ದೇವದಾಸನಾಗಿರುತ್ತಿದ್ದೆನೋ ಏನೋ [ ಸ್ವಲ್ಪ ದಿನ ಹಾಗೂ ಇದ್ದೆನೆನ್ನಿ, ಕುಡಿದಿರಲಿಲ್ಲವಾದರೂ ಅವಳ ವಿಮುಖತೆಯಿಂದಾದ ನಷ್ಟ ತುಂಬಲು ಬೇರಾರೂ ಇಲ್ಲದೆ ಕೊಂಚ ದಿನ ಜಿಗುಪ್ಸೆಯಿಂದಿದ್ದೆ.] ರಾಮಕೃಷ್ಣ, ರಮಣ, ಅರವಿಂದ, ಗಾಂಧೀಜಿ, ರಸಲ್, ಜೆ.ಕೃಷ್ಣಮೂರ್ತಿ, ಇತ್ತೀಚಿನ ವಿ.ಎಸ್.ನೈಪಾಲ್, ಆರ್.ಡಿ. ಲೈಂಗ್‌ರವರ ಪುಸ್ತಗಳ ಆಳವಾದ ಅಭ್ಯಾಸ ಜೀವನದ ಬೇರೊಂದು ಅಜ್ಞಾತ ಕ್ಷಿತಿಜಕ್ಕೆ ದಾರಿ ತೆಗೆದಿತ್ತಲ್ಲದೆ ಏಳುನೂರು ರೂಗಳ ಪಗಾರದ ಉದ್ಯೋಗವನ್ನೂ ದೊರಕಿಸಿಕೊಟ್ಟು ಜೀವನ ಮಾರ್ಗವನ್ನೂ ಕಲ್ಪಿಸಿಕೊಟ್ಟಿತ್ತು! ಗಂಭೀರವಾದ ವ್ಯಾಸಂಗದ ಮಧ್ಯೆ ಅವಳ ನೆನಪಿನ "ದೇವದಾಸ"ನಾಗಿರದೆ ಅಥವ ಅದರ ವಿರುದ್ಧವಾದ ಯಿಂದ ಸಂಪೂರ್ಣವಾಗಿ ಅವಳನ್ನು ಮರೆತಿದ್ದೆನೆಂದೂ ಹೇಳಲುಬಾರದು.

ನನ್ನ ಹಾಗು ಗೀತಳ ಪರಿಚಯಕ್ಕೆ ಮೂಲ ಕಾರಣಳಾಗಿದ್ದ ನನ್ನತ್ತೆ ಸತ್ಯಳು ನಮ್ಮ ಮನೆಗೆ ಬಂದಾಗಲೆಲ್ಲ ಗೀತಳ ಬಗೆಗೆ ಏನಾದರೂ ಮಾತು ಬಂದು ನನ್ನ ಹಾಗು ಅವಳ ಸಂಬಂಧವನ್ನು ವಿಶ್ಲೇಷುಸುತ್ತಿದ್ದೆವು. ಶಾಲೆಗೆ ಹೊಗಿ ಏನು ಕಲಿಯದಿದ್ದ ನಾನು ಅವಳಿಂದ ಆಕರ್ಷಿತನಾದ ಕಾರಣಗಳೆಂದರೆ : ಅವಳು ಕಾಲೇಜಿಗೆ ಹೋಗಿ ಶಿಕ್ಷಣ ಪಡೆಯುತ್ತಿದ್ದಳೆಂಬುದು, "ಸುಗೀತ" ಆ ಹೆಸರಿನಲ್ಲಿನ ವಿಶೇಷ ಧ್ವನಿಯನ್ನು ಎರಡನೆಯ ಕಾರಣವಾಗಿ ಸೇರಿಸಿ, ಮೂರನೆಯದಕ್ಕೆ ಬಂದರೆ ಅವಳ ಕಪ್ಪು ಮುಖದಲ್ಲಿ ಹೊಳೆಯುತ್ತಿದ್ದ ಕಪ್ಪುಕಣ್ಣುಗಳ ಬಗೆಗೆ ಮೆಚ್ಚುತ್ತಾ ಸಣ್ಣದಾಗಿ ಭಾಷಣ ಮಾಡಬೇಕಾಗುತ್ತದೆ.ಅವಳ ನಡೆ ಉಡೆ ಹಠಮಾರಿತನದ ಹಿಂದಿನ ಮುಗ್ಧತೆ ಹೀಗೆಯೇ ಪಟ್ಟಿ ಬೆಳೆಯಬಹುದು. ಒಮ್ಮೆ ಮೆಚ್ಚಿಕೊಂಡರೆ ಮುಗಿಯಿತು, ಮೆಚ್ಚಿಕೊಂಡ ವ್ಯಕ್ತಿಯ ಕಾಲಿನಿಂದ ಹಿಡಿದು ಶಿರದವರೆಗೂ " "ಕುಮಾರಸಂಭವದ ಕಾಳಿದಾಸ"ನಾಗಿಬಿಡುತ್ತೇವೆ...[ ಹೆದರಬೇಡಿ ]ಎಷ್ಟೇ ಓದಿದರೂ ಎಷ್ಟೇ ತಿಳಿದುಕೊಂಡಿದ್ದರೂ ನನ್ನ ಭಾವುಕ ಜೀವನದ ಗಾಢ ಅನುಭವಗಳ ತೀವ್ರತೆ ಗಾಢತೆಗೆಳಿಂದ ನಾನಿನ್ನೂ ಕಳಚಿಕೊಳ್ಳಲಾಗದಿರುವುದಕ್ಕೆ ಇತ್ತೀಚೆಗೆ ಮನಸ್ಸಿನಲ್ಲೇ ನಾಚಿಕೆಪಡುವಂತಾಗಿದ್ದೇನೆ...


"ವರತೊರೆ"
ಕಂಡಕ್ಟರ್ ಜೋರು ಧ್ವನಿಯ ಕೂಗಿಗೆ ಎಚ್ಚೆತ್ತು ನಾನು ಕಿಟಕಿಯಿಂದಾಚೆ ದೃಷ್ಟಿ ಹಾಯಿಸಿದೆ. ಸತ್ಯ ತನ್ನ ಗಂಡನೊಂದಿಗೆ ಖಾಲಿ ಗದ್ದೆಯಿಂದ ಬಸ್ಸಿನ ಕಡೆಗೆ ನಡೆದುಕೊಂಡು ಬರುತ್ತಿದ್ದುದು ಗಮನಕ್ಕೆ ಬರುತ್ತಿದ್ದಂತೆ ಯಾರ್ರೀ ವರತೊರೆ ಬೇಗ ಇಳೀರಿ..ಎಂಬ ಕಂಡಕ್ಟರನ ಕೂಗಿಗೆ ಬೆಚ್ಚಿ ಬಿದ್ದು ಲಗುಬಗೆಯಿಂದ ಇಳಿದಾಗ ಬಸ್ಸು ಮುಂದಕ್ಕೆ ಹೋಯಿತು. ನನ್ನನ್ನು ಸಮೀಪಿಸಿದ ಸತ್ಯ ಹಾಗು ಆಕೆಯ ಗಂಡನನ್ನು ನೋಡಿ ಮುಗುಳ್ನಕ್ಕೆ. ಸತ್ಯಳು ನಗುತ್ತಾ " ನಾವು ನಿನ್ನೆ ಊರಿಗೆ ಬಂದ ತಕ್ಷಣ ನಿಮ್ಮಮ್ಮನ್ನ ಕೇಳ್ದಾಗ ನೀನು ಇವತ್ತು ಬರ್‍ತೀಯ ಅಂದರು.ನಾನು ನಂಬಿರಲಿಲ್ಲ.ಅಂತೂ ಬಂದೆಯಲ್ಲ..." ಎಂದು ಛೇಡಿಸುವ ಧ್ವನಿಯಲ್ಲಿ ಹೇಳಿ ತನ್ನ ಯಜಮಾನರ ಕಡೆಗೆ ತಿರುಗಿ "ಇವ್ನೆ ಚಂದ್ರು , ನಮ್ಮಣ್ಣನ ಮಗ" ಎಂದು ಚುಟುಕಿನಲ್ಲಿ ಪರಿಚಯಿಸಿ [ ಆಕೆ ಯಜಮಾನರನ್ನು ಒಮ್ಮೆ ಮಾತ್ರ ಮದುವೆ ಗಡಿಬಿಡಿಯಲ್ಲಿ ನೋಡಿದ್ದೆನಷ್ಟೆ], ಪುನಃ ನನ್ನ ಕಡೆ ತಿರುಗಿ "ಇವ್ರು ವಾಕಿಂಗ್ ಹೊರಟಿದ್ದರು, ನಾನು ಇವರ ಜೊತೇಲಿ ಬಂದು ಜಮೀನೆಲ್ಲ ತೋರ್‍ಸಿ, ನೀನು ಬರ್‍ತೀಯೇನೊ ನೋಡೋಣ ಅಂತ ಬಸ್ಸಿನ್ ಕಡೆ ಬಂದ್ವಿ..ಬರೋವಾಗ ದಾರೀಲೆಲ್ಲಾ ನಿನ್ ಬಗ್ಗೆ ಸುಗೀತನ್ ಬಗ್ಗೇನೆ ಮಾತು.." ಅವಳ ವಾಚಾಳಿತನ ಮದುವೆಯಾಗಿ ಗಂಡನ ಮನೆಗೆ ಹೋಗಿ ವರ್ಷವಾದರೂ ಹೋಗಿರಲಿಲ್ಲ. ಅಲ್ಲೇ ಇನ್ನೆಲ್ಲಿ ಮಾತನಾಡ್ತ ನಿಂತುಬಿಡ್ತಾಳೊ ಎಂದು ಹೆದರುತ್ತಿದ್ದ ಅವಳ ಯಜಮಾನರು ನಡೀರಿ ಬೇಗ ಹೋಗಿ ಕತ್ಲಾಗೋಕ್ಮುಂಚೇನೆ ಊರು ಸೇರ್‍ಕೊಳ್ಳೋಣ. ಮೂರು ಮೈಲಿ ನಡೆಯೋಷ್ಟೊತ್ತಿಗೆ...ಎಂದರು. ಕಳ್ಳಿ ಪಾಪಾಸುಗಳ ಇಕ್ಕೆಲದ ಬೆಣಚು ಕಲ್ಲಿನ ಹಾದಿಯನ್ನು ಹಿಡಿದು ಸವೆಸುತ್ತಾ ನಡೆಯುತ್ತಿದ್ದಂತೆ ನಾನು ಸತ್ಯಳ ಕಡೆಗೆ ನೋಡಿ " ನಾನು ಗಣೇಶನ ಪೂಜೆಗೋ ಅನಂತನ ವ್ರತಕ್ಕೋ ಬರ್‍ಲಿಲ್ಲ. ಅಪರೂಪಕ್ಕೆ ಎಲ್ಲಾ ಒಂದು ಕಡೆ ಸೇರಿರ್‌ತಾರೆ, ನೋಡಿದ್ ಹಾಗಾಗುತ್ತೇಂತ ಬಂದೆ.." ಎಂದೆ. " ನೀನು ಯಾಕೆ ಬಂದಿದ್ದೀಯಾಂತ ನನಗ್ಗೊತ್ತು ಕಣೊ, ಇರ್‍ಲಿ ಬಾ.." ಎಂದಳು ನಗುತ್ತ. ನಾನು ಬಾವಾಜಿ ಎದುರಿಗೆ ಬೇರೆ ಮಾತೆಲ್ಲಾ ಯಾಕೆ ಅಂತ ಮೌನಿಯಾದೆ. ಅರ್ಧ ಹಾದಿ ನಾನು ಬಾವಾಜಿ ನನ್ನ ಉದ್ಯೋಗ , ಪ್ರಸಕ್ತ ರಾಜಕೀಯ ಪಕ್ಷಗಳಲ್ಲಿನ ಕಸರತ್ತು ಇತ್ಯಾದಿಗಳನ್ನು ಚರ್ಚಿಸುತ್ತಿದ್ದಂತೆ ಮಾರಿಹಳ್ಳ ಬಂದಿತ್ತು. ಹಳ್ಳಿ ಹಾದಿ ಅಭ್ಯಾಸವಿಲ್ಲದ ಅವರಿಗೆ ಸುಸ್ತಾಯ್ತೇನೊ, ಸ್ವಲ್ಪ ಹೊತ್ತು ಕೂತ್ಕೊಂಡು ಹೋಗೋಣ ಎಂದವರೆ ಹಾದಿ ಬದಿಯ ದೊಡ್ಡ ಹೆಬ್ಬಂಡೆಯ ಮೇಲೆ ಕುಳಿತರು. ದಾರಿಯುದ್ದಕ್ಕೂ ನಮ್ಮ ಮಾತುಗಳನ್ನು ಕೇಳುತ್ತಾ ಬರುತ್ತಿದ್ದ ಸತ್ಯ ಅವರ ಪಕ್ಕದಲ್ಲೇ ಕುಳಿತಾಗ ನಾನು ಅವರ ಎದುರಿಗೆ ಸಣ್ಣ ಬಂಡೆಯೊಂದರ ಮೇಲೆ ಕುಳಿತು ಸಿಗರೇಟೊಂದನ್ನು ಹಚ್ಚಿ ಬಾವಾಜಿಯವರಿಗೊಂದು ಕೊಟ್ಟೆ. ಎರಡು ನಿಮಿಷ ಮೌನದನಂತರ ನಾನು ಸುಮ್ಮನಿರಲಾಗದೆ, ಕುತೂಹಲ ತಡೆಯಲಾಗದೆ ಸತ್ಯಳನ್ನು ಕುರಿತು ಏನು ನಿನ್ನ ಸ್ನೇಹಿತೆ ಉರಲ್ಲಿದ್ದಾಳೆಯೆ?- ಪ್ರಶ್ನಿಸಿದ್ದೆ. ಹೂಂ, ಬೆಳಿಗ್ಗೆ ನಾನೂ ಅವಳೂನು ಸೀನೀರಿಗೆ ಹೋಗಿದ್ವಿ.ಅಲ್ಲೂನು ನಿನ್ ಬಗ್ಗೇನೆ ಮಾತು.ಚಂದ್ರೂ ನಿಮ್ ಮನೆಗೆ ಇತ್ತೀಚೆಗೆ ಬಂದಿಲ್ಲಾಂತ ಕಾಣುತ್ತೆ ಅಂತ ನನ್ನನ್ನೇ ಕೇಳ್ತಾಳೆ, ಕತ್ತೆ. ನಾನು ಮದುವೆ ಮಾಡ್ಕೊಂಡು ಹೋದ್ ಮೇಲೆ ನನ್ನ ತವರು ಮನೆ ಮೇಲೆ ಅವಳಿಗೆಷ್ಟೊಂದು ಅಕ್ಕರೆ ಎಂದಳು ನಗುತ್ತ. ನನ್ನ ಅಂತರ್ಮುಖತೆಯನ್ನು ಗಮನಿಸಿಯೋ ಏನೊ ಕತ್ತಲಾಗುತ್ತ ಬಂತು ನಡೀರಿ ಹೋಗೋಣ ಎಂದರು ಬಾವಾಜಿ. ಉಳಿದ ಹಾದಿಯಲ್ಲಿ, ಆ ಮಾರ್ಗದಲ್ಲಿ ನಡೆಯುತ್ತಿದ್ದ ಭಯಂಕರ ಕೃತ್ಯಗಳು, ಅವುಗಳ ಬಗ್ಗೆ ಕೇಳಿದ್ದ ಅನುಭವಗಳ ವರದಿಗಳು, ಬೃಹದಾಕಾರದ ಹುಣಸೇಮರಗಳ ಸಾಲು, ಜಯಮಂಗಲಿ ನದಿ ದಂಡೆಗಳ ಸಾಲು, ಹಾಳು ಭಾವಿ, ದಯ್ಯದ ತೋಟದ ವದಂತಿಗಳು ಹೀಗೆ ಚರ್ಚಿಸುತ್ತಾ ಸವೆಸಿ ಮನೆ ತಲುಪುವ ವೇಳೆಗೆ ಸತ್ಯಳು ಹೆದರಿಕೆಯಿಂದ ನಡುಗುತ್ತಿದ್ದಳು. " ಅಮಾವಾಸ್ಯೆ ರಾತ್ರಿ ನಿಮಗೆ ಗಂಡಸರಿಗೆ ಮಾತಾಡೋಕ್ಕೆ ಬೇರೇನೂ ಸಿಗಲಿಲ್ವೇನೊ..." ಎಂದು ಒಳ ಓಡಿದಳು. ವಾಸ್ತವವಾಗಿ ನಾನು ಬಾವಾಜಿಗೆ ಆ ವಿವರಗಳನ್ನೆಲ್ಲ ಹೇಳೋಕ್ಕೆ ಹೆಚ್ಚಿನ ಗ್ರಾಸ ಒದಗಿಸಿದವಳೆ ಅವಳು.

ಮನೆ ಮುಂದೆ ಚಪ್ಪರ ಎದ್ದಿತ್ತು. ಒಳ ಹೊಕ್ಕಾಗ ಹಜಾರದ ನಡುವಿನಲ್ಲಿ ತರಕಾರಿ ಸುರುವಿಕೊಂಡು ಹೆಚ್ಚುತ್ತಾ ಕುಳಿತಿದ್ದ ಗುಂಪಿನಲ್ಲಿ ಅಜ್ಜಿ, ನಮ್ಮಮ್ಮ, ಅಂಪೂ ಅತ್ತಿಗೆ , ಆ ಊರಿನ ಹೆಂಗಸರಲ್ಲಿ ಯಾರ್‍ಯಾರೊ [ಅದರಲ್ಲಿ ಸುಗೀತನ ತಾಯಿಯನ್ನು ನೋಡಿದಂತಿದೆ ] ಇದ್ದರು. ಅಜ್ಜಿ ನನ್ನನ್ನು ನೋಡಿ " ಬಾರೊ ಗಂಡು, ಬಂದ್ಯಲ್ಲ ಇಲ್ಲಿ ನಗಿಸೋಕ್ಕೆ ಯಾರೂ ಇರಲಿಲ್ಲ. ಏನೂ ಕೆಲ್ಸ ಮಾಡೋಕ್ ತೋಚ್ತಾ ಇಲ್ಲ.." ಎಂದು ತಮಾಶೆ ಮಾಡಿದರು. ಕೂತಿದ್ದವರನ್ನೆಲ್ಲ ಮಾತನಾಡಿಸಿ ಹಿಂದೆ ಹೊಸದಾಗಿ ಕಟ್ಟಿದ್ದ ರೂಮಿಗೆ ಹೋಗಿ ಪ್ಯಾಂಟು ಕಳಚಿ ಪಂಚೆಯುಟ್ಟು ಬಚ್ಚಲಿಗೆ ಹೋಗಿ ಕೈಕಾಲು ತೊಳೆದು ಮತ್ತೆ ಆ ಗುಂಪನ್ನು ಸೇರಿ ಹರಟೆ ಹೊಡೆಯುತ್ತ ಒಂಭತ್ತು ಮೈಲಿ ನೂಕು ನುಗ್ಗಲಿನ ನಡುವಿನ ಬಸ್ ಪ್ರಯಾಣ, ಮೂರು ಮೈಲಿ ಕಾಲ್ನಡಿಗೆಯ ಪ್ರಯಾಸವನ್ನು ಮರೆಯುತ್ತಾ ಮನಸ್ಸಿನಲ್ಲಿ ಎರಡೂ ವ್ರತಗಳಿಗೆ ಸೇರಿದ್ದ ಜನರ ಲೆಕ್ಕ ಮಾಡಿ ಸುಮಾರು ಅರವತ್ತು ಜನ ಎಂದು ಅಂದಾಜನ್ನು ತಲುಪಿ ಎರಡು ವ್ರತಗಳ ಸಂತರ್ಪಣೆ ಸಾವಿರದೈನೂರ್ ರೂಪಾಯ್ ತಲುಪಿರಲಾರದೆ? ದಂಗಾಗಿ ಅಲ್ಲಿಂದ ಎದ್ದು ಪಡಸಾಲೆಗೆ ಬಂದೆ, ಅಲ್ಲಾಗಲೆ ಸಂಜೆಯೂಟ ಮುಗಿದಿತ್ತು. ಗಂಡಸರೆಲ್ಲ ಗುಂಪು ಸೇರಿ ಜಗುಲಿ ಮೇಲೆ ಕುಳಿತು ಎಲೆಯಡಿಕೆ ಮೆಲ್ಲುತ್ತಾ ಬೀಡಿ ಕಚ್ಚಿ ಹರಟೆಗೆ ತೊಡಗಿದ್ದರು, ನಾನು ಎಲ್ಲರನ್ನು ಸಣ್ಣದಾಗಿ ಮಾತನಾಡಿಸಿ ಬಾವಾಜಿ ಇಲ್ಲದುದನ್ನು ಗಮನಿಸಿ ಆಚೆ ಬಂದೆ. ಚಪ್ಪರದ ಎದುರಿನ ಒಂದು ಮೂಲೆಯಲ್ಲಿ ಹಾಕಿದ್ದ ಮರದ ದಿಮ್ಮಿಗಳ ಮೇಲೆ ಕುಳಿತು ಸಿಗರೇಟು ಸೇದುತ್ತಿದ್ದರು. ನನ್ನನ್ನು ನೋಡಿ ನನಗೊಂದನ್ನು ಕೊಟ್ಟು ಹೊಟ್ಟೆ ಹಸೀತಿದೆ ಮಾರಾಯ, ಕೇಳಿದರೆ ಲೇಟಾಗುತ್ತದಂತೆ. ಬಾ ಉಡುಪನ ಹೋಟ್ಲಿದೆಯಂತಲ್ಲ, ಕಾಫಿಯನ್ನಾದರು ಕುಡಿದು ಬರುವ ಎಂದರು. ಹೊರಟೆವು. ನಮ್ಮ ಪಕ್ಕದ್ಮನೆಯನ್ನೇ ನಾನು ನೊಡ್ತಿದ್ದನ್ನು ಗಮನಿಸಿ ಬಾವಾಜಿ ಏನು ನಿಮ್ಮ ಗೀತನ್ಮನೆ ನೋಡ್ತ ಇದ್ದೀಯ? ಎಷ್ಟು ಮಾಡರ್ನ್ ಆಗಿದೆ ನೋಡು. ಹೊಸದಾಗೆ ರಿಪೇರಿ ಮಾಡ್ಸಿದ್ದಂತೆ, ಅವರಪ್ಪನೆ ಹೇಳೀದರು ಎಂದರು. ನಿಮ್ಮ ಗೀತನ್ಮನೆ ಎಂದಾಗ `ನಿಮ್ಮ' ಅನ್ನೋ ಪದ ಯಾಕೋ ಹಿಡಿಸಲಿಲ್ಲ. ಆದರು ಏನಾದರು ಕಣ್ಣಿಗೆ ಬೀಳುತ್ತಾಳೇನೊ ಎಂದು ಆ ಕಡೆ ದೃಷ್ಟಿ ಹಾಯಿಸಿದೆ...ಮನಸ್ಸಿನಲ್ಲೇ ಇಟ್ಟಿಗೆ ಗೂಡಿನ ಗೂಡಿನ ಸರದಾರನಾದ ಗೀತಳ ಅಪ್ಪ ನಾಗೇಂದ್ರ ರಾಯನ ಹಳ್ಳಿಯಲ್ಲಿನ ಮಾಡ್ರನಿಟಿಯ ಬೆಗೆಗೆ ಭೇಷ್ ಎನ್ನುತ್ತಾ. ಸುಗೀತಾಳಂತೂ ಕಣ್ಣಿಗೆ ಕಾಣಿಸಲಿಲ್ಲ.

ಮಾರನೆ ದಿನ ಗಣೇಶನ ಪೂಜೆ ಮಾಡಲು ಹಿರಿಯರೆಲ್ಲರಿಂದಿಲೂ ಒತ್ತಾಯ ಬಂದರೂ ನಾನು ರಾತ್ರಿಯೆಲ್ಲಾ ಜ್ವರವಿತ್ತು, ಸ್ನಾನ ಮಾಡದೆ ಹಾಗೆ ಪೂಜೆ ಮಾಡುವಂತಿಲ್ಲವೆಂದು ಕಳ್ಳ ನೆವೆ ಹೇಳಿ ತಪ್ಪಿಸಿಕೊಂಡು ಟವೆಲೊಂದನ್ನು ಹೆಗಲ ಮೇಲೆ ಹಾಕೊಕೊಂಡು ಆಚೆ ಬಂದೆ. ಸತ್ಯಬಾಮ ಬೆಳಿಗ್ಗೆ ಕಾಫಿ ಕೊಡುವಾಗ ಸುಗೀತಳೊಂದಿಗೆ ಕಾಣಿಸಿಕೊಂಡು- ನೋಡು ನಿನ್ನ ಸುಗೀತನ್ನ, ಇದಕ್ತಾನೆ ನೀನು ಬಂದಿರೋದು ಎನ್ನುವಂತೆ ಕಣ್ಣಲ್ಲೇ ಸನ್ನೆ ಮಾಡಿದಳು. ಅವಳು ತಲೆ ತಗ್ಗಿಸಿಕೊಂಡಿದ್ದಳು. ಮಾತನಾಡಿಸಲಿಲ್ಲ. ನಾನೂ ಸಹ ಮಾತನಾಡಿಸಲಿಲ್ಲ. ಆದರೆ ಅವಳನ್ನು ನೋಡಿದ ತಕ್ಷಣ, ಏನು ಬಿ.ಎ. ಮುಗ್ಸಿರಬೇಕು, ಸ್ವೀಟ್ ಎಲ್ಲಿ ಅಂತ ಕೇಳೋಣ ಎಂದುಕೊಂಡು ರಾತ್ರಿಯೆಲ್ಲಾ ಯೋಜನೆ ಹಾಕಿದ್ದುದೆಲ್ಲಾ ನೀರಾಗಿ ಅವಳು ನನ್ನನ್ನು ಉಪೇಕ್ಷಿಸಿದ್ದು ಮನಸ್ಸಿಗೆ ಬಂದು ಮೌನ ಪುನಃ ಘನಿರ್ಭೂತವಾಗಿ ನಿಂತಿತ್ತು. ಕಾಫಿ ಕುಡಿದ ಲೋಟವನ್ನು ಅವಳೇ ಕೈಗೆತ್ತಿಕೊಂಡಾಗ ನಾನು ಮುಖ ತೊಳೆಯಲು ಬಚ್ಚಲು ಮನೆಗೆ ಎದ್ದು ಹೋಗಿದ್ದೆ. ಈಗ ಮನಸ್ಸಿನಲ್ಲಿ ಏನೋ ಅಸಮಾಧಾನ. ನಾನು ಬರಲೇಬಾರದಿತ್ತು, ಎಂದನ್ನಿಸಿತು. ಜಯಮಂಗಲಿ ಕಡೆ ಹೆಜ್ಜೆ ಹಾಕಿದೆ. ಅಲ್ಲಿ ನದಿ ಮಧ್ಯ ಬಂಡೆಕಲ್ಲೊಂದರ ಮೇಲೆ ಮೆಲೆ ಕುಳಿತು ಬಾವಾಜಿ ಪುಸ್ತಕ ಓದುತ್ತಿದ್ದರು. ಗುಡ್ ಮಾರ್ನಿಂಗ ಎಂದವನೆ, ನೀವು ಪೂಜೆ ಮಾಡೋಲ್ಲವೆ ವಿಚಾರಿಸಿದೆ.ನಾವು ಮಾಡೋ ಹಾಗಿಲ್ಲ, ಅಪ್ಪ ಹೋಗಿ ಇನ್ನೂ ವರ್ಷ ಕಳೆದಿಲ್ಲ, ಇಲ್ಲಿಗೆ ಬರೋದನ್ನ ತಪ್ಪಿಸಬಾರ್ದೂಂತ ಬಂದ್ವಿ. ಅದೂ ಅಲ್ಲದೆ ಅವಳು ನಿಮ್ಮನ್ನೆಲ್ಲ ನೋಡ್ಬೇಕೂಂತಿದ್ಲು ಎಂದು ವಿವರಣೆ ನೀಡಿದರು. ನಾನು ಸ್ನಾನ ಮುಗಿಸಿದೆ. ಊರೊಳಗೆ ಸುತ್ತಾಡಲಾರಂಭಿಸಿದೆವು. ಪುನಃ ದಾರಿಯಲ್ಲಿ ಏನೂ ಓದಿರದ ನಾನು ಸಾಹಿತ್ಯ, ತತ್ವ, ಮನಶಾಸ್ತ್ರ ಹೀಗೆ ವಿವಿಧ ವಿಚಾರಗಳನ್ನು ಅಭ್ಯಸಿಸಲು ಹೇಗೆ ಸಾಧ್ಯವಾಯ್ತು, ಆಸಕ್ತಿ ಹೇಗೆ ಬಂತು ಎಂಬುದರ ಬಗೆಗೆಲ್ಲಾ ಕೇಳುತ್ತಿದ್ದರು.ನಾನು ಬರೆಯುತ್ತಿದ್ದ ಗ್ರಂಥದ ಬಗೆಗಿನ ವಿಚಾರ ಎಲ್ಲವನ್ನು ಚರ್ಚಿಸುತ್ತಿದ್ದಂತೆ ಸಂತೆ ಬೀದಿಯಲ್ಲಿನ ಉಡುಪನ ಹೋಟೆಲ್ಲಿನ ಕಡೆ ಬಂದಿದ್ದೆವು. ಕಾಫಿ ಕುಡಿಯೋಣ ಎಂದುಕೊಂಡು ಒಳ ಬಂದು ಕುಳಿತನಂತರ ಬಾವಾಜಿ " ಸರಿ ಇದೆಲ್ಲಾ ಆಯ್ತು, ಇನ್ನೊಂದು ವಿಚಾರ. ನಿಮ್ಮ ಹಾಗು ಸುಗೀತನ ಬಗ್ಗೆ ನಿಮ್ಮ ಬಾಯಲ್ಲೇ ತಿಳ್ಕೋಬೇಕೂಂತ. ಹೇಳೋ ಹಾಗಿದ್ರೆ ಹೇಳಿ..ಎಂದಾಗ ನಾನು ಏನನ್ನೂ ಮುಚ್ಚಿಡದೆ ನಾನು ಸತ್ಯಳಿಗೆ ಪಾಠ ಹೇಳಿ ಕೊಡಲು ಆ ಊರಿಗೆ ದಿನಾ ಬರುತ್ತಿದ್ದುದು, ಆಗ ಪಿ.ಯು.ಸಿ ಓದುತ್ತಿದ್ದ ಅವಳ ಸ್ನೇಹಿತೆಯಾದ ಸುಗೀತಳನ್ನು ಭೇಟಿಯಾದುದು, ಸಿಟಿಯಲ್ಲಿದ್ದ ಕಾಲೇಜಿಗೆ ನಮ್ಮ ಊರಿನ ಮೇಲೆ [ ಅಪ್ಪ ಶಾಲಾಮಾಸ್ತರನಾದುದರಿಂದ ಅವನ ವರ್ಗವಾಗಿ, ಸ್ವಂತ ಸ್ಥಳದಿಂದ ಒಂಭತ್ತು ಮೈಲಿ ಈಚೆಗೆ ಬೇರೆ ಮನೆ ಮಾಡಿದ್ದೆವು.] ಹಾದು ಹೋಗುತ್ತಿದ್ದ ಬಸ್ಸಿನಲ್ಲಿ ಬರುತ್ತಿದ್ದ ಅವಳನ್ನು ನೋಡಲು ದಿನವೂ ನಾನು ಬಸ್‌ಸ್ಟಾಪಿನ ಬಳಿ ನಿಲ್ಲುತ್ತಿದ್ದುದು, ಅವಳೊಂದಿಗೆ ಕಾಡುಹರಟೆ ಹೊಡೆಯುತ್ತಿದ್ದುದು, ನಾನು ಅವಳಿಗೆ ತೀರಾ ಅಂಟಿಕೊಂಡಿದ್ದುದು, ನಾನು ನಿನ್ನನ್ನು ಪ್ರೇಮಿಸುತ್ತೇನೆಂದು ಪರ್ಯಾಯವಾಗಿ ಸೂಚಿಸಿ ಅವಳಿಗೆ ಪತ್ರ ಬರೆದುದು, ಆ ವೇಳೆಗೆ ಬಿ.ಎ ತಲುಪಿದ್ದ ಅವಳು ಅವಿಶ್ವಾಸ ವ್ಯಕ್ತ ಪಡಿಸಿದಂತೆ ದೂರಾದುದೆಲ್ಲ ಸಮೂಲಾಗ್ರವಾಗಿ ತಿಳಿಸಿದೆ. ಪ್ರೌಢಾವಸ್ಥೆಯ ಪ್ರೇಮದ ಬಗೆಗೆ ಚರ್ಚಿಸುತ್ತಾ ಅವರು ಸತ್ಯಳನ್ನು ಮದುವೆಯಾಗುವ ಮುನ್ನ ತಾವೊಂದು ಹುಡುಗಿಯನ್ನು ಪ್ರೀತಿಸಿ ನಿರಾಶೆ ಹೊಂದಿದ ಬಗೆಯನ್ನೆಲ್ಲಾ ತಿಳಿಸಿದರು. ಆ ವೇಳೇಗಾಗಲೆ ಎರಡು ಗಂಟೆ, ಮನೆ ಕಡೆ ಬರುತ್ತಿದ್ದಂತೆ ಬಾಗಿಲಲ್ಲಿ ಕಾಯುತ್ತಿದ್ದ ಸತ್ಯಳು ನನ್ನ ಕಡೆ ದುರುಗುಟ್ಟಿಕೊಂಡು ನೋಡುವವಳಂತೆ ನಟಿಸಿ, ನಿನಗೆ ಮಾತಿಗೆ ಸಿಕ್ಕರೂಂತ ಎಳಕೊಂಡು ಹೋಗ್ಬಿಟ್ಟಾ? ಬಯ್ದು , ಆಗತಾನೆ ಎಲೆ ಹಾಕಿದ್ದ ಮೂರನೆ ಪಂಕ್ತಿಯಲ್ಲಿನ ಮೂರನೆ ಸಾಲೊಂದರಲ್ಲಿ ಕೂಡಿಸಿದಳು. ಹೋಗುವಾಗ ನಿನ್ನ ಕರ್‍ಪೀನೆ ಬಡಿಸ್ತಿದಾಳೆ, ಎಂದು ಹೇಳಿ ಹೋದಳು. ನನ್ನ ಎದೆಯಲ್ಲಿ ನಗಾರಿ ಬಾರಿಸುತ್ತಿತ್ತು. ನಾನು ಬಾವಾಜಿ ಕಡೆ ತಿರುಗಿ ನಿಧಾನಕ್ಕೆ ನಕ್ಕು ಕುಳಿತುಕೊಳ್ಳಿ ಎಂದು ಉಪಚಾರ ಹೇಳುತ್ತಿದ್ದಂತೆ, ತಾತ ನಾನು ಪಂಕ್ತಿಯಲ್ಲಿದ್ದುದನ್ನು ನೋಡಿ `ಏನಯ್ಯಾ ಜ್ವರ ಹೋಯ್ತೊ, ಬರೆಗಿರೆ ಹಾಕಿಸ್ಬೇಕೊ?' ಎಂದಂದು ಬಾವಾಜಿಗೆ ಉಪಚಾರ ಹೇಳಿಹೋದರು.ಸುಗೀತಳು ಬಡಿಸುವಾಗ ನನ್ನ ಕಡೆಗೆ ಬರುತ್ತಿದ್ದುದನ್ನು ಗಮನಿಸಿ ನಾನು ಇವಳನ್ನು ಮೆಚ್ಚಿಕೊಂಡೆನೆ, ಪ್ರೀತಿಸಿದೆನೆ, ಪ್ರೇಮ ಕುರುಡೂನ್ನೋದು ಸರಿ, ಎಂದೆಲ್ಲಾ ಯೋಚಿಸುತ್ತಿದ್ದ ಹಾಗೆ ಎದುರಿನ ಸಾಲಿನಲ್ಲಿ ಕುಳಿತಿದ್ದ ಅವಳಪ್ಪ ನಾಗೇಂದ್ರರಾಯ ` ಗೀತ ಇಲ್ಲಿ ಬಾಮ್ಮ, ಇವ್ರಿಗೆ ಬಡಿಸು, ಅವ್ರಿಗೆ ಬಡಿಸು' ಎಂದು ಅಕ್ಕಪಕ್ಕದವರು ಪರಿಚಯಸ್ತರಿಗೆಲ್ಲ ಉಪಚಾರ ನುಡಿದು ಬಡಿಸಲು ಹೇಳುತ್ತಿದ್ದ. ಬಾವಾಜಿ ನನಗೆ ಕಣ್ಣು ಹೊಡೆದು ಆಕೆಯನ್ನು ಕರೆದು ಸಿಹಿ ಬಡಿಸಲು ಒತ್ತಾಯಿಸಿದಾಗ ನಾನು ಬೇಡವೆಂದು ಲಘುವಾಗಿ ತಿರಸ್ಕರಿಸಿದೆ. ನನಗಂತೂ ಅನುಮಾನ ಆರಂಭವಾಯಿತು. ನೋ ಪ್ಲಾಟ್ ಎಗೈನ್‌ಸ್ಟ್ ಮೀ ಅನ್ನೋದನ್ನ ನಂಬೋದಾದರು ಹ್ಯಾಗೆ? ಅಂತೂ ಇಂತೂ ಊಟ ಮುಗಿಸಿ ಆಚೆ ಬಂದು ಸಿಗರೇಟ್ ಸೇದುತ್ತ ನಿಂತಿದ್ದೆ. ಗೋಪಿ [ ಬಾವಾಜಿ ತಮ್ಮ ] ಬಂದು ನಿಮ್ಮನ್ನು ಕರೀತಾರೆ ನೋಡಿ ಎಂದಾಗ ಸಿಗರೇಟನ್ನ ಆರಿಸಿ ಒಳ ಬಂದೆ. ಅಪ್ಪ , ಅಮ್ಮ , ತಾತ , ಅಜ್ಜಿ , ಸುಬ್ಬಣ್ಣ , ಅಂಪೂ ಅತ್ತಿಗೆ ಎಲ್ಲರೂ ರೌಂಡ್ ಟೇಬಲ್ ಕಾನ್‌ಫೆರನ್ಸ್ ನಡೆಸುತ್ತಿದ್ದವರಂತೆ ತಾಂಬೂಲ ಮೆಲ್ಲುತ್ತ ಮಾತನಾಡುತ್ತಿದ್ದರು. ನಾಗೇಂದ್ರ ರಾಯರು ಕುಳಿತಿದ್ದುದನ್ನು ಕಂಡಾಗ ಪ್ರಪೋಸಲ್ ಮೀಟಿಂಗ್ ಇರಬೇಕೆಂದುಕೊಂಡೆ. " ನೋಡೊ ನಮ್ಮ ನಾಗೂ ಮಗಳು ಗೀತಳನ್ನು ನೋಡಿದ್ದೀಯಲ್ಲ. ಗ್ರಾಜ್ಯುಯೇಟ್, ಹಾಗಂತ ಮನೆ ಕೆಲ್ಸಾನೆಲ್ಲ ಮಾಡ್ತ ನಿನ್ ಬರವಣಿಗೆಗೂ ಸಹಾಯವಾಗಿರ್‍ತಾಳೆ, ನಿನಗೆ ಕೊಡಬೇಕೂಂತಿದ್ದಾರೆ". ಎಂದು ಅಂದರು. ನಾನು ಅಪ್ಪನ ಕಡೆಗೆ ನೋಡಿದೆ. ಅವರು " ನೀನೂ ಆ ಹುಡುಗಿ ಒಪ್ಪಿಕೊಂಡರೆ ನಮ್ಮದೇನೂ ಅಭ್ಯಂತರವಿಲ್ಲಪ್ಪ." ಎಂದು ಅಂದಾಗ ಒಳಕ್ಕೆ ಬಂದ ಸತ್ಯಳು " ನೋಡಪ್ಪ ನಮ್ಮುಡುಗಿ, ಚಿನ್ನದಂತೋಳು, ಬಂಗಾರಾನ ಇಟ್ಕಂಡಿರಾಗಿದ್ರೆ ನೋಡು" ಎಂದಳು ಕಣ್ಣು ಮಿಟುಕಿಸಿ, ಎಲ್ಲರ ಮಾತಿಗೂ ಒಂದು ತನ್ನದೆಂಬಂತೆ. ನಾನು ಎಲ್ಲವನ್ನು ಗಂಟಲಿಗೆ ತಂದುಕೊಂಡು " ನನಗಿಷ್ಟವಿಲ್ಲ , ಈಗೇನೂ ಮದುವೆಗವಸರವಿಲ್ಲ.." ಎಂದೆ. ನನ್ನ ಭವಿಷ್ಯದ ಮೇಲಿನ ಸಂಪೂರ್ಣ ಹಕ್ಕನ್ನು ಧ್ವನಿಯಲ್ಲಿ ಪ್ರತಿನಿಧಿಸುತ್ತ. ತಕ್ಷಣ ಅಜ್ಜಿ " ಏನೋ, ನೀನೇನೂ ಓದಿಲ್ಲ, ಹುಡುಗಿ ಮಾತ್ರ ಓದಿದ್ದಾಳೆ. ಗ್ರಾಜ್ಯುಯೇಟ್ ಅಂತಾಲೆ.." ಎಂದಳು. ಸತ್ಯಳು ಸೇರಿದಂತೆ ಇನ್ನಿತರರು ಕಂಭದ ಹಾಗೆ ನಿಂತಿದ್ದರು. ನಾನು ಅಲ್ಲಿರುವುದೆ ಬೇಡವೆನ್ನಿಸಿ ` ಅದೆಲ್ಲ ಏನಿಲ್ಲ. ನಂಗೀಗ ಮದುವೆಯಾಗೋಕ್ ಇಷ್ಟವಿಲ್ಲ ಅಷ್ಟೆ." ಎಂದು ಹೇಳಿ ನಾಗೇಂದ್ರ ರಾಯರ ಕಡೆ ತಿರುಗಿ ನಿಮ್ಮ ಹುಡುಗಿಗೆ ಬೇರೆ ಗಂಡು ನೋಡ್ಕೊಳ್ಳಿ ಎಂದು ಚುಟುಕಾಗಿ ಹೇಳಿ ಎಲ್ಲರೂ ಕರೆಯುತ್ತಿದ್ದಂತೆ ಸರಸರ ಆಚೆ ಬಂದಿದ್ದೆ.ಅವ್ರಿಗೇನು ಇಷ್ಟ ಇಲ್ಲಾಂದ್ರೆ ಬಲವಂತ ಯಾಕೆ ಬಿಡಿ ಎಂದು ನಾಗೇಂದ್ರರಾಯರು ಹೇಳುತ್ತಿದ್ದ ಮಾತುಗಳು ನನ್ನ ಬೆನ್ನು ತಾಗಿದವು. ನನ್ನನ್ನು ಹಿಂಬಾಲಿಸಿದಂತೆ ದುಡುದುಡು ಎಂದು ಬಂದ ಸತ್ಯ ಮರದ ದಿಮ್ಮಿ ಬಳಿ ನಿಂತಿದ್ದ ನನ್ನ ಹತ್ತಿರ ಬಂದು " ನಿಂಗೇನಾರ ತಲೆ ಕೆಟ್ಟಿದ್ಯೋ ಹ್ಯಾಗೆ? ಮೂರು ವರ್ಷದ ಹಿಂದೆ ಅವಳನ್ನು ಎಲ್ಲೂ ಇಕ್ಲಾರ್‌ದವನಂಗೆ ಆಡ್ತಿದ್ದೆ. ಈಗೇನಾಯ್ತು?" ಎಂದು ಸಿಡಿಮಿಡಿ ರೇಗತೊಡಗಿದಳು. ಕಲ್ಪನೆ ಹೆಚ್ಚಾಗಿದ್ದ ಆಗಿನ ಭಾವನೆಗಳಿಗು, ಇಂದಿನ ವಾಸ್ತವ ಪ್ರಜ್ಞೆಯ ಬೌದ್ಧಿಕ ಬೆಳವಣಿಗೆಯ ನಡುವಿನ ಅಂತರ, ನನ್ನ ಬರವಣಿಗೆ, ವಿಚಾರಶಕ್ತಿ, ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿ ಬರದ ಸುಗೀತಳ ಮನೋಭಾವ ಇತ್ಯಾದಿಗಳನ್ನು ಅವಳಿಗೆ ಬಿಡಿಸಿ ಹೇಳಲಾರದವನಾಗಿದ್ದೆ. " ಅಲ್ಲಾ ಕಣೊ, ಇಲ್ಲಿಗೆ ನೀನು ಬರೋಕ್ಮುಂಚೇನೆ ಈ ಮದುವೆ ಹೊಂದಿಸ್‌ಬೇಕೂಂತ ಎಲ್ಲರೂ ಮಾತನಾಡಿದ್ದರು. ಬೇಕಾರೆ ನಿಮ್ ಬಾವನ್ನೆ ಕೇಳು. ನಾನು ಆಮೇಲೆ ಸುಗೀತನ್ನ ಕೇಳಿದ್ದಕ್ಕೆ ಎಷ್ಟು ಸಂತೋಷದಿಂದ ಒಪ್ಪಿಗೆ ಕೊಟ್ಟಿದ್ದಳು ಗೊತ್ತೆ , ಮೊದಲಿನಿಂದಲೂ ನೀನೂಂದ್ರೆ ಅವಳಿಗೆ ಪ್ರಾಣ ಕಣೊ.." ಎಂದು ಇನ್ನೂ ಏನೇನೊ ಹೇಳುತ್ತಿದ್ದುದನ್ನು ಗಮನಕ್ಕೆ ತಂದುಕೊಳ್ಳದೆ ಅವಳು ಕೂಗುತ್ತಿದ್ದುದನ್ನೂ ಕೇಳಿಸಿಕೊಳ್ಳದವನಂತೆ ಸರಸರ ಬಂದಿದ್ದೆ ಆಚೆಗೆ.

ಮಾರನೆ ದಿನ ನಾನು ಸಿಟಿ ಬಸ್ ಹತ್ತಿದಾಗ ಏನೂ ನಡೆದೆ ಇಲ್ಲವೇನೊ ಎಂಬಷ್ಟು ಸಾಧಾರಣವಾಗಿ ಬಸ್‌ಸ್ಟಾಂಡಿನ ಸಂತೆಬೀದಿಯಲ್ಲಿ ಏನೋ ವ್ಯಾಪಾರ ನಡೆಸುತ್ತಿದ್ದ ಸುಗೀತ ನಾನು ಬಸ್ ಹತ್ತುತಿದ್ದುದನ್ನು ಗಮನಿಸಿ ಸತ್ಯ ಬಾವಾಜಿಯನ್ನು ಬಂದು ಸೇರಿಕೊಂಡಳು. ಬಸ್ ಹೊರಟು ನಿಂತಾಗ ಸುಮ್ಮನೆ ಮೂಕಳಾಗಿ ನೋಡುತ್ತ ನಿಂತಿದ್ದ ಅವಳ ಕಪ್ಪು ಕಣ್ಣುಗಳಲ್ಲಿನ ವೇದನೆಯನ್ನು , ಅಂತರ್ಮುಖತೆಯನ್ನು, ತಾಳ್ಮೆಯನ್ನು ಗಮನಿಸಿದ ನನಗೆ ಈಗಲೂ ಇವಳನ್ನು ಪ್ರೇಮಿಸುತ್ತಿದ್ದೇನೆಯೆ? ಎಂಬ ಸಮಸ್ಯೆ ಎದುರಾಗಿ ಹೃದಯ "ಪ್ರೇಮಿಸುತ್ತಿದ್ದೇನೆ" ಎಂದು ಚೀರುತ್ತಿದ್ದರೆ, ಬುದ್ಧಿ ಯಾ ಮೆದುಳು " ಪ್ರೇಮಿಸಿದ್ದೆ ಮಾತ್ರ.." ಎಂದು ಚೀರುತ್ತಿತ್ತು. ಬಸ್ಸು ಮುಂದೆ ಮುಂದೆ ಹೋಗುತ್ತಿದ್ದಂತೆ ಕಿಟಕಿಯಾಚೆ ಸುಗೀತಳು ಸೇರಿದಂತೆ ಸತ್ಯ, ಬಾವಾಜಿ ಎಲ್ಲರೂ ಕೈ ಬಿಸುತ್ತಿದ್ದುದನ್ನು ಕಂಡು ನಾನೂ ಕೈ ಬೀಸಿದೆ. ಬಸ್ಸು ತನ್ನ ವೇಗ ಹೆಚ್ಚಿಸಿತ್ತು.

೧೯೭೯ ರ ಜುಲೈ ೧೫ನೇ ಪ್ರಜಾವಾಣಿ ಸಂಚಿಕೆಯಲ್ಲಿ ಪ್ರಕಟವಾದ ಕತೆ

ಸಣ್ಣಕತೆ-ಸಂದರ್ಶನ

``ನೀವೂನು ಯಾಕೆ ಜೊತೆಗೆ ಬರಬಾರ್‍ದು? ಸಂದರ್ಶನಕ್ಕೆ ಅಡ್ಡಿ ಇಲ್ದಂತೇನೆ ಮಾತಾಡ್ತ ಹೋಗೋಣ ಬನ್ನಿ....``ಎಂದು ಸೆನ್ ಹೇಳಿದಾಗ, ನನಗೂ ಆ ಕ್ಷಣಕ್ಕೆ ಮಾಡಲು ಬೇರೇನೂ ಕೆಲಸವಿಲ್ಲದ್ದರಿಂದ ಟೇಪ್‌ರಿಕಾರ್ಡರ್ ಆರಿಸಿ `ಎಲ್ಲಿಗೆ -ಏನೂ ' ಎಂದೂ ಸಹ ಕೇಳದೆ ಅಶ್ವತ್ಥ್ ಸೆನ್‌ರನ್ನು ಹಿಂಬಾಲಿಸಿದೆ.
ಹೋಟೆಲ್ ಪೋರ್ಟಿಕೋದಲ್ಲಿ ಎರಡು ಕಾರುಗಳು ತಯಾರಿದ್ದವು. ಒಂದರಲ್ಲಿ ನಾನು, ಸೆನ್‌ರವರು ಇನ್ನೊಂದರಲ್ಲಿ ಸೆನ್ ಚಿತ್ರಗಳ ಕೆಮೆರಾಮೆನ್ ಗುಪ್ತಾ, ಸಹ ನಿರ್ದೇಶಕ ಸನ್ಮಿತ್ರಪಾಲ್ ಇನ್ನಿತರರೂ ಕುಳಿತೆವು. ಬಹುಶಃ ಇವರುಗಳೆಲ್ಲರ ಪ್ರಯಾಣ ಪೂರ್ವಯೋಜಿತವಿದ್ದಿರಬೇಕೆಂದಿಕೊಂಡು ` ಎಲ್ಲಿಗೆ ' ಎಂದು ಕೇಳುವುದು ಸಹ ಅಧಿಕಪ್ರಸಂಗವಾದೀತೇನೊ ಎಂಬ ಅನ್ನಿಸಿಕೆ ಮೂಡಿತು. ಆದರೆ ಸೆನ್‌ರೊಡನೆ ಮಾತನಾಡಲು ಸಿಕ್ಕಿರುವ ಈ ಸುವರ್ಣಾವಕಾಶವನ್ನು ಪೂರ್ತಿ ಬಳಸಿಕೊಳ್ಳಬೇಕೆಂದು ಯೋಚಿಸಿ ಕಾರು ಹೋಗುತ್ತಿದ್ದಂತೆಯೆ ಬ್ಯಾಗಿನಲ್ಲಿದ್ದ ಷಾರ್ಟ್ ಹ್ಯಾಂಡ್‌ಬುಕ್ ಮತ್ತು ಪೆನ್ಸಿಲ್ ತೆಗೆದುಕೊಂಡು ಸೆನ್‌ರತ್ತ ನೋಡಿದೆ.

ಆತ್ಮ ವಿಶ್ವಾಸದ ಗಾಢಟೆಯನ್ನು ಸೂಸುತ್ತಿದ್ದ ಮುಖದ ಉಕ್ಕಿನ ವ್ಯಕ್ತಿ.ಅರೆದಾಡಿಯ ಮುಖದಲ್ಲಿ ಎಂಟೂ ದಿಕ್ಕಿನ ಪರಿಸರವನ್ನು ಅಭ್ಯಸಿಸುವ ತೀಕ್ಷ್ಣ ನೋಟದ , ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದ ಆ ವ್ಯಕ್ತಿ ನನ್ನ ಸಂದರ್ಶನಕ್ಕೆ ಸಂಬಂಧಿಸಿದಂತೆ ಅದೇ ವರ್ಷ ಅಂತಾರಾಷ್ಟ್ರೀಯ ಚಿತೋತ್ಸವಗಳಲ್ಲಿ ಪ್ರಷಸ್ತಿಗಳಿಸಿದ್ದ ಬಗ್ಗೆ ಮಾತನಾಡಲಾರಂಭಿಸಿ ಕೊನೆಗೆ ``ಇತ್ತೀಚೆಗೆ ಪ್ರಾದೇಶಿಕ ಚಿತ್ರಗಳೂ ಸಹ ಹೆಚ್ಚಿನ ಕಲಾತ್ಮಕ ಅಂಶಗಳೊಡನೆ ತಯಾರಾಗುತ್ತಿರುವುವು. ಅದರಲ್ಲೂ ನಿಮ್ಮ ಕರ್ನಾಟಕದವರಂತೂ ಪ್ರಯೋಗಗಳಲ್ಲಿ ಮುಂದಾಗುತ್ತಿರುವುದಂತೂ ಸಂತೋಷ.ಶ್ರೇಷ್ಠ ಅಭಿರುಚಿಯ ಸಂಕೇತ ಮಾತ್ರವಲ್ಲ, ಕಲಾಶ್ರೀಮಂತಿಕೆಗೆ ಹೊಸ ಆಯಾಮ..``- ಎನ್ನುತ್ತ ತಮ್ಮ ಕೋಟಿನ ಜೇಬಿನಲ್ಲಿದ್ದ ಸಿಗಾರ್ ತೆಗೆದಂಟಿಸಿ ನನ್ನತ್ತ ನೋಡಿದಾಗ-

"ಸಾರ್ , ನೀವು ಚಿತ್ರಗಳು ತಯಾರಿಸುವ ಗುರಿಯೇನು?``- ಎಂದು ಕೇಳಿದೆ.
ದಿಡೀರನೆ ಸೆನ್‌ರವರು ಇಂಗ್ಲಿಷ್‌ನಲ್ಲಿಯೆ ರೇಗಿದ ಧ್ವನಿಯಲ್ಲಿ ``ನನಗೆ ಈ ಪ್ರಶ್ನೆ ಯಾರೆ ಕೇಳಿದ್ರೂ ಆಗೋಲ್ಲ. ಹೋದ ಬಾರಿ ನಾನು ಬರ್ಲಿನ್ ಚಿತ್ರೋತ್ಸವಕ್ಕೆ ಹೋದಾಗಲೂ ಪತ್ರಕರ್ತರು‌ಇದೇ ಪ್ರಶ್ನೇನ ಕೇಳಿ ಕೇಳಿ ಸುಸ್ತು ಮಾಡಿದರು. ಎಲ್ಲರಿಗೂ ಗೊತ್ತು. ನಾನೊಬ್ಬ ಲೆಫ್ಟಿಸ್ಟ್ ಅಂತ.ಸಮಾಜ ಬದಲಾಗಬೇಕೂನ್ನೋರು ಸಮಾಜಕ್ಕೇನಾದರು ಕಾಣಿಕೆ ಕೊಡಬೇಖು.ನಾನು ಚಲನಚಿತ್ರಾನ ಆಯ್ದುಕೊಂಡಿದ್ದೇನೆ.` ಆದರೆ ಯಾರಿಗೋಸ್ಕರ ' ಚಿತ್ರ ತಯಾರಿಸ್ತೀನೊ ` ಅವರಿಗೆ ' ಚಿತ್ರ ತಲುಪಬೇಕೂನ್ನೋದೆ ಗುರಿ. ನಿರಾಶವಾದಿಗಳಿಗೆ ಕಲಾಕ್ಷೇತ್ರದಲ್ಲಿ ಸ್ಥಾನವಿಲ್ಲ. ಅವರುಗಳ ಕೆಲಸಕ್ಕೆ ಅರ್ಥವೂ ಇಲ್ಲ. ಲೆಫ್ಟಿಸ್ಟ್ ಯಾವತ್ತೂ ಆಪ್ಟಿಮಿಸ್ಟ್ ಆಗಿರಬೇಕು. ಹೊಸದಾಗಿ ಬಂದಿರೋ ಎಳೇ ಹುಡುಗರಿಗೆ ಇದೇ ನನ್ನ ಬುದ್ಧಿವಾದ...``- ಎಂದು ನೀಳವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತ , ಅಲ್ಲಲ್ಲಿ ತಮ್ಮ ಮತನ್ನು ನಿಲ್ಲಿಸುತ್ತ , ಹೇಳುತ್ತಿರುವುದು ನನಗೆ ಅರ್ಥವಾಗಿದೆಯೆ ಎಂದು ಸಂದೇಹದಲ್ಲಿ ನನ್ನತ್ತ ನೋಡಿ ``ಓಕೆ?``ಎಂದು ಪ್ರಶ್ನಿಸಿ ನನ್ನ ಅನುಮೋದನೆಯಂತರವೆ ಮುಂದುವರಿಯುತ್ತಿದ್ದರು.

ಕಾರುಗಳೆರಡು ಒಂದು ಬಂಗಲೆಯೊಳಗೆ ಪ್ರವೇಶಿಸಿದವು. ಚಲನಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಎನಿಸಿಕೊಡಿದ್ದ ನಟ ನಟರಾಜ್ ಕಾರಿಡಾರಿನಲ್ಲಿ ಕಾಯುತ್ತಿದ್ದ.ಅವನು ಸೆನ್‌ರವರತ್ತ ಬಂದಾಗ ಸೆನ್ ನನಗೂ ಅವನಿಗೂ ಪರಿಚಯ ಮಾಡಿಸಿದರು.ಅವನು ನಮ್ಮ ಕಾರಿನಲ್ಲಿ ಕುಳಿತನಂತರ ಕಾರುಗಳು ಬಂಗಲೆಯಾಚೆ ಬಂದು ಮುಂದುವರೆದವು.
ನಟರಾಜ್ ಸೆನ್‌ರವರತ್ತ ನೋಡಿ- "ಮಿ.ರೆಡ್ಡಿಯವರು , ಕ್ವಾರಿಯಿಂದ ಫೋನ್ ಮಾಡಿದ್ದರು.ಕರುಪ್ಪಯ್ಯ ಇಲ್ಲಿಗೆ ಬರೋಲ್ಲಾಂತಿದ್ದಾನಂತೆ.ಕೊನೆಗೆ ಹೆದರಿಸಿ ಬೆಃಡ್ರಿಸಿಯೂ ಆಯ್ತಂತೆ..."- ಎಂದ.
"ಹಾಗೆಲ್ಲ ಹೆದರಿಸಿದರೆ ನಮ್ಮ ಕೆಲಸ ಆಗೋಲ್ಲ..``- ಎಂದ ಸೆನ್ ನನ್ನತ್ತ ತಿರುಗಿ ನೋಡಿ ಮಿ.ಚಂದ್ರು, ಮುಂದಿನ ನಮ್ಮ ಚಿತ್ರ ` ಶೋಷಣೆ' . ಶೋಷಿತ ವರ್ಗದ ಬಗ್ಗೆ. ಕಲ್ಲು ಬಂಡೆಯ ಕ್ವಾರಿಯಲ್ಲಿ ಕೆಲಸ ಮಾಡುವ ಕಲ್ಲು ಕುಟಿಗರ ಪ್ರಾಬ್ಲಂ ಬಗೆಗೆ ಅನಲೈಸ್ ಮಾಡೋಕ್ಕೆ ಪ್ರಯತ್ನ ಪಟ್ಟಿದ್ದೀನಿ.ನಮ್ಮ ಈ ನಟರಾಜಂದೆ ಮೈನ್ ರೋಲ್, ಈಗ ಕ್ವಾರಿಯೊಂದರ ಬಳಿಗೇನೆ ಹೋಗ್ತಿರೋದು.."- ಎಂದರು.

ನನಗಾಗಲೆ ಸಂದರ್ಶನ ಬೇರೆ ಹಾದಿ ಹಿಡಿಯುತ್ತಿರುವುದು ಅರಿವಿಗೆಟುಕಿತು. ಆದರೂ ಸೆನ್‌ರವರ ಆತ್ಮೀಯ ಮೋಡಿಯಲ್ಲಿ ಸಿಲುಕಿಕೊಂಡಿದ್ದೆ. ಹಲವಾರು ಪ್ರತಿಷ್ಠಿತರೊಂದಿಗಿನ ಪ್ರತಿ ಬಾರಿಯ ಸಂದರ್ಶನ ಹೊಸತನದಿಂದ ಮೂಡಿಬರಬೇಕೆಂದುಕೊಂಡರೂ ಮಾಮೂಲು ಜಾಡು ಬಿಟ್ಟು ಆಚೆ ಎಂದೂ ಬಂದಿಲ್ಲ. ಇಂತಹವರ ಜೊತೆ ಮಾತನಾಡುತ್ತಿದ್ದರೆ ಅವರುಗಳ ಗಿಣಿಬುದ್ಧಿಯ ಮಾತುಗಳನ್ನು ಕೇಳುತ್ತಿದ್ದಂತೆಯೆ ನಮ್ಮ ನರಿ ಬುದ್ಧಿಗೆ ಅನೇಕ ಸಂದೇಹ ತಲೆ ಎತ್ತುತ್ತದೆ. ಆದುದರಿಂದಲೆ ಸೆನ್ ಮುಂದೆ ಇನ್ನೊಂದು ಪ್ರಶ್ನೆ ಮುಂದಿಟ್ಟೆ.``ನೀವು ಲೆಫ್ಟಿಸ್ಟ್ ಎನ್ನುತ್ತಿರಲ್ಲ, ಆದರೆ ಈ ರೀತಿಯ ಬಾರಿ ಬಡ್ಜೆಟ್ ಸಿನಿಮಾ ತೆಗೆಯೋಕ್ಕೆ ಹೊರಟಿರೋದು ಅಲ್ಲದೆ ``ಸ್ಟಾರ್ ``ಗಳನ್ನು ಕ್ಯಾಸ್ಟಿಂಗ್‌ಗೆ ತೆಗೆದುಕೊಂಡಿದ್ದೀರಲ್ಲ.ಇದು ವಿರೋಧಾಭಾಸವಲ್ಲವೆ?``-ನಟರಾಜ ನನ್ನತ್ತ ನೋಡಿ ತೀಕ್ಷ್ಣವಾಗಿ ನಕ್ಕ. ಸೆನ್‌ರವರಿಗೆ ಹಿಡಿಸಲಿಲ್ಲವೋ ಏನೋ - ಆದರೂ ನಗುತ್ತ-

``ನಿಮಗೆ ಜ್ಞಾಪಕ ಇರಬೇಕು. ನಟರಾಜನನ್ನ ನಾನೆ ಮೊದಲು ನನ್ನ ಚಿತ್ರವೊಂದರಲ್ಲಿ ಸಣ್ಣ ಪಾತ್ರವೊಂದು ಕೊಟ್ಟು ಪರಿಚಯಿಸಿದೆ.ಎಲ್ಲರೂ ಅವನ ಪ್ರತಿಭೆ ಗುರುತಿಸಿದರು.ಈಗವನು ದೊಡ್ಡ ಸ್ಟಾರ್, ಮೊನ್ನೆ ` ನನ್ನ ನಟನೆ ಎಲ್ಲ ಮನಾಟನಸ್ ಆಗ್ಬಿಟ್ಟಿದೆ.ವೈವಿಧ್ಯವೇ ಇಲ್ಲ ಸಾರ್ ' ಅಂತ ಪೇಚಾಡಿಕೊಂಡ.ನನ್ನ ಮುಂದಿನ ಚಿತ್ರದಲ್ಲಿ ನಲವತ್ತು ವರ್ಷದ ಶೋಷಿತ ವರ್ಗದ ಪ್ರತಿನಿಧಿಯಾಗಿ ಕಲ್ಲುಕುಟಿಗನ ಪಾತ್ರ ಅವನದು.ಪಾತ್ರವನ್ನು ಅಭ್ಯಾಸಪೂರ್ವಕವಾಗಿ ಹಾಗು ಉಪೇಕ್ಷೆ ತಿರಸ್ಕಾರವಿಲ್ಲದೆ ನಿರ್ವಹಿಸಬಲ್ಲ.ಇನ್ನು ಬಜೆಟ್ ವಿಚಾರಾನ ಪ್ರೊಡ್ಯೂಸರ್ ಹೇಳಬೇಕು. ಬಡ್ಜೆಟ್ಟಿಗೆ ತಕ್ಕ ಚಿತ್ರ..."- ಅವರ ದೀರ್ಘವಾದ ವಿವರಣೆಯನಂತರ- ನಟರಾಜ್ -``ನೋಡಿ ಮಿ.ಚಂದ್ರು, ಈಗ ಕರುಪ್ಪಯ್ಯನ ಬಗ್ಗೆ ಮಾತನಾಡ್ತ ಇದ್ದೆವಲ್ಲ, ನಾನು ನನ್ನ ಪಾತ್ರದ ರೀತಿ ನೀತಿ, ನಡವಳಿಕೆ ಸ್ವಭಾವ ಎಲ್ಲದರ ಅಧ್ಯಯನಕ್ಕೆಂದೇ ಅವನನ್ನು ಆರಿಸಿದ್ದೇನೆ. ಅವನು ಬರದಿದ್ದರೂ ಅವನನ್ನು ಕಷ್ಟ ಪಟ್ಟು ಒಪ್ಪಿಸಲೆಂದೇ ಈಗ ಹೋಗುತ್ತಿರುವುದು.ಲೊಕೇಷನ್ ಬೇರೆ ಸೆಲೆಕ್ಟ್ ಮಾಡಬೇಕು....``ಎಂದು ನನ್ನ ಮೊಂಡು ಪ್ರಶ್ನೆಯ ದಡ್ಡತನವನ್ನು ನಿರೂಪಿಸಿ ನರಿ ಬುದ್ಧಿಯಾದ ನನ್ನದನ್ನು ಗಿಣಿ ಬುದ್ಧಿಯನ್ನಾಗಿಸಿದ, [ಸಾರಿ, ನಾನೊಬ್ಬ ಫ್ರೀಲಾನ್ಸ್ ಜರ್ನಲಿಸ್ಟ್]

ಆ ವೇಳೆಗಾಗಲೆ ಕಾರುಗಳು ಒಂದು ಕ್ವಾರಿಯ ಬಳಿ ಬಂದವು.ಕಲ್ಲು ಕುಟಿಗರ ಉದ್ಯಮದ ಬಿಸಿ ಹೊಡೆತಗಳ ಧ್ವನಿ ಮರುಧ್ವನಿಸುತ್ತಿತ್ತು.ನಮ್ಮ ಕಾರನ್ನು ಕಂಡು ಕ್ವಾರಿಯ ಮಾಲಿಕ ರೆಡ್ಡಿ ಓಡೋಡಿ ಬಂದು ಹಲ್ಲುಗಿಂಜುತ್ತಲೆ ಕಾರುಬಾಗಿಲನ್ನು ತೆಗೆದು ಸೆನ್‌ರವರನ್ನು , ನಟರಾಜನನ್ನು ನೋಡಿ-
"ಸಾರ್ ಕರುಪ್ಪಯ್ಯ ನಿಮ್ಮ ಜೊತೆ ಬರೋಲ್ಲಾಂತಾನೆ.ನಾನೂನು ಎಷ್ಟೋ ಬಾಯ್ಮಾತಲ್ಲಿ ಹೇಳಿ ನೋಡಿದೆ, ಹೆದರಿಸಿಯೂ ಹೇಳಿದೆ.ಬಗ್ಗೋಲ್ಲಾಂತಾನೆ.."- ಎಂದ. ನಟರಾಜ ``ಯಾಕಂತೆ``ಎಂದು ಕೇಳಿದಾಗ ``ಅವನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.ಎರಡೂನು ಕಿತ್ತೋದವು. ಅಪ್ಪ ಅನ್ನಿಸ್ಕೊಂಡಿರೋನ್ನ ಮುಂದೇನೆ ಎಲ್ಲ ಆಟ ಆಡಿದ್ರೂ ಕಂಡು ಕಾಣದಂಗೆ ಸುಮ್ಮನೆ ಇದ್ದಾನೆ.ಅವುಗಳನ್ನ ಬಿಟ್ಟಿರೋಲ್ಲಾಂತಾನೆ..."- ಎಂದು ರೆಡ್ಡಿ ವ್ಯಂಗ್ಯದ ಒತ್ತಡ ಬೆರೆಸಿ ಹೇಳಿದ.ಸೆನ್‌ರವರು ``ಮಿ.ರೆಡ್ಡಿ, ನಮ್ಮ ಚಿತ್ರ ತಯಾರಿಕೆಗೆ ಅವನ ಅಗತ್ಯ ಹೆಚ್ಚು. ನೀವೇನಾದರೂ ಮಾಡಲೇಬೇಕು...ಅಂದ್ಹಾಗೆ ಲೊಕೇಶನ್ ನೋಡ್ಬೇಕೂಂತ ನಮ್ಮ ಕ್ಯಾಮರಾಮನ್, ಕೋಡೈರೆಕ್ಟರ್ ಎಲ್ಲ ಬಂದಿದ್ದಾರೆ. ಅವರಿಗೆ ಕ್ವಾರಿಯ ಕಾರ್ಯಕಲಾಪಗಳನ್ನೆಲ್ಲ ತೋರಿಸಿಬಿಡಿ."- ಎಂದರು. ``ನಡೀರಿ ಸಾರ್, ತೋಟದ ಬಂಗ್ಲೇಲಿ ಸುಧಾರಿಸಿಕೊಳ್ಳಿ, ಬಿಸಿಲು ತಗ್ಗಲಿ.``ಎಂದು ಹೇಳಿ ಜೋರಾಗಿ ಕೂಗು ಹಾಕಿ ಕ್ವಾರಿಯ ಮೇಸ್ತಿಯನ್ನ ಕರೆದು ಕರುಪ್ಪಯ್ಯನ್ನ ಬಂಗೆಲೆಗೆ ಕಳುಹಿಸುವಂತೆ ಹೇಳಿ ನಮಗೆ ದಾರಿ ತೋರಿಸುತ್ತ ಮುಂದೆ ನಡೆದ.ದಾರಿಯಲ್ಲಿ ಮಿ.ಸೆನ್‌ರವರು ತಮ್ಮ ಸಹೊದ್ಯೊಗಿಗಳೊಂದಿಗೆ ತಮ್ಮ ಈ ಚಿತ್ರದ ಸ್ಕ್ರಿಪ್ಟನ್ನು ಹೇಗೆ ಅಂತಾರಾಷ್ಟ್ರೀಯ ಶ್ರೇಷ್ಠ ಮಟ್ಟದ ಚಿತ್ರದ ಗುಣಗಳೊಂದಿಗೆ ಹೆಣೆದಿರುವರೆಂಬುದನ್ನು ಚರ್ಚಿಸತೊಡಗಿದರು.
ತೋಟದ ಬಂಗಲೆ ತಲುಪಿದಾಗ ರೆಡ್ಡಿ ತರಿಸಿಟ್ಟಿದ್ದ ತಂಪು ಪಾನೀಯ , ಎಳನೀರು ಇತ್ಯಾದಿಯನ್ನ ಎಲ್ಲರಿಗೂ ಹಂಚಿದ. ಆದರೆ ಸೆನ್‌ರವರು ಮಾತ್ರ ಅದಾವುದನ್ನು ಮುಟ್ಟದೆ ತಾವು ತಂದಿದ್ದ ಕ್ಯಾನಿನಲ್ಲಿದ್ದ ಸ್ಕಾಚನ್ನೆ ಹೀರತೊಡಗಿದರು.ಸ್ಪೂರ್ತಿ ಬಂದವರಂತೆ ಶೋಷಿತ ವರ್ಗದ ಬಗೆಗೆ ಬಗೆಗಿನ ತಮ್ಮ ಮುಂದಿನ ಚಿತ್ರವಾದ ``ಶೋಷಣೆ``ಕಥೆಯನ್ನು ನನ್ಗೆ ಹೇಳತೊಡಗಿದರು. ಮೇಸ್ತಿ ಕರುಪ್ಪಯ್ಯನನ್ನ ಕರೆತಂದ.

ನಟರಾಜನಂತೂ ಅವನಿಗೆ ``ಯಾವುದಕ್ಕೂ ಹೆದರಬೇಕಾಗಿಲ್ಲ``ವೆಂಬ ಆಶ್ವಾಸನೆಯನ್ನ ತುಂಬಲು ಪ್ರಯತ್ನಿಸುತ್ತಿದಂತೆ ಮಿಕ್ಕೆಲ್ಲರೂ ಅವನಿಗೆ ಬುದ್ಧಿವಾದ ಹೇಳತೊಡಗಿದರು. ರೆಡ್ಡಿ ಕರುಪ್ಪಯ್ಯನಿಗೆ ``ನೋಡು, ನೀನು ಇಲ್ಲಿ ದಿನಕ್ಕೆ ಆರು ರೂಪಾಯ್ ಸಂಪಾದಿಸ್ತಿದ್ದಿ., ಅವರ ಜೊತೆ ಒಂದು ವಾರ ಹೋಗು.ಏನೂ ಮಾಡ್ಬೇಕಾಗಿಲ್ಲ, ಸುಂನಿರು. ಮುನ್ನೂರು ರೂಪಾ‌ಇ ಕೊಡ್ತಾರೆ.ನೀನು ಇಲ್ಲಿ ಬರಿ ಕಳ್ಳು ಸಾರಾಯಿ ಕುಡೀತ ನನ್ನನ್ನ ಒಂದು ಗುಟುಕು ಬ್ರಾಂದಿ ಕೊಡೀಂತ ಬೇಳಾಡ್ತಿದ್ದೆ. ಅಲ್ಲಿ ಹೋಗು, ಬ್ರಾಂದಿ ಮಳೇನೆ ಸುರುಸ್ತಾರೆ...ನಿನಗೆ ಯಾತರ ಭಯವೂ ಇಲ್ಲ. ಎಲ್ಲದಕ್ಕೂ ನಾನಿದ್ದೀನಿ. ಬೇಕಾದರೆ ಒಂದು ವಾರ ಕಳೆದ ಮೇಲೆ ನೀನು ಇಲ್ಲಿಗೆಬಂದು ಬಿಡಬಹುದು...``ಹಾಗೆ ಹೀಗೆ ಎಂದು ಉಬ್ಬಿಸತೊಡಗಿದ.

ಕಠಿಣ ಪರಿಶ್ರಮದಲ್ಲೇ ಕರಿಮೈಯನ್ನು ಕರಗಿಸಿದ್ದ ಕರುಪ್ಪಯ್ಯ ಮೂಕನಾಗಿ ತಲೆ ತಗ್ಗಿಸಿ ಎಲ್ಲರೂ ಹೇಳುವುದನ್ನು ಕೇಳುತ್ತಲಿದ್ದ. ``ಮುನ್ನೂರು..````ಬ್ರಾಂದಿ..``ಶಬ್ಧಗಳು ಬಂದಾಗ ತಲೆ ಎತ್ತಿ ಕಣ್ಣಲ್ಲಿ ಬೆಳಕನ್ನು ಚಿಮ್ಮಿಸುತ್ತಿದ್ದ.ಒಮ್ಮೊಮ್ಮೆ ತನಗೆ ಅಪರಿಚಿತವಾದ ಸಾಂಸ್ಕೃತಿಕ - ನಾಗರಿಕ ಸಮ್ಮುಖನಕ್ಕೆ ಹೆದರಿ ಭೀತಿಯಿಂದ ತಲ್ಲಣಿಸುತ್ತಿದ್ದ. ಎಲ್ಲರ ಮಾತುಗಳನ್ನು ಕೇಳಿ ಕೇಳಿ ಕೊನೆಗೆ ತನ್ನ ಸಮ್ಮತಿಯನ್ನು ಮೌನವಾಗಿ ತಲೆಯಾಡಿಸುದರ ಮೂಲಕ ಸೂಚಿಸಿದಾಗ ಎಲ್ಲರಿಗೂ ಸಂತೋಷವಾಯಿತು. ಕರುಪ್ಪಯ್ಯ, ರೆಡ್ಡಿಗೆ ತನ್ನ ಭಾಷೆಯಲ್ಲಿ ತಾನು ತನ್ನ ಹೆಣ್ಣು ಮಕ್ಕಳನ್ನು ಬಿಟ್ಟಿರುವುದಿಲ್ಲವೆಂಬುದನ್ನೂ , ತನೊಂದಿಗೆ ಕರೆದೊಯ್ಯಲು ಸಮ್ಮ್ತಿಸಿದರೆ ಮಾತ್ರ ತಾನು ಸೆನ್‌ರರಿಗೂ ,ನಟರಾಜನಿಗೂ ಸಹಾಯ ಮಾಡ್ಲು ತಯಾರಿದ್ದೇನೆಂದು ತಿಳಿಸಿದಾಗ , ರೆಡ್ಡಿ ಅದನ್ನು ಸೆನ್‌ರರಿಗೂ ನಟರಾಜನಿಗೂ ಹೇಳಿದ ಮೇಲೆ ಅವರಿಬ್ಬರೂ ಸಮ್ಮತಿಸಿದರು.ಅಲ್ಲಿಯೇ ಕರುಪ್ಪಯ್ಯನ ಕೈಗೆ ನೂರು ರೂ ಅಡ್ವಾನ್ಸ್ ಸೇರಿತು.ಪ್ರಶ್ನಿಸಿ- ಪ್ರಶ್ನಿಸಿ ಅವನಿಂದ ತಿಳಿದುಕೊಂಡ ವಿಷಯಗಳೊಂದಿಗೆ, ಸಂಗ್ರಹಿಸಿದ ಮಾಹಿತಿಗಳೊಂದಿಗೆ ತಮ್ಮ ಚಿತ್ರದ ಸ್ಕ್ರಿಪ್ಟನ್ನು ಅಲ್ಲಲ್ಲಿ ಪ್ರಮುಖವಾದ ಅಂಶಗಳನ್ನು ಬದಲಿಸಿದರು.

ಶೂಟಿಂಗ್ ಪ್ರಾರಂಭವಾಯಿತು.ನಟರಾಜನು ಕರುಪ್ಪಯ್ಯನ ಮಾರ್ಗದರ್ಶನದಲ್ಲೆ ಅಭಿನಯಿಸಲಾರಂಭಿಸಿ, ಪಾತ್ರದಲ್ಲೇ ತನ್ಮಯಗೊಂಡನು. ಆರು ವಾರಗಳನಂತರ ಚಿತ್ರ ``ಏ ``ಸರ್ಟಿಫಿಕೇಟ್‌ನೊಂದಿಗೆ ಬಿಡುಗಡೆಯಾಯಿತು. ವಿಮರ್ಶಕರೆಲ್ಲ ಅದನ್ನು ಹೊಗಳಿದರು.ಸ್ವಲ್ಪ ದಿನಗಳಲ್ಲೇ ಕ್ಯಾನೆ ಚಿತ್ರೋತ್ಸವದಲ್ಲಿ ಭಾಗವಹಿಸಲು ಆ ಚಿತ್ರಕ್ಕೆ ವಿಶೇಷ ಆಹ್ವಾನ ಬಂತು.ಸೆನ್‌ರವರು ಬಹಳ ಶ್ರಮವಹಿಸಿತಮ್ಮ ಚಿತ್ರಕ್ಕೆ ಸಬ್ ಟೈಟ್ಲಿಂಗ್ ಮಾಡಿಸಿದರು. ಪತ್ರಿಕೆಗಳಲ್ಲಿ ಸೆನ್‌ರವರ - ನಟರಾಜನ ವಿಶೇಷ ಸಂದರ್ಶನಗಳು ಪ್ರಕಟವಾದವು.ಸೆನ್‌ರೊಂದಿಗೆ ನನ್ನ ಸಂದರ್ಶನವೂ ಪ್ರಕಟವಾಯ್ತೆನ್ನಿ. ` ಶೋಷಿತ ವರ್ಗವು ಶೋಷಕರ ವಿರುದ್ಧ ಸಿಡಿದೇಳುವ ಸನ್ನಿವೇಶಗಳು ತೀರಾ ಪ್ರಚೋದಕವಾಗಿದ್ದವು.' - ಎಂಬ ಸಿಂಬಾಲಿಕಲ್ ಅಪ್ರೋಚನ್ನು ಎಲ್ಲ ಪತ್ರಿಕೆಗಳು ಗುರುತಿಸಿದ್ದವು- ಮಾತ್ರವಲ್ಲ.ಇಂಥ ಚಿತ್ರಗಳ ಮುಖಾಂತರ ಭಾರತೀಯ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟಕ್ಕೇರುವುದೆಂದು ಹೇಳಿದ್ದವು.

ಆಕಸ್ಮಿಕವಾಗಿ ಒಮ್ಮೆ ಸಿಕ್ಕಿದ ಕರುಪ್ಪಯ್ಯನನ್ನು ``ಚಿತ್ರವನ್ನು ನೋಡಿದೆಯ ``ಎಂದು ಕೇಳಿದ್ದಕ್ಕೆ , ಅದಿನ್ನೂ ನಮ್ಮ ಮಾರತ್‌ಹಳ್ಳಿ ಟೂರಿಂಗ್ ಟಾಕೀಸಿಗೆಬಂದಿಲ್ಲವೆಂದು, ಮೊನ್ನೆ ತಾನೆ ದಾನವೀರ ಶೂರ ಕರ್ಣ ನೋಡಿದನೆಂದು, ತಮ್ಮ ಹೆಣ್ಣು ಮಕ್ಕಳಿಬ್ಬರೂ ಸಿಟಿಯಲ್ಲಿ ``ಶೋಷಣೆ"ಯನ್ನು ನೋಡಿದುದಾಗಿಯೂ , ಏನೂ ಅರ್ಥವಾಗದೆ ಬೋರ್ ಹೊಡೆಸಿತೆಂದು ಹೆಳಿದರೆಂದು ಗೋಗರೆದ. ತನ್ನ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕಿರುವುದಾಗಿಯೂ ``ಶೋಷಣೆ``ಚಿತ್ರದ ನಿರ್ಮಾಪಕರು ತನಗೆ ಇನ್ನೂರು ರೂಪಾಯ್ ಕೊಡಬೇಕಾಗಿರುವುದನ್ನು ಹೇಳಿ ತನಗೆ ಕೊಡಿಸಬೇಕೆಂದ್ಹು ಕೇಳಿದ.ನಾನು, ಅಷ್ಟು ಚಿಕ್ಕ ಹುಡುಗಿಗೆ ಈಗಾಗಲೆ ಮದುವೆ ಮಾಡಲು ಏನವಸರವಯ್ಯ ಎಂದುಕೇಳಿದ್ದಕ್ಕೆ , ನಟರಾಜ್ ಮಾಡಿದ್ದ ಇನ್ನಿತರ ಚಿತ್ರಗಳನ್ನು ನೋಡಿ ಮೆಚ್ಚಿಕೊಂಡಿದ್ದ ಗಣೇಶನ್ ಎಂಬ ಯುವಕನೊಂದಿಗೆ ` ಕಾದಲ್ ' ಕೊಂಡಿದ್ದ ತನ್ನ ಮಗಳಿಗೆ ` ಕಾದಲ್ ' ವಿರುದ್ಧ ಎಚ್ಚರಿಸಿ ಬೇರೊಬ್ಬನಿಗೆ ತಕ್ಷಣ ಮದುವೆ ಮಾಡದಿದ್ದರೆ , ಆಕೆ ಕೆಟ್ಟು ಹೋಗಬಹುದೆಂದು ಹೇಳಿದ.

ಕ್ಯಾನೆ ಚಿತ್ರೋತ್ಸವದ ವರದಿ ಮಾಡಿದ್ದ ಟೈಂ, ಸೈಟ್ ಅಂಡ್ ಸೌಂಡ್ , ನ್ಯೂಸ್ವೀಕ್, ಪ್ಲೇಹೌಸ್- ಇನ್ನಿತರ ಪತ್ರಿಕೆಗಳು ಸೆನ್‌ರವರ ಚಿತ್ರದ ಬಗ್ಗೆ ` ಶೋಶಿತ ವರ್ಗದ ಕಲಾತ್ಮಕ ವೈಭವೀಕರಣ ಯಾ ಬ್ಲೋ ಅಪ್ , ಅಃಡರಲ್ಲೆ ಸೆನ್‌ರವರ ವಿಶಿಷ್ಠತೆ ಅಡಗಿರುವುದು' ಎಂಬರ್ಥದಲ್ಲಿ ಎರಡು ಸಾಲು ಬರೆದಿದ್ದವು. ಅದರಲ್ಲಿನ ವ್ಯಂಗ್ಯ ನಮ್ಮವರಿಗೆ ಅರ್ಥವಾಗಲಿಲ್ಲ. ಪ್ರಸಿದ್ದ ವಿಮರ್ಶಕ ಡೇವಿಡ್ ರಾಬಿನ್‌ಸನ್ ``ದಾನ ವೀರ ಶೂರ ಕರ್ಣ``ಚಿತ್ರವನ್ನು ಮೆಚ್ಚಿ ಬರೆದಿದ್ದನ್ನು ಕಂಡು ನನಗೆ ಕರುಪ್ಪಯ್ಯ ಜ್ಞಾಪಕಕ್ಕೆ ಬಂದ.

ಕರುಪ್ಪಯ್ಯ ಈಗಲೂ ಕ್ವಾರಿಯಲ್ಲಿ ಕಲ್ಲು ಬಂಡೆಗಳನ್ನು ಕುಟ್ಟುತ್ತಲೇ ಇದ್ದಾನೆ. ಕಳ್ಳಂಗಡಿಗೆ ಹೋಗುತ್ತಲೇ ಇದ್ದಾನೆ. ಟೂರಿಂಗ್ ಟಾಕೀಸಿನಲ್ಲಿ ಸೆಕೆಂಡ್ ಶೋಗೆ ವಾರಕ್ಕೆರಡು ಬಾರಿ ಹೋಗುತ್ತಲೇ ಇದ್ದಾನೆ. ಬಹುಶಃ ಇನ್ನೂ ಹತ್ತು ವರ್ಷ ಬಿಟ್ಟು ನೀವು ಅಲ್ಲಿಗೆ ಹೋದರು ನಿಮಗೆ ಅವನು ಸಿಗಬಹುದು.
ಅವನ ಮಗಳಿಗೆ ಮದುವೆಯಾಯ್ತೊ ಇಲ್ಲವೊ ಗೊತ್ತಿಲ್ಲ.

೩೧.೮.೧೯೦ - ಪ್ರಜಾವಾಣಿಯಲ್ಲಿ ಪ್ರಕಟವಾದ ಕತೆ.

ಸಣ್ಣಕತೆ-ಕನ್ಯಾಕುಮಾರಿ

ಅವಳಿಗೆ ಒಂದು ಮಾತು ಹೇಳದೆ ಅಲ್ಲಿಂದ ಹೊರಡುವುದು ಸಭ್ಯತೆಯಲ್ಲ ಎನಿಸಿ ಯಾವುದಕ್ಕೂ ಒಂದು ಮಾತು ಹೇಳಿಯೆ ಹೊರಡುವ ಎಂದುಕೊಂಡು ಅವಳು ಇಳಿದುಕೊಂಡಿದ್ದ ಹೋಟೆಲ್ ಕಡೆಗೆ ಹೊರಟೆ. ಮೂರೇ ದಿನದ ಪರಿಚಯವಾದ್ದರಿಂದ ಅವಳಿಗೆ ವಿದಾಯ ಹೇಳಿಯೇ ಹೊರಡಬೇಕೆಂಬ ಆಸಕ್ತಿ ಇರಲಿಲ್ಲವಾದರೂ - ಭಾರತೀಯತೆ- ಪಾಶ್ಚಾತ್ಯೀಕರಣ- ಆಂಗ್ಲೀಕರಣ ಇತ್ಯಾದಿಗಳ ಬಗೆಗೆ ನಮ್ಮ ನಡುವೆ ನಡೆದಿದ್ದ ಚರ್ಚೆಗಳನ್ನು ನಾನಾಗಲೀ ಆಕೆಯಾಗಲೀ ಲಘುವಾಗಿ ತೆಗೆದುಕೊಳ್ಳದೆ ಗಂಭೀರವಾಗಿಯೇ ತೆಗೆದುಕೊಂಡಿದ್ದೆವು. ನಮ್ಮ ದೇಶದ ಪರವಾಗಿಯೇ ವಾದಿಸಿದ್ದ ನಾನು ಪಾಶ್ಚಾತ್ಯೀಕರಣವನ್ನು ವಿರೋಧಿಸಿ ಕೊಂಚ ಆವೇಶಪೂರಿತವಾಗಿಯೆ ಮಾತನಾಡಿದ್ದೆ. ಅಷ್ಟೊಂದು ಕಠಿಣವಾಗಿರಬಾರದಿತ್ತು ಎಂದು ಅನಂತರ ಅನ್ನಿಸಿತ್ತು. ಪ್ರಮಾಣವಾಗಿ ಹೇಳಬೇಕೆಂದರೆ ಭಾರತೀಯತ್ವದ ಪರವಾಗಿ ಆಕೆಯ ಬಳಿ ವಾದ ಮಾಡಿದ್ದ ನಾನು ಆಕೆಯ ಬಗೆಯ ಪ್ರತ್ಯಯಗಳನ್ನು , ಅದರ ಮೂಲದ ಆಕೆಯ ಮುಕ್ತ ನಡವಳಿಕೆಯನ್ನು ನನಗೆ ಸಾಧಕವಾಗಿ ಉಪಯೋಗಿಸಿಕೊಂಡಿರಲಿಲ್ಲ. ಅಜೀರ್ಣವಾಗುವ "ನಾಗರೀಕತೆ""ಆಧುನಿಕತೆ"ಗಳ ಆಭಾಸಗಳ ನಡುವಿನ ಬೆಂಗಳೂರಿನಲ್ಲೇ ನಾನು ಬೆಳೆದಿದ್ದೆನಾದ್ದರಿಂದ "ನ್ಯೂಯಾರ್ಕ್ ಲಿಬರೇಟಡ್ ಸೊಸೈಟಿಯ ಪ್ಯಾಟ್ರನೈಜೇಶನ್"ಗಳ ಬಗೆಗೆ ಕಲ್ಪನೆ ಇಲ್ಲದಿಲ್ಲ; ಅವುಗಳು ನನಗೆ ಸಂಪೂರ್ಣ ಅಪರಿಚಿತವೂ ಅಲ್ಲ.

ಮೂರು ದಿನದ ಹಿಂದೆ ನಾನು ಬೆಂಗಳೂರಿನಿಂದ ಕನ್ಯಾಕುಮಾರಿಗೆ ರಾತ್ರಿ ಪ್ರಯಾಣದ ಲಕ್ಷುರಿ ಬಸ್ಸಿನಲ್ಲಿ ಸ್ಥಳವನ್ನು ಕಾಯ್ದಿರಿಸಿದ್ದೆ. ಆಕೆಗೆ ನನ್ನ ಸೀಟಿನ ಪಕ್ಕದಲ್ಲೇ ಸ್ಥಳ ದೊರೆತಿತ್ತು. ದೀರ್ಘವಾದ ಪ್ರಯಾಣವಾದ್ದರಿಂದ ಬೇಸರ ಕಳೆಯಲು ಯಾರದಾದರೂ ಸಾಂಗತ್ಯ ತೀರ ಅವಶ್ಯವೆನಿಸಿತ್ತೋ ಏನೋ ಆಕೆಯೇ ತನ್ನ ಪರಿಚಯವನ್ನು ಹೇಳಿಕೊಂಡಿದ್ದಳು. ತನ್ನ ಹೆಸರು ಪೆಟ್ರೀಷಿಯ ಎಂದೂ, ಎಲ್ಲರೂ ತನ್ನನ್ನು ಪೆಟ್ರಿ ಎಂದು ಕರೆಯುತ್ತಾರೆಂದು, ತಾನು ನ್ಯೂಯಾರ್ಕ್‌ನಿಂದ ಬಂದಿರುವುದಾಗಿ ಹೇಳಿದಳು. ಅನಂತರ ಈ ಮೂರು ದಿನಗಳ ಮಾತುಕತೆಗಳ ಮಧ್ಯೆ ತನ್ನದು ಇಪ್ಪತ್ತು ವರ್ಷಗಳ ಇಂಗ್ಲೆಂಡಿನ ಶ್ರೀಮಂತ ಕುಟುಂಬವೆಂತಲೂ, ದಿವಾಳಿಯೆದ್ದು ನ್ಯೂಯಾರ್ಕ್‌ಗೆ ವಲಸೆ ಬಂದುದಾಗಿಯೂ , ತನ್ನ ತಂದೆ ತೀವ್ರವಾಗಿ ಕುಡಿಯಲಾರಂಭಿಸಿದುದಾಗಿಯೂ, ತಾನು ಅಲ್ಲಿಯ ವಿಶ್ವವಿದ್ಯಾನಿಲಯವೊಂದರಲ್ಲಿ ಮಾಸ್ಟರ್‍ಸ್ ಡಿಗ್ರಿ ಪಡೆಯಲಿಚ್ಛಿಸಿ ಸಾಧ್ಯವಾಗದೆ ಜಾಹೀರಾತು ಕಂಪೆನಿಯೊಂದರಲ್ಲಿ ಮಾಡೆಲ್ ಆಗಿ ಸೇರಿ ಟಿ.ವಿ ಜಾಹೀರಾತುಗಳಲ್ಲಿ ಪ್ರಸಿದ್ಧಿ ಹೊಂದಿ ಕ್ರಮೇಣ ಖ್ಯಾತ ಚಲನಚಿತ್ರ ಸಂಸ್ಥೆಯ ಚಿತ್ರವೊಂದರಲ್ಲಿ ನಟಿಸಲು ಯತ್ನಿಸಿ ಶೀಲಭ್ರಷ್ಟಳಾದರೂ ಹೇರಳ ಹಣ ಗಳಿಸಿದುದು... ಇಷ್ಟೆಲ್ಲ ಸನ್ನಿವೇಶಗಳ, ಎಂಟು ವರ್ಷ ದೀರ್ಘ ಕಾಲಾವಧಿಯಲ್ಲಿ ನಡೆದ ಮನೋಘರ್ಷಣೆಗಳು, ಜಿಗುಪ್ಸೆ, ಅಸಹನೀಯವೆನ್ನಿಸಿ ಸ್ನೇಹಿತರೊಡಗೂಡಿ ಭಾರತಕ್ಕೆ ಬಂದು ಎರಡು ತಿಂಗಳ ಉತ್ತರ ಭಾರತ ಪ್ರವಾಸ ಮುಗಿಸಿ ಸ್ನೇಹಿತರಿಂದ ಬೇರ್ಪಟ್ಟು ಈಗ ದಕ್ಷಿಣ ಭಾರತಕ್ಕೆ ಬಂದಿದ್ದುದಾಗಿಯೂ , ಈ ಎಲ್ಲ ವಿವರಗಳನ್ನು ಯಾವ ವಿಶ್ವಾಸದಿಂದಲೋ [ ಬಹುಶಃ ಯಾರಲ್ಲಿಯಾದರೂ ಹೇಳಿಕೊಳ್ಳಬೇಕು ಎಂಬ ಒತ್ತಡದಿಂದಿರಬಹುದು] ಏನೋ ನನ್ನ ಅವಳ ನಡುವಿನ ಕಿರು ಪರಿಚಯದಲ್ಲೇ ಹೇಳಿಕೊಡಿದ್ದಳು.

ಮೊದಲ ದಿನ ಬಸ್ಸಿನಲ್ಲಿ ವಿವೇಕಾನಂದ , ರಾಮಕೃಷ್ಣರ ಪುಸ್ತಕಗಳನ್ನು ಓದುತ್ತಿದ್ದಳು. ನಾನು ಸುಮ್ಮನೆ ಮಾತಿಗೆಂದು ನಿಮಗೂ ಆಧ್ಯಾತ್ಮಿಕತೆಯ ಬಗೆಗೆ ಆಸಕ್ತಿ ಇದೆಯೆ ಎಂದಾಗ ಆಕೆಯ ಉತ್ತರ ಕೇಳಿ ದಂಗು ಬಡಿದಂತಾಗಿತ್ತು. ಆಕೆ, ನಾನು ಅರ್ಥ ಮಾಡಿಕೊಳ್ಳಲು ಪ್ರಯಾಸವಾಗುವಂತಿದ್ದ ಆಕೆಯದೆ ಆದ ಇಂಗ್ಲೀಷಿನಲ್ಲಿ ಹೇಳಿದ್ದಳು: "ನನಗೆ ಆಧ್ಯಾತ್ಮಿಕತೆಯಲ್ಲಿ ನಿಜವಾದ ಆಸಕ್ತಿ ಇದೆಯೋ ಇಲ್ಲವೋ ನಾನಂತು ಹೇಳಲಾರೆ. ನಾನಿದ್ದ ಜೀವನದ ಪರಿಸರದಲ್ಲಿ ಇದೆಯೆಂದರೆ ಬಹುಶಃ ಸುಳ್ಳಾದೀತು. ಆದರೆ ಏನಾದರೂ ಮಾಡುತ್ತಿರಲೇಬೇಕಲ್ಲ. ನ್ಯೂಯಾರ್ಕ್‌ನಲ್ಲಿ ನನ್ನ ಜಾಹೀರಾತಿನ ಬದುಕಿಗೆ ಬೇರೊಂದು ಆಯಾಮ ಒದಗಿಸಲು ಯೋಗಾಸೆಂಟರ್‌ಗೆ ಸೇರಿದೆ. ಆಗ ಈ ತರದ ಪುಸ್ತಕಗಳು ಸಹಜವಾಗಿಯೋ ಅನಿವಾರ್ಯವಾಗಿಯೋ ನನಗೆ ಅಂಟಿಕೊಂಡವು. ಅಂದಿನಿಂದ ನನ್ನ ಮನಸ್ಸು ಯಾವುದೋ ಅವ್ಯಕ್ತವಾದ ಶಾಂತಿಯನ್ನು ಅನುಭವಿಸುತ್ತಿದೆ. ಬಹುಶಃ ಭ್ರಮೆಯೂ ಇರಬಹುದು. ಇನ್ನೊಂದು ವಿಚಾರಾಂದರೆ ನ್ಯೂಯಾರ್ಕ್‌ನಲ್ಲಿ ಭಾರತೀಯ ಗ್ರಂಥಗಳನ್ನು ಹಿಡಿದುಕೊಂಡು ಓಡಾಡುವುದು ಶ್ರೀಮಂತಿಕೆಯ- ನಾಗರೀಕತೆಯ- ನಾವೀನ್ಯತೆಯ ಲಕ್ಷಣ."

ದಾಷ್ಟಿಕತನವೂ ಸಂಕೋಚವೂ ಏನೂ ಇಲ್ಲದೆ ನನಗೆ ಅಂಟಿಕೊಂಡು ಕುಳಿತಿದ್ದ ಆಕೆ "ನಾನು ಸಿಗರೇಟ್ ಸೇದಿದರೆ ಆಕ್ಷೇಪಣೆ ಏನೂ ಇಲ್ಲ ಅಲ್ಲವೆ ?"ಎಂದು ಕೇಳಿ ನನ್ನ ಉತ್ತರಕ್ಕೆ ಕಾಯುವ ಗೋಜಿಗೂ ಹೋಗದೆ ತನ್ನ ಕೈಲಿದ್ದ ಸಿಗರೇಟ್ ಪ್ಯಾಕಿನಿಂದ ಒಂದನ್ನು ತೆಗೆದು ಅಂಟಿಸಿ ಜೋರಾಗಿ ಹೊಗೆ ಎಳೆದು ಆಚೆ ಬಿಟ್ಟಳು. ಬಸ್ಸಿನಲ್ಲಿದ್ದವರಲ್ಲಿ ಮುಕ್ಕಾಲು ಪಾಲು ಜನ ನಿದ್ರಿಸಿದ್ದರೆ, ಕೆಲವರು ದೊಡ್ಡ ದೊಡ್ಡ ಕಣ್ಣುಗಳನ್ನು ಬಿಟ್ಟುಕೊಂಡು ಎದ್ದಿದ್ದರು. ಆಕೆ ಕಿಟಕಿ ಬಾಗಿಲನ್ನು ಕೊಂಚವೆ ಸರಿಸಿ ಬಸ್ಸಿನ ವೇಗವನ್ನು ಸೀಳಿಕೊಂಡು ಒಳ ನುಗ್ಗುತ್ತಿದ್ದ ಕುಳಿರ್ಗಾಳಿಗೆ ಮುಖ ಒಡ್ಡಿ "ನೀನೊಂದು ಯಾಕೆ ಅಂಟಿಸಬಾರದು.."ಎಂದು ವಿದೇಶಿ ಸಿಗರೇಟಿನ ನೀಡಿದಾಗ ಸಿಗರೇಟ್ ಸೇಡುವ ಚಟವಿದ್ದರೂ ಬೇಡವೆಂದೆ , ಆತ್ಮವಂಚನೆ?
ಆಕೆ ನಿನ್ನ ಬಗ್ಗೆ ಏನೂ ಹೇಳಲಿಲ್ಲ ಎಂದಾಗ-"ನನ್ನನ್ನು ಎಲ್ಲರೂ ಚಂದ್ರೂಂತ ಕರೀತಾರೆ. ಬೆಂಗಳೂರಿನ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತ.."- ಎಂದ್ ಚುಟುಕಾಗಿ ಪರಿಚಯಿಸಿಕೊಂಡಿದ್ದೆ.

ಕನ್ಯಾಕುಮಾರಿ ತಲುಪಿದಾಗ ಸುಮಾರು ಹನ್ನೊಂದೂವರೆ- ಹನ್ನೆರಡು ಗಂಟೆ ಅಥವ ಇನ್ನೂ ಹೆಚ್ಚಾಗಿತ್ತೋ ಏನೋ, ಅಭ್ಯಾಸವಿಲ್ಲದ ಸುಡುಬಿಸಿಲು ಸ್ವಲ್ಪ ಹೊತ್ತಿದ್ದರೆ ನೆತ್ತಿ ಚಿಪ್ಪು ಒಡೆದು ಸೀಳಿ ಬಿಡುತ್ತದೋ ಎಂಬಷ್ಟು ಕಾಯುತ್ತಿತ್ತು. ಆಕೆ ಲಕ್ಷೂರಿಯಸ್ ಸೂಟ್‌ಗಳಿದ್ದ ಹೋಟೆಲ್ಲಿನ ಬಗೆಗೆ ಅಲ್ಲಿದ್ದ ಮಾರ್ಗದರ್ಶಿಯನ್ನು ವಿಚಾರಿಸುತ್ತಿದ್ದಾಗ ನಾನಾಗಲೇ ಸಣ್ಣ ಹೋಟೆಲ್ಲೊಂದರಲ್ಲಿ ಕೋಣೆಯನ್ನು ಕಾಯ್ದಿರಿಸಿರುವುದಾಗಿ ಹೇಳಿ ಮತ್ತೆ ಕಾಣುವೆನೆಂದು ತಿಳಿಸಿ ಬೀಳ್ಕೊಂಡಿದ್ದೆ. ನೀನು ಯಾಕೆ ಒಂಟಿಯಾಗಿ ರಾತ್ರಿ ಅದೂನು ಬಸ್ಸಿನಲ್ಲಿ ಬರ್‍ತಿದೀ ಎಂದು ಪ್ರಶ್ನಿಸಿದ್ದಕ್ಕೆ "ನನ್ನ ಬದುಕಿನಲ್ಲಿ ರಾತ್ರಿ ಇನ್ನೇನು ಹಗಲಿನ್ನೇನು- ಎಲ್ಲಾ ಒಂದೆ "- ಎಂದು ವಿಷಾದ ಸ್ವರದಲ್ಲಿ ಹೇಳಿ ಮುಂದುವರಿಸಿ "ಸರಳತೆ ಅನ್ನೋದನ್ನ ನಾನು ಭಾರತಕ್ಕೆ ಬಂದ ಮೇಲೆಯೇ ಕಲಿತಿದ್ದು.."ಎಂದಿ ಹೇಳಿದಾಗ ಆಕೆಯ ಸ್ವರದಲ್ಲಿ ಹೆಮ್ಮೆಯಿತ್ತು.

ನಾನು ನಾಲ್ಕಾರು ಸಣ್ಣ ಹೋಟೆಲುಗಳನ್ನು ತಿರುಗಿ ಒಂದು ಹೋಟೆಲಲ್ಲಿ ಕೋಣೆ ಹಿಡಿದು ಸ್ನಾನ ಮುಗಿಸಿ ಉಪಹಾರ ತೆಗೆದುಕೊಂಡು ಕಣ್ಣು ಉರಿಯುತ್ತಿದ್ದರೂ ಲೆಕ್ಕಿಸದೆ ಕ್ಯಾಮರಾವನ್ನು ಹೆಗೆಲಿಗೇರಿಸಿ ಹೊರಬಂದು ಕೊಂಚ ಅಲ್ಲಿ ಇಲ್ಲಿ ಸುತ್ತಾಡಿ ವಿವೇಕಾನಂದ ಸ್ಮಾರಕದತ್ತ ಹೆಜ್ಜೆ ಹಾಕಿದೆ. ಆಗಲೆ ಪೆಟ್ರಿ ದೋಣಿಗಾಗಿ ಕಾಯುತ್ತಿದ್ದವರ ಸಾಲಿನಲ್ಲಿ ಆ ಬಿಸಿಲಿನಲ್ಲೂ ಸಿಗರೇಟ್ ಸೇದುತ್ತ ನಿಂತಿದ್ದಳು. ಅವಳನ್ನು ನೋಡಿದಾಕ್ಷಣ ನಾನು ಹಲೋ ಎಂದೆ. ಅವಳ ಹತ್ತಿರ ಹೋದೊಡನೆ ಸಣ್ಣ ದ್ವೀಪದಂತಿದ್ದ ವಿವೇಕಾನಂದ ಸ್ಮಾರಕದತ್ತ ನೋಡಿ -
"ಸ್ಪ್ಲೆಂಡಿಡ್- ಮಾರ್‌ವೆಲಸ್- ವಂಡರ್‌ಫುಲ್ ಈಸ್‌ನ್ಟ್ ಇಟ್ "ಎಂದಿದ್ದಳು. ನಾನು ಸುಮ್ಮನಿದ್ದೆ. ಬೇರೆ ಯಾರಾದರೂ ಆಗಿದ್ದಿದ್ದರೆ ಹೌದೆನ್ನುತ್ತಿದ್ದೆನೋ ಏನೋ.

ದೋಣಿಯಲ್ಲಿ ವಿವೇಕಾನಂದ ಸ್ಮಾರಕ ತಲುಪಿದೊಡನೆ ಅಲ್ಲಿನ ಸುಭಧ್ರ ಪಡೆಯವರು ಬಂದ ವೀಕ್ಷಕರನ್ನೆಲ್ಲ ಮುತ್ತಿ ಸ್ಮಾರಕದಲ್ಲಿ ಶಬ್ಧ ಮಾಡಬೇಡಿ, ಫೋಟೊ ತೆಗೆಯಬೇಡಿ, ಸ್ಥಳವನ್ನು ಶುಚಿಯಾಗಿಡಿ, ಚಪ್ಪಲಿ ಹಾಕಿಕೊಂಡು ಹೋಗಬೇಡಿ ಎಂದೆಲ್ಲ ವಿನಯದಿಂದ ಹೇಳಿದನಂತರ ಪೆಟ್ರಿ ಚಪ್ಪಲಿಯನ್ನು ಬಿಡಬೇಕಾದ ಸ್ಥಳದಲ್ಲಿ ಬಿಟ್ಟು ಅತ್ಯಂತ ಗೌರವ ಭಾವದಿಂದ ಸ್ಮಾರಕ ಪ್ರವೇಶಿಸಿದಳು. ನಾನು ಬೆಂಗಳೂರಿನಿಂದ ಬರುವಾಗ ಬೂಟುಗಳನ್ನು ಹಾಕಿಕೊಂಡು ಬಂದಿದ್ದು, ಜೀನ್ಸ್ ಪ್ಯಾಂಟನ್ನು ಕಳಚಿ ಹೋಟೆಲ್ಲಿನಲ್ಲೇ ಬಿಟ್ಟು ಇಲ್ಲಿಗೆ ಬರುವಾಗ ಪಂಚೆಯುಟ್ಟು ಬರಿಗಾಲಲ್ಲೇ ರಸ್ತೆಯಲ್ಲಿ ಪಾದಗಳನ್ನು ತಕಥೈ ಆಡಿಸಿ ಬಂದಿದ್ದೆ.ಸ್ಮಾರಕದಲ್ಲಿ ಅಲ್ಲಿ ಇಲ್ಲಿ ಸುತ್ತಾಡಿದ ನಂತರ ಪೆಟ್ರೀ ಸುಭದ್ರ ಪಡೆಯವನ ಕೈಗೆ ಹಸಿರು ನೋಟೊಂದನ್ನು ತುರುಕಿ ತನಗೆ ರಮಣೀಯವೆನ್ನಿಸಿದ ಸ್ಥಳವನ್ನು ತೋರಿಸಿ ನನಗೆ ಫೋಟೋ ತೆಗೆಯಲು ನಿರ್ದೇಶಿಸಿದಾಗ ನನ್ನ , ಲೇಖನಕ್ಕೆ ಪ್ರಯೋಜನವಿಲ್ಲವೆಂದು ನಾನು ಕಾರಣ ನೀಡಿದ್ದರಿಂದ ಆಕೆ ತನಗೆ ಸಾಕೆನ್ನಿಸುವಷ್ಟು ಫೋಟೊ ತೆಗೆದುಕೊಂಡಿದ್ದಳು. ನಂತರ ವಿವೇಕಾನಂದ ವಿಗ್ರಹದ ಮಂಟಪವನ್ನು ಹೊಕ್ಕು ಮೌನದಿಂದ ಅದರ ಮುಂದೆ ಎರಡು ನಿಮಿಷ ನಿಂತಾಗ ಆಕೆ ಭಾರತೀಯ ಕಲಾಪ್ರಾಕಾರಗಳನ್ನು ಮೆಚ್ಚಿಕೊಂಡು ವಿಮರ್ಶಿಸುತ್ತ ಎರಡು ಮಾತುಗಳನ್ನು ಪಿಸು ಧ್ವನಿಯಲ್ಲಿ ಹೇಳಿದ್ದಳು. ಧ್ಯಾನ ಮಂಟಪಕ್ಕೆ ಬಂದೆವು. ಆಕೆ ಧ್ಯಾನಕ್ಕೆ ಕೂತಾಗ ಅವಳ ಸಾಂಗತ್ಯ ನನಗೆ ಮುಜುಗರವೆನ್ನಿಸಿ ನಾನು ಅವಳಿಂದ ನುಣುಚಿಕೊಂಡು ಯಾರೂ ಇಲ್ಲದೆ ಇದ್ದ ತಗ್ಗು ಪ್ರದೇಶದ ಬಂಡೆಯ ಮೇಲೆ ಕುಳಿತು ಸಾಗರದ ಕಡೆಗೆ ದೃಷ್ಟಿ ನೆಟ್ಟಿದ್ದೆ. ಆ ಏಕಾಗ್ರ ದೃಷ್ಟಿಗೆ ಸಿಕ್ಕ ಯಾವ ದೃಶ್ಯಗಲೂ ಗ್ರಹಿಕೆಗೆಟುಕಿರಲಿಲ್ಲ. ಬಿಕ್ಕಿ ಬಿಕ್ಕಿ ಅಳಬೇಕೆನ್ನಿಸಿತ್ತು. ಬೆಂಗಳೂರಿನ ನಾಲ್ಕು ವರ್ಷದ ಒಂಟಿತನದ ಪ್ರಜ್ಞೆ ಈಗಿನ ಒಂದು ತೆರೆನಾದ ಅನಾಥ ಪ್ರಜ್ಞೆಯ್ನ್ನು ಇಮ್ಮಡಿಗೊಳಿಸಿದಂತಾಗಿ ಮಡುಗಟ್ಟಿತ್ತು. ಯಾವುದೋ ಒಂದು ಸಂದೇಶವನ್ನು ತಲುಪಿಸಲಿಕ್ಕೋಸುಗ ಬಂಡೆಗಳನ್ನು ಸಾಗರದಲೆಗಳು ಕುಟ್ಟುತ್ತಿದ್ದವು. ಬಂಡೆಗಳು ಎಚ್ಚೆತ್ತಿರುವಂತಿದ್ದು ಅಲೆಗಳು ಅಸ್ಪಷ್ಟವಾಗಿ , ಅಮೂರ್ತವಾಗಿ ಅರ್ಥಹೀನವಾಗಿಬಿಡುತ್ತಿದ್ದವು. ದಿಗ್ಗನೆ ಪೆಟ್ರೀಷಿಯಳ ನೀಲಿ ಕಣ್ಣುಗಳು ನೆನಪಿಗೆ ಬಂದು ಅವು ಸಾಗರದಲೆಗಳಂತೆ ಅಮೂರ್ತವೆಂದನ್ನಿಸಿಬಿಟ್ಟಿತು. ನನ್ನ ಗ್ರಹಚಾರಕ್ಕೆ ಇವಳೆಲ್ಲಿಂದ ವಕ್ರಿಸಿದಳು..ಬಂಕ ಪಿಶಾಚಿಯಂತೆ..ಎಂದೂ ಅನ್ನಿಸ ತೊಡಗಿತು. ಆ ಕ್ಷಣ "ಚಂದ್ರೂ.."ಹಿಂದಿನಿಂದ ಬಂದ ಪೆಟ್ರೀಷಿಯಳ ಕೂಗಿಗೆ ಎಚ್ಚೆತ್ತು ಹಿಂದೆ ತಿರುಗಿ ನೋಡಿದೆ. ಅವಳು ಎತ್ತರದ ಪ್ರದೇಶದ ಬಂಡೆಯೊಂದರ ಮೇಲೆ ಗೆಲುವಿನ ಮುಖದಲ್ಲಿ ಮಂದಸ್ಮಿತಳಸಗಿ ನಿಂತಿದ್ದಳು. ನಾನು ಪುನಃ ಸಾಗರದ ಕಡೆ ದೃಷ್ಟಿ ನೆಟ್ಟಿದ್ದೆ. ಜಾಗರೂಕತೆಯಿಂದ ಇಳಿದು ಬಂದ ಅವಳು ನನ್ನ ಪಕ್ಕದಲ್ಲಿ ಕುಳಿತು ಆತ್ಮೀಯಳಂತೆ ನನ್ನತ್ತ ನೋಡಿ "ಏನಾಯ್ತು?"ಎಂದಳು ನನ್ನ ಭುಜ ಅಲುಗಿಸುತ್ತ. ನಾನು ಏನೂ ಹೇಳಲಾಗದೆ ಎರಡು ನಿಮಿಷ ಅವಳ ಕಣ್ಣೂಗಳಲ್ಲಿ ದೃಷ್ಟಿ ನೆಟ್ಟೆ. ಜೋರಾಗಿ ಅಳಬೇಕೆನ್ನಿಸಿದರೂ ಅಳಲಾಗಿರಲಿಲ್ಲ. ಕಣ್ಣಲ್ಲಿ ನೀರು ತುಂಬಿತ್ತು. ನಗುತ್ತ ಐದು ನಿಮಿಷ ತದೇಕವಾಗಿ ಸಾಗರವನ್ನು ದಿಟ್ಟಿಸಿದ್ದರಿಂದ ಕಣ್ಣಲ್ಲಿ ನೀರು ತುಂಬಿತೆಂದು ಸುಳ್ಳು ಹೇಳಿದೆ. ಎದೆಯಲ್ಲಿನ ತಳಮಳವನ್ನು ಮುಚ್ಚಿಡುತ್ತ , ಅಲ್ಲಿಂದ ಹೊರಡಲು ಎದ್ದೆ. ಬಂಕ ಪಿಶಾಚಿಯು ನನ್ನನ್ನು ಅನುಸರಿಸುತ್ತಾ "ಜಾಗ ಹ್ಯಾಗನ್ನಿಸುತ್ತೆ?"ಎಂದು ಕೇಳಿದಾಗ ಆ ಪ್ರಶ್ನೆ ನಿರೀಕ್ಷಿಸಿದ್ಹೆನಾದರೂ ನನ್ನ ಮನಸ್ಸು ಪೂರ್ವಾಗ್ರಹ ಪೀಡಿತವಾದ್ದರಿಂದ ಉತ್ತರ ಸಿದ್ದವಾಗಿರಲಿಲ್ಲ. ಆದರೂ ಸುಳ್ಳು ಹೇಳದೆ ಆ ನಿಮಿಷ ಮನಸ್ಸಿಗೆ ತೋಚಿದ್ದನ್ನು ಮರೆ ಮಾಚದೆ ಹೇಳಿದೆ: "ಈ ಜಾಗ ನನಗೊಂದು ಚೂರು ಹಿಡಿಸಲಿಲ್ಲ. ಕುಳಿರ್ಗಾಳಿಯ ನಡುವೆಯೂ ಉಸಿರು ಕಟ್ಟುವಂತಿದೆ". ಅವಳು ಆಶ್ಚರ್ಯದಿಂದ ಕಾರಣ ಕೇಳಿದಾಗ "ಯಾಕೇಂತ ನನಗ್ಗೊತ್ತಿಲ್ಲ. ಯೋಚಿಸಲಿಕ್ಕಾಗದ ಶಿಶುವಿನಂತೆ ಇದೇ ಪ್ರಥಮ ಬಾರಿ ಆಗಿರುವುದು. ಕಾರಣ ಆನಂತರ ಹೊಳೆಯಬಹುದು"ಎಂದೆ. "ಹಾಗಾದರೆ ಯೋಚನೆ ಮಾಡಿ ಆನಂತರ ಹೇಳು ನನಗೂ ಕುತೂಹಲ ಇದೆ"ಎಂದಳು. ಈಚೆ ದಡವನ್ನು ತಲುಪಲು ದೋಣಿಗಾಗಿ ಕಾದಿದ್ದ ಸಾಲಿನಲ್ಲಿ ಸೇರಿದೆವು. ನಾನು ಏನನ್ನೂ ಮಾತಾಡದೆ ತೀರದ ದಡದಲ್ಲಿದ್ದ ಊರ ಕಡೆ ನೋಡುತ್ತಿದ್ದೆ. ಆಕೆಗೆ ನನ್ನ ಮನಸ್ಸು ಅರ್ಥವಾಯಿತೋ ಏನೋ ಸುಮ್ಮನಾದಳು. ದಡದಲ್ಲಿದ್ದ ಕನ್ಯಾಕುಮಾರಿ ದೇವಸ್ಥಾನ, ಗಾಂಧಿ ಮಂಟಪ, ಪ್ರವಾಸಿಮಂದಿರ, ಸೀಶೋರ್ ಟೀ ಕ್ಲಬ್ ಎಲ್ಲವನ್ನು ನೋಡುತ್ತಿದ್ದೆ. ನನ್ನ ನೋಟಕ್ಕೆ ಬೇರೊಂದು ದೃಶ್ಯ ಬೀಳಲಾರಂಭಿಸಿತು. ಏಳೆಂಟು ವರ್ಷದ ಕಪ್ಪು ಹುಡುಗನೊಬ್ಬ ಹಲಗೆಯೊಂದಕ್ಕೆ ತೆಕ್ಕೆ ಬಿದ್ದು ಅಷ್ಟೊಂದು ರಭಸವಿಲ್ಲದ ಅಲೆಗಳ ಮಧ್ಯೆ ಈಜುತ್ತ ಸ್ಮಾರಕದತ್ತ ಬರುತ್ತಿದ್ದ. ನಾವು ನಿಂತಿದ್ದ ಸಾಲಿನ ಪಕ್ಕದ ಸಾಗರ ಪ್ರದೇಶದಲ್ಲಿ ಐದಾರು ಸಣ್ಣ ಹುಡುಗರು ಈಜುತ್ತ ನಿಂತಿದ್ದ ಕಡೆಯೆ ನಿಂತು ನಮ್ಮತ್ತ ನೋಡುತ್ತಿದ್ದರು. ಪ್ರವಾಸಿಗರಲ್ಲಿ ಕೆಲವರು ಐದು ಹತ್ತು ಪೈಸೆಯನ್ನು ಸಾಗರಕ್ಕೆ ಎಸೆಯುತ್ತಿದ್ದರು. ಹುಡುಗರು ಬುಳುಕ್ಕನೆ ನೀರಿನಲ್ಲಿ ಮುಳುಗಿ ನಾಣ್ಯವನ್ನು ಹಿಡಿಯುತ್ತಿದ್ದರು. ಅದಕ್ಕಾಗಿ ಹುಡುಗರ ಮಧ್ಯೆ ಸ್ಪರ್ಧೆ- ಆ ಸ್ಪರ್ಧೆಯ ನಡುವೆಯೂ ವೃತ್ತಿಯಲ್ಲಿನ ಆತ್ಮೀಯತೆ. ಪೆಟ್ರೀಷಿಯಳು ಎಂಟಾಣೆ ನಾಣ್ಯವೊಂದನ್ನು ಎಸೆದಳು. ಹುಡುಗರು ಮುಳುಗಿದರು. ಅದು ದೊಡ್ಡ ಮೋಜೆಂಬಂತೆ, ಅದ್ಭುತವೆಂಬಂತೆ, ತಮಾಶೆಯೆಂಬಂತೆ ಅರಳಿದ ಕಣ್ಣುಗಳಿಂದ ನೋಡುತ್ತಿದ್ದಳು. ಅವಳ ಮೇಲೆ ಯಾಕೋ ಜಿಗುಪ್ಸೆ ಮೂಡಿಬಂತು. ಐದಾರು ಫೋಟೊಗಳನ್ನು ತೆಗೆದುಕೊಂಡೆ.

ಈಚೆ ದಡ ತಲುಪಿದ ನಂತರ ಆಕೆಯೊಂದಿಗೆ ಊಟ ಮಾಡಲು ಆಗ್ರಹಪೂರ್ವಕವಾದ ಆಹ್ವಾನವನ್ನು ನೀಡಿದಳು. ನಾನು ಮೃದುವಾಗಿ ನಿರಾಕರಿಸಿದೆ. "ನಿನಗೇಕೊ ಮನಸ್ಸು ಸರಿಯಿದ್ದಂತಿಲ್ಲ. ಇರಲಿ ಜೊತೆಗೆ ಬಾ.."ಎಂದು ಆತ್ಮೀಯಳಂತೆ ಕರೆದಾಗ ಖಡಾಖಂಡಿತವಾಗಿ ಬೇಡವೆನ್ನಲಾಗದೆ ಹಿಂಬಾಲಿಸಿದ್ದೆ. ಹೋಟೆಲ್ಲಿನಲ್ಲಿ ಆಕೆಯ ಸೂಟ್‌ನಲ್ಲಿ ನನಗೆ ಊಟ, ಆಕೆಗೆ ಬ್ರೆಡ್ ಬಟರ್ ಜಾಂ ಇತ್ಯಾದಿಗಳನ್ನು ಆರ್ಡರ್ ಮಾಡಿ ಕಾಯುತ್ತ ಕುಳಿತೆವು. ಆಕೆ ಆ ಸಮಯದಲ್ಲಿ ತನ್ನ ಸ್ಪಾಂಜ್ ಬ್ಯಾಗ್‌ನಲ್ಲಿದ್ದ ಪುಟ್ಟ ಆಲ್ಬಂ ಒಂದನ್ನು ತೆಗೆದು ನ್ಯೂಯಾರ್ಕ್‌ನ ಜಾಹೀರಾತು ಸಂಸ್ಥೆಯಲ್ಲಿ, ಟಿ.ವಿ ಗೆ ತಾನು ಪ್ರತಿನಿಧಿಸಿದ್ದ ಜಾಹೀರಾತುಗಳ ಭಾವಭಂಗಿಗಳಿದ್ದ ಫೋಟೋಗಳನ್ನು , ತನ್ನ ತಂದೆ ತಾಯಿ ತಮ್ಮಂದಿರ ಭಾವಚಿತ್ರಗಳನ್ನು, ತಾನು ನಟಿಸಲು ಪ್ರಯತ್ನಿಸಿ ಅದಕ್ಕೆ ತೆಗೆಸಿದ್ದ ಹಲವಾರು ಭಂಗಿ ಚಿತ್ರಗಳನ್ನು, ತನ್ನನ್ನು ಮೊಸಗೊಳಿಸಿದ ಕ್ಯಾಮರಮನ್‌ನ ಚಿತ್ರಗಳನ್ನು ವಿವರಗಳ ಸಮೇತ ತೋರಿಸಿ "ಹ್ಯಾಗಿದೆ?"ಎಂದು ಕೇಳಿದ್ದಳು. ಆಗ ನನಗೆ ತಟ್ಟನೆ ವಿವೇಕಾನಂದ ಸ್ಮಾರಕದ ಅಸ್ವಸ್ಥ ಅನುಭವದ ಕಾರಣ ಪ್ರಜ್ಞೆಯ ಮಟ್ಟದಲ್ಲಿ ಮಸುಕು ಮಸುಕಾಗಿ ಹೊಳೆಯಾರಲಾಂಭಿಸಿತು, ನಾನು ಏನೂ ಮತಾಡಿರಲಿಲ್ಲ. ಸುಮ್ಮನೆ ಅವಳು ಹೇಳುತಿದ್ದುದನ್ನು ಕೇಳುತ್ತಿದ್ದೆ. ಊಟ ಬಂದ ನಂತರ ಇಬ್ಬರೊ ಊಟ ಮುಗಿಸಿದೆವು. ಆಕೆ ಆರಾಮಾಸನಕ್ಕೆ ಒರಗಿಕೊಂಡು ಸಿಗರೇಟೊಂದನ್ನು ಅಂಟಿಸಿ ಕಣ್ಣು ಮುಚ್ಚಿಕೊಂಡು "ಚಂದ್ರು ನನಗೆ ಈಗ ಏನನ್ನಿಸಿತ್ತಿದೆ ಗೊತ್ತಾ? ನ್ಯೂಯಾರ್ಕ್‌ಗೆ ದೂರದಲ್ಲಿರುವ ಸ್ವರ್ಗದಲ್ಲಿದ್ದೇನೆ ಎಂದನ್ನಿಸ್ತಾ ಇದೆ. ಯಾವುದೇ ಯೋಚನೆ ಇಲ್ಲದೆ ಸರಳವಾಗಿರುವ ನಿನ್ನ ದೇಶದಲ್ಲೇ ...ಸ್ವರ್ಗವಾಗಿರುವ ನಿನ್ನ ದೇಶದಲ್ಲೇ ನಿರಂತರವಾಗಿದ್ದುಬಿಡುವ ಯೋಚನೆ ಮೂಡ್ತಾ ಇದೆ ಎಂದಳು. ಇವಳೇನು ಭ್ರಮೆ- ಭಾವುಕತೆಗಳಿಂದ ಅಂಧಳಾ‌ಅಗಿಲ್ಲವಷ್ಟೆ ಎಂದನ್ನಿಸಿತ್ತು ನನಗೆ. ಪುನಃ ನೀರಿನಿಂದ ಪುಟಿಯುವ ಚೆಂಡಿನಂತೆ ಕೇಳಿದ್ದಳು ಗಕ್ಕನೆ: "ಚಂದ್ರೂ ನಿನಗೆ ಮದುವೆಯಾಗಿದೆಯ?"- ಆರಾಮಾಸನದಲ್ಲಿ ನೆಟ್ಟಗೆ ಕುಳಿತು ನನ್ನ ಕಡೆ ನೋಡುತ್ತ. ಈ ಪ್ರಶ್ನೆಯಂತೂ ನಾನು ಎದುರು ನೋಡಿರಲಿಲ್ಲ. ಆದರೂ ` ಆಗಿದೆ ' ಎಂದು ಸುಳ್ಳು ಹೇಳಿ ಯಾಕೆ? ಎಂದು ಪ್ರಶ್ನಿಸಿದ್ದೆ, ಕುತೂಹಲದಿಂದ. ಅವಳು ಎಚ್ಚೆತ್ತವಳಂತೆ "ಯಾಕೂ ಇಲ್ಲ, ಸುಮ್ಮನೆ ಕೇಳಿದೆನಷ್ಟೆ.."ಎಂದಳು. ಆನಂತರ ಕನ್ಯಾಕುಮಾರಿ ದೇವಸ್ಥಾನಕ್ಕೆ ಹೋಗೋಣವೆಂದು ತೀರ್ಮಾನಿಸಿ ಹೊರ ಬಂದೆವು. ಬರುವಾಗ ಪ್ರಸಿದ್ಧ ಸೂರ್ಯೋದಯದ ಬಗೆಗೆ ಹೋಟೆಲ್ ಮೇನೇಜರ್‌ನನ್ನು ವಿವರ ಕೇಳಿದಳು , ಅದಕ್ಕಾತ "ಮೇಡಂ, ನೀವು ಸರಿಯಾದ ಕಾಲದಲ್ಲಿ ಬಂದಿಲ್ಲ. ಈ ತಿಂಗಳೆಲ್ಲ ಸೂರ್ಯ ಕಡಲ ಕಡೆಯಿಂದ ಉದಯಿಸದೆ ಯಾವುದೋ ಬಂಡೆಗಳ ಮಧ್ಯೆದಲ್ಲಿ ಉದಯಿಸಿ ಮೇಲಕ್ಕೇರಿದನಂತರ ಕಾಣಿಸುತ್ತಾನೆ. ಅಷ್ಠೇನೂ ಅಹ್ಲಾದಕರವಾಗಿರುದಿಲ್ಲ"ಎಂದಿದ್ದ. ತಮಿಳಿನವನಾದರೂ ಸ್ವಚ್ಛ ಇಂಗ್ಲೀಶ್‌ನಲ್ಲಿಯೇ. ಬೇಸರದಿಂದಲೆ ಅವಳು ಆಚೆ ಬಂದಿದ್ದಳು.

ದೇವಸ್ಥಾನದ ಧ್ವಾರದಲ್ಲಿ ನನ್ನ ಅಂಗಿಯನ್ನು ಕಳಚಿ ಹೆಗಲ ಮೇಲೆ ಹಾಕಿಕೊಂಡು , ಆಕೆಯ ಚಪ್ಪಲಿಗಳನ್ನು ಕಾವಲಿನವನ ಸುಪರ್ದಿಗೊಪ್ಪಿಸಿ ಒಳ ಹೊಕ್ಕು ದರ್ಶನಾರ್ಥಿಗಳ ಸಾಲಿನಲ್ಲಿ ನಿಂತೆವು. ಶತಮಾನಗಳಿಂದಲೂ ಇವು ನನಗೆ ಹತ್ತಿರವಾದವು. ಇವಕ್ಕೂ ನನಗೂ ತೀರದ ಗಾಢವಾದ ಸಂಬಂಧ ಇದೆ ಎಂದನ್ನಿಸಿ ವಿವೇಕಾನಂದ ಸ್ಮಾರಕದಲ್ಲಿ ದೊರೆಯದ ಶಾಂತಿ, ತೃಪ್ತಿ ಸಮಾಧಾನಗಳು ದೊರೆತಿದ್ದವು. ಏಕೋ ಏನೋ ಆಕೆಯಂತೂ ನನಗಾಗಿ ಅಲ್ಲಿದ್ದವಳಂತೆ ತನ್ನ ಚಡಪಡಿಕೆಯೆಲ್ಲವನ್ನು ಅದುಮಿಟ್ಟವಳಂತಿದ್ದಳು. ದೇವಿ ದರ್ಶನವನ್ನು ಮುಗಿಸಿ ಕುಂಕುಮ ಪ್ರಸಾದವನ್ನು ಆಕೆಯ ಕೈಗೆ ಹಾಕಿದೆ. ಒಂದು ಹತ್ತು ನಿಮಿಷ ಅಲ್ಲಿಯೇ ಕುಳಿತಿದ್ದು ಅನಂತರ ಆಚೆ ಬಂದೆವು. ಆಕೆ ದೊಡ್ಡದಾಗಿ ನಿಟ್ಟುಸಿರು ಬಿಡುತ್ತ ಸಿಗರೇಟೊಂದನ್ನು ಅಂಟಿಸಿ ಆರ್ಟ್ ಎಂಪೋರಿಯಂಗೆ ಎಳೆದೊಯ್ದು ತನಗಿಷ್ಟ ಅನ್ನಿಸಿದ್ದೆಲ್ಲವನ್ನು ಕೊಂಡುಕೊಂಡಳು. ಬೇಡವೆಂದರೂ ಕೇಳದೆ ಉಂಗುರವೊಂದನ್ನು ಕೊಂಡು "ಉಡುಗೊರೆ"ಯೆಂದು ನನ್ನ ಕಣ್ಣಲ್ಲೇ ನೋಡುತ್ತ ನನಗೆ ತೊಡಿಸಿ "ನೀನು ಎಳೆ ಮಗುವಿನಂತಿದ್ದೀಯ"ಎಂದಳು. ಧ್ವನಿಯಲ್ಲಿ ಹಾಸ್ಯವಿರಲಿಲ್ಲ. ಹಾಗೆಂದು ಖಾತ್ರಿಯಾಗಿ ಹೇಳಲೂ ಸಹ ಬರುವುದಿಲ್ಲ. ಸೂರ್ಯ ಮುಳುಗುವ ಸಮಯವಾದ್ದರಿಂದ ಕಡಲ ತೀರಕ್ಕೆ ಬಂದು ಸೀಶೋರ್ ಟೀ ಕ್ಲಬ್‌ನಲ್ಲಿ ಕುಳಿತು ಸೂರ್ಯ ಕಣ್ಣೀಗೆ ಕಾಣದಿದ್ದರೂ ಆತ ಪಸರಿಸುತ್ತಿದ್ದ ಹೊನ್ನ ರಂಗಿನಲ್ಲಿ ಮೈಮರೆತು ಕುಳಿತಿದ್ದೆವು. ಮಾರನೆ ದಿನಸ್ ಬೆಳಿಗ್ಗೆ ಆರೂ ಹತ್ತಕ್ಕೆ ಸೂರ್ಯೋದಯವೆಂದು ಸೂರ್ಯ ಸರಿಯಾಗಿ ಕಾಣುವುದಿಲ್ಲವೆಂಬ ವಿಚಾರ ಕ್ಲಬ್ಬಿನವನನ್ನು ಪುನಃ ಕೇಳಿ ತಿಳಿದುಕೊಂಡು "ಸೂರ್ಯ ಕಾಣದಿದ್ದರೂ ಚಿಂತಿಲ್ಲ, ಭೇಟಿಯಾಗೋಣ ಕಡಲತೀರದಲ್ಲಿ."ಎಂದು ತೀರ್ಮಾನಿಸಿ ಬೀಳ್ಕೊಂಡಿದ್ದೆವು.

ಕೋಣೆಯಲ್ಲಿ ರಾತ್ರಿಯೆಲ್ಲ ನನಗೆ ನಿದ್ರೆ ಬರದೆ ಸಿಗರೇಟ್ ಸೇದುತ್ತ ಕಾಲ ಕಳೆದೆ. ನಡುಝಾಮದಲ್ಲಿ ಆರ್ಧಂಬರ್ಧ ನಿದ್ರೆಯಾವಸ್ಥೆಯಲ್ಲಿ ವಿವೇಕಾನಂದ ಸ್ಮಾರಕ ನೋಡಿದ್ದೆ. ಇಂಗ್ಲಿಷ್ ಸಿನಿಮಾಗಳ ಕ್ಲಬ್ಬಿನ ಸನ್ನಿವೇಶಗಳ ತುಣುಕುಗಳು ಇತ್ಯಾದಿಯೆಲ್ಲ ಕನಸಿನ ತುಂಬಾ ಹರಡಿಕೊಂಡಿದ್ದವು. ಆ ಕನಸಿನ ಸ್ಥಿತಿಯಲ್ಲಿದ್ದಾಗಲೆ ರೂಂ ಬಾಯ್ ಬಂದು ಎಬ್ಬಿಸಿದ.

ಐದು ಗಂಟೆಯಾಗಿತ್ತು. ಬಿದ್ದ ಕನಸಿನ ಬಗೆಗೆ ಯೋಚಿಸುತ್ತ ಸ್ನಾನ ಮಾಡಿ ಆರೂ ಹತ್ತಕ್ಕೆ ಸರಿಯಾಗಿ ಕಡಲತೀರದ ಕಡೆಗೆ ಬರುತ್ತಿದ್ದಂತೆ ಕನಸಿನಲ್ಲಿ ಪೆಟ್ರೀಷಿಯಳನ್ನು ಬೆತ್ತೆಲೆಯಾಗಿ ಕಲ್ಪಿಸಿಕೊಂಡದ್ದು ನೆನಪಿಗೆ ಬಂದಿತು. ತೀರದಲ್ಲಾಗಲೇ ಹೊನ್ನ ಕಿರಣಗಳು ಮೂಡಿದ್ದವು. ಅದರ ಮೂಲ ಕಣ್ಣಿಗೆ ಕಾಣುತ್ತಿರಲಿಲ್ಲ. ಪೆಟ್ರೀಷಿಯ ತನ್ನ ಹೊನ್ನ ಬಣ್ಣದ ಕೂದಲನ್ನು ಗಾಳಿಗೆ ಹಾರಾಡಲು ಬಿಟ್ಟು ನಿಂತಿದ್ದಳು. ನಾನು ಆಕೆಯತ್ತ ಬರುತ್ತಿದ್ದುದನ್ನು ಗಮನಿಸಿ ಗುಡ್‌ಮಾರ್‌ನಿಂಗ್ ಹೇಳಿ "ರಾತ್ರಿ ನಿದ್ರೆ ಬಂತ?"ಎಂದಳು. "ಇಲ್ಲ, ಏನೋ ಓದುತ್ತಾ ಕುಳಿತಿದ್ದೆ"ಎಂದೆ. "ನನಗೂ ನಿದ್ದೆ ಬರಲಿಲ್ಲ, ಆದರೆ ಓದಲಾಗಲಿಲ್ಲ."
ಎಂದು ಹೇಳಿ ಸಿಗರೇಟನ್ನು ಅಂಟಿಸಿದಾಗ , ಕನಸಿನಲ್ಲಿ ವಿವೇಕಾನಂದ ಸ್ಮಾರಕ ನೆನಪಿಗೆ ಬಂತು . ಕಲ್ಲು ಬಂಡೆಗಳ ನಡುವೆ ಎದ್ದ ಸೂರ್ಯನನ್ನು ನೋಡಿಕೊಂಡು ಮತ್ತೊಮ್ಮೆ ದೇವಸ್ಥಾನಕ್ಕೆ ಹೋಗಿಬರೋಣ ಎಂದು ಆಕೆಗೆ ಹೇಳಿ ಆಕೆಯನ್ನು ದೇವಸ್ಥಾನಕ್ಕೆ ಕರೆದೊಯ್ದು ಹತ್ತು ನಿಮಿಷ ಕುಳಿತು ಬಂದೆವು. ನನ್ನ ಮನಸ್ಸಿನಲ್ಲಿದ್ದ ವಿಚಾರವನ್ನು ಅವಳಿಗೆ ಹೇಗೆ ಹೇಳುವುದು ಎಂದು ದಾರಿ ಹುಡುಕುತ್ತಿದ್ದೆ.

ಉಪಹಾರಕ್ಕೆಂದು ಹೋಟೆಲ್ಲಿಗೆ ಹೋಗಿ ತಿಂಡಿಗೆ ಹೇಳಿದನಂತರ ನಿಧಾನವಾಗಿ ಆಕೆಯನ್ನು ಕೇಳಿದೆ, "ವಿವೇಕಾನಂದ ಸ್ಮಾರಕದ ಬಗ್ಗೆ ನೀನು ಕೇಳಿದಾಗ ಆ ಜಾಗ ನನಗೆ ಒಂದು ಚೂರು ಹಿಡಿಸಲಿಲ್ಲ ಅಂತ ಹೇಳಿದೆ. ಯಾಕೆ ಗೊತ್ತೆ?"ಎಂದು ಕೇಳಿದೆ. ಮಾಣಿ ತಿಂಡಿ ತಂದಿಟ್ಟು ಹೋದ. ನನ್ನತ್ತ ಪ್ರಶ್ನಾರ್ಥಕವಾಗಿ ನೋಡಿದ ಆಕೆ ತಿಂಡಿಗೆ ಕೈ ಹಾಕಿದಳು. ನಾನು ತಿಂಡಿ ತಿನ್ನದೆ "ನೀನೆ ಕಾರಣ ."! ಎಂದೆ. ಜೋರಾಗಿ ನಕ್ಕಳು. ನಾನು ಹೇಳುತ್ತಿರುವುದು ತಮಾಷೆಯೆಂಬಂತೆ. ಬಾಯಲ್ಲಿದ್ದುದು ನೆತ್ತಿಗೇರಿತು. ತಲೆಯನ್ನು ತಟ್ಟಿಕೊಂಡು ಹೋಟೆಲ್ಲಿನ ಸೂರನ್ನೆ ಒಂದು ನಿಮಿಷ ನೋಡಿ ಅನಂತರ ನನ್ನ ಕಡೆ ತಿರುಗಿ "ನೀನೇನು ತಮಾಷೆ ಮಾಡ್ತಿಲ್ಲವಷ್ಟೆ?"ನಾನು ಇಲ್ಲವೆಂದು ಸೂಚಿಸುತ್ತ ತಲೆಯಾಡಿಸಿದೆ. ಅವಳು ಮತ್ತೂ ಗಂಭೀರಳಾಗಿ "ನನ್ನ ಕಾರಣದಿಂದ ನಿನಗೆ ಅಂತಹ ಪ್ರಶಾಂತವಾದ ಜಾಗ ಹಿಡಿಸಲಿಲ್ಲವೆ? ವಿವೇಕಾನಂದನಂತಹ ಮಹಾನುಭಾವ ಭಾರತದ ಬಗೆಗೆ ವ್ಯಾಕುಲನಾಗಿ ಅದರ ಕ್ಷೇಮಕ್ಕೆ ಸೊಂಟ ಕಟ್ಟಿ ನಿಲ್ಲಲು ಅಚಲವಾದ ನಿರ್ಧಾರ ಕೈಗೊಂಡ ಪುನೀತವಾದ ಜಾಗ , ನಿನ್ನ ಭಾರತ, ನಿನ್ನ ವಿವೇಕಾನಂದ ನನ್ನ ಕಾರಣದಿಂದ ಹಿಡಿಸಲಿಲ್ಲವೆ...?- ಎಂದಾಗ ಅವಳ ನೀಲಿ ಕಣ್ಣುಗಳ ಆಳದಲ್ಲಿ ಭೀತಿ ಇದ್ದಂತೆಯೂ ಮೇಲ್ಮುಖವಗಿ ಅವು ನಿರ್ಲಿಪ್ತವಾಗಿದ್ದಂತೆ ಕಂಡು ಬಂದವು. [ ಅಸಾಂದರ್ಭಿಕವಾಗಿ ಆಗ ನನಗೇಕೊ ಅವಳನ್ನು ತಬ್ಬಿ ಮುತ್ತಿಡಬೇಕು ಎಂದನ್ನಿಸಿಬಿಟ್ಟಿತು..] ನಾನು ಹೇಳಿದ್ದೆ: "ಪ್ರವಾಸಿಗಳಾಗಿ ಬರುವ ವಿದೇಶಿಯರಿಗಾಗಿ, ಅದರ ಆಕರ್ಷಣೆಗಾಗಿ ನಿರ್ಮಾಣವಾದ ಭಾಗ ಅದು. ಅದರ ನಿರ್ಮಾಣದ ಹಿನ್ನೆಲೆ, ಭಕ್ತಿಯಲ್ಲ ಗೌರವವಲ್ಲ. ಅಭಿಮಾನಗಳಲ್ಲ.ವ್ಯಾಪಾರಿ ದೃಷ್ಠಿ. ನಿನಗೂ ಆ ಜಾಗಕ್ಕೂ ವ್ಯತ್ಯಾಸವೇ ಇಲ್ಲ. ನೀನು ಜಾಹಿರಾತಿಗಾಗಿ ಮಾಡೆಲ್ ಆಗಿರಲು ಕೃತಕ ಸಾಧನಗಳಿಂದ - ಪ್ರಸಾದನಗಳನ್ನು ಉಪಯೋಗಿಸಿ ನಿನ್ನದೆ ಆದ ಕೃತಕ ಸೌಂದರ್ಯದಿಂದ ಜನರನ್ನು ಮರುಳು ಮಾಡುವುದಿಲ್ಲವೆ? ನೀನು ನಿಜವಾಗಿ ಸುಂದರಿಯಾಗಿರಬಹುದು. ಅದು ಬೇರೆ ವಿಚಾರ. ನಿನ್ನ ಕೃತಕತೆಯನ್ನು ಆ ಜಾಗದ ಕೃತಕತೆಯನ್ನು ಸಮೂಲಾಗ್ರವಾಗಿ ದ್ವೇಷಿಸುತ್ತೇನೆ. ತಿರಸ್ಕರಿಸುತ್ತೇನೆ..."ಕೊನೆಗೂ ಅನ್ನಿಸಿದ್ದೆಲ್ಲವನ್ನೂ ಅವಳಿಗೆ ಹೇಳಬೇಕನ್ನಿಸಿದ್ದೆಲ್ಲವನ್ನು ಹೇಳಿದ್ದೆ. ಅವಳು ಪೇಲವವಾಗಿದ್ದಳು- ಮಾತುಗಳನ್ನು ಕೇಳುತ್ತ.ನನಗೆ ಸಂತೋಷವಾಗಿತ್ತು. [ ಆದರೆ ನಾನು ಹೇಳಿದ್ದೆಲ್ಲ್ವು ಎಷ್ಟರ ಮಟ್ಟಿಗೆ ನಿಜ ಎಂಬ ಸಂದೇಹ ಈಗಲೂ ಇದೆ.] "ಮತ್ತೊಮ್ಮೆ ಅಲ್ಲಿಗೆ ಹೋಗಿ ಬರೋಣ , ಬರ್‍ತೀಯೇನು? "- ಪ್ರಶ್ನಿಸಿದ್ದೆ. ಮೌನದಿಂದ ಹಿಂಬಾಲಿಸಿದ್ದಳು. ಹೋಟೆಲ್ ಬಿಲ್ ಕೊಟ್ಟು ಆಚೆ ಬರುವಾಗ ಕೇಳಿದ್ದೆ: "ನೀನು ವಿ.ಎಸ್. ನೈಪಾಲನ ` ಏರಿಯ ಆಫ್ ಡಾರ್ಕ್‌ನೆಸ್ ' - `ಇಂಡಿಯಾ : ವೂಂಡಡ್ ಸಿವಿಲೈಸೇಷನ್' ಓದಿದ್ದೀಯ?"ಎಂದೆ. ಉತ್ತರಿಸಿದಳು: ಹೌದು- ಓದಿದ್ದೇನೆ. ಆತ ಭಾರತವನ್ನು ಅಷ್ಟು ಬೆತ್ತಲೆಯಾಗಿ ನೋಡಬಾರದಿತ್ತು. ಅದು ಯಾರಿಗೂ ಕ್ಷೇಮವಲ್ಲ."

ಸ್ಮಾರಕವನ್ನು ತಲುಪಿದ ನಂತರ ಮರಳಿ ಹಿಂತಿರುಗಲು ದೋಣಿಗಾಗಿ ಕಾಯುತ್ತಿದ್ದ ಸಾಲಿನತ್ತ ಕರೆದೊಯ್ದು ಸಾಗರ ಪ್ರದೇಶದಲ್ಲಿ ಈಜುತ್ತ ಬೇಡುತ್ತಿದ್ದ ಹುಡುಗರನ್ನು , ತೀರದಿಂದ ಸ್ಮಾರಕಕ್ಕೆ ಹಲಗೆಯ ಮೇಲೆ ಬೋರಲಾಗಿ ಇಲ್ಲಿಗೆ ಈಜುತ್ತ ಬರುತ್ತ ಇದ್ದ ಹುಡುಗರನ್ನು , ತೋರಿಸಿ "ಫೋಟೊ ತೆಗೆದುಕೋ"ಎಂದೆ. ಅವಳು ಮತ್ತೂ ಪೇಲವವಾಗಿ ನನ್ನತ್ತ ನೋಡಿದಳು. ನಾನು ಐದಾರು ಫೋಟೋಗಳನ್ನು ತೆಗೆದುಕೊಳ್ಳುತ್ತಾ "ನಾನು ನಿನ್ನ ಅರಿವಿಗೆಟುಕಿಸಲು ಪ್ರಯತ್ನಿಸುತ್ತಿರುವುದು ಸೈಂಟಿಫಿಕ್ ಕಮ್ಯೂನಿಸಂ ಅಲ್ಲ. ನೈಪಾಲನಿಂದ ನಾನು ಕಲಿತಿರುವ ಮಾನವೀಯ ದೃಷ್ಟಿಯಿಂದೊಡಗೂಡಿದ ವಿಶ್ಲೇಷಣ ವಿಧಾನ..."ಎಂದೆ. ಮಾತನಾಡಲಿಲ್ಲ ಅವಳು. ನಾನು ಸ್ವರದಲ್ಲಿ ಕಾಠೀಣ್ಯತೆಯ ಪರಮಾವಧಿ ತಲುಪಿ ಆವೇಶಭರಿತನಾಗಿ ಮುಂದುವರಿಸಿ, "ಕೋಟ್ಯಂತರ ರೂಪಾಯಿಗಳ ಖರ್ಚು ಮಾಡಿರೋ ಈ ಸ್ಮಾರಕ ಭಾರತವಲ್ಲ. ಆ ಹುಡುಗರು, ಕನ್ಯಾಕುಮಾರಿ ದೇವಸ್ಥಾನ ನಿಜವಾದ ಭಾರತ. ಇಂತಹ ಸ್ಮಾರಕಗಳು ಅವನ್ನ ಮುಚ್ಚಿ ಹಾಕ್ತವೆ. ಪಿಟ್ಸ್‌ಬರ್ಗ್‌ನ ವೆಂಕಟರಮಣನ ದೇವಸ್ಥಾನಕ್ಕೂ ಈ ಸ್ಮಾರಕಕ್ಕೂ ವ್ಯತ್ಯಾಸವಿಲ್ಲ..."ಇನ್ನೂ ಏನೇನೋ ತರ್ಕಬದ್ಧವಾಗಿಯೋ - ತರ್ಕಹೀನವಾಗಿಯೋ ಹೇಳಲಿದ್ದೆ. ಅವಳು ಅದಕ್ಕೆ ತಡೆ ಹಾಕಿ "ಚರ್ಚೆ ಬೇಡ."ಎಂದಳು ಉಗ್ರಳಾಗಿ.

ಮಾರನೆ ದಿನ ಅವಳು ನನ್ನ ಬಳಿ ಹೆಚ್ಚು ಮಾತಾಡಿರಲಿಲ್ಲ. ಶೂನ್ಯಳಾಗಿ ಏನೋ ಕಳೆದುಕೊಂಡಂತಿದ್ದಳು. ನಾಗರ್ ಕೋಯಿಲ್, ಸುಚೀಂದ್ರಂಗೂ ಹೋಗಿ ಬಂದೆವು. ಆಗಲೂ ಎಣೂ ಮಾತನಾಡಲಿಲ್ಲ. ನನ್ನ ರಜೆ ಮುಗಿದು ಬಂದಿತ್ತಾದ್ದರಿಂದ ನಾನು ಬೆಂಗಳೂರಿಗೆ ಹಿಂತಿರುಗುವುದು ಅನಿವಾರ್ಯವಾಗಿತ್ತು...
ಹೋಟೆಲ್ಲಿಗೆ ಬಂದು ಅವಳು ಉಳಿದುಕೊಂಡಿದ್ದ ಸೂಟ್ ಕಡೆ ಹೆಜ್ಜೆ ಹಾಕಿದೆ. ನನ್ನ ಆಶ್ಚರ್ಯಕ್ಕೆಂಬಂತೆ ಬೀಗ ಹಾಕಿತ್ತು. ಎಲ್ಲಿ ಹೋಗಿದ್ದಾಳು ಎಂದು ತೀಳಿಯದೆ ಮ್ಯಾನೇಜರ್ ಬಳಿ ವಿಚಾರಿಸಿದಾಗ "ಆಕೆ ಬೆಳಿಗ್ಗೇನೆ ಖಾಲಿ ಮಾಡಿ ಹೋದರು. ಈ ಕಾಗದ ನೀವೀನಾದರೂ ಬಂದರೆ ಕೊಡು ಎಂದು ಕೊಟ್ಟು ಹೋಗಿದ್ದಾರೆ..."ಎಂದು ಹೇಳಿ ಲಕೋಟೆಯೊಂದನ್ನು ನನ್ನ ಕೈಗೆ ಕೊಟ್ಟ. ನಾನು ಹೋಟೆಲ್ಲಿಂದೀಚೆಗೆ ಬಂದು ಅದನ್ನು ಬಿಸಿಸಿದಾಗ ಅದರಲ್ಲಿದ್ದ ಒಕ್ಕಣೆ:

ಚಂದ್ರೂ ,ನಾನು ಪುನಃ ಹಿಂತಿರುಗಿ ನ್ಯೂರ್ಯಾಕ್‌ಗೆ ಹಿಂತಿರುಗುವ ನಿರ್ಧಾರ ಮಾಡಿದ್ದೇನೆ. ಸದ್ಯಕ್ಕೆ ನನ್ನ ಸ್ನೇಹಿತರ ಬಳಿ ಹೋಗುತಿದ್ದೇನೆ. ನಿನಗೆ ವೈಯುಕ್ತಿಕವಾಗಿ ಹೇಳದೆ ಹೋಗುತ್ತಿದ್ದೇನೆಂದು ನನ್ನನ್ನು ಮರೆಯದಿರು. ಆದರೆ ಮೂರು ದಿನದ ಸಾಂಗತ್ಯದಲ್ಲಿ ನೀನೆಂದೂ ಮನುಷ್ಯನಾಗಿರಲೇ ಇಲ್ಲ. ಹಾಗಿದ್ದರೂ ಒಂದಂತೂ ನಿಜ. ಬಾಬಾಗಳು ಯೋಗಿಗಳ ಭ್ಹಾರತ ಕರಗಿ "ನ್ಯೂರ್ಯಾಕ್‌ನಂತಹ ಭ್ಹಾರತ "ಇಲ್ಲೂ ಎದ್ದಿತು. ಒಟ್ಟಾರೆ ನಾನು ಎಲ್ಲಿ ಹೋದರೂ ಶಾಂತಿ ಎಂಬುದಂತೂ ದೊರೆಯದಾಗಿದೆ. (ಹುಡುಕಿದರೆ ಸಿಗುವಂತಹದಲ್ಲ. ನಮ್ಮ ಬಳಿಯೇ ಇರಬೇಕು, ಆದೇನಾದರೂ ಇದ್ದರೆ .....! ತಾತ್ವಿಕವಾಗಿದೆಯಲ್ಲವೆ ಈ ಯೋಚನೆ!)
ನಿನ್ನನ್ನು ನೋಡಲು ವಿದಾಯ ಹೇಳಲು ನನಗೇಕೋ ನೈತಿಕ ದೈರ್ಯ ಕಳೆದು ಕೊಂಡಂತಾಗಿದೆ. ಕ್ಷಮೆ ಇರಲಿ;
ನಿನ್ನ ಸ್ನೇಹಿತೆ
ಪೆಟ್ರಿವಿ.
ಸೂ. ನಾನು ನಿನ್ನನ್ನು ದ್ವೇಷಿಸುತ್ತೇನೆ,ತಿರಸ್ಕರಿಸುತ್ತೇನೆ.

ಓದಿ ಮುಗಿಸಿದ ನಂತರ ನನಗೆ ಎರಡು ನಿಮಿಷ ಏನೂ ತೊಚಲಿಲ್ಲ. ಆದರೆ ಈಗ ಬೆಂಗಳೂರಿಗೆ ಹೊರಟಿರುವ ಬಸ್ಸಿನಲ್ಲಿ ಕುಳಿತಿರುವ ನನ್ನನ್ನು ಅವಳ ನೀಲಿ ಕಣ್ಣುಗಳ ಶಿಶುತನದ ನಗು, ಜಿಗುಪ್ಸೆಯ ನೋಟ ಇತ್ಯಾದಿಗಳು, ಅಷ್ಟೆಲ್ಲ ಯಾಕೆ ಅವಳ ಇಡಿಯ ವ್ಯಕ್ತಿತ್ವವೇ ಕಣ್ಣುಗಳಲ್ಲಿ ಮೂರ್ತವಾಗಿ ಘನೀರ್ಭೂತವಾದಂತಿದೆ. ಆಕೆಯ ಕಣ್ಣುಗಳೇ ನನಗೆ "ಏನೇನನ್ನೋ"ಹೇಳುತ್ತ ಹಿಂಬಾಲಿಸಿದ್ದವು. ಜೊತೆಗೆ ಕಡಲು.... ನೀಲಿಬಣ್ಣ.... ಆರ್ಭಟ.... ಮೂಕಭಾವ...ಅಮೂರ್ತತೆ ಎಲ್ಲವೂ ಅವಳ ಸೌಂದರ್ಯದೊಂದಿಗೆ ಸೇರಿ ನನ್ನನ್ನು ಹಿಂಬಾಲಿಸುವಂತಿದೆ...

(ಗುಟ್ಟು: ಈಗ ಕನ್ಯಾಕುಮರಿಯಲ್ಲೇ, ಸ್ಮಾರಕಕ್ಕೆ ಹತ್ತಿರವಾಗಿ ಎಲ್ಲಾದರೂ ಮನೆ ಮಾಡಿಕೊಂಡು ಇದ್ದು ಬಿಡಬೇಕೆಂಬ ಅನಿಸಿಕೆಗಳು ಮೂಡುತ್ತಿವೆ...)

ಪ್ರಜಾವಾಣಿ ೧೪.೧೦. ೧೯೭೯ ಪ್ರಕಟ....

ಸಣ್ಣಕತೆ - ಚರಮ ಗೀತೆಯಲ್ಲೊಂದು ಅಳುಕು..

ಸಾವಿನ ಬಗೆಗಿನ ಪ್ರಜ್ಞೆಯನ್ನು ನಾವು ಬೆಳೆಸಿಕೊಳ್ಳಲನುವಾಗುತ್ತಿದ್ದಂತೆ ಅದು ಸೂಚನೆಯನ್ನೂ ಕೊಡದೆ ನಮ್ಮನ್ನು ಆವರಿಸುತ್ತದೆ. ಪ್ರಜ್ಞಾಪೂರ್ವಕವಾಗಿ ಅದನ್ನು ಸಂಧಿಸುವಾಗಿನ ಯಮಯಾತನೆಯನ್ನು ನಾನು ಕಲ್ಪನೆಯಲ್ಲೂ ಊಹಿಸಲಾರೆ. ಕಮಲತ್ತೆ ಈಗಲೋ ಆಗಲೋ ಎನ್ನುವಂತಿದ್ದಾರೆ ಎಂದು ಮಾವಯ್ಯ ಬರ್‍ದಿರೋ ಕಾಗ್ದ ಈಗ ನನ್ ಕೈಲಿದೆ. ಕಮಲತ್ತೇನ ನೆನೆಸಿಕೊಂಡಾಗಲೆಲ್ಲ ಏನೋ ಎಂತದೋ ಅಳುಕು. ಅದಕ್ಕೆ ಉತ್ತರಿಸಲಿಕ್ಕಾಗದೆ ಒಂಟಿಯಾಗಿರುವಾಗೆಲ್ಲಾ ಮಮ್ಮಲ ಮರುಗುತ್ತೇನೆ. ಈ ಅಳುಕಿನ ಮೂಲ ಭಾವನೆಗಳನ್ನೆಲ್ಲ ಗುರುತಿಸುವ ನನ್ನ ಹಂಬಲ ಹಾಗೇ ಉಳಿದಿದೆ.

ನನ್ನ ಭಗ್ನಪ್ರೇಮಕ್ಕೆ ಕಾರಣಳಾದ ಹುಡುಗಿ ಕಮಲಳ ಹೆಸರೇ ಕಮಲತ್ತೆಗಿದ್ದುದರಿಂದ ನಾನು ಕಮಲತ್ತೆಯಿಂದ ವಿಲಕ್ಷಣವಾದ ಆಕರ್ಷಣೆಗೊಳಗಾಗಿದ್ದೆನೆ ಎಂಬುದು ಇಂದಿಗೂ ತೀರ್ಮಾನವಾಗದ ವಿಚಾರ. ಕಮಲಳಿಗೂ ಕಮಲತ್ತೆಗೂ ರೂಪದಲ್ಲೂ ಗುಣದಲ್ಲೂ ಒರಟು ಸಾಮ್ಯಗಳಿದ್ದುದು ನಿಜ. ಬಹುಶಃ ಆ ಸಾಮ್ಯಗಳೇ ನಾನು ಕಮಲತ್ತೇನ ಹೆಚ್ಚಿಗೆ ಹಚ್ಚಿಕೊಳ್ಳಲು ಕಾರಣವಾಗಿರಬಹುದು. ನನ್ನ ಹಾಗು ಕಮಲತ್ತೆಯ ಸಂಬಂಧ ಮನಶ್ಶಾಸ್ತದ ಯಾವ ಪಂಥದಿಂದ ಗುರುತಿಸಬಹುದೋ ನನಗೆ ಗೊತ್ತಿಲ್ಲ. ಫ್ರಾಯ್ಡ್‌ನ ಥಿಯರಿಯನ್ನು ಈ ಸಂಬಂದಕ್ಕೆ ನೀವು ಮಾತ್ರ ಹಚ್ಚದಿರಿ. ಯಾಕೇಂದ್ರೆ ಆ ಥಿಯರಿಯ ನೆರಳಿನಲ್ಲಿ ನಮ್ಮಿಬ್ಬರ ನಡುವಿನ ಸಂಬಂದವನ್ನ ವಿಮರ್ಶಿಸಿ- ವಿಶ್ಲೇಷಿಸಲು ನಾನು ಪ್ರಯತ್ನಿಸಿ ಫ್ರಾಯ್ಡ್‌ನೊಬ್ಬ ` ಹುಚ್ಚು ಮುಂಡೇಮಗ' ಎಂದು ಬಯ್ದದ್ದೂ ಉಂಟು.

ಅಮ್ಮನ ಗಂಟು ಮೋರೆಯ ಸೆಡವಿನ ತಾತ್ಸಾರಕ್ಕೆ ಗುರಿಯಾಗಿದ್ದ ನಾನು ಶಾಲೆಯ ಕಾಲೇಜಿನ ಪ್ರತಿ ಬೇಸಿಗೆ ರಜೆಗೆ ಊರಿಗೆ ಹೋಗಿ ಕಮಲತ್ತೆ ಮಡಿಲಲ್ಲಿ ಮಲಗಲು ಹವಣಿಸಿದ್ದು ಉಂಟು. ಆದರೆ ಲೋಕವೇನಂದಾತು ಎಂಬ ಭೀತಿ ಪೂರ್ವಕವಾದ ಪ್ರಜ್ಞೆ ಆ ಹವಣಿಕೆಯನ್ನು ಚಿವುಟಿ ಹಾಕುತ್ತಿದ್ದುದು ಉಂಟು. ಕಮಲತ್ತೆ ಸುಟ್ಟು ಕೊಡುತ್ತಿದ್ದ ಕೆಂಡದ ರೊಟ್ಟಿ ಸವಿ ನೋಡ್ತಾ ` ನನಗೆ ಹೀಗೆ ಪ್ರಾಮುಖ್ಯತೆ ಕೊಡೋರು ಯಾರೂ ಇಲ್ವಲ್ಲ' ಎಂದು ಬೇಸರಿಕೆಯಿಂದ ಕಣ್ಣಲ್ಲಿ ನೀರು ತಂದು ಕೊಂಡು ಅಮ್ಮ ಅಪ್ಪಯ್ಯನ್ನ ದಿನನಿತ್ಯದ ಜಗಳಗಳ ವರದಿಯನ್ನು ಕಮಲತೆಃಗೊಪ್ಪಿಸಿ ದೂರುತ್ತಿದ್ದೆ. " ಮೊದ್ಲು ನಿಮ್ಮಪ್ಪಯ್ಯನ್ನ ಅಮ್ಮನ್ನ ದೂರೋದನ್ನ ನಿಲ್ಸು." ಅಂತಿದ್ದ ಕಮಲತ್ತೆಯ ತಾತ್ವಿಕತೆ ನನಗೆ ಇಂದಿಗೂ ಬಿಡಿಸಲಾಗದ ಒಗಟಾಗಿದೆ. ಬ್ರಾಹ್ಮಣನಾದ ನಾನು ಗಂಡಸರು ದಿನನಿತ್ಯ ಧ್ಯಾನ - ಸಂಧ್ಯಾವಂದನೆ ಮಾಡುತ್ತಿದ್ದುದನ್ನು ಕಂಡಿದ್ದೆನೆ ಹೊರತು ಹೆಂಗಸರು ಹಾಗೆಲ್ಲ ಧ್ಯಾನ- ಸಂಧ್ಯಾವಂದನೆಗಳನ್ನು ಮಾಡುತ್ತಿದ್ದುದನ್ನು ಕಂಡಿರಲಿಲ್ಲ. ಕಮಲತ್ತೆ ಉಪನಯನ ಮಾಡಿಕೊಂಡವಳಂತೆ ಪ್ರತಿದಿನವೂ ಪಂಚಪಾತ್ರೆ ಉದ್ಧರಣೆ ನೀರು ಇಟ್ಟುಕೊಂಡು ಸಂಧ್ಯಾವಂದನೆಯಂತದು ಎಂಥದೋ ಒಂದನ್ನ ಮಾಡ್ತಿದ್ದಳು. ಅದರ ಬಗ್ಗೆ ನಾನು ಚಿಕ್ಕವನಿದ್ದಾಗ ಕೇಲಿದ್ದೆ, " ನೀನು ತಿಳ್ಕೊಂಡು ಏನ್ಮಾಡ್ತೀ? ಬಾ, ನಿನಗೆ ಕೆಂಡದ ರೊಟ್ಟಿ ಕೊಡ್ತೀನಿ" ಅಂತ ಹೇಳಿ ಏನಾದರು ಆಮಿಷ ಒಡ್ಡಿ ನನ್ನನ್ನು ಸುಮ್ಮನಾಗಿಸುತ್ತಿದ್ದಳು." ಮದ್ದು ಮಾಟಕ್ಕೆ ಸಬಂಧಪಟ್ಟಿದ್ದೋ ಏನೋ? ಎಂಥದೋ ಒಂದು ಪಾಡದು. ಎಲ್ಲಿಂದ ಕಲ್ತಳೋ ಈ ಕಮಲ.." ಎಂದು ಸಾಕಷ್ಟು ಜನ ಆಡಿಕೊಡದ್ದನ್ನು ಕೇಳಿದ್ದೇನೆ. ಅದೆಲ್ಲಾ ಏನೇ ಇರಲಿ, ಆಕೆ ಸಂಧ್ಯಾವಂದನೆ ಮಡ್ತಿದ್ದದ್ದು, ಬಂದು ಹೋದವರ ಬಳಿಯೆಲ್ಲಾ ಮಾಸದ ನಗುವಿನಿಂದ ಬೇಕಾದ್ದಕ್ಕೆ ಬೇಡಾದ್ದಕ್ಕೆಲ್ಲಾ ಉಪಚರಿಸುತ್ತಿದ್ದುದು, ಆಕೆಯ ಇನ್ನಿತರ ನಡವಳಿಕೆಯೆಲ್ಲಾ ನನ್ನ ಮೇಲೆ ಗಟ್ಟಿ ಪ್ರಭಾವ ಬೀರಿತ್ತು. ಬಹುಶಃ ನಾನು ಅಂತಹ ಪ್ರಭಾವವನ್ನು ಸ್ವಯಂಪ್ರೇರಿತನಾಗಿ ಆಹ್ವಾನಿಸಿದವನಲ್ಲ. ಆದರೂ ಆ ಸ್ವಭಾವ ಬೆಂಗಳೂರಿನವನಾದ ನನ್ನ ವ್ಯಕ್ತಿತ್ವವನ್ನು ರೂಪುಗೊಳಿಸುವುದರಲ್ಲಿ ವಿಫಲವಾಗಿದ್ದರೂ ಪ್ರಜ್ಞೆಯ ಒಳಾಂತರ್ಯದಲ್ಲಿ ಎಲ್ಲೊ ಮಡುಗಟ್ಟಿ ಕೂತಿದೆ. ತಾರುಣ್ಯದ ಕನಸುಗಳು- ಆದರ್ಶಗಳೆಲ್ಲ ಬತ್ತಿ ಹೋಗಿಬದುಕೆಲ್ಲ ಬರಿದಾಗಿರುವಂತಾಗಲೇ ಕಮಲತ್ತೆಗೆ ಕ್ಯಾನ್ಸರ್ ಎಂಬ ಸುದ್ದಿ ನನಗೆ ಬಂದಿತ್ತು.

ದೀರ್ಘಕಾಲದಿಂದ ತನಗಿದ್ದ ಹೊಟ್ಟೆನೋವನ್ನ ಹೋಮಿಯೋಪಥಿ ಡಾಕ್ಟರನಾದಮಾವಯ್ಯನಿಗೂ ತಿಳಿಯದಂತೆ ಮುಚ್ಚಿಟ್ಟು, ಅದರ ಸುಳಿವೂ ಕೊಡದಂತೆ ನೋವಿನ ನರಕಕ್ಕೆ ನಗುವಿನ ಮುಖವಾಡ ಹಚ್ಚುತ್ತಿದ್ದ ಆಕೆಯ ಸಹನೆಗೆ ಮಾವಯ್ಯನಿಂದ ಎಂತಹ ವಂಚನೆ ನಡೆದಿತ್ತು!ಕಮಲತ್ತೆಯ ಅನಾರೋಗ್ಯದ ಕಾರಣ ಮನೆಯ ಉಸ್ತುವಾರಿ ನೋಡಿಕೊಳ್ಳಲು ಬಂದಿದ್ದ ಕಮಲತ್ತೆಯ ತಂಗಿಯ ಬಳಿ ಬೆಚ್ಚಗಿದ್ದ ಮಾವಯ್ಯನ ಮೋಜು ಕಮಲತ್ತೆಗೆ ಕ್ಯಾನ್ಸರ್ ಎನ್ನುವ ಸತ್ಯ ಆಸ್ಫೋಟಿಸಿದಾಗ ಕಳಚಿಬಿತ್ತು. ಸ್ವತಃ ಡಾಕ್ಟರನಾದ ಮಾವಯ್ಯನು ಸವಂತ ಹೆಂಡತಿಗಿದ್ದ ರೋಗದ ಸುಳಿವು ತಿಳಿದುಕೊಳ್ಳಲು ಅಶಕ್ತನಾದುದರ ಬಗೆಗೆ ತುಂಕೂರಿನ ಡಾಕ್ಟರ್ ಆಕ್ಷೇಪವೆತ್ತಿದಾಗ " ಏನ್ಮಾಡೋದು ಡಾಕ್ಟ್ರೆ, ನನ್ನ ಹತ್ರ ಏನೂ ಹೇಳದೆ ಮುಚ್ಚಿಟ್‌ಬಿಟ್ಳು" ಎಂದು ಅಸಹಾಯಕತೆಯ ಸೋಗು ಹಚ್ಚಿದ ಮಾವಯ್ಯನು ತನ್ನ ನಾದಿನಿ ಬಳಿ ಇಟ್ಟುಕೊಂಡಿದ್ದ ಅವ್ಯವಹಾರವನ್ನು ಕಾಲದ ಗಡುವು ಆಚೆ ನೂಕಿದಾಗ ಊರವರ ಹಾಳು ಬಾಯಿ ಹಾಳುಸುರಿದಿರಲಿಲ್ಲ.ತನ್ನೆಲ್ಲ ತಾಪತ್ರಯಗಳ ಮಧ್ಯೆ ಮಾವಯ್ಯ ಕಮಲತ್ತೇನ ಬೆಂಗಳೂರಿಗೆ ಕರೆತಂದಾಗ ಕಮಲತ್ತೆ ಎಲುಬಿನ ಹಂದರವಾಗಿದ್ದಳಾದರೂ ಕಣ್ಣಲ್ಲಿಯ ಮಿಂಚನ್ನು ಕಳೆದುಕೊಂಡಿರಲಿಲ್ಲ. ಸಾವಿನ ವಿರುದ್ಧ ಹೋರಾಡುತ್ತಿದ್ದ ಆಕೆಯ ಜೀವದ ಬಗೆಗೆ ಯಾವ ದೊಡ್ಡ ಡಾಕ್ಟರೂ ಖಾತ್ರಿ ನೀಡಲು ಸಾಧ್ಯವಿರಲಿಲ್ಲವೆಂದೇ ಆಕೆಯ ಬಂಧು ಬಳಗವೆಲ್ಲ ಆಕೆಗೆ ಇಷ್ಟವಾದ್ದನ್ನೆಲ್ಲ- ಇಷ್ಟವಾಗದ್ದನ್ನೆಲ್ಲ ತಂದು ಕೇಳಲಿ ಕೇಳದಿರಲಿ ಆಕೆಯ ಮುಂದೆ ತಂದು ಸುರಿದಿದ್ದರು. ಅದರಲ್ಲಿ ನಾನೂ ಒಬ್ಬ. ಒಂದು ದಿನ ಆಕೆಗಿಷ್ಟವಾದ ತಿಂಡಿಯನ್ನು ಒಯ್ದಿದ್ದೆ. ಆಗನ್ನಿಸಿತ್ತು- " ಹೀಗೆಯೆ ಪ್ರತಿಯೊಬ್ಬರೂ ಏನಾದರೊಂದನ್ನ ತೆಗೆದುಕೊಡುಹೋಗಿ ಆಕೆಯನ್ನು ಸಂತೋಷವಾಗಿಡುವ ನೆಪದಲ್ಲಿ ಆಕೆ ಮರೆಯಲೆಳುಸುತ್ತಿರಬಹುದಾದ ಸಾವು ಆಕೆಯ ಪ್ರಜ್ಞೆಯನ್ನು ಸದಾ ಕುಕ್ಕುತ್ತಿರುವಂತೆ ಮಾಡಿರಬಹುದಲ್ಲವೆ." ಎಂದು.ನಮ್ಮ ಕನಿಕರಭರಿತವಾದ ಮಾತುಗಳನ್ನು ಜೊತೆಗೆ ರೋಗದ ಭಯಂಕರ ನೋವನ್ನು ತಾಳಿಕೊಳ್ಳುತ್ತಿರುವ ಆಕೆಯ ತಾಳ್ಮೆಯ ಬಗೆಗಿನ ನಮ್ಮ ಆಶ್ಚರ್ಯಸೂಚಕಗಳನ್ನು, ಅವಳನ್ನು ಸಂತೋಷವಾಗಿಡಲು ಬಲವಂತದಿಂದ ಹೊರಹೊಮ್ಮಿಸಿದಾಗ ಕೃತಕವಾಗಿ ಹೋದ ಆ ಹಾಸ್ಯ ತುಣುಕುಗಳು ಇವೆಲ್ಲ ಅವಳ ಸಾವಿನ ಪ್ರಜ್ಞೆಯನ್ನು ಗಟ್ಟಿಯಾಗಿಸಿರಲಾರದೆ? ಇದ್ದಬದ್ದ ಅಲ್ಪ ಸಂತೋಷವನ್ನು ಆ ಕಾರಣಗಳಿಂದ ತ್ಯಜಿಸಿದ ಆಕೆಯ ನಗುವು ಸಹ ಕೃತಕವಲ್ಲವೆ? ಆನಂತರ ಆಕೆ ಒಂಟಿಯಾಗಿದ್ದಾಗ ನಮ್ಮನ್ನು ಶಪಿಸಿ ತಾನೂ ನರಳಿರಲಾರಳೆ ಎಂಬೆಲ್ಲಾ ಯೋಚನೆಗಳು ನನ್ನ ಅಳುಕನ್ನು ಈಗ ಅಧಿಕಗೊಳಿಸಿವೆ.

ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಒಂಟಿಯಾಗಿರುತ್ತಿದ್ದ ಆಕೆಯ ಆಗಿನ ಭಾವನೆಗಳ ಬಗೆಗೆ ನನ್ನ ಬಾಲಿಶವಾದ ಬೌದ್ಧಿಕವಾದ ಕುತೂಹಲವನ್ನು ಅನೇಕ ಪ್ರಶ್ನೆಗಳ ರೂಪದಲ್ಲಿ ಆಕೆಯ ಮುಂದೆಯೆ ಹೊರಗೆಡಹಿದಾಗ ನಕ್ಕು ಹೇಳಿದ್ದಳು: " ಅಲ್ವೋ ಚಂದ್ರೂ , ನೀನಿನ್ನೂ ಹುಡುಗುಹುಡುಗಾಗೇ ಇದ್ದೀಯಲ್ಲೋ, ನೀನೇನು ಸಾಯ್ದೆ ಇಲ್ಲೇ ಗೂಟ ಬಡ್ಕೊಂಡಿರ್‍ತೀಯಾಂತ ಅಂದ್ಕೊಂಡಿದ್ದೀಯ? ಕೆಲವು ರಹಸ್ಯಗಳನ್ನ ಕೆದಕಬಾರ್‍ದು. ಕೆದಕುವ ಮುಖಾಂತರ ಅವುಗಳನ್ನ ಅರಿವಿಗೆಟುಕಿಸ್ಕೊಂಡ್ರೆ ಅವು ಹಿಂತಿರುಗು ಹೊಡೆಯುತ್ವೆ. ನಮ್ಮ ನಿತ್ಯ ಚಟುವಟಿಕೆಗಳ ಅನುಭವ ಆ ಏಟಿನ ಬಿರುಸನ್ನ ತಾಳಿಕೊಳ್ಳೂವಷ್ಟು ಪಕ್ವವಾಗಿರೋದೆ ಇಲ್ಲ. ಹಾಗೆ ನೋಡಿದ್ರೆ ನಿನ್ನ ಹುಡುಗುತನವೇ ಶ್ರೇಷ್ಠವಾದ್ದು. ಬದುಕಿನ ಬಗೆಗೆ ಎಂಥದೋ ಒಂದು ಕುತೂಹಲವನ್ನ ಉಳಿಸಿರುತ್ತೆ..." ಎಂದಿದ್ದಳು.
ಈ ಕಮಲತ್ತೆಗೆ ನಾನು ಅತಿಯಾದ ಪ್ರಾಮುಖ್ಯತೆ ಕೊಟ್ಟಿರೊದ್ರಿಂದ್ಲೇ ನನ್ನ ಇನ್ನೂ ಚಿಕ್ಕ ಹುಡುಗ ಅಂತಂದುಕೊಂಡಿದ್ದಾಳೆ ಎಂದಂದುಕೊಂಡು ಸುಮ್ಮನಾಗಿದ್ದೆ.ಡಾಕ್ಟರುಗಳು ಕಮಲತ್ತೆಗೆ ಚಿಕಿತ್ಸೆ ವೃಥಾ ದಂಡವೆಂದು ಅಭಿಪ್ರಾಯ ಪಟ್ಟಾಗ ಮಾವಯ್ಯ ಕಮಲತ್ತೇನ ಊರಿಗೆ ಸಾಗಿಸಿದ್ದ. [ಕಮಲತ್ತೆಗೆ ರಕ್ತ ಬೇಕಿದ್ದಾಗ ಕಮಲತ್ತೆ ಮಗ ಗೋಪಿ ರಕ್ತ ಕೊಟ್ಟಿದ್ದ. ಅದನ್ನು ಅಭಿನಂದಿಸಿ ರಾಜ್ಯಪಾಲರಿಂದ ಬಂದಿದ್ದ ಯಾಂತ್ರಿಕ ಅಚ್ಚುಪತ್ರವನ್ನು ನಮಗೆಲ್ಲ ತೋರಿಸಿ ಆನಂದಿಸಿದ್ದ.] ಕಮಲತ್ತೇನ ಊರಿಗೆ ಸಾಗಿಸಿದ ಹಲವಾರು ತಿಂಗಳನಂತರ ಕಮಲತ್ತೆ ಸೀರಿಯಸ್ ಅಂತನ್ನೋ ಸುದ್ಧಿ ಪತ್ರವೆ ಈಗ ನನ್ನ ಕೈಲಿರೋದು. ಆಫೀಸಿನ ಅಡ್ರೆಸ್‌ಗೆ ಈ ಕಾಗ್ದ ಬಂದಿದೆ. ಅದು ಬಂದಾಗಿಲಿಂದಲೂ ಕುಳಿತೆಡೆ ಕುಳಿತಿರಲಾಗದ, ನಿಂತೆಡೆ ನಿಂತಿರಲಿಕ್ಕಾಗದಂತೆಹ ಪರಿಸ್ಥಿತಿ. ರಜೆ ಗೀಚಿ ಹಾಕಿ ಮನೆಗೆ ಬಂದು ನನ್ನಾಕೆ ಸೀತೆಗೆ [ ಕಮಲತ್ತೆ ಮಗಳು] ಸೂಟ್‌ಕೇಸಿಗೆ ಬಟ್ಟೆ ತುಂಬಿ ಹೊರಡಲು ಸೂಚಿಸಿದೆ. ಸುದ್ಧಿ ಕೇಳಿದೊಡನೆ ಏನನ್ನೂ ಮಾಡಲಾಗದಂತೆ ಮಂಕಾಗಿ ಕೂತಳು. ಸೂಟ್‌ಕೇಸಿಗೆ ನಾನೆ ಬಟ್ಟೆ ತುಂಬಿದೆ. ಅಂತೂ ಇಂತೂ ಕಲಾಸಿಪಾಳ್ಯಂ ಬಸ್ ನಿಲ್ದಾಣಕ್ಕೆ ಬಂದೆವು. ಆಗ ಜ್ಞಾಪಕಕ್ಕೆ ಬಂತು, ನಾನು ಕೆಲಸಕ್ಕೆ ಸೇರಿದಾಗಿನಿಂದಲೂ ಕಮಲತ್ತೆಗೆ ಏನೂ ಕೊಟ್ಟಿಲ್ಲವಲ್ವೆ ಎಂಬುದು. ಸೀತಳನ್ನು ಬಸ್ಸಿನಲ್ಲಿ ಕೂಡಿಸಿ ಬಸ್ಸು ಹೊರಡಲು ಇನ್ನೂ ಸಮಯವಿದ್ದರಿಂದ ನಾವೆಲ್ಟಿ ಸ್ಟೋರಿನೆಡೆ ಹೆಜ್ಜೆ ಹಾಕಿದೆ. ಸ್ಟೋರಿನಲ್ಲಿದ್ದುದೆಲ್ಲವನ್ನು ನೋಡಿದನಂತರವೂ ಕಮಲ್ತ್ತೆಗೆ ಏನು ಕೊಡಬಹುದೆಂಬುದೇ ಹೊಳೆಯಲಿಲ್ಲ.ಪೆದ್ದು ಪೆದ್ದಾಗಿ ಅಲ್ಲಿದ್ದ ಸೇಲ್ಸ್‌ಮ್ಯಾನನ್ನು "ಉಡುಗೊರೆ ಕೊಡ್ಬೇಕು. ಏನಾದ್ರು ಇದೆಯ?" ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆಯಲ್ಲಿದ್ದ ಪೆದ್ದುತನವನ್ನು ಆತ ಗುರುತಿಸಿದರೂ ತೋರಿಸಿಕೊಳ್ಳದೆ ಮುಗುಳ್ನಗುತ್ತಲೇ "ಎನ್ಸಾರ್, ಮದ್ವೇನಾ-ಮುಂಜೀನಾ-ಬರ್ತ್‌ಡೇನಾ?" ಎಂದ್ಹು ವಿಚಾರಿಸಿದ. ಏನು ಹೇಲಲು ತೋಚದವನಂತೆ ಇದ್ದದ್ದು ಇದ್ದ ಹಾಗೆಯೆ "ಈಗ್ಲೋ ಆಗ್ಲೋ ಅಂತಿರೋ ಹೆಂಗ್ಸಿಗೆ..." ಎಂದು ಹೇಳಿದೆ. ಅವನು ಏನು ಹೇಳಲು ಸೂಚಿಸಲು ಅಶಕ್ತನಾದವನಂತೆ ಪೆಚ್ಚುಪೆಚ್ಚಾಗಿ "ನಾನು ಹೇಗೆ ಹೇಳಲಿ ಸಾರ್.." ಎಂದ. ಯಾವುದೇ ಆಯ್ಕೆಯೂ ಸಂದರ್ಭಕ್ಕೆ ಹೊಂದಾಣಿಕೆಯಾಗದಿರಲು ನಾನು ಖಾಲಿ ಕೈಯಲ್ಲೇ ಬಂದು ಬಸ್ಸಿನಲ್ಲಿ ಕುಳಿತೆ.

ಹೆಚ್ಚು ಕಡಿಮೆ ಅರ್ಧರಾತ್ರಿ ಹೊತ್ತಿಗೆ ಹೂವಿನಹಳ್ಳಿ ತಲುಪಿದೆವು. ಕಮಲತ್ತೆ ನನ್ನ ನೋಡಿ ಕಣ್ಣಲ್ಲಿ ಮಿಂಚು ತೂರಿಸಿಕೊಂಡವಳಂತೆ ನರಳುವಿಕೆಯನ್ನು ಬದಿಗಿಟ್ಟು ಅಂಪೂ ಅತ್ತಿಗೆಗೆ ಅಡಿಗೆಗಿಡಲು ಹೇಳಿ ನನ್ನ ಉದ್ಯೋಗ, ಆರೋಗ್ಯದ ಬಗೆಗೆ ವಿಚಾರಿಸಲಾರಂಭೀಸಿದಳು. ನನ್ನ ಕೈಯಲ್ಲಿ ಆ ವಿಚಾರಣೆಗಳಿಗೆ ಉತ್ತರ ನೀಡಲು ಸಾಧ್ಯಾವಾಗದೆ ಕೋಪದ ಧ್ವನಿಯಲ್ಲಿ " ನಾಳೆ ಬೆಳಿಗ್ಗೇನೆ ಬೆಂಗ್ಳೂರಿಗೆ ಹೋಗೋಣ ನಡಿ. ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ ನನಗೆ ಗುರ್ತಿರೋ ಡಾಕ್ಟರಿಗೆ ಹೇಳಿದ್ದೇನೆ. ಅವರೆಲ್ಲಾ ನೋಡ್ಕೋತ್ತಾರಂತೆ.." ಎಂದೆ ಆಕೆಯನ್ನು ತರಾತುರಿಗೊಳಿಸುವಂತೆ. ನಕ್ಕಂತೆ ಮಾಡಿದ ಕಮಲತ್ತೆ " ಥೂ ಹುಡುಗುಮುಂಡೇದೆ, ಒಂದ್ಕಾಗದ ನೋಡಿ ಇಷ್ಟೊಂದು ಗಾಬರಿಯಾಗ್ತಾರೇನೊ?ಇನ್ನೂ ಏಳೆಂಟು ತಿಂಗಳು ನನಗೆ ಏನೂ ಆಗೋಲ್ಲ ಅಂತ ಡಾಕ್ಟ್ರೇ ಹೇಳಿದ್ದಾರೆ.ನಿಮ್ಮನ್ನೆಲ್ಲ ನೋಡ್ಬೇಕೂಂತನ್ನಿಸ್ತು. ಕಾಗ್ದ ಬರ್‍ದ್ ಹಾಕೀಂತ ನಾನೆ ನಿಮ್ಮಾವಯ್ಯಂಗೆ ಹೇಳ್ದೆ.ಅವ್ರು ಹಾಗ್ ಬರ್‍ದಿದಾರಷ್ಟೆ..." ಎಂದಳು. ಅದನ್ನು ಕೇಳಿದಾಗ ಮನಸ್ಸಿಗೆಷ್ಟೋ ಸಮಧಾನವಾಯ್ತು. ಆ ಅರ್ಧರಾತ್ರಿ ವೇಳೆ ಕಮಲತ್ತೆ ಕೈಲಾಗದಿದ್ದರೂ ಬಲವಂತ ಮಾಡಿ ಕೈತುತ್ತು ಹಾಕಿಸಿಕೊಂಡು ಊಟ ಮಾಡಿದೆ. ಸೀತಳಂತೂ ತಾನಂದುಕೊಂಡಂತೆ ಅಮ್ಮನಿಗೆ ಏನೂ ಆಗಿಲ್ಲವೆಂಬ ಸಮಧಾನದಲ್ಲೇ ಬಿಕ್ಕಿಬಿಕ್ಕಿ ಅಳುತ್ತಾ ನಿದ್ದೆ ಮಾಡಿದ್ದಳು. ನಾನು ಕಮಲತ್ತೆ ಕೋಣೇಲೆ ಬುಡ್ಡಿ ದೀಪದ ಮಂಕು ಬೆಳಕಲ್ಲಿ ಹಾಸಿಕೊಡು ಮಲಗಿದ್ದೆ. ನನಗಾಗಲಿ ಕಮಲತ್ತೆಗಾಗಲಿ ಬೆಳಗಾಗ್ತ ಬಂದಿದ್ದರೂ ನಿದ್ದೆ ಇಲ್ಲ್. ಮಿಕ್ಕೆಲ್ಲರೂ ಒಂದಲ್ಲ ಒಂದು ಆಯಾಸದಿಂದ ಕಣ್ಣು ಮುಚ್ಚಿದ್ದರು. ಕಮಲತ್ತೆ ಚುಡಾಯಿಸುವ ಧ್ವನಿಯಲ್ಲಿ " ನಿನ್ನ ಕಮಲ ಈಗ ಹ್ಯಾಗಿದ್ದಾಳೋ? ಅವಳ ನೆನಪು ಈಗ ನಿಂಗೆ ಬರೋದೆ ಇಲ್ವೆ? ಎಂದು ಮಾತಿಗಾರಂಭಿಸಿದಳು. " ಅವಳಿಗೇನಾಗುತ್ತೆ. ಮೊನ್ನೆ ಒಂದ್ ಮಗು ಆಯ್ತಂತೆ. ಅವಳನ್ನೇ ನೆನೆಸ್ತಾ ಕೂತ್ಕೊಂಡ್ರೆ ನನಗೆ ಕವಳ ಹಾಕೋರು ಯಾರು?" ಎಂದೆ. ಕಮಲತ್ತೆ " ಅಲ್ವೋ, ಅವಳಿಗೆ ಮದುವೆಯಾದ ಹೊಸದರಲ್ಲಿ ಏನೂ ಬೇಡಾನಿಸಿದೆ ಎಂದಂದ್ದಿಯಲ್ವೆ.ದೇವ್ರಲ್ಲಿ ನಂಬಿಕೆ ಇಡು.ನೋವನ್ನ ಮರಿಯೋ ಶಕ್ತಿ ಕೊಡ್ತಾನಂತ ನಾನ್ ಹೇಳಿದ್ದಕ್ಕೆ ದೇವರೂ ಇಲ್ಲ ಗೀವ್ರೂ ಇಲ್ಲ.ರಾಮಾ ನಾನೆ ಕೃಷ್ಣ ನಾನೇಂತ ಕೊಚ್ಕೊಂಡಿದ್ದೆ ಅಲ್ವೇ ನೀನು. ನೀನೆ ದೇವರಾದ್ರೆ ನನಗೆ ಈ ಹಾಳಾದ ರೋಗದ ನೋವೂ ಗೀವೂ ಇಲ್ಲದೆ ಕಣ್ಮುಚ್ಚೋ ವರ ಕೊಡೋ.." ಎಂದಳು. ಆಗ ಅವಳು ನೋವು ತಡೆಯಲಾಗದೆ ಅಳ್ತಿದ್ದಲೋ ಏನೊ.ನನಗೆ ಕಣ್ಣಲ್ಲಿ ನೀರು ಕಿತ್ತು ಬಂದಿತ್ತು. ಆದರೂ ಆಕೇನ ಗದರುವವನಂತೆ " ಬಾಯ್ಮುಚ್ಕೊಂಡು ಮಲಕ್ಕೋ ಅತ್ತೆ. ಬೆಳಿಗ್ಗೆ ಮಾತಾಡೋಣ.." ಎಂದು ಹೇಳಿ ಗೋಡೆ ಕಡೆಗೆ ಹೊರಳಿದ್ದೆ. ಆಗ ಕಮಲತ್ತೆಗೆ ಬೆಂಗಳೂರಿನಿಂದ ಏನು ಕೊಂಡ್ಮೊಡ್ ಬರೋಕ್ಕಾಗ್ದೆ ಇದ್ದದ್ದು ತಟ್ಟನೆ ಜ್ಞಾಪಕಕ್ಕೆ ಬಂತು. ಆ ಯೋಚ್ನೇಲೆ ಯಾವಾಗ ನಿದ್ದೆ ಬಂತೋ ತಿಳಿಯದು. ಇತ್ತೀಚೆಗಂತೂ ನಿದ್ದೆ ಮಾತ್ರೆ ಇಲ್ಲದೆ ಅಂತಹ ಸೊಗಸಾದ ನಿದ್ದೆ ಬಂದೇ ಇರಲಿಲ್ಲ. ಸೊಂಪಿನ ನಿದ್ದೆ.

ಮಾರನೆ ದಿನ ಸಂಜೆ ಕಮಲತ್ತೆ ಎದೆ ಹೊಟ್ಟೆ ಹಿಡಿದುಕೊಂಡು ಚೀರಲಾರಂಬಿಸಿದಳು. ಅವಳ ನೋವಿನ ಹೊರಳಾಟ ನೋಡುವುದಕ್ಕಾಗಲಿಲ್ಲ. ಪೈನ್‌ಕಿಲ್ಲರ್ ಯಾವುದೂ ಮನೆಯಲ್ಲಿರಲಿಲ್ಲ.ಮಾವಯ್ಯನಂತೂ ಗಾಬರಿಯಾಗುವುದು ಬಿಟ್ಟು ಬೇರೇನೂ ಮಾಡಿರಲಿಲ್ಲ. ನಾನು ಮಾವಯ್ಯನ ಸುವೇಗ ಹಾಕಿಕೊಂಡು ಮಧುಗಿರಿಗೆ ಬಂದು ಮಾವಯ್ಯ ಬರೆದುಕೊಟ್ಟಿದ್ದ ಮಾತ್ರೆಗಳನ್ನೂ , ನನಗೆ ನಿದ್ರೆ ಮಾತ್ರೆಯ ಬಾಟಲಿಯನ್ನು ಕೊಂಡು ಬಂದೆ.ಕಮಲತ್ತೆ ನೋವು ಸಣ್ಣ ಪುಟ್ಟ ಮಾತ್ರೆಗಳನ್ನು ಮೀರಿ ಬೆಳೆದು ಬಿಟ್ಟಿತ್ತು. "ತಡಿಯೋಕಾಗೋಲ್ವೊ ಚಂದ್ರೂ" ಎಂದು ಕಮಲತ್ತೆ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು." ಬೆಂಗಳೂರಿನ ಆಸ್ಪತ್ರೆಗೆ ಹೋಗೋಣೇನು?" ಎಂದು ಕೇಳಿದೆ. ಆಕೆಯ ಕಣ್ಣಲ್ಲಿದ್ದ ಮಿಂಚು ಉಡುಗಿಹೋಗಿತ್ತು." ಬೇಡಪ್ಪಾ ಬೇಡ..ಆಸ್ಪತ್ರೆ ಸವಾಸವೇ ಬೇಡ. ಅಲ್ಲಿಗೋದ್ರೆ ಡಾಕ್ಟರುಗಳು ಮೈಕೈಗೆಲ್ಲ ಇಂಜೆಕ್ಷನ್ ತಿವಿದು, ಹೊಟ್ಟೆ ತುಂಬಾ ಬರಿ ಮಾತ್ರೆಗಳನ್ನೆ ನುಂಗ್ಸಿ, ಕರಂಟು ಕೊಟ್ಟು ಬದುಕನ್ನ ಬಲವಂತವಾಗಿ ಹೇರ್‍ತಾರೆ. ಆ ಬಲವಂತ ಬಂದಾಗಲೆ ನಮಗೆ ಇದೆಲ್ಲ ಏನೂ ಇಲ್ದೇನೆ ಸಾಯ್ಬೇಕೂನ್ನಿಸಿಬಿಡೋದು. ನಾವು ಸಾಯೋ ಸ್ವಾತಂತ್ರಾನೂ ಕಿತ್ಕೋತಾರೆ..." ಎಂದು ತಾತ್ಸಾರದ ಅರ್ಥ ಬರುವ ಮಾತುಗಳನ್ನ ಆಡಿದಳು. ನನಗೆ ಅವಳ ನರಳಾಟ ನೋಡಿ ನಾನೂ ನರಳುತ್ತಿರುವಂತೆಯೂ ನಾನೇ ಸಾಯುತ್ತಿರುವಂತೆಯೂ ಅನ್ನಿಸಿಬಿಟ್ಟಿತು. ನಾನು ನನಗೆಂದು ತಂದುಕೊಂಡಿದ್ದ ನಿದ್ರ ಮಾತ್ರೆಯನ್ನ ಬಲವಂತ ಮಾಡಿ ನುಂಗಿಸಿದೆ. ಒಂದೆರಡು ಹೆಚ್ಚಿಗೆ.

ಮಾರನೆ ದಿನ ಕಮಲತ್ತೆ ಏಳಲೇ ಇಲ್ಲ. ಸುಖವಾಗಿ ಕಣ್ಣು ಮುಚ್ಚಿದ್ದಳು. ಇನ್ನೂ ಏಲೆಂಟು ತಿಂಗಳು ಅವಳು ಬದುಕಿಯೇ ಇರ್‍ತಾಳೆ ಎಂಬ ಎಲ್ಲರ ನಂಬಿಕೆ ಹುಸಿಯಾಗಿತ್ತು. ಅವಳು ಸತ್ತು ನನ್ನನ್ನು ಆಕ್ರಮಿಸಿಕೊಂಡಳು.ಅವಳನೆನಪು ಬಂದಾಗಲೆಲ್ಲ.ನಿದ್ದೆ ಮಾತ್ರೆಗಳು ನನ್ನ ಕಣ್ಣು ಕಟ್ಟುತ್ತವೆ.ಆತ್ಮಹತ್ಯೆ ತಪ್ಪೂನ್ನೋದು ನನಗೆ ಆಕೆ ಭಗ್ನ ಪ್ರೇಮದ ನರಳಾಟದ ಸಮಯದಲ್ಲಿ ಕಲಿಸಿಕೊಟ್ಟ ಪಾಠ.ಎಂದೇ ಇಂದಿಗೂ ನಿದ್ದೆ ಮಾತ್ರೆ ಬಾಟಲಿಯನ್ನು ಹತ್ತಿರವೇ ಇಟ್ಟುಕೊಂಡಿದ್ದರೂ ಎಷ್ಟೇ ನುಂಗಿದರೂ ನಿದ್ದೆ ಬರುತ್ತಿರಲಿಲ್ಲ.ಅಳುಕಿನ ಭಾರ ನಾನು ಹೊತ್ತಿರುವಂತೆ ಮಾವಯ್ಯನೂ ಹೊತ್ತಿರಬಹುದಲ್ಲವೆ ಎಂದು ನನಗೆ ಆಗಾಗ್ಗೆ ಅನ್ನಿಸಿದರೂ ಈಗ ಬದುಕಿದ್ದರೂ ಸತ್ತಂತಿರುವ ಆತನನ್ನು ಕೇಳಲಿಕ್ಕೆ ನಾನೆಂದೂ ಹೋಗಲಿಲ್ಲ.

ಕಮಲತ್ತೆಗೆ ಏನೂ ಉಡುಗೊರೆ ಕೊಟ್ಟಿಲ್ಲವೆಂಬ ವಿಷಯವನ್ನು ನಾನು ಜ್ಞಾಪಿಸಿಕೊಳ್ಳುವುದಕ್ಕೆ ಹೋಗುವುದೇ ಇಲ್ಲ. ಇನ್ನೊಂದು ವಿಷಯ: ಉಡುಗೊರೆ ಕೊಟ್ಟಿದ್ದೇನೆಂದು ಯಾರಲ್ಲಿಯೂ ಹೇಳಿಕೊಳ್ಳಾಲಾರೆ.

ಅಗಸ್ಟ್, ೧೯೮೧ ರ - ತುಷಾರ ಮಾಸ ಪತ್ರಿಕೆಯಲ್ಲಿ ಪ್ರಕಟ.

ಸಣ್ಣಕತೆ-ಪಾಕ್ಸ್ ಬ್ರಿಟಾನಿಕ

ಆಫಿಸಿನಿಂದ ಮರಳಿ ಬಂದು ಸುಸ್ತಾಗಿ ರೂಮಿನಲ್ಲಿ ಮಂಚದ ಮೇಲೆ ಕುಳಿತು ಬೂಟುಗಳನ್ನು ಕಳಚಿ ಎದೆಯನ್ನು ಸೀಲಿಂಗ್ ಫ್ಯಾನಿಗೊಡ್ಡಿ ಸುಧಾರಿಸಿಕೊಳ್ಳುತ್ತಿದ್ದೆ. ನನ್ನಾಕೆ ಸೀತ ಕಾಫಿ ತಿಂಡಿಯೊಂದಿಗೆ ರೂಮಿಗೆ ಬಂದು ಸ್ಟೂಲಿನ ಮೇಲಿಟ್ಟು ಅಲ್ಲೇ ಇದ್ದ ಗೂಡಿನಿಂದ ಪಾರ್ಸಲ್ ಒಂದನ್ನು ತಂದು ನನ್ನ ಪಕ್ಕಕ್ಕಿಟ್ಟು, " ಮಧ್ಯಾನ್‌ದ ಪೋಸ್ಟ್‌ನಲ್ ಬಂತು" ಎಂದಳು. ನನಗದನ್ನು ಬಿಚ್ಚಿ ನೋಡುವ ಉತ್ಸಾಹವಿಲ್ಲದಷ್ಟು ಸುಸ್ತು. ಪಾರ್ಸಲ್ ಕವರ್ ಮೇಲೆ ವಿದೇಶಿ ಸ್ಟಾಂಪುಗಳಿದ್ದುದು ಕಂಡು ಕುತೂಹಲವಾಯ್ತು. " ಏನದು?" ಎಂದು ಕೇಳಿದೆ ಕಾಫಿ ಕುಡಿಯುತ್ತಾ. "ನಿಮಗಿನ್ನೇನು ಬರುತ್ತೆ ಪುಸ್ತಕ ಬಿಟ್ಟು" ಎಂದು ಖಾಲಿಯಾದ ತಟ್ಟೆ ಲೋಟಗಳನ್ನು ತೆಗೆದುಕೊಂಡು ರೂಮಿನಿಂದ ಹೊರಹೋದಳು.

ನಾನು ಕವರಿನಿಂದ ಪುಸ್ತಕವನ್ನು ತೆಗೆದೆ. 'Vestiges of Anglicised India' ಆ ಪುಸ್ತಕದ ಹೆಸರು. ಕಸಿವಿಸಿಯಾಯ್ತು. ಲೇಖಕರಾರೆಂದು ನೊಡಿದೆ, ಕ್ಯಾತರಿನ್ ಪಾಲ್-ಡಿ.ಲಿಟ್.ಸೋಸಿಯಾಲಜಿ ಎಂದಿತ್ತು. ಹೆಸರು ನೋಡಿದಾಗ ಆದ ಭಾವನೆ ನೆನಪಾಗುತ್ತಿಲ್ಲ. ಪುಸ್ತಕವನ್ನು ಬಿಡಿಸಿದೆ. ಮೂರನೆ ಪುಟದಲ್ಲಿ "ಸಂಸ್ಕೃತಿ ಸ್ತುತ್ಯಾರ್ಹರಾದ ಗುಲಾಮರಿಗೆ- ಅರ್ಪಣೆ" ಎಂದಿತ್ತು. ಅದರ ಮುಂದಿನ ಪುಟದಲ್ಲಿ ಲೇಖಕಿ ಪುಸ್ತಕವನ್ನು ಬರೆಯುವ ಮುನ್ನ ಆಕೆ ಇತರರೊಂದಿಗೆ ನಡೆಸಿದ ಚರ್ಚೆಗಳು, ತನ್ನ ಪುಸ್ತಕದ ವಿಷಯ ಹಾಗು ಕ್ರಮರಹಿತವಾದ ಮಾಹಿತಿಗಳನ್ನು ಸ್ಪಷ್ಟಗೊಳಿಸಲು ಹೇಗೆಲ್ಲಾ ಸಹಕಾರಿಯಾಗಿದ್ದವು ಎಂದು ಆಕೆಯೊಂದಿಗೆ ಚರ್ಚಿಸಿದವರುಗಳ ಪಟ್ಟಿಯನ್ನು ಕೊಟ್ಟು ಕೃತಜ್ಞತೆಗಳನ್ನು ಸೂಚಿಸಿದ್ದಳು.ಅದರಲ್ಲಿ ನನ್ನ ಹೆಸರೂ ಕಂಡುಬಂತು! ಆರು ಪೌಂಡ್ ಬೆಲೆಯ ಆ ಪುಸ್ತಕದ ಹಿಂದಿನ ರಕ್ಷಾಪುಟದಲ್ಲಿ ಲೇಖಕಿ ಮುದ್ದಿನ ಬೆಕ್ಕಿನೊಂದಿಗೆ ಹಿಡಿಸಿಕೊಂಡಿದ್ದ ಭಾವ ಚಿತ್ರದೊಂದಿಗೆ ಆಕೆಯ ಬಗೆಗೆ ಸಂಕ್ಷಿಪ್ತ ವಿವರ...
ಆ ಪುಸ್ತಕದೊಂದಿಗೆ ಇದ್ದ ಇಂಗ್ಲಿಷ್‌ನಲ್ಲಿ ಟೈಪ್ ಮಾಡಿದ್ದ ಐದಾರು ಸಾಲಿನ ಪತ್ರದ ಮೇಲೆ ಕಣ್ಣಾಡಿಸಿದೆ:

ಚಂದ್ರು ,
ಅಳುಕು, ಸಂಬಂಧಗಳನ್ನು ಮುರಿಯಲು, ವ್ಯಕ್ತಿಗಳು ಮೌನವಾಗಿ ಸಂಬಂಧಗಳಿಂದ ವಿಮುಖರಾಗಲು ಕಾರಣವಾಗುತ್ತೆ.ಎರಡು ವರ್ಷಗಳಿಂದ ನನ್ನ ಪತ್ರಗಳಿಗೆ ನೀನು ನಿರುತ್ತರನಾಗಿ ಮೌನಿಯಾಗಿರುವುದು ಈ ಹಿನ್ನೆಲೆಯಲ್ಲಿ ಶೋಧನಾರ್ಹ. ಪುಸ್ತಕದ ಬಗೆಗೆ ನಿನ್ನ ವಿಮರ್ಶೆಯ ನಿರೀಕ್ಷೆಯೊಂದಿಗೆ....
ಅಳುಕಿನ,
ಕ್ಯಾತರಿನ್ ಪಾಲ್‌ಕ್ವೀನ್ಸ್ ಕಾಲೇಜ್ - ಕೇಂಬ್ರಿಡ್ಜ್
ವಿ.ಸೂ: ಈ ಪುಸ್ತಕದ ಪ್ರಕಟಣೆಗೆ ಮಂದಣ್ಣನ ಹಣವೇ ಬಳಸಿರುವುದು.

ಪತ್ರವನ್ನು ಓದಿ ಮುಗಿಸುತ್ತಿದ್ದಂತೆ ಸೀತ ರೂಮಿಗೆ ಬಂದಳು."ಯಾರದ್ರೀ ಕಾಗ್ದ?" ಎಂದು ಕೇಳಿದಾಗ ಏನೂ ಹೇಳಲಿಕ್ಕೆ ತೋಚದೆ ಸ್ನೇಹಿತರದು ಎಂದಷ್ಟೆ ಹೇಳಿ ಬಚ್ಚಲಿಗೆ ಹೋಗಿ ಮುಖ ತೊಳೆದು ಉಡುಪು ಬದಲಿಸಿ ಮನೆಯಿಂದಾಚೆ ಬಂದೆ.

ಯಾವುದೆ ವಿಧದಲ್ಲು ನನಗೆ ನೇರ ಸಂಬಂಧವಿರದ ಘಟನೆಗಳ ಅಸ್ಪಷ್ಟ ನೆನೆಪುಗಳ ತಾಕಲಾಟಕ್ಕೆ ಅಂತರ್ಮುಖಿಯಾಗುತ್ತಿದ್ದಂತೆ ಈ ಬಾರಿಯ ಅವಳ ಕಾಗದದಲ್ಲಿ ನನ್ನ ಮೇಲೆ ಅವಳು ಅಳುಕಿನ ಆರೋಪ ಹೊರಿಸಿರುವುದರ ಬಗೆಗೆ ಯವುದೆ ತೀರ್ಮಾನಕ್ಕೆ ಬರದಾದೆ.

ಇದೆಲ್ಲ ನಡೆದುದು ಸುಮಾರು ವರ್ಷಗಳ ಹಿಂದೆ ಕೊಡಗಿನಲ್ಲಿ. ಅಂದರೆ ಆಗ ಹಾರಂಗಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದ ಸಮಯ. ಬೆಂಗಳೂರಿನ ನಾನು ಸಂಪ್ರದಾಯಬದ್ಧ ಕಟುಶಿಸ್ತಿನ ವಾತಾವರಣಕ್ಕೆ ಹೇಸಿ ನಿರುದ್ಯೋಗಿಯಾಗಿ ಕೊಡಗನ್ನು ಸೇರಿದ್ದೆ. ಹೇಗೇಗೊ ಯರ್‍ಯಾರನ್ನೊ ಹಿಡಿದು ದಿನಗೂಲಿಯ ಮೇಲೆ ಗ್ರೂಪ್‌ಲೀಡರ್ ಮೇಸನ್ [ಮೇಸ್ತ್ರಿ] ಆಗಿ ಕೆಲಸ ಸಿಕ್ಕಿತು. ಹಾರಂಗಿಯಿಂದ ಹಾಸನದ ದಿಕ್ಕಿಗೆ ಕಾಡಿನ ಮುಖಾಂತರವೆ ಹೋಗಬೇಕಾಗಿದ್ದ ನಾಲೆ ತೋಡುವಿಕೆಯ ಮೇಲ್ವಿಚಾರಣೆಗಾಗಿ ನನ್ನ ನೇಮಕವಾಗಿತ್ತು. ಕೆಲಸ-ಕಾಡು ಎರಡೂ ರಮ್ಯ ಹೊಸ ಅನುಭವದ ತಾಣವಾಗಿತ್ತು.

ಕ್ರಮೇಣ ಕಾಡಿನ ರೊಮಾಂಚಕಾರಿ ಅನುಭವಗಳ ಉತ್ಸಾಹ ಕುಗ್ಗುತ್ತಿದ್ದಂತೆ , ಬೇಸರ ಒಂಟಿತನ ಕಾಡಲಾರಂಭಿಸಿದಾಗ ಹುಚ್ಚನಂತೆ ಅಲ್ಲಿ-ಇಲ್ಲಿ ಅಲೆದಾಡತೊಡಗಿದೆ. ಮುರ್‍ನಾಲ್ಕು ಎಸ್ಟೇಟುಗಳು ಗಮನ ಸೆಳೆದಿದ್ದವು. ಅದರಲ್ಲೂ ಪರಂಪರೆಯ ಚರಿತ್ರೆಯನ್ನು ನುಂಗಿರುವಂತೆ ಕಂಡುಬರುತ್ತಿದ್ದ ಬಂಗಲೆಯೊಂದು ತನ್ನ ಸ್ತಬ್ಧತೆಯ ಗುಣದೊಂದಿಗೆ ನನಗೆ ಸಾಮಾನ್ಯಕ್ಕಿಂತ ವಿಶೇಷವಾಗಿ ಕಂಡುಬಂದಿತ್ತು. ಆ ಬಂಗಲೆಯ ಬಗೆಗಿನ ನನ್ನ ಕುತೂಹಲವನ್ನು ತಣಿಸುವ ಮಾರ್ಗವಾವುದೂ ಇರಲಿಲ್ಲ. ಬಹಳ ದಿನಗಳ ನಂತರ ಆ ಎಸ್ಟೇಟ್ ಬಂಗಲೆಯೊಡೆಯನಾದ ಮಂದಣ್ಣ ತೀರಾ ಕುಡುಕನೆಂದೂ, ಆತನ ಪತ್ನಿ ವಿದೇಶಿಯಳೆಂದೂ, ಅವರಿವರಿಂದ ಅಪ್ರಯತ್ನವಾಗೆ ತಿಳಿಯಿತು. ಒಂದೆರಡು ಬಾರಿ ಮಂದಣ್ಣ ತನ್ನ ಜೀಪಿನಲ್ಲಿ ನಮ್ಮ ನಾಲೆಯ ಕೆಲಸದ ಬಳಿ ಕಾಲುದಾರಿಯಲ್ಲಿ [ಮಡಿಕೇರಿಗೆ ಹೋಗುತ್ತಿತ್ತು.] ಹೋಗಿ ಬರುವುದು ಮಾಡುತ್ತಿದ್ದುದನ್ನು ನೋಡಿದೆ. ಆತ ನನ್ನನ್ನೂ, ಕೆಲಸವಿಲ್ಲದೆ ಯಾವುದಾದರು ಬಂಡೆಯ ಮೇಲೆಯೊ, ಮರದ ನೆರಳಲ್ಲೋ ಏನನ್ನಾದರು ಓದುತ್ತಲೋ, ಬರೆಯುತ್ತಲೋ ಕುಳಿತಿರುತ್ತಿದ್ದುದನ್ನು ಗಮನಿಸಿದ್ದ. ಆವನೂ, ಅವನ ಬಂಗಲೆಯೂ ಒಂದೇ ತರಹ,ಯಾವಾಗಲೂ ಏನನ್ನೋ ದುರ್ದಾನ ಪಡೆದಂತೆ.

ಒಂದು ದಿನ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಕಾಡು ನೋಡಲು ಸುಂದರವಾಗಿರುತ್ತದೆಂದನ್ನಿಸಿ ನನ್ನ ಕೊಠಡಿಗೆ ಬೀಗ ತಗುಲಿಸಿ ಸುರಿಯುತ್ತಿದ್ದ ತೆಳು ಹಿಮದಿಂದ ರಕ್ಷಿಸಿಕೊಳ್ಳಲು ಶಾಲು ಹೊದ್ದು ಸ್ವಲ್ಪ ದೂರದಲ್ಲಿದ್ದ ಒಂದು ಸಣ್ಣ ಮಣ್ಣಿನ ಗುಡ್ಡವನ್ನು ಹತ್ತಿದೆ. ಅಲ್ಲೇ ನಾಲೆಯ ಕೆಲಸ ನಡೆಯುತ್ತಿದ್ದುದರಿಂದ , ಜನ ವಾಸ ಮಾಡುತ್ತಿದ್ದುದರಿಂದ ಕ್ರೂರ ಪ್ರಾಣಿಗಳ ಹೆಚ್ಚಿನ ಕಾಟವಿರುತ್ತಿರಲಿಲ್ಲ. ಆಗಾಗ್ಯೆ ದಿನಗೂಲಿಗಳ ಗುಡಿಸಲುಗಳ ಮೇಲೆ ನುಗ್ಗುತ್ತಿದ್ದ ಆನೆಗಳ ಹಿಂಡಿನದು ಬಿಟ್ಟರೆ. ಗುಡ್ಡದ ಮೇಲೆ ಮೈ ಮರೆತಿದ್ದೆ. ಎಷ್ಟು ಹೊತ್ತು ಹಾಗಿದ್ದೆನೊ... ಮಂಜು ಬೀಳುವುದು ಜಾಸ್ತಿಯಾದ್ದರಿಂದ ಗುಡ್ಡ ಬಿಟ್ಟು ಇಳಿಯತೊಡಗಿದೆ. ಅರ್ಧ ಇಳಿದಿದ್ದೆ. ಸ್ವಲ್ಪ ದೂರದಲ್ಲಿ ಜೀಪು ಬರುತ್ತಿರುವ ಸದ್ದು ಕೇಳಿಸಿತು. ಒಂದೆರಡು ನಿಮಿಷಕ್ಕೆಲ್ಲ ಜೀಪು ಗಕ್ಕನೆ ಎಲ್ಲಿಗೋ ಗುದ್ದಿದ ಸದ್ದೂ ಕೆಳಿಸಿತು. ನಾನು ಸರಸರ ಗುಡ್ಡ ಇಳಿದೆ..ಸ್ವಲ್ಪ ದೂರದಲ್ಲಿ ಮರಕ್ಕೆ ಜೀಪು ಮುತ್ತಿಟ್ಟಂತೆ ಹೆಚ್ಚು ಜಖಂಗೊಳ್ಳದೆ ನಿಂತಿತ್ತು. ಡ್ರೈವ್ ಮಾಡುತ್ತಿದ್ದ ಮಂದಣ್ಣನಿಗೆ ಏನೂ ಗಾಯಗಳಾಗಿರಲಿಲ್ಲ. ಆತ ಕುಡಿದಿದ್ದ ವಾಸನೆ ನನ್ನ ಹೊಟ್ಟೆ ತೊಳೆಸುವಷ್ಟು ಕೆಟ್ಟದಾಗಿತ್ತು. ಪ್ರಜ್ಞಾಶೂನ್ಯನಾಗಿದ್ದವನನ್ನು ಅಲುಗಾಡಿಸಿದೆ. ಎಚ್ಚರಾಗುವಂತೆ ಕಾಣಲಿಲ್ಲ. ಗುಡಿಸಿಲಿನ ಕೂಲಿಯಾಳುಗಳ ಸಹಾಯವನ್ನಾದರು ಪಡೆಯೋಣವೆಂದು ಯೋಚಿಸಿದೆ. ಅವರುಗಳೂ ಮಂದಣ್ಣನ ಸ್ಥಿತಿಯಲ್ಲೇ ಇರುತ್ತಿದ್ದರು. ಯೋಚಿಸುತ್ತಾ ನಿಂತುಕೊಳ್ಳುವಷ್ಟು ಸಾವಕಾಶವಿರಲಿಲ್ಲ. ಮಂದಣ್ಣನ ಎಸ್ಟೇಟಿನ ಬಂಗಲೆಯತ್ತ ಹೆಜ್ಜೆ ಹಾಕಿದೆ.

ಬಂಗಲೆಯ ಮುಂದೆ ಬಂದಾಗ ನಾಯಿಗಳು ಊಳಿಡಲಾರಂಭಿಸಿದವು.ಬಂಗಲೆಯ ಬಾಗಿಲು ಹಾಕಿದ್ದು ಮತ್ತು ನನಗೆ ಅಭ್ಯಾಸವಿರದ ಸ್ತಬ್ಧತೆಯ ಗಾಢ ವಾತಾವರಣ ಗಪ್ಪನೆ ಮುಖಕ್ಕೆ ರಾಚಿ ಹೊಡೆಯುವಂತಿತ್ತು.ಯೋಚಿಸದೆ ಬಾಗಿಲ ಬಳಿ ಇದ್ದ ಕರೆಗಂಟೆ ಒತ್ತಿದೆ. ಯಾರೂ ಬರದೆ ಪುನಃ ಒತ್ತಿದೆ.

ಗಂಟೆ ಶಬ್ಧ ಇನ್ನೂ ಕೇಳುತ್ತಿದ್ದಂತೆಯೆ ಬಾಗಿಲು ತೆಗೆದ ವ್ಯಕ್ತಿಯಲ್ಲಿ ಅಸಹನೆ ಪುಟಿದಿತ್ತು. ವಿದೇಶಿ ಹುಡುಗಿ. ಹಾಕಿದ್ದ ಉಡುಪು, ಗುಂಗುರುಗುಂಗುರಾದ ಕತ್ತರಿಸಿದ ಕೂದಲಿನ ರೀತಿ ಮತ್ತು ಆಕೆಯ ಇನ್ನಿತರ ವಿವರಗಳನ್ನು ಗುರುತಿಸಿ ಬ್ರಿಟನ್ನಿನವಳಿರಬೇಕೆಂದು, ಅಕೆಯೆ ಮಂದಣ್ಣನಾಕೆ ಇರಬೇಕೆಂದು ತೋಚಿತು. "ಏನು ಬೇಕು?" ಬಾಣದಂತೆ ಬಂದ ಪ್ರಶ್ನೆಯಲ್ಲಿ ತಿರಸ್ಕಾರ -ಅಸಹನೆ- ಅಧಿಕಾರಯುತ ಧೋರಣೆಯ ಸ್ವರ ನನ್ನನ್ನು ಇರಿಸುಮುರಿಸುಗೊಳಿಸಿತು. ನಾನು ಆಕೆಯಷ್ಟು ನಿರರ್ಗಳವಾಗಿ ಬ್ರಿಟನ್ನಿನ ಇಂಗ್ಲಿಷ್ ಧಾಟಿಯನ್ನನುಸರಿಸಿ ಆಕೆಯ ಗಂಡ ಅಪಘಾತಕ್ಕೀಡಾಗಿರುವುದನ್ನು ತಿಳಿಸಿದೆ. ಅಪಘಾತದ ವಿಷಯ ನಿತ್ಯ ಘಟಿಸುವ ಸಾಧಾರಣವೆಂಬಂತೆ ಆಕೆ ದಿಗ್ಭ್ರಾಂತಳೂ ಆಗಲಿಲ್ಲ , ವಿಚಲಿತಳೂ ಆಗಲಿಲ್ಲ. ಬದಲಿಗೆ ನನ್ನ ಇಂಗ್ಲೀಷ್ ಧಾಟಿಯನ್ನು ಅಭಿನಂದಿಸಿದಳು.ಆಳುಗಳು ಯಾರೂ ಇಲ್ಲವೆಂದು ಹೇಳಿ ಭದ್ರತೆಗೆಂದು ಎರಡು ನಾಳದ ಬಾರುಕೋವಿಯೊಂದನ್ನು ಹಿಡಿದು ನನ್ನನ್ನನುಸರಿಸಿ ಬಂದಳು. ದಾರಿಯಲ್ಲಿ ನನ್ನ ಬಗ್ಗೆ ಸಂಕ್ಷಿಪ್ತವಾಗಿ ವಿಚಾರಿಸಿ ತಿಳಿದು ಕೊಂಡಳು. ಏಳೆಂಟು ನಿಮಿಷಗಳಲ್ಲಿ ಅಪಘಾತ ನಡೆದ ಸ್ಥಳದಲ್ಲಿದ್ದೆವು. ಬೀಸುತ್ತಿದ್ದ ಥಂಡಿ ಗಾಳಿಗಾಗಲೆ ಅರೆಪ್ರಜ್ಞೆ ಮರಳಿದ್ದ ಮಂದಣ್ಣ ತನ್ನ ಭಾಷೆಯಲ್ಲಿ ಏನೇನೊ ಒದರುತ್ತಿದ್ದ. ಅವನನ್ನು ಬಂಗಲೆಗೆ ಸಾಗಿಸಲು ದೈನ್ಯತೆಯ ಧ್ವನಿಯಲ್ಲಿ ನನ್ನ ಸಹಾಯವನ್ನು ಕೇಳಿದ ಆಕೆ ನನ್ನ ಸಮ್ಮತಿಯನಂತರ ಜೀಪನ್ನು ತಾನು ಡ್ರೈವ್ ಮಾಡಲಾರಂಭಿಸಿದಳು. ದಾರಿಯಲ್ಲಿ ಆಕೆಯ ಹೆಸರನ್ನು ಕೇಳಿದಾಗ ಕ್ಯಾತರಿನ್ ಎಂದು ಅರೆಮನಸ್ಕಳಾಗಿಯೆ ಉತ್ತರಿಸಿದಳು.

ಡ್ರೈವ್ ಮಾಡುತ್ತಾ ಇಂಗ್ಲಿಷ್ ಭಾಷೆಯ ಮೇಲಿನ ನನ್ನ ಪ್ರಭುತ್ವವನ್ನು ಮೆಚ್ಚಿಕೊಳ್ಳುವುದು ತನ್ನ ಕರ್ತವ್ಯವೆಂಬಂತೆ ನಿರಾಸಕ್ತಿಯಿಂದ ಒಂದೆರಡು ಮಾತುಗಳನ್ನಾಡಿದಳು. ಧ್ವನಿಯಲ್ಲಿ ಕೃತಕತೆ ಒಡೆದು ಕಂಡು ಆ ಕ್ಷಣದ ಕಿರುಪರಿಚಯದಲ್ಲೆ ಸ್ನೇಹ ಪೂರ್ಣ ವಿಶ್ವಾಸ ವ್ಯಕ್ತಪಡಿಸುವ ಮಾತುಗಳು ಹೊರಬಿದ್ದರು, ತನ್ನ ಅಧಿಕಾರಯುತ ಧೋರಣೆ , ನೋಟಗಳನ್ನು ಸ್ವಲ್ಪವೂ ಸಂಕುಚಿತಗೊಳಿಸಿರಲಿಲ್ಲ.

ಬಂಗಲೆ ತಲುಪಿದ ನಂತರ ಮಂದಣ್ಣನನ್ನು ಬಂಗಲೆಯ ಮಹಡಿಯಲ್ಲಿ ಕೋಣೆಯ ಮಂಚದ ಮೇಲುರುಳಿಸಿ ಕೆಳಗಿಳಿದು ಬಂದೆವು."ಕುಡಿಯುತ್ತೀಯ?" ಆಕೆ ಕೇಳಿದ ಪ್ರಶ್ನೆಗೆ ಅಭ್ಯಾಸವಿಲ್ಲವೆಂದೆ. ಆನಂತರ ಆಕೆ ಅಡಿಗೆಮನೆಗೆ ಹೋಗಿ ತನಗೆ ಸ್ಕಾಚ್ ತುಂಬಿದ್ದ ಪೆಗ್ ಗ್ಲಾಸನ್ನು, ನನಗೆ ಟೀಯನ್ನು ತಂದು ಆತಿಥ್ಯ ತೋರಿದಳು. "ಆಳುಗಳಾರು ಇಲ್ಲವೇಕೆ?" ನಾನು ಕೇಳಿದ ಪ್ರಶ್ನೆಗೆ "ಯಾರು ರಾತ್ರಿವೇಳೆ ಉಳಿಯುವುದಿಲ್ಲ. ಇರುವ ಮುದುಕ ಜೀಪಿನ ಷೆಡ್ಡಿನಲ್ಲಿ ಕುಡಿದು ಮಲಗಿಬಿಡುತ್ತಾನೆ." ಎಂದು ಹೇಳಿ ಪುನಃ "ಭಾರತೀಯರು ಆರೋಗ್ಯಕ್ಕೆ ಕುಡಿಯದೆ, ಲಘು ಮೋಜಿಗೆ ಕುಡಿಯದೆ, ಚಟವಾಗಿಸಿಕೊಂಡುಬಿಡುತ್ತಾರೆ.ಮಂದಣ್ಣ ಪ್ರಾರಂಭದಲ್ಲಿ ಕುಡಿಯುತ್ತಿದ್ದವರು ನನ್ನ ಮದುವೆಯಾದ ಮೇಲೆ ಬಿಟ್ಟುಬಿಟ್ಟಿದ್ದರು. ಆದ್ರೆ ಈಗ ಪುನಃ ಅತಿ ಮಾಡಿಕೊಂಡುಬಿಟ್ಟಿದ್ದಾರೆ..." ಕ್ಯಾತರಿನ್ ಅದೆಲ್ಲಾ ಹೇಳಲು ನಾನು ತನ್ನ ಗಂಡನ ಬಗೆಗೆ ಅನ್ಯಥ ಭಾವಿಸಬಾರದೆಂಬುದಕ್ಕಿರಬೇಕು.

ಆ ರಾತ್ರಿ ಆಕೆಯ ಸಲಹೆ ಮೇರೆಗೆ ಹೊರಗೆ ಜೀಪು ಶೆಡ್ಡಿಗೆ ಹೊಂದಿಕೊಂಡಂತೆ ಇದ್ದ ಔಟ್‌ಹೌಸ್ನಲ್ಲೆ ಉಳಿದುಕೊಂಡೆ.

ಬೆಳಿಗ್ಗೆ ಆ ಮನೆಯ ಆಳು ಎಂದು ಹೇಳಿಕೊಂಡು ಬಂದವ ಡೈನಿಂಗ್ ಹಾಲ್‌ಗೆ ಬರಬೇಕೆಂದು ಕರಕೊಟ್ಟು ಹೋದ. ನಾನು ಅಲ್ಲೆ ಇದ್ದ ಸಿಂಕಿನಲ್ಲಿ ಮುಖ ತೊಳೆದುಕೊಂಡು ಡೈನಿಂಗ್ ಹಾಲ್‌ಗೆ ಬಂದಾಗ ಕ್ಯಾತರಿನ್ ಹಾಗು ಮಂದಣ್ಣ ಇಬ್ಬರು ಟೇಬಲ್ ಮುಂದೆ ಕುಳಿತು ಪಕ್ಕದಲ್ಲೆ ಇದ್ದ ಬೆಂಕಿಗೂಡಿಗೆ ಕೈ ಒಡ್ಡಿ ಚಳಿ ಕಾಯಿಸಿಕೊಳ್ಳುತ್ತಿದ್ದರು. ನಾನು ಅಲ್ಲಿಗೆ ಬಂದುದನ್ನು ಗಮನಿಸಿದ ಕ್ಯಾತರಿನ್ , ಮಂದಣ್ಣನಿಗೆ ರಾತ್ರಿ ನಡೆದ ವಿಚಾರವನ್ನು ತಿಳಿಸಿ ಸಾಂಪ್ರದಾಯಿಕವಾಗಿ ಇಬ್ಬರಿಗೂ ಪರಿಚಯ ಮಾಡಿಕೊಟ್ಟಳು. ಮಂದಣ್ಣ ಪರಿಚಯಕ್ಕೆ ಉತ್ತರವೆಂಬಂತೆ " ಹೌದಾ.." ಎಂದು ಹೇಳಿ ಮೌನಿಯಾದ. ಕ್ಯಾತರಿನ್ ನನಗೂ ಟೀ ಕೊಟ್ಟಳು. ಮೂವರ ನಡುವಿನ ಮೌನದಲ್ಲಿನ ಸ್ತಬ್ಧತೆ, ನಿರ್ವಾತ ವಾತಾವರಣ, ಆ ಬಂಗಲೆ ಹೊರ ಪಾರ್ಶ್ವದ ಶೂನ್ಯತೆಯ ವಾತಾವರಣಕ್ಕೆ ಹೊಂದಿದಂತಿದ್ದು ನನಗಾಗಲೆ ಇರಿಸುಮುರಿಸಾಗಿತ್ತು. ನನಗೆ ಅಪರಿಚಿತವಾದ ಶ್ರೀಮಂತಿಕೆಯ ಗತ್ತಿನ ಮೌನದಿಂದಾಗಿ ಮತ್ತಷ್ಟು ಇರಿಸುಮುರಿಸು. ಮಂದಣ್ಣ ಶೂನ್ಯತೆಯನ್ನು ಶಬ್ಧಗಳಿಂದಲಾದರು ತುಂಬಲೆಂಬಂತೆ " ನಾನಿವರನ್ನು ನೋಡಿದ್ಡೇನೆ, ಚಾನಲ್ ಕೆಲಸದ ಬಳಿ ..ಯವಾಗಲು ಏನಾದರು ಓದ್ತಾ ಬರೀತಾ ಇರ್‍ತಾರೆ.."- ಕನ್ನಡದಲ್ಲಿ ಹೇಳಿದ ಅವನ ಮಾತುಗಳನ್ನು ಅರ್ಥ ಮಾಡಿಕೊಂಡಳೆಂಬಂತೆ ಆಶ್ಚರ್ಯವನ್ನು ಸೂಕ್ಷ್ಹಿಸುತ್ತಾ " "ಹೌದಾ? ಏನೇನು ಓದುತ್ತಿ?" ಎಂದು ಕೇಳಿದಳು. ನಾನು ಅಮೆರಿಕದ ಐದಾರು ಸಮಾಜ ಶಾಸ್ತಜ್ಞರ ಹೆಸರುಗಳನ್ನು ಹೇಳುತ್ತಿದ್ದಂತೆ ಆಕೆ ಮುಖ ಕಿವುಚಿದಂತೆ ಮಾಡಿ ಆ ಲೇಖಕರು ತನ್ನ ಮಟ್ಟಕ್ಕೆ ಕೀಳೆಂಬಂತೆ.." ಅವರ ಪುಸ್ತಕಗಳನ್ನ ಓದ್ತೀಯ..? ಅಪ್ರಬುದ್ಧರು, ಇಂಗ್ಲೆಂಡಿನಿಂದ ಪ್ರಭಾವಿತರಾದವರು." ಎಂದು ಹೇಳಿದಳು. ಮಂದಣ್ಣ ಅಸಮಾದಾನದಿಂದ ಮುಖ ಸಂಕುಚಿಸಿದಂತೆ ಮಾಡಿ ಆಕೆಯ ಕುರಿತಂತೆ ನನ್ನ ಕಡೆ ತಿರುಗಿ " ಈಕೆ ಬನಾರಸ್ಸಿನಲ್ಲಿ ಸಮಾಜ ಶಾಸ್ತದ ಹಿನ್ನೆಲೆಯಿಂದ ಭಾರತವನ್ನು ಅಭ್ಯಸಿಸಿದವಳು." ಎಂದ. ಅವನ ಮಾತಿನಲ್ಲಿ ವ್ಯಂಗ್ಯವನ್ನು, ಅದರ ತೀಕ್ಷ್ಣತೆಯನ್ನು ಗುರುತಿಸಿದ ಕ್ಯಾತರಿನ್ " ಯಾಕೆ ಹೀಗಾಡುತ್ತಿ? ಈತ ನಮ್ಮ ಅತಿಥಿಯಷ್ಟೆ." ಎಂದಳು, ವ್ಯಗ್ರ ನೋಟವನ್ನು ಆತನ ಕಡೆಗೆ ಎಸೆದವಳಂತೆ ಮಾಡಿ.

ನಾನು ಮತ್ತೂ ಅಲ್ಲಿರಲು ಇಷ್ಟ ಪಡದೆ ಹೊರಟಾಗ ಬಂಗಲೆ ಕಾಂಪೌಂಡಿನ ಗೇಟಿನ ತನಕ ಕಳುಹಿಸಿಕೊಡಲು ಬಂದ ಅವರಿಬ್ಬರು ಬಿಡುವಿದ್ದಾಗ ತಮ್ಮಲ್ಲಿಗೆ ಆಗಾಗ್ಯೆ ಬಂದು ಹೋಗುವಂತೆ ಮಾಡಲು ತಿಳಿಸಿದರು. ನಾನು ಆ ಎಸ್ಟೇಟಿನಿಂದಾಚೆ ಬಂದನಂತರ ಕಟ್ಟಿದ್ಡ ಅಸಮಧಾನದ ಉಸಿರನ್ನೆಲ್ಲ ಬಿಟ್ಟು ಸಮಧಾನಗೊಂಡೆ.

ಕುತೂಹಲ , ಆ ಬಂಗಲೆಯ ನಿಶ್ಚಲ ಗಾಢ ಸ್ತಬ್ಧತೆಗಂಟಿಕೊಂಡಿದ್ದಂತೆ ನಾನು ಅಲ್ಲಿಗೆ ಬಿಡುವಿದ್ದಾಗಲೆಲ್ಲಾ ಹೋಗಿ ಬರಲಾರಂಭಿಸಿದೆ. ಆದರೆ ಇದ್ದ ಕುತೂಹಲವನ್ನು ನಾನೆಂದೂ ವ್ಯಕ್ತ ಪಡಿಸುವ ಆತುರಕ್ಕೆ ಹೋಗದೆ ಅವರಿಗೆಲ್ಲ ದೂರವೆ ಇರಬಯಸಿದ್ದೆನಾದ್ದರಿಂದ ಅವರು ಮಾತನಾಡುವುದು ನಾನು ಕೇಳುವುದಷ್ಟೇ ನಡೆಯುತ್ತಿತ್ತು. ಹೆಚ್ಚಿನ ಬಾಗ ಕ್ಯಾತರಿನ್‌ಳೊಂದಿಗಿನ ಚರ್ಚೆ ಮಟ್ಟದ್ದಾದ ಸಂಭಾಷಣೆಯೆ ಒಳಗೊಳ್ಳುತ್ತಿತ್ತು. ಇದರ ನಡುವೆ ಆ ಎಸ್ಟೇಟ್ ಮ್ಯಾನೇಜರ್ ಪೊಣ್ಣಪ್ಪನ ಪರಿಚಯವೂ ಆಯ್ತು. ಮಲೆಯಾಳಿಯಂತೆ ಕಾಣುತ್ತಿದ್ದ ಅವನು ಕುಸ್ತಿ ಪಟುವಿನಂತೆ ದೃಢಕಾಯನಾಗಿದ್ದ. ಚೆನ್ನಾಗಿ ಮಾತನಾಡುತ್ತಿದ್ದ. ಆದರೆ ಸಾಹಿತ್ಯವೆಂದರೆ ದೂರ. ಸಾಹಿತ್ಯ ಮೂರು ಕಾಸಿಗೂ ಪ್ರಯೋಜನವಿಲ್ಲವೆಂದು ಅವನ ದೂರು. ಸಾಹಿತ್ಯದ ಬಗೆಗೆ ಮಾತುಬಂದಾಗಲೆಲ್ಲಾ ಸಿಡಿಮಿಡಿಗೊಳ್ಳುತ್ತಿದ್ಡ. ಅತಿ ಚುರುಕಿನ ಓಡಾಟ, ಪ್ರತಿಯೊಂದನ್ನು ತೂಗಿನೋಡುವ ಬುದ್ಧಿಯ ಅವನ ಮುಖದಲ್ಲಿ ಒರಟುತನ, ಆ ಒರಟುತನದಲ್ಲೂ ನಯಗಾರಿಕೆ. ಒಟ್ಟಾರೆ ಅವನನ್ನು " ಇಂತಹವನೆಂದು " ಖಡಾಖಂಡಿತವಾಗಿ ಹೇಳಲು ಬಾರದು.

ಒಮ್ಮೊಮ್ಮೆ ನನಗೆ ಮಂದಣ್ಣ ಪ್ರತ್ಯೇಕವಾಗಿ ಸಿಗುತ್ತಿದ್ದ. ಅದೂ ನಾನಲ್ಲಿ ಹೋದ ಐದಾರು ವಾರಗಳ ನಂತರ. ತಾನು ಮಲಗುವುದನ್ನು ಮಹಡಿಯಿಂದ ಕೆಳಗಿನ ಕೋಣೆಯೊಂದಕ್ಕೆ ವರ್ಗಾಯಿಸಿದ್ದ. ನನ್ನನ್ನು ನೋಡಿದ ಗಳಿಗೆಯಿಂದ ಬೇಗನೆ ಬಿಟ್ಟುಕೊಡದೆ ತನ್ನ ಕೋಣೆಯಲ್ಲೆ ಕೂಡಿಸಿಕೊಳ್ಳುತ್ತಿದ್ದ. ತಾನು ಕುಡಿಯುತ್ತಿದ್ದ. ಮಾಂಸ ಕಚ್ಚುತ್ತಿದ್ದ. ಸುಮ್ಮನೆ ನನ್ನನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದ. ನಾನು ಬಲವಂತವಾಗಿ ಬಿಡಿಸಿಕೊಂಡುಬರುತ್ತಿದ್ಡೆ. ಒಮ್ಮೊಮ್ಮೆ" ನೀನೂ ಕುಡಿದರೆ ಚೆನ್ನಿತ್ತು. ಅಭ್ಯಾಸ ಮಾಡು." ಎಂದು ಬೋಧಿಸುತ್ತಿದ್ದ. ನಾನು ಇಡೀ ಬಂಗಲೆಗೆ ಒಮ್ಮೆಗೆಯೆ ಹತ್ತಿರದವನಾಗಿ- ದೂರದವನಾಗಿ ಉಳಿದುಕೊಂಡಿದ್ದೆ. ನನ್ನ ಹಾಗು ಬಂಗಲೆಯವರ ಭೇಟಿ ಅಧಿಕವಾಗುತ್ತಿದ್ದಂತೆ ಪೊಣ್ಣಪ್ಪ ನನ್ನಲ್ಲಿ ಇದ್ದಕ್ಕಿದ್ದಂತೆ ಅವಿಶ್ವಾಸ ವ್ಯಕ್ತಪಡಿಸಲಾರಂಭಿಸಿದ್ದ. ನನ್ನ ಕೆಲಸಕ್ಕೆ ಎರಡು ದಿನ ರಜೆ ಬಂದಾಗ ಮಂದಣ್ಣ ಮಡಿಕೇರಿ ಭಾಗಮಂಡಲಕ್ಕೆ ವಿಹಾರ ಕಾರ್ಯಕ್ರಮವನ್ನು ಏರ್ಪಡಿಸಿದ. ಬೆಳಿಗ್ಗೆಯೆ ಹೊರಟು ಮಡಿಕೇರಿ ಭಾಗಮಡಲವನ್ನೆಲ್ಲ ನೋಡಿಕೊಂಡು ಬಂದನಂತರ ಅಲ್ಲಿಯೆ ಪ್ರವಾಸಿಮಂದಿರದಲ್ಲುಳಿದುಕೊಂಡೆವು. ರಾತ್ರಿ ಭೋಜನಾನಂತರ ತಿರುಗಾಡಿಕೊಂಡು ಬರಲು ಹೊರಟೆ. " ನಾನು ನಿಮ್ಮೊಂದಿಗೆ ಬರಬಹುದೆ?" ಎಂದು ಕೃತಕ ಸೌಜನ್ಯದಿಂದ ಪ್ರಶ್ನಿಸಿ ನನ್ನೊಡನೆ ಬಂದ ಪೊಣ್ಣಪ್ಪ " ಏನ್ಸಮಾಚಾರ?" ಎಂದ ತಮಾಷೆಗೆಂಬಂತೆ. ಕಣ್ಣುಗೀಟಿ. ನಾನು ಸಂಗತಿ ತಿಳಿಯದವನಂತೆ ಅವನ ಕಡೆ ನೋಡಿದಾಗ " ಕ್ಯಾತರಿನ್ ನಿಮ್ಮನ್ನು ಬಹಳ ಹೊಗಳುತ್ತಾಳೆ...ಏನೇನೋ ಚರ್ಚಿಸ್ತೀರಂತೆ..." ಎಂದಾಗ ನಾನು ವ್ಯಂಗ್ಯವಾಗಿ " ಪ್ರಯೋಜನಕ್ಕೆ ಬಾರದುದು.." ಎಂದೆ.

"ನಿಮಗೂ ಮಂದಣ್ಣನವರಿಗೂ ಹೇಗೆ ಸಂಬಂಧ?" ಎಂದು ಕೇಳಿದೆ. ಅವನು ಉತ್ಸಾಹಿತನಾಗಿ ಹೆಗ್ಗಳಿಕೆಯ ಪ್ರಾಮಾಣಿಕ ಧ್ವನಿಯಲ್ಲಿ "ಹತ್ತೆಂಟು ವರ್ಷಗಳ ಹಿಂದೆ ಮಂದಣ್ಣ ಯಾರೂಂತಲೆ ಗೊತ್ತಿರಲಿಲ್ಲ. ತೀರಾ ಬಡತನದಲ್ಲಿದ್ದ ನನ್ನನ್ನು ಕಾಲೇಜಿನಿಂದ ಬಿಡಿಸಿ , ತಮ್ಮ ಎಸ್ಟೇಟಿಗೆ ಹಾಕಿಕೊಂಡರು. ಆಗಿನಿಂದಲೂ ಕ್ಯಾತರಿನ್ ಬರೊತನಕ ಅವರ ವೈಯಕ್ತಿಕ ಕೆಲಸಗಳನ್ನೆಲ್ಲ ನಾನೆ ಮಾಡ್ತಿದ್ದೆ. ಕ್ರಮೇಣ ಅವರೇ ನನಗೆ ಎಸ್ಟೇಟಿನ ವಹಿವಾಟನ್ನೆಲ್ಲ ವಹಿಸಿದರು. ಅವತ್ತಿನಿಂದ ಇವತ್ತಿನವರೆಗೂ ವಿಶ್ವಾಸಿಯಾಗೆ ಉಳಿದುಕೊಂಡಿದ್ದೇನೆ."
" ಮಂದಣ್ಣನ ತಂದೆ ತಾಯಿ..?"
"ಅವರಾ..ತಾಯಿ ಚಿಕ್ಕ ವಯಸ್ಸಿನಲ್ಲೆ ತೀರಿಕೊಂಡರಂತೆ. ತಂದೆ ಮತ್ತು ಮಂದಣ್ಣನ ಸೋದರತ್ತೆ ಮಂದಣ್ಣನ್ನ ಬೆಳೆಸಿದರಂತೆ. ಮಂದಣ್ಣನ ತಂದೆ ಸದಾ ಎಸ್ಟೇಟ್ ಕೂಲಿ ಹೆಣ್ಣಾಳುಗಳ ಮೋಜಿನಲ್ಲೆ ಇರುತ್ತಿದ್ದುದರಿಂದ ಎಸ್ಟೇಟ್ ವಹಿವಾಟೆಲ್ಲಾ ಮಂದಣ್ಣನ ಅತ್ತೇನೆ ನೊಡ್ಕೋತಿದ್ದರಂತೆ. ಆಕೆ, ಮಂದಣ್ಣನ್ನ ಬಾಳಾ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಳಂತೆ. ಆಗ ಬ್ರಿಟೀಷ್‌ನವರಿದ್ದ ಕಾಲ. ಯಾರೋ ಪರಂಗಿಯವನ ಜತೆ ಎಸ್ಟೇಟಿನ ದುಡ್ಡೆಲ್ಲಾ ದೋಚಿಕೊಂಡು ಇಂಗ್ಲೆಂಡಿಗೆ ಒಡಿಹೋದಳಂತೆ. ಆಸ್ತಿ, ಗೌರವ, ಒಲವಿನ ತಂಗಿ ಸೇರಿದಂತೆ ಎಲ್ಲವನ್ನು ಕಳೆದುಕೊಂಡ ಮಂದಣ್ಣನವರ ತಂದೆ ತೀರಿಕೊಂಡರಂತೆ. ಕ್ಯಾತರಿನ್ ಮಂದಣ್ಣನ ಸೋದರತ್ತೆ ಮಗಳೆ. ಎರಡು ವರ್ಷ ಆಯ್ತು ಭಾರತಕ್ಕೆ ಬಂದು. ಬನಾರಸ್ಸಿನಲ್ಲಿದ್ದ ಆಕೆಯನ್ನು ನೋಡಲು ಇವರು ಆಗಾಗ್ಯೆ ಹೋಗುತ್ತಿದ್ದರು. ಮದುವೆಯೂ ಆಯ್ತು. ಎಸ್ಟೇಟನ್ನು ಪುನಃ ಒಂದು ಸ್ಥಿತಿಗೆ ತಂದಿದ್ದ ಮಂದಣ್ಣನವರು ಆಕೆಯನ್ನು ಮದುವೆಯಾದ್ದರಿಂದ ಇಲ್ಲಿನ ಕೂಲಿಯಾಳುಗಳು ಕೈಬಿಟ್ಟರು. ನಮ್ಮ ಕೂರ್ಗಿಗಳಿಗೆ ಪರಂಗಿಗಳ ಬಗ್ಗೆ ಮೋಹ-ದ್ವೇಷ ಎರಡೂ ವಂಶಪಾರಂಪರ್ಯವಾಗಿ ಬಂದದ್ದು...."

ಪೊಣ್ಣಪ್ಪ ಹೇಳೀದುದನ್ನು ಕೇಳಿದ ಮೇಲೆ ನಾನು ಅದರ ಹಿನ್ನೆಲೆಯಲ್ಲಿ ಯೋಚಿಸಲಾರಂಭಿಸಿದಾಗ ಬೇರೆಯದೆ ಆದ ಸಂಸ್ಕೃತಿಯ ಪ್ರಭಾವವನ್ನು ಜೀರ್ಣಿಸಿಕೊಳ್ಳಲಿಕ್ಕಾಗದ ಜೊತೆಗೆ ವಂಶ ಪಾರಂಪರ್ಯವಾಗಿ ಬಂದ ಸ್ವಾಭಿಮಾನವನ್ನು- ಧರ್ಮವನ್ನು ಬಿಡಲಾಗದೆ ನರಳಿದ ಒಂದು ಪರಂಪರೆಯ ಮೂಲಚಿತ್ರ ಮನಸ್ಸಿನಲ್ಲಿ ಸ್ಪಷ್ಟಗೊಳ್ಳತೊಡಗಿತು. ಈ ರೀತಿಯ ನಾಗರಿಕತೆಯ ಜಟಿಲತೆ ನಾಡಿನುದ್ದಗಲಕ್ಕು ಹಬ್ಬಿದೆ ಎಂದನ್ನಿಸತೊಡಗಿದಂತೆ, ಇದನ್ನೆಲ್ಲಾ ಕ್ಯತ್ರಿನ್ ಜೊತೆ ಚರ್ಚಿಸಿದರೆ ಹೇಗೆ ಎಂಬ ಅಭಿಪ್ರಾಯವೂ ಮೂಡತೊಡಗಿತು. ಅದರ ಹಿಂದೆ ಆಕೆಯೊಡನೆ ಚರ್ಚಿಸಿದ್ದ ವಿಷಯಗಳಲ್ಲಿ ಆಕೆ ತನ್ನ ವಿಚಾರವನ್ನೇ ನನ್ನ ಮುಂದೆ ಮಂಡಿಸಲು ಅವಕಾಶ ಕೊಟ್ಟಿದ್ದೆನೆಯಾಗಲಿ ನಾನು ಆಗೊಮ್ಮೆ ಈಗೊಮ್ಮೆ ಬಾಯ್ತೆರೆದುದು ಬಿಟ್ಟರೆ ಬೇರೇನೂ ಆಗಿರಲಿಲ್ಲ. ಆಕೆ ಚರ್ಚೆಯಲ್ಲಿ , ನಾನು ಆಕೆಯ ಮಾತುಗಳ ಮೂಲಕ ಮೀರಿಹೋಗಲು ಅವಕಾಶ ಕೊಟ್ಟಿರಲಿಲ್ಲ. ಅದಕ್ಕೆ ಕಾರಣ, ಆಕೆಯ ಗತ್ತು - ಹಮ್ಮು ಮಾತ್ರ ಕಾರಣವಲ್ಲ. ನನಗೆ ಶಾಲಾ ವಿದ್ಯಾಭ್ಯಾಸದ ಶಿಕ್ಷಣ ಇಲ್ಲದುದು - ಬಡತನ ಸ್ವಾಭಿಮಾನಶೂನ್ಯತೆಯನ್ನು ಬಿಚ್ಚಿ ತೊರಿಸಿಕೊಳ್ಳಲು ಸಂಕೋಚ ಹಾಗು ಕೀಳರಿಮೆ ನನ್ನಲ್ಲಿ ಮನೆ ಮಾಡಿದ್ದುದು ಸ್ಪಷ್ಟವಾಗಿ ನನಗೇಯೇ ನಾಚಿಕೆಯಾಗಿತ್ತು.

ಪ್ರವಾಸಿ ಮಂದಿರಕ್ಕೆ ಹೋದಾಗ ಕೋಣೆಯಲ್ಲೇ ಇದ್ದ ಅವರಿಬ್ಬರಿಗೂ ಏನೋ ವಾಗ್ಯುದ್ಧ ನಡೆದುದರ ಚಿನ್ಹೆಗಳಿದ್ದವು. ನನ್ನನ್ನು ನೋಡಿದ ಮಂದಣ್ಣ, " ಚಂದ್ರು , ನಾನು ಹೊರಗೆ ಹೋಗ್ತಾ ಇದ್ದೀನಿ. ಕಂಪನಿ ಕೊಡ್ತೀರ? " ಎಂದು ಕೇಳಿದಾಗ ನಾನು ಕ್ಯಾತರಿನ್‌ಳತ್ತ ನೋಡಿದೆ. ಮುಖ ತಿರುಗಿಸಿದಳು. ಪೊಣ್ಣಪ್ಪನನ್ನು ಕೋಣೆಯಲ್ಲೆ ಬಿಟ್ಟು ನಾವಿಬ್ಬರು ಆಚೆ ಬಂದೆವು. ಮಂದಣ್ಣ ಕಾರು ಸ್ಟಾರ್ಟ್ ಮಾಡಿ ನೈಟ್ ಬಾರ್ ಕಡೆಗೆ ಬಿಟ್ಟ. ಹೆಚ್ಚಾಗಿ ಬೆಳಕಿಲ್ಲದ ಒಂದು ಮೂಲೆಯಲ್ಲಿ ಕುಳಿತು ತನಗೆ ಬೀರ್, ಕರಿದ ಮೀನು, ಸಿಲೋನ್ ಪರೋಟ ಎಲ್ಲಾ ಹೇಳಿ ನನಗೆ ಚೌಚೌ ಹೇಳಿ ಸಿಗೆರೇಟ್ ಪ್ಯಾಕ್ ನನ್ನತ್ತ ಎಸೆದಾಗ ನಾನು ಅದರಿಂದ ಒಂದು ತೆಗೆದು ಹಚ್ಚಿದೆ. ಕುಡಿಯುತ್ತಾ ಕುಡಿಯುತ್ತಾ ಖಿನ್ನನಾದ ಮಂದಣ್ಣ ದಿಡೀರನೆ ಇಂಗ್ಲೀಷ್‌ನಲ್ಲಿ "ಚಂದ್ರು, ನಾನು ಜೀವಿಸಿರಬೇಕು. ಜೀವಿಸಿರುವುದೆಂದರೆ ಅಗೋಚರ ಸಂಕಷ್ಟಗಳತ್ತ ನಡೆಯುವುದು ಎಂದರೂ ಸರಿಯೆ.ಇತ್ತೀಚೆಗೆ ಆತ್ಮಹತ್ಯೆಯ ಬಗೆಗಿನ ಆಲೋಚನೆ ಬಂದಾಗಲೆಲ್ಲ ಸಾವು ಸಮಸ್ಯೆಗೆ ಪರಿಹಾರವಲ್ಲ ಅಂತನ್ನಿಸ್ತಿದೆ. ಅದು ಏನನ್ನೂ ಕೊಡೋಲ್ಲ. ಜೀವಿಸಿರಬೇಕೂನ್ನೊ ಆಸೆ ಇದ್ದರು ಅಲ್ಲೇನೊ ಅವ್ಯಕ್ತ ಭಯವೂ ಇದೆ...." ಎಂದು ಬಾಯಿಗೆ ಬಂದಂತೆಲ್ಲಾ ಮಾತಾಡಿ ಅಳತೊಡಗಿದ. ನನಗೆ ಕನಿಕರ ಮೂಡಿತು. ಇಷ್ಟು ದೊಡ್ಡ ಆಳು ಹೀಗೆ ಖಿನ್ನ ಮನಸ್ಕನಾಗಿ ಅಳುವುದೆ..ಛೆ ಎಂದನ್ನಿಸಿತಾದರೂ ನಾನು ಹೆಚ್ಚಿಗೆ ಏನನ್ನೂ ಹೇಳಲು ಹೋಗಲಿಲ್ಲ. ಕೆದಕಿ ಕೇಳಲಿಕ್ಕೂ ಹೋಗಲಿಲ್ಲ...ಆತ ಮುಂದುವರಿದು-

"ನನಗೆ ಅಪ್ಪ ಅಮ್ಮ ಚಿಕ್ಕ ವಯಸ್ಸಿನಿಂದಲೇ ಇರಲಿಲ್ಲ. ಇದ್ದ ತಂದೆ ಬೇಜವಬ್ದಾರಿಯಿಂದ ಬದುಕಿದ. ನನ್ನ ಜೀವನದಲ್ಲಿ ಕ್ಯಾತರಿನ್ ಬಂದಾಗ ಅವಳ ಪ್ರೀತಿ ನನಗೇನೊ ಹೊಸ ಪ್ರಪಂಚವನ್ನೆ ತೋರಿತು. ಆದರೆ ಆಕೆ ಬೌದ್ಧಿಕ ದಾಹದಿಂದ ಕೂಡಿದವಳು.ಅಂತಹ ಆಲೊಚನೆಗಳಿಂದ ಹುಟ್ಟುವ ನೀತಿ ಸಂಹಿತೆಗಳನ್ನು ಜೀವನದಲ್ಲಿ ಪ್ರಾಯೋಗಿಕ ಮಟ್ಟದಲ್ಲಿ ಕ್ರಿಯಾತ್ಮಕವಾಗಿ ಕಾಣಲು ಬಯಸುವವಳು. ಅವಳ ಆ ಭಾಗ ನನಗೆ ಅಪರಿಚಿತವಾಗೆ ಉಳಿಯಿತು. ನೀವು ಶುದ್ಧ ಭಾರತೀಯರು.ಕ್ಯಾತರಿನ್ ರೋಸಿಕೊಂಡು ಹೇಳುವ ಪ್ರಕಾರ ಮೇಧಾವಿಗಳು, ಬುದ್ಧಿಜೀವಿಗಳು, ಆದರೆ ಕ್ಯಾತರಿನ್‌ಳಂತೆ ತನ್ನೆಲ್ಲಾ ವಿಚಾರವನ್ನು ಬೇರೊಬ್ಬರ ಇಷ್ಟಕ್ಕೆ ವಿರೋಧವಾಗಿ ಆ ಬೇರೊಬ್ಬರ ಮೇಲೆ ಹೇರುವ ಪ್ರಭುತ್ವದ ಧೋರಣೆ ನಿಮಗಿಲ್ಲ. ನೀವು ಕ್ಯಾತರಿನ್ ಮಾತನಾಡುವಾಗ ನೀವು ಬಾಯ್ತೆರೆದುದೆ ಅಪರೂಪ. .. ಅದಕ್ಕೆ ಇತ್ತೀಚೆಗೆ ಕ್ಯಾತರಿನ್‌ಗಿಂತ ನೀವೆ ನನಗೆ ಆಪ್ತರಾಗಿ ಕಾಣುತ್ತೀರಿ." ಆತ ಕುಡಿದು ಕುಡಿದು ತೀರಾ ಭಾವೋದ್ವೇಗನಾಗಿ ನನ್ನನ್ನಪ್ಪಿ ಮುದ್ದಿಸಿದ. ಕ್ಯಾತರಿನ್‌ಳನ್ನು ಬಯ್ಯತೊಡಗಿದ. ಆತನನ್ನು ಅಲ್ಲಿಂದ ಬಲವಂತವಾಗಿ ಎಬ್ಬಿಸಿ ಕಾರ್ ಡ್ರೈವ್ ಮಾಡಲು ಬಿಡದೆ ಹೆಗಲು ಆಸರೆ ಕೊಟ್ಟು ಪ್ರವಾಸಿಮಂದಿರಕ್ಕೆ ನಡೆಸಿಕೊಂಡೇ ಕರೆತಂದೆ.

ಪೊಣ್ಣಪ್ಪ ಆಗಲೆ ಕುಡಿದು ತನ್ನ ಕೋಣೆಯ ದೀಪವನ್ನಾರಿಸಿ ಗಾಢ ನಿದ್ದೆಯಲ್ಲಿದ್ದುದು ಸ್ಪಷ್ಟವಿತ್ತು. ಕ್ಯಾತರಿನ್‌ಳೆ ಬಾರಿನಿಂದ ಕಾರನ್ನು ತಂದಳು. ಬಾರಿಗೆ ಹೋಗುವಾಗ ದಾರಿಯಲ್ಲಿ ಏನನ್ನೂ ಮಾತಾಡಲಿಲ್ಲ. ಅವಳು ಬೇರೆಲ್ಲರ ಹಾಗೆ ವೈಯಕ್ತಿಕ ವಿಚಾರಗಳನ್ನು ಸಲೀಸಾಗಿ ಬಿಟ್ಟುಕೊಡುವಷ್ಟು ಸುಲಭದ ಹೆಣ್ಣಾಗಿರಲಿಲ್ಲ. ತನ್ನ ಮಾತುಗಳಲ್ಲಿ ವೈಯಕ್ತಿಕ ವಿಚಾರ ನುಸುಳಲು ಅವಕಾಶ ಕೊಡದಷ್ಟು ಜಾಗೃತೆ ವಹಿಸುತ್ತಿದ್ದುದರಿಂದಲೆ ಆಕೆಗೆ ಬೇರೆಯವರ ಮೇಲೆ ಹಿಡಿತ ಸಾಧಿಸುವಂತಾಗಿತ್ತು. ದಾರಿಯಲ್ಲಿ ಮಡಿಕೇರಿಯ ಮೇಲೆ ಬ್ರಿಟೀಷರ ಪ್ರಭಾವದ ಅವಶೇಷಗಳ ಶೇಷ ಭಾಗವನ್ನು ಚರ್ಚಿಸಿದೆವು. ರಸ್ತೆ, ಕಟ್ಟಡ, ನಗರಯೋಜನೆ, ಜನಜೀವನದ ನಡವಳಿಕೆ ಇತ್ಯಾದಿಗಳನ್ನು ನಾನು ಉದಾಹರಿಸಿ ಮಾತನಾಡುತ್ತಿದ್ದುದನ್ನು ಕೇಳಿದಳು,ಮೊದಲಬಾರಿಗೆ ನಾನು ಮಾತನಾಡುವಾಗ ಸುಮ್ಮನೆ ಇದ್ದ ಆಕೆಯ ಮೌನದಲ್ಲಿ ನಗ್ನವಿಚಾರದೊಂದಿಗೆ ಸಮ್ಮತಿಯ ಬದಲು ತಿರಸ್ಕರಿಸುವ ಕಾಠಿಣ್ಯತೆ ಇತ್ತು. ಕಾರು ಪ್ರವಾಸಿಮಂದಿರಕ್ಕೆ ಬಂದ ಮೇಲೆ ತನ್ನ ಕೋಣೆಗೆ ಹೋಗುವಾಗ ನನ್ನ ಕಡೆ ಕ್ರೋಧದಿಂದ ನೋಡಿ ಮಾತಿನ ತುಣುಕೊಂದನ್ನು ಎಸೆದಳು:" ನೀನು ಬಹಳ ಬುದ್ಧಿವಂತ, ಘಾಟಿ. ನಾನಂದುಕೊಂಡಿದ್ದಕ್ಕಿಂತಲೂ ಹೆಚ್ಚಿನವ..."

ಮಡಿಕೇರಿಯಿಂದ ಪುನಃ ಹಿಂತಿರುಗಿ ಹೊರಟ ಮೇಲೆ ದಾರಿಯಲ್ಲಿ ನನ್ನ ಬಳಿ ಪೊಣ್ಣಪ್ಪನನ್ನು ಬಿಟ್ಟರೆ ಅವರಿಬ್ಬರೂ ಏನೊಂದನ್ನೂ ಮಾತನಾಡಲಿಲ್ಲ. ಪರಸ್ಪರ ಅವರಿಬ್ಬರೂ ಮಾತನಾಡಲಿಲ್ಲ. ಆಕೆಯಂತೂ ಕಾರಿನಲ್ಲಿ, ಪುಸ್ತಕದಲ್ಲಿ ಮುಖ ಹುದುಗಿಸಿದವಳು ಮೇಲೆತ್ತಲಿಲ್ಲ.

ನಾನು ಮತ್ತೆ ಪುನಃ ಎರಡು ದಿನದನಂತರ ಮೂರು ದಿನ ಮಡಿಕೇರಿಗೆ ಹೋದವನು ಅಲ್ಲೇ ಉಳಿದುಕೊಳ್ಳಬೇಕಾಯ್ತು. ಹಿಂತಿರುಗಿ ಬಂದಾಗ ಬಂಗಲೆಯಲ್ಲಿ ಒಂದೇ ರಗಳೆಯೆಂದು ಸುದ್ಧಿ ತಿಳಿಯಿತು. ಆ ಸಂಜೆ ಬಂಗಲೆಯ ಕಡೆ ಹೊರಟಾಗ ದಾರಿಯಲ್ಲಿ ಸಿಕ್ಕ ಪೊಣ್ಣಪ್ಪ _ ಮಂದಣ್ಣ ಬುದ್ಧಿ ಸ್ಥಿಮಿತದಲ್ಲಿಲ್ಲದವನಂತೆ ಆಡುತ್ತಿದ್ದಾನೆಂತಲೂ, ಹಿಂದಿನ ದಿನ ಎಸ್ಟೇಟಿಗೆ ನುಗ್ಗಿದ ಸಲಗವನ್ನು ಓಡಿಸದೆ ಸುಟ್ಟು , ಪೊಲೀಸಿನವರದು ರೇಂಜ್ ಅಧಿಕಾರಿಗಳ ತಾಪತ್ರಯ ಅತಿಯಾಗಿದೆಯೆಂದೂ , ಮಂದಣ್ಣ ಲಂಚ ಕೊಡಲು ನಿರಾಕರಿಸುತ್ತಿದ್ದಾನೆಂತಲು, ತಾನು ಎಲ್ಲಾ ವ್ಯವಹಾರವನ್ನು ಸರಿದೂಗಿಸಲು ಪ್ರಯತ್ನಿಸುತ್ತಿರುವುದಾಗಿ ನಾನೊಂದೆರಡು ಮಾತುಗಳನ್ನು ಮಂದಣ್ಣನಿಗೆ ಹೇಳಬೇಕೆಂತಲೂ ಹೇಳಿ ಹೋದ.

ನಾನು ಬಂಗಲೆಗೆ ಹೋದಾಗ ಮಂದಣ್ಣನಿಗೆ ವೈದ್ಯರು ನಿದ್ರೆ ಔಷದಿಯ ಇಂಜೆಕ್ಷನ್ ಕೊಟ್ಟಿದ್ದರಿಂದ ನಿದ್ದೆ ಹೋಗಿದ್ದ. ಕ್ಯಾತರಿನ್ ಕೋಣೆಗೆ ಹೋದೆ. ಅವಳ ಕಠಿಣವಾದ ಮುಖದ ಸಪ್ಪೆ ಕಣ್ಣುಗಳಲ್ಲಿ ನೀರು ತುಂಬಿತ್ತು. ನನ್ನನ್ನು ನೋಡಿ ಒರೆಸಿಕೊಂಡಳು. ನಾನು ಸುಮ್ಮನೆ ಅವಳೆದುರಿಗೆ ಕುಳಿತೆ. ಅಂದು ಅವಳು ಮಾತನಾಡಿದುದು ಪೂರ್ತಿ ವೈಯಕ್ತಿಕವಾಗಿತ್ತು. ಅದೂ ಸಹ ನಾನು ಕೇಳದೆಯೆ."

ನಮ್ಮಮ್ಮ ಭಾರತೀಯಳು. ಬಾರತವನ್ನ ನೋಡಬೇಕಂತ ಬಂದವಳು ಇಲ್ಲಿಯೇ ಉಳಿದುಕೊಂಡೆ. ಸಂಶೋಧನೆಗೆಂದು. ಒಂಟಿಯಾಗಿ ಅನಾಥನಂತೆ ಕಾಡಿನಲ್ಲಿ ಬೆಳೆದಿದ್ದ ಮಂದಣ್ಣ ಅನಪೇಕ್ಷಿತವಾಗಿ ನನಗೆ ಅಂಟಿಕೊಂಡ. ನನ್ನ ಸಾಂಗತ್ಯ ಅವನಿಗೆ ಅನಿವಾರ್‍ಯವಾಗಿದ್ದುದನ್ನು ಗುರುತಿಸಿದ ನಾನೇ ಅವನನ್ನು ಮದುವೆಯಾದೆ. ಎಳೆ ಮಗುವಿನಂತೆ ನನ್ನ ಹಿಂದೆ ಸುತ್ತುತ್ತಿದ್ದ. ಹಾಗೆ ಹೇಳಲು ಹೋದರೆ ಗುಲಾಮನಾಗಿದ್ದ. ಹೀಗೆ ಸ್ಪರ್ಧೆಯೇ ಇಲ್ಲದ ಆಸಕ್ತಿರಹಿತವಾದ ಬದುಕು ದುರ್ಬರವೆನಿಸತೊಡಗಿದಂತೆ ನನ್ನ ಅವನ ನಡುವೆ ಕಂದರ ಅಗಾದವಾಗತೊಡಗಿತು. ಅದನ್ನು ಅವನೂ ಗುರುತಿಸಿದ. ಆದರೆ ಅವನು ನನ್ನಿಂದ ಸ್ಪರ್ಧೆಯನ್ನು ಎದುರು ನೋಡದೆ ಒಣ ಪ್ರೀತಿಯನ್ನು ಎದುರು ನೋಡಿದ್ದು ಅವನ ಸ್ಥಿತಿಗೆ ಅನಿವಾರ್ಯವಿರಬಹುದು., ಪುನಃ ಕುಡಿಯಲಾರಂಭಿಸಿದ. ಅನುಚಿತವಾಗಿ ನಡೆದುಕೊಳ್ಳತೊಡಗಿದ.ಲೈಂಗಿಕವಾಗಿ ಹಿಂಸಿಸಲಾರಂಭಿಸಿದ. ಅವನ ಕಡೆಯಿಂದ ನನ್ನ ಬಗ್ಗೆ ಧ್ವೇಷಭರಿತವಾದ ಪ್ರೀತಿಯ ಸಂಬಂಧ ರೂಪುಗೊಳ್ಳುತ್ತಿದ್ದುದನ್ನು ಕಂಡು ಬೇಸರವಾಯ್ತು. ...ಮೊನ್ನೆ ಮಡಿಕೇರಿಯಲ್ಲಿ ನಾನು ಇದನ್ನೆಲ್ಲ ವಿವರಿಸಿ ವಿವಾಹರದ್ಧನ್ನು ಸೂಚಿಸಿದೆ. ಅಂದಿನಿಂದ ಅವನು ಈ ರೀತಿಯಾಗಿದ್ದಾನೆ...ನನ್ನ ಸ್ಥಿತೀನ ನೀನು ಅರ್ಥ ಮಾಡಿಕೊಳ್ಳಬಹುದು..." ಎಂದು ಅಡಗಿಸಿಟ್ಟಿದ್ದನ್ನೆಲ್ಲ ಹೊರ ಕಕ್ಕಿದಳು.

"ಹೌದು ಅರ್ಥವಾಗುತ್ತಿದೆ. ಎಷ್ಟೇ ಆಗಲಿ ನೀನು ಬ್ರಿಟೀಷ್ ತಂದೆಗೆ ಜನಿಸಿದವಳು. .." ಎಂದೆ. ನನ್ನ ಧ್ವನಿಯಲ್ಲಿ ಅವಳ ಬಗ್ಗೆ ಕನಿಕರವಿರಲಿಲ್ಲ.ಕ್ರೌರ್ಯವಿತ್ತು.

"ಭಾರತೀಯರೆ ಹೀಗೆ..ಛೆ" ಅವಳ ಧ್ವನಿಯಲ್ಲಿನ ತಿರಸ್ಕಾರಕ್ಕೆ ಕೋಪ ಭುಗಿಲ್ಲನೆ ಹತ್ತಿ ಉರಿದರೂ ಬೇರೇನಾದರು ಮಾತನಾಡುವುದು ಅನುಚಿತಪ್ರವೇಶವಾತ್ತದೆಂದು ನಾನು ಅವಳ ಕೋಣೆಯಿಂದ, ಬಂಗಲೆಯಾಚೆ ಬಂದಾಗ , ಹೌದು ನಾನು ಆ ಬಂಗಲೆಯ ಕುಟುಂಬಕ್ಕೆ ಹತ್ತಿರದವನಾಗಲೇ ಬಾರದಿತ್ತು. ಇದೆಲ್ಲಿಯ ಕರ್ಮ. ನನ್ನ ಪ್ರಪಂಚವೆ ಬೇರೆ.ಇನ್ನು ಅಲ್ಲಿಗೆ ಹೋಗಲೇಬಾರದೆಂದುಕೊಂಡೆ.

ಮತ್ತೆ ನಾನು ಅಲ್ಲಿಗೆ ಹೋಗಲೇ ಇಲ್ಲ.

ಪೊಣ್ಣಪ್ಪ ಆಗಾಗ್ಗೆ ನಾಲೆ ಕೆಲಸದ ಬಳಿಯೇ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದ. ಈಗವನು ಒಂದು ರೀತಿಯಲ್ಲಿ ಸಮಾಧಾನಗೊಂಡಿದ್ದ. ಮಂದಣ್ಣನ ಜೀಪಾಗಲಿ, ಕಾರಾಗಲಿ ಆ ದಾರಿಯಲ್ಲಿ ಮತ್ತೆ ಕಾಣಲಿಲ್ಲ.

ಐದಾರು ವಾರದನಂತರ ಒಂದು ದಿನ ಕೂಲಿಗಾರರೆಲ್ಲ ಹೋ ಎಂದು ಹುಯಿಲಿಡಲಾರಂಭಿಸಿದರು. ದೂರದಲ್ಲಿ ಒಬ್ಬ ವ್ಯಕ್ತಿ ಬೆಂಕಿಯಲ್ಲಿ ಉರಿದು ಬೆಂದು ಹೋಗುತ್ತಿದ್ದ. ಉರಿ ತಾಳಲಾರದೆ ಆ ವ್ಯಕ್ತಿ ಆ ನಡು ಮದ್ಯಾಹ್ನದ ಬಿಸಿಲಿನಲ್ಲಿ ಗಿರಗಿರನೆ ಗಾಳಿಯಲ್ಲಿ ಸುತ್ತುತ್ತಿದ್ದ. ಗಾಳಿ ಇನ್ನೂ ಜೋರಾಗಿ ಬೆಂಕಿ ಚೆನ್ನಾಗಿ ಕಚ್ಚಿಕೊಂಡಿತು . ನಾನು ಸ್ಟೋರಿನಿಂದ ಕಂಬಳಿ ತರುವಂತೆ ಹೇಳಿ ಅತ್ತ ಓಡಿದಾಗ ಉರಿಯುತ್ತಿದ್ದ ವ್ಯಕ್ತಿ ತನ್ನ ಶರೀರಕ್ಕೆ ಚೆನ್ನಾಗಿ ಬಟ್ಟೆ ಸುತ್ತಿಕೊಂಡಿದ್ದುದು ಕಂಡಿತು.ಕೂಲಿಯಾಳು ತಂದ ಕಂಬಳಿಯನ್ನು ಉರಿಯುತ್ತಿದ್ದ ವ್ಯಕ್ತಿಯ ಮೇಲೆ ದೂರದಿಂದ ಎಸೆದು ನಂತರ ತಬ್ಬಿ ಹಿಡಿದು ಅವನನ್ನು ನೆಲಕ್ಕುರುಳಿಸಿದೆವು. ಬೆಂಕಿ ನಂದಿದನಂತರ ಕಂಬಳಿ ಬಿಚ್ಚಿದಾಗ ಮಂದಣ್ಣ ಪೂರ್ತಿ ಸುಟ್ಟು ಕರಕಲಾಗಿಹೋಗಿದ್ದ. ಕ್ಯಾತರಿನ್‌ಳ ನೈಲಾನ್ ಉಡುಪು ಕರಗಿ ದ್ರವವಾಗಿ ಮಂದಣ್ಣನ ಸುಟ್ಟ ಶರೀರದೊಂದಿಗೆ ಬೆಸೆದುಕೊಂಡಿತ್ತು. ಎಸ್ಟೇಟಿಗೆ ಆಳನ್ನು ಅಟ್ಟಿದೆ...

ಸುದ್ಧಿ ತಿಳಿದು ಬಂದ ಸಬ್‌ಇನ್ಸ್‌ಪೆಕ್ಟರ್ ತನ್ನ ಅಧಿಕಾರಯುತ ತನಿಖೆಗಾರಂಭಿಸಿದ. ಈ ಭಾರಿ ಕ್ಯಾತರಿನ್ ಅಪಸ್ಮಾರ ಬಡಿದವಳಂತೆ ನಿಂತಿದ್ದಳು. ಆಕೆಯ ಬಗೆಗೆ ನಾನು ಕಳೆದ ಬಾರಿ ವ್ಯಕ್ತಪಡಿಸಿದ್ದ ಕ್ರೋಧದ ನ್ಯಾಯವನ್ನು ಮನಗಂಡಿದ್ದರೂ ತನ್ನ ಕಾಠಿಣ್ಯತೆಯನ್ನು ತಗ್ಗಿಸಿರಲಿಲ್ಲ.

ಮಂದಣ್ಣ ನನಗೊಂದು, ಇನ್ಸ್‌ಪೆಕ್ಟರಿಗೊಂದು ಪತ್ರವನ್ನು ಬಿಟ್ಟಿದ್ದ. ಇನ್ಸ್‌ಪೆಕ್ಟರಿನ ಪತ್ರದಲ್ಲಿ ತನ್ನ ಆತ್ಮಹತ್ಯೆಗೆ ತಾನೆ ಬಾಧ್ಯಸ್ಥನೆಂದಷ್ಟೆ ತಿಳಿಸಿದ್ದ.ನನಗೆ ಬರೆದಿದ್ದ ಪತ್ರದಲ್ಲಿ ತನ್ನ ದಾರುಣಮಯ ನಿರ್ಧಾರಕ್ಕೆ ಕಾರಣ ತನಗೆ ಅಸ್ಪಷ್ಟವೆಂದೂ ತಾನಿನ್ನೂ ಜೀವಂತವಾಗಿರಬಯಸಿದ್ದನೆಂದೂ ತಿಳಿಸಿದ್ದ. ತನಗೆ ಯಾರನ್ನು ಲೆಕ್ಕಕ್ಕೆ ತೆಗೆದುಕೊಂಡು ಪ್ರೀತಿಸಬೇಕೊ ತಿಳಿಯದೆಂದೂ , ಕಡೆಗೆ ನನ್ನನ್ನು, ಕ್ಯಾತರಿನ್‌ಳನ್ನು, ಪೊಣ್ಣಪ್ಪನನ್ನು ನಂಬದೆ ಕೇವಲ ಪ್ರೀತಿಸಿದ್ದನೆಂದು; ಅದು ತನಗೆ ಹಿಂತಿರುಗಿ ಬರಲಿಲ್ಲವೆಂದೂ ತಿಳಿಸಿ, ಅವ್ಯಕ್ತ ಕಾರಣಗಳಿಗಾಗಿ ನಮ್ಮನ್ನು ಕೃತಘ್ನರೆಂದು ಕರೆದಿದ್ದ!!

-ನಾನು ಆ ಊರನ್ನು ಬಿಟ್ಟು ಬಂದೆ. ಮಂದಣ್ಣ ತನ್ನೆಲ್ಲ ಒಟ್ಟು ಆಸ್ತಿಯನ್ನು ಕ್ಯಾತರಿನ್‌ಳಿಗೆ ಬರೆದಿದ್ದ. ಕ್ಯಾತರಿನ್ ಅದನ್ನೆಲ್ಲಾ ಒಬ್ಬ ಬ್ರಿಟೀಷ್ ಮಿಲಿಟರಿ ಕಮಾಂಡರಿಗೆ [ರಿಟೈರ್ಡ್] ಮಾರಿ ಇಂಗ್ಲೆಂಡಿಗೆ ಹೊರಟುಹೋದಳು. ಆನಂತರ ಪ್ರೊಫೆಸರ್ [ಪಾಲ್] ಒಬ್ಬನನ್ನು ಮದುವೆಯಾಗಿರುವುದಾಗಿ ಪತ್ರ ಬರೆದಳು. ಪೊಣ್ಣಪ್ಪ ಈಗೆಲ್ಲೋ ನೀಲಗಿರಿಯಲ್ಲಿ ಏನೋ ವ್ಯಾಪಾರ ಮಾಡಿಕೊಂಡಿದ್ದಾನಂತೆ.

ನಾನು ನಿಮಗೆ ತಿಳಿಸಿರುವ ದಾರುಣಮಯ ಘಟನೆಯ ಮೇಲ್ಮೈ ವಿವರ ಅದರ ಬಂಧದ ಮೂಲದಲ್ಲಿ ಆಗಾಗ ನೆನೆಪಿಗೆ ಬಂದರೂ, ಅದರ ಬಗೆಗೆ ವಿಶ್ಲೇಷಿಸಲು ಸಮಯವಿಲ್ಲದೆ...ಕಡೆಗೆ ಪ್ಯಾಕ್ಸ್ ಓ ಬ್ರಿಟನ್ ಎಂದು ಹೇಳಲೂ ಸಹ ಸಮಯವಿಲ್ಲದೆ ಈ ನಗರದ ಪ್ರಯೋಜನಕ್ಕೆ ಬಾರದ ಅನೇಕಾನೇಕ ಚಟುವಟಿಕೆಗಳ ಇತಿಮಿತಿಗಳಲ್ಲಿ ಕರಗಿಹೋಗಿದ್ದೇನೆ, ಒಂದುರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ...

ತುಷಾರ [ಜುಲೈ,೧೯೮೦] ಮಾಸಿಕದಲ್ಲಿ ಪ್ರಕಟ. ಪ್ರಕಟಿಸಿದ ಈಶ್ವರಯ್ಯನವರಿಗೆ ನನ್ನ ಕೃತಜ್ಞತೆಗಳು.

ಸಣ್ಣಕತೆ-ವೈಟ್‌ಫೀಲ್ಡ್

"English men and women in India are, as it were members of one great family, aliens under one sky"

-Maud Diver
`The English Women in India'
(1909)

ಆಟೋರಿಕ್ಷಾ ಮನೆ ಮುಂದೆ ನಿಲ್ಲುತ್ತಿದ್ದಂತೆ ನನಗಾಗಿ ಬಹಳ ಹೊತ್ತಿನಿಂದಲೂ ಕಾಡಿರುವಳೆಂಬಂತೆ ಗಾಬರಿ ಮುಖದ ಸೀತ , ನಾನು ಆಟೋದಿಂದಿಳಿಯುವ ಮೊದಲೇ ಹತ್ತಿರಕ್ಕೋಡಿಬಂದು :"ಜೇಕಬ್ ಅಂಕಲ್ ತೀರ್‍ಕೊಂಡ್‌ರಂತೆ. ನೀವು ಬಂದ ತಕ್ಷಣ ಕಳಿಸಿಕೊಡೀಂತ ಚಾರ್ಲ್ಸ್ ಫೋನ್ ಮಾಡಿದ್ದ."ಎಂದಳು ಒಂದೇ ಉಸಿರಿಗೆ! ಆ ಅನಿರೀಕ್ಷಿತ ಸುದ್ಧಿಗೆ ಯಾವ ರೀತಿಯಲ್ಲೂ ಆ ತಕ್ಷಣ ಪ್ರತಿಕ್ರಿಯಿಸಿಲಿಕ್ಕಾಗದುದರ ಜೊತೆಗೆ ಏನು ಮಾಡುವುದೆಂದು ಹೊಳೆಯಲೇ ಇಲ್ಲ. ನಿನ್ನೆ ಸಂಜಿಯಿಂದ ರೈಲು ಪ್ರಯಾಣದಲ್ಲಿ ನಜ್ಜುಗುಜ್ಜಾಗಿದ್ದೆ. ಹೋದರೆ ಮುಖವಾದರು ನೋಡಿಕೊಂಡು ಬಂದು ಬಿಡಬಹುದೆಂದು ಯೋಚಿಸಿ ಲಗೇಜಿದ್ದ ಸೂಟ್‌ಕೇಸ್‌ಗಳನ್ನು ಸೀತಳ ಕೈಗೆ ಕೊಟ್ಟು, ರಾತ್ರಿ ಎಷ್ಟೇ ಹೊತ್ತಾಡರು ಹಿಂತಿರುಗುತ್ತೇನೆಂದು ತಿಳಿಸಿ ರಿಕ್ಷಾದವನಿಗೆ ವೈಟ್‌ಫೀಲ್ಡ್ ಕಡೆ ಓಡಿಸುವಂತೆ ಹೇಳಿ ರಿಕ್ಷಾದಲ್ಲೇ ಒರಗಿ ಕಣ್‌ಮುಚ್ಚಿದೆ.

ವೈಟ್‌ಫೀಲ್ಡ್ ಬಗೆಗೆ ಒಂದೆರಡು ಮಾತು ಹೇಳಿದರೆ ಅನುಚಿತವಾಗುವುದಿಲ್ಲವಾದ್ದರಿಂದ , ಬೆಂಗಳೂರು ದಕ್ಷಿಣಕ್ಕಿರುವ ಆ ಊರಿಗೆ ಆ ಹೆಸರು ಹೇಗೆ ಬಂತೆಂಬುದನ್ನು ಹೇಳಿಬಿಡುತ್ತೇನೆ. ಆ ಊರಿಗೆ ಶತಮಾನದಿಂದ ಚರಿತ್ರೆ ಇದೆಯಾದರೂ ಅದನ್ನು ಕೆದಕುವುದು ಇತಿಹಾಸಜ್ಞರ ಕೆಲಸ. ಆಗಿನ ಮಹರಾಜರು ಇಂಡಿಯನ್ ರಾಯಲ್ ಸವಿರ್ಸ್‌ನಿಂದ ನಿವೃತ್ತರಾದ ಬಿಳಿಯರಿಗೆ ಹಂಚಲು, ಬೆಂಗಳೂರಿನ ಮೂಲೆಗಿದ್ದ ಕಾಡು ಪ್ರದೇಶವನ್ನು , ಮದರಾಸಿನ ಯೂರೋಪಿಯನ್ ಅಂಡ್ ಆಂಗ್ಲೋ ಇಂಡಿಯನ್ ಅಸೋಸಿಯೇಷನ್‌ನ ಅಧ್ಯಕ್ಷನಾಗಿದ್ದ ಡಾ.ವೈಟ್‌ರವರ ಸುಪರ್ದಿಗೆ ೧೮೯೪ಕ್ಕೂ ಮುಂಚೆಯೆ ಬಿಟ್ಟುಕೊಟ್ಟರಂತೆ. ಆ ಅಸೋಸಿಯೇಷನ್ನಿನವರು ನಿವೃತ್ತರಾದ ಬಿಳಿಯರಿಗೆ ಆ ಪ್ರದೇಶವನ್ನು ನಿವೇಶನಗಳನ್ನಾಗಿ ಪರಿವರ್ತಿಸಿದಾಗ, ಬರೀ ಬಿಳಿಯರೆ ತುಂಬಿದ ಆ ಜಾಗಕ್ಕೆ ಡಾ.ವೈಟ್‌ನ್ನನುಸರಿಸಿ ` ವೈಟ್‌ಫೀಲ್ಡ್' ಎಂಬ ಹೆಸರು ಬಂತೆಂದು ಆ ಪ್ರದೇಶದ ಎಳೆಯರು ಆಡಿಕೊಳ್ಳುವ ಮಾತು. ಅರಣ್ಯಪ್ರದೇಶವಾದರೂ ಸೌಮ್ಯ ವಾತಾವರಣವಿದ್ದ ಆ ಪ್ರದೇಶದಲ್ಲಿ ಇಂದು ಯಾವ ದಿಕ್ಕಿಗೆ ತಿರುಗಿದರೂ ಸಣ್ಣ-ಪುಟ್ಟ- ದೊಡ್ಡ ಕಾರ್ಖಾನೆಗೆಳೆ. ಮಲೆಯಾಳಿಗಳು, ತಮಿಳರು, ತೆಲುಗರೂ ಸಹ ತುಂಬಿಹೋಗಿದ್ದಾರಾದ್ದರಿಂದ ಆ ಸ್ಥಳದ ಹೆಸರು ಬದಲಾವಣೆಯಾಗಬೇಕೆಂಬ ವಾದವೂ ಇದೆ. ಅದನ್ನು ಕಾಲವೇ ನಿರ್ಧರಿಸುತ್ತದೆ.

ಬೃಹತ್ ಕಾರ್ಖಾನೆಗಳ ಕಪ್ಪು ಹೊಗೆಯನ್ನು ಕುಡಿಯುತ್ತಲೇ ನಾನು ವೈಟ್ಫೀಳ್ಡ್‌ನ ಒಳವಲಯದಲ್ಲಿದ್ದ ಜೇಕಬ್‌ನ ಬಂಗಲೆ ಮುಂದೆ ಬಂದಾಗ ನೂರಾರು ಜನ ಸೇರಿದ್ದರು. ಇದ್ದ ಒಬ್ಬ ಮಗ ಚಾರ್ಲ್ಸ್ ಇಂಗ್ಲೆಂಡಿನಲ್ಲಿ, ಮಗಳು ಜೇನ್‌ಳು ಅಮೆರಿಕಾದಲ್ಲಿ ಇದ್ದರೂ ಅನಾಥರಂತೆ ತನ್ನ ಮುದಿ ಹೆಂಡತಿಯೊಂದಿಗೆ ಬಾಳುತ್ತಿದ್ದ ಜೇಕಬ್‌ನ ಸಾವಿಗೆ ಇಷ್ಟೊಂದು ಜನ ಸೇರಬಹುದೆಂದು ನಾನು ಊಹಿಸಿಯೇ ಇರಲಿಲ್ಲ. ಆಕೆಯೂ ಕೆಲವೇ ತಿಂಗಳುಗಳ ಹಿಂದೆ ತೀರಿಕೊಡಿದ್ದಳು. ಮಕ್ಕಳಿಬ್ಬರೂ ಅವಳ ಅಂತ್ಯ ಸಂಸ್ಕಾರಕ್ಕೆ ಬರಲಾಗಿರಲಿಲ್ಲ. ಮುಖವಾದರೂ ನೋಡಲು ಸಿಕ್ಕಿತು ಎಂಬ ಸಮಾಧಾನದೊಂದಿಗೆ ನಾನು ಆಟೋರಿಕ್ಷಾದಿಂದ ಇಳಿಯುತ್ತಿದ್ದಂತೆ ಕಪ್ಪು ಬಣ್ಣದ ಒಳ್ಳೇ ಸೂಟ್‌ನಲ್ಲಿದ್ದ ಚಾಲ್ಸ್ ನನ್ನನ್ನು ನೋಡುತ್ತಿದ್ದಂತೆಯೆ ಓಡಿಬಂದು ತಬ್ಬಿಕೊಂಡ ನಂತರ "ಅಪ್ಪಯ್ಯನಿಗೆ ಹುಷಾರಿಲ್ಲಾಂತ ಒಂದು ವಾರದ ಹಿಂದೇನೆ ಕೇಬಲ್ ಬಂತು. ತಕ್ಷಣ ಹೊರಟು ಬಂದೆ. ಜೇನಳೂ ಬಂದಿದ್ದಾಳೆ.ನಿನ್ನೆಯಿಂದ ನೀನು ಬರ್‍ತೀ ಬರ್‍ತೀಂತ ನಿಮ್ಮ ಮನೆ ಕಡೆ ಬಂದಿದ್ದೆ. ಫೋನೂ ಮಾಡಿದ್ದೆ.."ಎಂದ.

"ನಾನು ಹದಿನೈದು ದಿನಗಳಿಂದ ಊರಲ್ಲಿ ಇರಲಿಲ್ಲ."ಎಂದು ಅವನಿಗೆ ಹೇಳುತ್ತಲೇ ಬಾಗಿಲಿನತ್ತ ಹೆಜ್ಜೆ ಹಾಕಿದೆ. ಬಾಗಿಲಲ್ಲೇ ಇದ್ದ ಜೇನ್‌ಳು ನನ್ನನ್ನು ನೋಡಿ ತೆಕ್ಕೆ ಹಾಕಿಕೊಂಡು "ಅಂತೂ ಬಂದ್ಯಲ್ಲ. ಅಪ್ಪಯ್ಯ ಬೆಳಿಗ್ಗೆ ಪ್ರಾಣ ಬಿಡೋವಾಗಲೂ ನಿನ್ನ ಜಪ ಮಾಡ್ತಿದ್ದ. ನೀನಿಲ್ಲದೆ - ನೀನು ಪ್ರಧಾನ ಪಾತ್ರ ವಹಿಸದೆ ಅಂತ್ಯ ಸಂಸ್ಕಾರ ನಡಿಯೋ ಹಾಗಿಲ್ಲ. ಅದು ಅಪ್ಪಯ್ಯನ ಇಚ್ಛೆ. ಹಾಗೇಳ್ತ ಹೇಳ್ತಾನೆ ಪ್ರಾಣ ಬಿಟ್ಟ."ಎಂದಳು, ತನ್ನ ಹರಕು ಮುರುಕು ಕನ್ನಡದಲ್ಲಿ. ನನಗೆ ಅದನ್ನು ಕೇಳಿ ಆಘಾತವಾದ ಹಾಗಾಯ್ತು.ಇದೆಲ್ಲಿಯ ಸಂಬಂಧ? ಎಂದೆನ್ನಿಸುತ್ತಿದ್ದಂತೆಯೇ ಅವರಿಬ್ಬರೊಂದಿಗೆ ಒಳ ಹೊಕ್ಕೆ. ಬಂಗಲೆಯ ಉಜ್ವಲ ಬೆಳಕಿನ ಹಜಾರದಲ್ಲಿ ಮಂಚದ ಮೇಲೆ ಎಂಬತ್ತೈದು ವರ್ಷದ ಜೇಕಬ್‌ನ ಶರೀರವಿತ್ತು. ಅವನ ವ್ಯಸನಭರಿತವಾದ ಮುಖವನ್ನು, ಒಂಟಿತನದ ಬಾರವನ್ನು, ಮಂಚದ ಸುತ್ತಮುತ್ತಲೂ ಹಚ್ಚಿಟ್ಟಿದ್ದ ಮೇಣದ ಬತ್ತಿ ದೀಪಗಳು ಅಸಹ್ಯವಾಗಿ ಎತ್ತಿತೋರುತ್ತಿದ್ದವು. ಅವನ ಮೇಲೆ ಹರಡಿದ್ದ ಹೂಗಳು ಅವನನ್ನು ತೀರಾ ವಿಕೃತಗೊಳಿಸಿದ್ದವು. ಅದನ್ನೆಲ್ಲ ನೋಡುತ್ತಿದ್ದಂತೆ ಅಳು ತಡೆಯಲಾಗದೆ ಕಟ್ಟೆಯೊಡೆದಿತ್ತು.

ವಾಸ್ತವವಾಗಿ ನನಗೂ ಜೇಕಬ್‌ನಿಗೂ ಎಂತಹ ಸಂಬಧವೂ ಇರಲಿಲ್ಲ. ಸುದೀರ್ಘವಾದ ಪರಿಚಯವವಿದ್ದರೂ ಅವನ ನನ್ನ ನಡುವೆ ಸೌಹಾರ್ದ ವಾತಾವರಣ ಎಂದಿಗೂ ಇರಲಿಲ್ಲ. ಅವನು ಭಾವುಕರಹಿತನಾಗಿ ಯುವಜನಾಂಗವನ್ನು ದೂರಿ ವಾದ ಮಾಡುತ್ತ ಉದಾಹರಣೆಯಾಗಿ "ಎಲ್ಲವನ್ನೂ "ತೊರೆದು ಇಂಗ್ಲೆಡ್ ಸೇರಿಕೊಡ ತನ್ನ ಮಗನನ್ನು ಬೈಯುತ್ತಿದ್ದಾಗ ನಾನು ಚಾರ್ಲ್ಸ್‌ನನ್ನು ಸಮರ್ಥಿಸಿಕೊಂಡಿದ್ದೆ. ಆ ಜಗಳ ನಮ್ಮಿಬ್ಬರ ಮಧ್ಯೆ ಇಂದಿಗೂ ಬಗೆಹರಿದಿಲ್ಲ.

ನಾನು ಅಳುತ್ತಿದ್ದುದನ್ನು ನೋಡಿ ದೂರದಲ್ಲಿ ಸಂಪೂರ್ಣ ಜೀನ್ಸ್‌ನ ಒರಟು ಉಡುಗೆಯಲ್ಲಿದ್ದ ಜೇನ್‌ಳ ಅಮೆರಿಕ ಪತಿ "ತಮಾಷೆಯಾಗಿದೆ"ಎಂದು ಜೇನ್‌ಳಿಗೆ ಹೇಳುತ್ತಿದ್ದುದು ನನ್ನ ಕಿವಿಗೆ ಬಿತ್ತು. ಅದನ್ನನುಸರಿಸಿ ಜೇನ್‌ಳು `ಷ್' ಎಂದು ಸನ್ನೆ ಮಾಡಿದುದನ್ನು ಗಮನಿಸದೆ ಇರಲಿಕ್ಕಾಗಲಿಲ್ಲ. ಆ ನಿಮಿಷವೇ ಹೇಸಿಗೆ ಹುಟ್ಟಿ ಜೇನ್‌ಳು ಎಂತಹ ಕೃತಘ್ನಳು ಎಂದುಕೊಂಡೆ. ಶವವಾಹಕ ತಾಯರಾಗಿತ್ತು. ಅದು ನನ್ನ ದೃಷ್ಟಿಗೆ ಬಿದ್ದೊಡನೆ ಅದರ ಬಗೆಗೆ ಜಿಗುಪ್ಸೆ ಹತ್ತಿ ಉರಿದುಬಂದು ಚಾರ್ಲ್ಸ್‌ನನ್ನು ಕರೆದು ವಾಹನವನ್ನು ಹಿಂತಿರುಗಿ ಕಳಿಸಿಬಿಡುವಂತೆ ಹೇಳಿದೆ. "ಚರ್ಚ್‌ಗೆ ದೂರವಾಗುತ್ತೆ"ಎಂದು ರಾಗವೆಳೆದ. "ಕಳಿಸ್ತೀಯೋ ಇಲ್ಲವೋ..."ಗದರಿದೆ. ಶವಪೆಟ್ಟಿಗೆಗೆ ಭುಜ ಕೊಟ್ಟು ಚರ್ಚ್‌ಗೆ ಬಂದೆವು. ವಿಧ್ಯುಕ್ತ ಕ್ರಿಯೆಗಳು ಮುಗಿದನಂತರ ಪಕ್ಕದ ಸ್ಮಶಾನದಲ್ಲಿ ಸಂಸ್ಕಾರ ಪೂರೈಸಿಬಂದೆವು.

ಸ್ಮಶಾಣದಿಂದ ಹಿಂತಿರುಗುವಾಗ ನಾನು ಚಾರ್ಲ್ಸ್‌ನನ್ನು ಕೇಳಿದೆ: "ಕ್ಯಾಥ್ಲಿ ಬಗ್ಗೆ ಏನು ನಿರ್ಧಾರ ಮಾಡಿದ್ಡಿ?"- ನನ್ನ ಈ ಪ್ರಶ್ನೆಯ ಉತ್ತರಕ್ಕೆ ಅವನು ತಯಾರಿ ಮಾಡಿಕೊಂಡಿರಲಿಲ್ಲವೋ ಏನೋ- ನಾನೇನೋ ಅವನ ಮೇಲೆ ದುರಾಕ್ರಮಣ ಮಾಡಿದೆನೆಂಬಂತೆ "ಅವಳ ಹಠ ಇನ್ನೂ ಒಂದು ಚೂರು ಕಡಿಮೆಯಾಗಿಲ್ಲ. ನಿನಗೆ ಗೊತ್ತಿರೋದಕ್ಕೆ ಶಕ್ಯವಿಲ್ಲ. ನಾನು ಆರು ತಿಂಗಳ ಹಿಂದೇನೆ ಲಿವರ್‌ಪೂಲ್‌ನಲ್ಲಿ ಇನ್ನೊಂದು ಮದುವೆಯಾದೆ. ಅವಳಿಗೂ ಗೊತ್ತು.."- ನನಗೆ ಅವನು ಮರು ಮದುವೆಯಾದ ವಿಚಾರ ತಿಳಿದಿರಲೇ ಇಲ್ಲ.ಕ್ಯಾಥ್ಲಿ ನನ್ನಿಂದ ಈ ವಿಚಾರಾನ ಯಾಕೆ ಮುಚ್ಚಿಟ್ಟಳೂಂತನ್ನೋದು ಗೊತ್ತಾಗಲಿಲ್ಲ. ಚಾರ್ಲ್ಸ್‌ನಿಂದ ಈ ವಿಷಯ ತಿಳಿದಾಗ ಅವನ ಮೇಲೆ ಎಂದೂ ಇರದಿದ್ದ ಅಸಹ್ಯ ಹುಟ್ಟಿತಲ್ಲದೆ ಜೇಕಬ್‌ನ ಹತ್ತಿರ ಇವನನ್ನು ಸಮರ್ಥಿಸಿಕೊಂಡದ್ದು ಮಹಾ ತಪ್ಪೂಂತನ್ನಿಸಿತು.
"ನಿಮ್ಮಪ್ಪ ನೀನು ಕೆಲಸವಿಲ್ಲದೆ ಅಲೀತಿದ್ದಾಗ್ಲೆ ನಿನಗೂ ಕ್ಯಾತ್ಲಿಗೂ ಯಾಕೆ ಮದುವೆ ಮಾಡ್ದ ಗೊತ್ತ?"- ಎಂದು ಕೇಳಿದೆ ಸ್ವಲ್ಪ ಖಾರವಾಗಿ.
"ಗೊತ್ತಿಲ್ಲದೆ ಏನು? ನಾನು‌ಇಂಗ್ಲೆಂಡಿಗೆ ಹೋಗದೆ ಇರ್‍ಲೀಂತ. ಒಂದು ಬಂಧನ ಹಾಕಬೇಕೂಂತ ಮದುವೆ ಮಾಡ್ದ. ಆದರೆ ನನ್ನ ಭವಿಷ್ಯ ಆಸೆ ಆಕಾಂಕ್ಷೆಗಳು ಮುಖ್ಯ. ಒಂದು ಹೆಣ್ಣಿಗೋಸ್ಕರ ನಾನವನ್ನೆಲ್ಲ ಬಿಟ್ಟುಕೊಡೋಕ್ಕೆ ತಯಾರಿಲ್ಲ.."ಎಂದ
"ನಿಮ್ಮಪ್ಪಯ್ಯನ ಉದ್ದೇಶ ಗೊತ್ತಿದ್ದೂ ಕ್ಯಾಥ್ಲೀನ ಯಾಕೆ ಮದುವೆಯಾದೆ? ಹೀಗೆ ಅವಳಿಗೆ ವಂಚನೆ ಮಾಡೋಕ್ಕ?"
"ಚಂದ್ರೂ, ನಿನಗೆ ನಮ್ಮ ಕುಟುಂಬದ ವ್ಯವಹಾರಗಳಲ್ಲಿ ತಲೆ ಹಾಕೋಕ್ಕೆ ಯಾರು ಅಧಿಕಾರ ಕೊಟ್ಟರು? ನಮ್ಮಪ್ಪಯ್ಯ ಮುದಿತನದ ಮರುಳಿನಲ್ಲಿ ನಿನ್ನನ್ನ ಹಚ್ಕೊಂಡಿದ್ದ ಅಷ್ಟೆ. ಅದೇ ಭಾವುಕ ಸಂಬಂಧ ನನ್ನ ನಿನ್ನ ನಡುವೇನೂ ಇದೇಂತ ನೀನು ತಿಳಿದಿದ್ದರೆ ಅದು ನಿನ್ನ ಭ್ರಮೆಯಷ್ಟೆ. ನಿನ್ನ ಪ್ರಶ್ನೆಗೆ ಉತ್ತರೆ ಹೇಳಬೇಕೂಂತಿಲ್ಲದಿದ್ರೂ ಹೇಳ್ತೀನಿ ಕೇಳು. ಆಗ ನನ್ನ ಚಪಲ ತೀರ್‍ಸೋಕ್ಕೆ ಒಂದು ಹೆಣ್ಣು ಬೇಕಾಗೇ ಇತ್ತು. ಅದೂ ಅಲ್ಲದೀರ ಕ್ಯಾಥ್ಲಿ ಅಷ್ಟೊಂದು ಸಂಪ್ರದಾಯಸ್ಥಳೂಂತನ್ನೋದು ನನಗೆ ತಿಳಿದಿರಲಿಲ್ಲ."- ಎಂದು ನನ್ನ ಮುಖದ ಮೇಲೆ ಹೊಡೆದಂತೆ ಹೇಳಿದವನೆ ಸರಸರ ಹೆಜ್ಜೆ ಹಾಕಿ ನನ್ನನ್ನು ದಾಟಿ ಹೋಗಿಬಿಟ್ಟ.

ನೇರವಾಗಿ ಬಂಗಲೆಗೆ ಬಂದು ಜೇನ್‌ಳು ಹಾಗು ಅವಳ ಅಮೆರಿಕನ್ ಪತಿ ನನಗಿಂತ ಮುಂಚೆಯೇ ಸ್ಮಶಾನದಿಂದ ಬಂದಿದ್ದರು. ಜೇನ್‌ಳು ನನ್ನನ್ನು ನೋಡಿ ಮುಗುಳ್ನಗುತ್ತ ತನ್ನ ಪತಿಗೆ ,"ಇವನೇ ಚಂದ್ರೂಂತ. ನಮ್ಮ ಫ್ಯಾಮಿಲಿ ಫ್ರೆಂಡ್. ಮಾತ್ರವಲ್ಲ. ನಾವೆಲ್ಲರೂ ಚಿಕ್ಕಂದಿನಿಂದಲೂ ಒಂದೇ ಕಡೆ ಬೆಳೆದವರು. ಇವರು ನನ್ನ ಪತಿ- ಆರ್ಥರ್-ಸಿನಿಮಾಟೋಗ್ರಾಫರ್"ಎಂದು ಆಕೆಯ ಯಜಮಾನರಿಗೆ ಪರಿಚಯಿಸಿದಳು.ಅವಳ ಇಂಗ್ಲೀಷ್ ಭಾಷೆ ಅಮೆರಿಕನ್ ಧಾಟಿಗೆ ಬದಲಾಗಿತ್ತು. ದಿಡೀರೆಂದು ಜೇನ್‌ಳು- "ಕ್ಯಾಥ್ಲಿಗೂ ನಮ್ಮ ಕುಟುಂಬಕ್ಕೂ ಇನ್ಮೇಲೆ ಎಂಥಾ ಸಂಬಂಧಾನೂ ಇಲ್ಲ. ಅಣ್ಣಯ್ಯ ಬೇರೆ ಮದ್ವೆ ಮಾಡ್ಕೊಂಡ. ನಿನಗೂ ಗೊತ್ತಿರಬೇಕು.."ಎಂದಳು ಕನ್ನಡದಲ್ಲಿ. ಆರ್ಥರ್ ಜೇನ್‌ಳ ದಿಡೀರ್ ಭಾಷಾ ಬದಲಾವಣೆ ಅರ್ಥವಾಗದವನಂತೆ ಮಿಕಿಮಿಕಿ ನೋಡತೊಡಗಿದ. ಸದಾ ಮೇಲರಿಮೆಯಿಂದಲೇ ಎರಡಡಿ ಚಿಮ್ಮಿಕೊಂಡೇ ನಡೆಯುತ್ತಿದ್ಡ ಜೇನ್‌ಳು ನನ್ನನಿಂದು ಸರಿಸಮಾನನಾಗಿ ಕಂಡು ನನ್ನೊಡನೆ ಏನೋ ಸಮಾಲೋಚಿಸುವ ಸಲುವಾಗಿಯೆಂಬಂತೆ ಮಾತಿಗಾರಂಭಿಸಿದ್ದು ಕೇಳಿ ಆಶ್ಚರ್ಯವಾಗಿತ್ತು.
"ಮ್. ಗೊತ್ತಿದೆ. ಮನುಷ್ಯತ್ವವಿಲ್ಲದ ಪಶು ಹಾಗೆ ನಿಮ್ಮಣ್ಣ ನಡ್ಕೋಬಾರದಿತ್ತು..."

ಕ್ರೂರವಾಗಿ ನನ್ನೆಡೆ ನೋಟವೆಸೆದ ಜೇನ್‌ಳು- "ಅವಳು ಇಂಗ್ಲೆಂಡಿಗೆ ಬರೋಲ್ಲ , ಭಾರತದಲ್ಲೇ ಉಳ್ಕೋತೀನಿ ಅನ್ನೋ ಅವಳ ಹಠಕ್ಕೆ ನಮ್ಮಣ್ಣಯ್ಯ ತಾನೆ ಏನ್ಮಾಡಬಹುದಿತ್ತು. ಅವಳೇ ತನ್ನ ಹಠವನ್ನ ಬಿಟ್ಟುಕೊಡಬಹುದಿತ್ತು."- ಎಂದಳು, ಕ್ಯಾಥ್ಲಿಯ ಹಠ ಮೂಢತನದ ಪರಮಾವಧಿಯದು ಎಂಬ ಅರ್ಥದಲ್ಲಿ.
"ಜೆ, ಹುಟ್ಟಿ ಬೆಳೆದು ಆಟವಾಡಿದ ನೆಲ ಇದು. ಇಂಗ್ಲೆಂಡಲ್ಲ. ನೀನು ಅಮೆರಿಕಾಗು, ನಿಮ್ಮಣ್ಣಯ್ಯ ಇಂಗ್ಲೆಂಡಿಗೂ ಹೋದಾಗ ನಿಮ್ಮಪ್ಪಯ್ಯ ನಿನ್‌ಜೊತೆ ಯಕೆ ಬರಲಿಲ್ಲ ಗೊತ್ತು ತಾನೆ..."ಎಂದು ಕೇಳಿದಾಗ-
"ಭಾವುಕತೇನ ಮೀರಿ ನಿಲ್ಲೋ ವಯಸ್ಸನ್ನ ಅಪ್ಪಯ್ಯ ದಾಟಿದ್ದ. ಅದಕ್ಕೇನೆ ಅಜ್ಜಾ ಅಜ್ಜಿ ಸಮಾಧಿ ಈ ನೆಲದಲ್ಲಿದೆ. ಪವಿತ್ರವಾದ ಭೂಮಿ ಇದೂಂತ ಹಠ ಹಿಡಿದು ಅನಾಥವಾಗಿ ಸತ್ತು ನಮಗೂ ಕೆಟ್ಟ ಹೆಸರು ತಂದ. ಆಷ್ಟಲ್ಲದೆ ತನ್ನ ಆಸ್ತಿಯ ಉಸ್ತುವಾರಿ- ವಿಲೇವಾರಿ ಎಲ್ಲಾ ನಿನಗೆ ಬಿಟ್ಟಿದ್ದಾನೆ. ನಮ್ಮನ್ನು ಅಪ್ಪಯ್ಯ ಯಾವತ್ತೂ ತನ್ನ ಮಕ್ಕಳಂತೆ ಭಾವಿಸ್ಲಿಲ್ಲ. ನೀನು ನಮ್ಮ ಸ್ಥಾನಾನ್ನ ಆಕ್ರಮಿಸಿದೆ. ತನ್ನ ವಾರಸುದಾರನಾಗಿ ಅಪ್ಪಯ್ಯ ನಿನ್ನ ಆಯ್ಕೆ ಮಾಡೋದಿಕ್ಕೆ ನಿನ್ನಲೇನಂತಾ ವಿಶೇಷಾನ ಕಂಡನೋ ಗೊತ್ತಿಲ್ಲ...ಆರ್ಥವೂ ಆಗ್ತಿಲ್ಲ.."ಎಂದು ವ್ಯಂಗ್ಯವಾಗಿ ಜೇನ್‌ಳು ಇನ್ನೂ ಏನೇನೋ ಹೇಳೋದರಲ್ಲಿದ್ದಾಗ, ನಾನು ಅವಳು ಕೊಟ್ಟ ಆಸ್ತಿ ಬಗೆಗಿನ ಹೊಸ ಸುದ್ಧಿಯಿಂದ ತಲೆ ಸುತ್ತಿ ಬಂದವನಂತೆ ಕುಸಿದು ಬಿದ್ದಿದ್ದೆ.

ಹೌದು, ಜೇಕಬ್ ನನ್ನಲೇನಂಥಾ ವಿಶೇಷಾನ ಕಂಡಾಂತ ಅವನ ಆಸ್ತೀನೆಲ್ಲ ನನ್ನ ಮಡಿಲಿಗೆಸೆದು ಹೋದ? ಈಗದು ಕೆಂಡವಾಗಿ ಪರಿಣಮಿಸಿದೆ. ಅವನ ಎರಡನೇ ಹೆಂಡತಿ ಸತ್ತಾಗ, [ ಚಾರ್ಲ್ಸ್, ಜೇನ್‌ಳಿಂದ ತಿರಸ್ಕೃತಳಾದ ಚಿಕ್ಕಮ್ಮ-ಮಲತಾಯಿ.] ಚಾರ್ಲ್ಸ್, ಜೇನ್‌ಳ ಗೈರುಹಾಜರಿಯಲ್ಲಿ ಅಂತ್ಯಸಂಸ್ಕಾರಕ್ಕೆ ನಾನೇ ಮುಂದಾಗಿದ್ದೆ. ಕ್ಯಾಥ್ಲಿಗೂ , ಚಾರ್ಲ್ಸ್‌ಗೂ ಮದುವೆ ಮಾಡಿ ಕ್ಯಾಥ್ಲಿಯ ಬಾಳು ಹಾಳು ಮಾಡಿದೆನೆಂಬ ಅಳುಕು ಜೇಕಬ್‌ನನ್ನು ಕಾಡುತ್ತಿದ್ದಾಗ- ಕ್ಯಾಥ್ಲಿಗೆ ಒಂದು ಕಂಪನಿಯಲ್ಲಿ ಪರ್ಸನಲ್ ಸೆಕ್ರಟರಿ ಕೆಲಸ ಕೊಡಿಸೋ ಮುಖಾಂತರ ಜೇಕಬ್‌ನ ಅಳಿಕು ಅದುಮಿಹೋಗಲು ಸಹಾಯ ಮಾಡಿದ್ದೆ.ಒಂಟಿತನದ ನರಕವನ್ನು ಅವನು ಅವುಭವಿಸದಿರಲೆಂದು ನಾನು ವಾರಕ್ಕೆರಡು ಬಾರಿ ಅವನನ್ನು ಹೋಗಿ ನೋಡಿಕೊಂಡು ಬರುತ್ತಿದ್ದೆ. ಅದೆಲ್ಲ ಅವನು ನಮ್ಮ ಚಿಕ್ಕಂದಿನಲ್ಲಿ ನಮ್ಮ ಕುಟುಂಬಕ್ಕೆ ಮಾಡಿರುವ ಸಹಾಯಕ್ಕೆ ಕೃತಜ್ಞತೆಯನ್ನು ತೋರುವ ಸಲುವಾಗಿಯಷ್ಟೆ.. ಇಷ್ಟಕ್ಕೆಲ್ಲ ಆಸ್ತಿ ಉಸ್ತುವಾರೀನ ನನ್ನ ಪರವಾನಗಿ ಇಲ್ಲದೆ ನನ್ನತ್ತ ಜೇಕಬ್ ಎಸೆದಿದ್ದನೆ....?

ನಾನು ಕುಸಿದುದನ್ನು ಜೇನ್‌ಳು ಉಪೇಕ್ಷಿಸಿದರೂ ಆರ್ಥರ್ ನನ್ನ ಬಳಿಗೆ ಓಡಿ ಬಂದವನೆ ತನ್ನ ಸಹಜ ಗುಣವೆಂಬಂತೆ ಸಮಾಧಾನ ಹೇಳತೊಡಗಿದ. ಚಿಕ್ಕಂದಿನಿಂದಲೂ ನಾನು ಅರಿತಿರುವ , ಜೊತೆಗೆ ಆಟವಾಡಿ ಬೆಳೆದಿರುವ ಬಿಗುಮಾನದ ಜೇನ್‌ಳಿಗಿಂತಲೂ, ನಾನು ಮನಸಾರೆ ದ್ವೇಷಿಸುತ್ತಿದ್ದ ಅಮೆರಿಕೆಯ ಆರ್ಥರ್ ದಿಡೀರನೆ ಹತ್ತಿರದವನಾದ. ಸ್ವಲ್ಪ ಹೊತ್ತು ಸುಧಾರಿಸಿಕೊಡು ಏನನ್ನೂ ಮಾತನಾಡದೆ ಆಚೆ ಬರುತ್ತಿದ್ದಾಗ "ನಾಡದ್ಡು ನಾನು ವಿಮಾನ ಹತ್ತಾ ಇದ್ದೀನಿ, ಅಷ್ಟರೊಳಗೆ ವಿಲೇವಾರಿ ಬಗ್ಗೆ ಒಂದು ತೀರ್ಮಾನಕ್ಕೆ ಬಂದು ಬಿಡು. ಚಾರ್ಲ್ಸ್‌ನೂ ನಾಡದ್ದೆ ಹೊರಡಬಹುದು.ನಾನು ನಿಮ್ಮ ಮನೆಗೆ ನಾಳೆ ಸಾಯಂಕಾಲ ಬರ್‍ತೀನಿ..."ಎಂದು ಜೇನಳು ಅಧಿಕೃತ ಧ್ವನಿಯಲ್ಲಿ , ಕನ್ನಡದಲ್ಲಿ ಜೋರಾಗಿ ಕೂಗಿ ಹೇಳಿದ್ದು ಕೇಳಿತು. ನಾನು ಕಾಂಪೌಂಡ್ ಗೇಟಿನಾಚೆ ಬರುತ್ತಿದ್ದಂತೆಯೆ ಆರ್ಥರ್ ತನ್ನದೆ ಶೈಲಿಯಲ್ಲಿ `ಚಂದ್ರೂ...ಚಂದ್ರೂ' ಎಂದು ಕೂಗಿಕೊಂಡೇ ಬಂದು ನನ್ನನ್ನು ಸೇರಿಕೊಂಡ. ಸಿಗರೇಟು ತೆಗೆದು ನನಗೊಂದು ಕೊಡುವಾಗ ಕಣ್ಣಲ್ಲಿ ಆಶ್ಚರ್ಯದ ಮಿಂಚು ಹರಿಸಿ ಅನುಮಾನದಿಂದ "ನೀನು ನನಗೆ ಇವತ್ತೆ ಪರಿಚಯವಾದರೂ ನಿನ್ನ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೀನಿ. ನನ್ನಲಿಲ್ಲದ್ದು - ನನಗವಶ್ಯಕವಾದ್ದು ನಿನ್ನಲೇನೋ ಇದೆ..."ಎಂದ . ನನ್ನ ಬಗ್ಗೆ ಜೇನ್‌ಳೇನಾದರೂ ಹೇಳಿರಬೇಖೆಂದುಕೊಂಡು :"ಜೇನ್‌ಳು ಹೇಳಿದಳ...?"ಎಂದೆ. "ಊಹುಂ, ಇಲ್ಲಿಗೆ ಬಂದ ಮೇಲೆ ಜೇಕಬ್‌ನ ದಿನಚರಿ ಸಿಗ್ತು. ಅದರಲ್ಲಿ ತನ್ನ ಮಕ್ಕಳ ಬಗ್ಗೆ ಬರೆದಿರೋದಕ್ಕಿಂತಲೂ ಹೆಚ್ಚಿಗೆ ನಿನ್ನ ಬಗ್ಗೆ ಬರೆದಿದ್ದಾನೆ.."ಎಂದ. ಎಂತಹುದೇ ಸುದ್ಧಿ ನನ್ನ ಮೆದುಳನ್ನು ಹೊಕ್ಕುವಂತಿರಲಿಲ್ಲವಾದರೂ ಆಸಕ್ತಿಯಿಂದ ಕೇಳಲು ಶುರು ಮಾಡಿದೆ."ನೀನು ಜೇನ್‌ಳ ಬಾಲ್ಯ ಸಾಂಗಾತಿಯಂತೆ. ಅವಳ ಬಗ್ಗೆ ನಿನ್ನ ಹತ್ತಿರ ಏನಾದರೂ ಮಾತನಾಡಿದರೆ ಸಮಸ್ಯೆ ಬಗೆಹರಿಯಬಹುದೇನೋ ಅನ್ನೋ ದುರಾಸೆ ನನ್ನದು..: ಎಂದ. ಆರೋಪಿಸುವ ಧ್ವನಿಯಾಗಿರಲಿಲ್ಲವಾದರೂ ಹೃದಯ ಖಾಲಿ ಮಾಡಿಕೊಳ್ಳಲು ಅವನಿಗೆ ವಿಶ್ವಾಸಿಯೊಬ್ಬ ತುರ್ತಾಗಿ ಬೇಕಿತ್ತೆಂಬುದು ಸ್ಪಷ್ಟವಿತ್ತು. "ನೀನು ಏನು ಹೇಳ್ತಿ ಅನ್ನೋದು ನನಗೆ ಗೊತ್ತು ಆರ್ಥರ್. ಅವಳ ಮೊಂಡು ಸ್ವಭಾವದ ಬಗ್ಗೆ ತಾನೆ?"ಎಂದು ಕೇಳಿದೆ.

"ಅವಳನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಡಿದ್ದೀಯಾನ್ನೋದು ಈ ಮಾತಿನಿಂದಲೇ ಅರ್ಥವಾಗುತ್ತೆ ಚಂದ್ರು. ಅವಳು ನನ್ನ ಜೀವನದಲ್ಲಿ ಪ್ರವೇಶಿಸಿದಾಗಿನ ಆರಂಭದಲ್ಲಿ, ಉತ್ಸಾಹದ ಮಿತಿ ಅನ್ನೋದು ಏನೂನ್ನೋದೆ ಗೊತ್ತಿರಲಿಲ್ಲ. ಆದರೆ ಅವಳ ಆಸೆಗಳೆಲ್ಲ ದುರಾಸೆಯಾಗಿ ಅದಕ್ಕೂ ಒಂದು ಎಲ್ಲೆ ಇಲ್ಲಾಂತನ್ನೋದನ್ನ ನಾನು ಕಂಡ್ಕೊಳ್ಳೋ ವೇಳೆಗೆ ನನಗೆ ಬದುಕಿನಲ್ಲಿದ್ದ ಉನ್ಮಾದ ಕಳೆದು ಹೋಗಿತ್ತು. ಕೆಟ್ಟ ಹಾಲಿವುಡ್, ಲಾಸೇಂಜೆಲ್ಸ್‌ನ ಕೃತಕತೆಗಳ ಶರವೇಗದ ಬದುಕಿನಿಂದ ದೂರಾದರೆ ಸಾಕಾಗಿತ್ತು. ನಾನು ವಾಷಿಂಗ್‌ಟನ್ ಹತ್ತಿರ ಇದ್ದ ನಾನು ಹುಟ್ಟಿ ಬೆಳೆದ ಹಳ್ಳಿಗೆ ಹೋಗ್ತೀನೇಂದರೆ ಜೇನ್ ಆ ಹಳ್ಳಿ ಸೇರೋಕ್ಕೆ ತಯಾರಾಗಲಿಲ್ಲ. ಅವಳಂತೂ ಈಗ ಲಾಸ್ ಏಂಜೆಲ್ಸ್‌ನಲ್ಲೇ ಇದ್ದಾಳೆ. ನಾನು ಸಿಯಾಟಲ್‌ನಲ್ಲಿದ್ದೀನಿ. ನಮ್ಮಿಬ್ಬರ ಮಧ್ಯ ಅಂತರ ಭರ್ತಿಯಾಗೋದೆ ಇಲ್ವೇನೋ ಅಂತನ್ನಿಸ್ತಾ ಇದೆ.ನನ್ನ ಸ್ನೇಹಿತರ ಸುದ್ಧಿ ಪ್ರಕಾರ ಅವಳು ನನಗೆ ವಿವಾಹರದ್ದು ಕೊಡೋಕ್ಕೆ ತಯಾರಾಗ್ತಾ ಇದ್ದಾಳೇಂತ ಗೊತ್ತಾಯ್ತು..."ಒಂದೇ ಉಸಿರಿನಲ್ಲಿ ತನ್ನೊಳಗಿದ್ದನ್ನೆಲ್ಲ ಆಚೆಗೆ ಕಕ್ಕಿದ್ದ. ಅವನ ಕೆಂಪು ಮುಖ ಪೇಲವಗೊಂಡಿತ್ತು. ಜೇನಳು ನನ್ನ ಮಾತಿಗೆ -ಸಲಹೆಗಳಿಗೆ ಕಿವಿಗೊಡುತ್ತಾಳೆಂಬ ಭರವಸೆ ಇರಲಿಲ್ಲವಾದ್ದರಿಂದ ನಾನು ಆರ್ಥರನಿಗೆ ಎಂತಹ ಆಶಾಭಾವನೆಯನ್ನೂ ತುಂಬಲು ಅಶಕ್ತನಾಗಿದ್ದೆ. ಆ ವಿಚಾರವನ್ನು ಅವನಿಗೆ ಹೇಳಿದಾಗ "ನನಗೆ ಗೊತ್ತು. ಆದರೆ ಒಂದು ವಿಚಾರಾನ್ನ ಹೇಳ್ತೀನಿ ಕೇಳು. ಈಗ ಜೇನಳು ಇಲ್ಲಿಂದ ಲಾಸೇಂಜೆಲ್ಸ್‌ಗೆ ಹೋಗೋದನ್ನ ಮುಂದೂಡಿದ್ದಾಳೆ, ಯಾಕೆ ಗೊತ್ತ? ಆಸ್ತೀಲಿ ತನಗೆ ಸಿಗಬಹುದಾದ್ದನ್ನೆಲ್ಲಾ ಮಾರಿ ಹೋಗೋ ತೀರ್‍ಮಾನ ಅವಳದು. ಸಾಕಷ್ಟು ಹಣ ಅವಳ ಕೈ ಸೇರಿದರೆ ನನಗೆ ಅವಳು ವಿವಾಹರದ್ದು ಕೊಡೋದು ಖಂಡಿತ..."ಎಂದು ಹೇಳುತ್ತಾ ದಿಡೀರನೆ ಮಾತು ಬದಲಾಯಿಸುತ್ತ "ನಾನು ನಾಳೆಯೆ ಹೊರಡ್ತಾ ಇದ್ದೀನಿ. ಅದಕ್ಮುಂಚೆ ನಿನ್ನ ನೋಡೋಕ್ಕಾಗ್ದೆ ಇರಬಹುದು. ಕಾಗದ ಬರೀತಿರ್‍ತೀನಿ. ನೀನೂ ಬರೀತಾ ಇರು."ಎಂದು ಹೇಳಿದವನೆ ನನ್ನನ್ನು ಎಷ್ಟು ಅವಸರದಲ್ಲಿ ಕೂಡಿಕೊಂಡಿದ್ದನೋ ಅದೆ ವೇಗದಲ್ಲಿ ಹೊರಟೇ ಹೋದ. ನನಗೆ ಎರಡು ದಿನದಿಂದ ನಿದ್ದೆ ಸರಿಯಾಗಿಲ್ಲದುದರಿಂದ ಏನನ್ನೂ ಯೋಚಿಸಲಿಕ್ಕಾಗದ ಮಂಕು. ಮನೆಗೆ ಬಂದೊಡನೆ ಸೀತಳ ಬಳಿಯೂ ಏನನ್ನೂ ಮಾತನಾಡದೆ ಮಲಗಿದೆ.

ಮಾರನೆ ದಿನ ಆಫೀಸಿನಿಂದ ಮನೆಗೆ ಬರುವ ವೇಳೆಗಾಗಲೆ ಚಾರ್ಲ್ಸ್ ಬಂದು ಕಾಯುತ್ತಿದ್ದ. ಸೀತಳು ಕೊಟ್ಟಿದ್ದ ಕಾಫಿಯನ್ನು ಗುಟುಕರಿಸುತ್ತಾ ಕೂತಿದ್ದ. ಅವನು ನನ್ನನ್ನು ನೋಡಿದವನೆ ಎದ್ದು ಕೈಕುಲುಕುತ್ತಾ "ನಿನ್ನೆ ಒರಟಾಗಿ ನಡೆದುಕೊಂಡದ್ದಕ್ಕೆ ಕ್ಷಮಿಸು.."ಎಂದ. "ನಾವು ಭಾರತೀಯರು ಒರಟು ಚರ್ಮದವರು."ಎಂದೆ ಕಠಿಣವಾಗಿ. "ಕ್ಷಮಿಸು ಎನ್ನಲಿಲ್ವೆ.."ಎಂದು ಚೀರಿದ. ಅವನ ಮಾತನ್ನು ಗಮನಕ್ಕೆ ತೆಗೆದುಕೊಳ್ಳದೆ "ಕೂತ್ಕೋ ಬರ್‍ತೀನಿ.."ಎಂದು ಹೇಳಿ ಒಳಕ್ಕೆ ಹೋಗಿ ಮುಖ ತೊಳೆದು ಉಡುಪು ಬದಲಿಸಿ ಬಂದೆ. ಸೀತ ತಂದಿಟ್ಟ ಕಾಫಿಯನ್ನು ನಾನು ಆರಾಮಾಗಿ ಕುಡಿಯುತ್ತಾ ಕುಳಿತಿದ್ದುದನ್ನು ನೋಡಿ ಚಾರ್ಲ್ಸ್ "ಅಪ್ಪಯ್ಯನ ಉಯಿಲಿನ ಸುದ್ಧಿ ನಿನಗೂ ಬಂದಿರಬಹುದು. ಏನು ನಿರ್ಧಾರ ಮಾಡಿದ್ದೀ.?"ಎಂದು ಅವನು ಕೇಳಿದಾಗ ಅವನ ಮುಖಕ್ಕೆ ಉಗಿಯಬೇಕನ್ನಿಸಿತು.

"ಕ್ಯಾಥ್ಲಿ ಬಗ್ಗೆ ನೀನೇನು ಯೋಚಿಸಿದ್ದೀ ಮೊದಲು ಹೇಳು..."ಎಂದೆ. "ಅವಳು ಬರೋದಾದ್ರೆ ಅವಳನ್ನ ಇಂಗ್ಲೆಂಡಿಗೆ ಕರ್‍ಕೊಂಡು ಹೋಗ್ತೀನಿ."ಎಂದು ಅವನು ಸಮಾಧಾನ ಹೇಳಿದಾಗ ನಾನು ಸ್ವಲ್ಪ ಹೆಚ್ಚಿನ ಜೋರುಧ್ವನಿಯಲ್ಲಿ: "ನೀನೇನು ಶಾಶ್ವತವಾಗಿ ಇಂಗ್ಲೆಂಡಿನಲ್ಲಿ ಗೂಟ ಬಡ್ಕೊಂಡಿರ್‍ತೀಯೇನು? ನಿನಗೆ ಆ ಸರ್ಕಾರ ಪೌರತ್ವವಂತು ಕೊಡೋಲ್ಲ. ಇಟಲಿ ಮೂಲದ ಪೀಟರ್‌ಬ್ರಕೂಟಿಗೆ ಸರ್ಕಾರಿ ಕೆಲಸ ದೊರಕದೆ ಇರೋ ಸುದ್ಧೀನ ನಾನು ಸಂಡೇ ಟೈಂಸ್‌ನಲ್ಲಿ ಓದಿದ್ದೀನಿ. ಯೋಚ್ನೆ ಮಾಡು, ಕ್ಯಾಥ್ಲಿ ಜತೆ ನೀನು ಇಲ್ಲೇ ಇರೋದಾದ್ರೆ ನನ್ನದೇನೂ ಅಭ್ಯಂತರವಿಲ್ಲ...ನಿಮ್ಮಪ್ಪಯ್ಯನ ಆಸೇನೂ ಅದೇ ಆಗಿತ್ತು."ಎಂದೆ. "ರಾಸ್ಕಲ್ , ನೀನೊಬ್ಬ ನರಿ. ಬ್ಲ್ಯಾಕ್‌ಮೈಲ್ ಮಾಡ್ತಾ ಇದ್ದೀಯ.."ಎಂದು ಬಯ್ದುಕೊಳ್ಳುತ್ತಾ ಸೀತಳಿಗೆ ವಿದಾಯ ಹೇಳುವ ಸೌಜನ್ಯವನ್ನು ತೋರಿ, ಕನಿಷ್ಠ ಕರ್ತವ್ಯದ ತೃಪ್ತಿಯಿಂದ ಹೊರಟು ನಿಂತ.

ಅವನು ಹೊರಟು ಹೋದೊಡನೆ ಜೇನ್ ಬಂದಳು. ಬುಟ್ಟಿ ತುಂಬಾ ಹಣ್ಣುಗಳು, ಚೀನಿಗೆ ಆಟಿಕೆಗಳು ಎಂದು ಒಂದು ಹೊರೆಯನ್ನೆ ಹೊತ್ತು ತಂದಳು.ಮಾತುಕತೆ ಅನಿವಾರ್ಯವಾಗಿ ಆಸ್ತಿ ವಿಲೇವಾರಿ ಬಗ್ಗೆ ಹೊರಳುತ್ತದೆಂದು ಗೊತ್ತಿದ್ದ ನಾನೆ ಮಾತಿಗಾರಂಭಿಸಿ, ಬದಲಾವಣೆ ಇಲ್ಲದ ಖಚಿತ ಧ್ವನಿಯಲ್ಲಿ"ಜೇ, ಆರ್ಥರ್ ಎಲ್ಲಾ ಸಂಗತೀನು ಹೇಳಿದ.ನಿನ್ನನ್ನ ಹಚ್ಕೊಂಡಿರೋ ಅವನ ಹೃದಯ ಮುರೀಬೇಡ."ಎಂದೆ. ಅವಳು: "ಚಂದ್ರೂ, ಅದು ನಿನಗೆ ಸಂಬಂಧಿಸಿಲ್ಲದಿರೋ ಸಂಗತಿ. ಆರ್ಥರ್ ಅಪ್ಪಯ್ಯನಿಗೂ ಕಾಗ್ದ ಬರ್‍ದಿದ್ದದ್ದು ಅಪ್ಪಯ್ಯ ನಿನಗೂ ಹೇಳಿರಬಹುದು. ಅಪ್ಪಯ್ಯ ಬುದ್ಧಿವಾದ ಹೇಳಿ ನನಗೂ ಕಾಗ್ದ ಬರ್‍ದಿದ್ದ.ಆಗಲೂ ನನಗೆ ಏನೂ ಅನ್ನಿಸಿರಲಿಲ್ಲ...."ಎಂದಾಗ ಇಂಥವಳ ಬಳಿ ಮಾತನಾಡುವುದನ್ನಾದರು ಏನನ್ನು ಎಂದು ನಾನು ಚಪ್ಪಲಿ ಮೆಟ್ಟಿಕೊಂಡು ಆಚೆ ಹೊರಡಲನುವಾದೆ. ಅದನ್ನು ಗಮನಿಸಿದ ಅವಳು "ನನಗೆ ತುರ್ತು ಕೆಲಸವಿದೆ. ನಾಳೆ ಮುಂಬಯಿ ವಿಮಾನ ಹತ್ತಾ ಇದ್ದೀನಿ. ನಿನ್ನ ನಿರ್ಧಾರ ಏನೂನ್ನೋದನ್ನ ಹೇಳಿಬಿಡು...ನಾನು ಏನು ಕೇಳ್ತಿದೀನಿ ಎಂದು ನಿನಗೂ ಗೊತ್ತು.."ಎಂದಳು. "ಕಾಗದ ಬರೆದು ತಿಳಿಸ್ತೀನಿ.."ಎಂದಷ್ಟೆ ಹೇಳಿ ಸರಸರ ಆಚೆ ನಡೆದೆ.

ಮಾರನೆ ದಿನ ವಿಮಾನನಿಲ್ದಾಣದಲ್ಲಿ ಮುಂಬಯಿ ವಿಮಾನ ಹತ್ತಿದರು. ಕ್ಯಾಥ್ಲಿ ತಂದೆ ಇದ್ದೂ ಇಲ್ಲದ ಹಾಗೆ ಬೆಳೆಯುತ್ತಿದ್ದ ತನ್ನ ಮಗುವನ್ನು ಎತ್ತಿಕೊಂಡು ಮೇಲಕ್ಕೆ ನೆಗೆದಿದ್ದ ವಿಮಾನದತ್ತ ಕೈ ಬೀಸುವಂತೆ ಸೂಚಿಸುತ್ತಿದ್ದಳು. ವಿಮಾನ ಕಣ್ಮರೆಯಾದಾಗ "ಚಂದ್ರೂ , ನಾನು ಇಲ್ಲೇ ಉಳ್ಕೊಂಡು ತಪ್ಪು ಮಾಡ್ತೀದ್ದೀನ ಅನ್ನೋದು ಅರ್ಥವಾಗಲೆ ಇಲ್ಲ.."ಎಂದು ಅವಳು ಹೇಳಿದಾಗ ನಾನು ಏನನ್ನು ಹೇಳಲು ಅಶಕ್ತನಾದೆ. ಮನಸ್ಸಿನಲ್ಲಿ ಜೇಕಬ್‌ನ ಆಸ್ತಿಯೆಲ್ಲ ಕ್ಯಾಥಿಗೂ ಅವಳ ಮಗುವಿಗೂ ಸೇರಬೇಕು ಎಂದು ನಿರ್ಧರಿಸಿ ನಾನು ಆ ಮಗುವನ್ನು ನೋಡಿ ಮುಗುಳ್ನಕ್ಕೆ...

ಪ್ರಜಾವಾಣಿಯಲ್ಲಿ ಪ್ರಕಟವಾದ ಕತೆ- ೨.೮.೧೯೮೧

ಸಣ್ಣಕತೆ-ಮನ್ನಿ

ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ ಜಾರಿಗೆ ತರುವುದರಲ್ಲಿ ಯಶಸ್ಸಿನ ಹಾದಿಯಲ್ಲಿರೋ ಈ ಸಂದರ್ಭದಲ್ಲಿ ನಮ್ಮೆಲ್ಲಾ ಸಂವೇದನೆಗಳು ಕನ್ನಡೀಕರಣಗೊಡಿರಬೇಕೆ ಹೊರತು ಅನ್ಯಭಾಷಾ ಲಕ್ಷಣದ ಉದ್ಗಾರಕ್ಕೂ ಅವಕಾಶವಿಲ್ಲ.

ಆ ಕಿಟಕೀನ ತೆಗೆಯೋ ಅವಕಾಷವೇ ಬಹಳ ಕಡಿಮೆ. ರಾಮನವಮಿ, ಗಣೇಶೋತ್ಸವ, ತಿರುಪ್ಪಾವೈ, ಕನ್ನಡ ರಾಜ್ಯೋತ್ಸವ ಇತರೆ ಸಾರ್ವಜನಿಕ ಮೈಕಾಸುರರ ಹಾವಳಿಯಿಂದಾಗಿ ಅದನ್ನು ತೆಗೆಯೋದು ಅಪರೂಪ.ಅಪರೂಪಕ್ಕೊಮ್ಮೆ ತನ್ನನ್ನು ಬಿಚ್ಚಿಕೊಂಡು ಅಷ್ಟೋ ಇಷ್ಟೋ ಬಾಹ್ಯ ಸಂಪರ್ಕ ಕಲ್ಪಿಸೋ, ತಂಪುಗಾಳಿಯನ್ನು ಒಳಕ್ಕೆ ನೂಕುವ ಅದನ್ನು ನಾನು ಪ್ರೀತಿಸೋದು ಅಸಹಜವೇನೂ ಅಲ್ಲ. ಜಸ್ಟ್ ಸಿಂಪ್ಲಿ ಐ ಲವ್ ಇಟ್.
ಕಿಟಕಿ ತೆಗೆದೊಡನೆ ಕಣ್ಣಿಗೆ ಪಚ್ಚೆಂದು ಹೊಡೆಯುವುದು :
೧. ರಸ್ತೆ.
೨ . ರಸ್ತೆಗಂಟಿಕೊಂಡಿರುವ ವಠಾರ.
೩. ವಠಾರಕ್ಕೆ ಅಂಟಿಕೊಂಡಿರುವ ಪೆಟ್ಟಿಗೆ ಅಂಗಡಿ.

ವಠಾರದಲ್ಲಿ ಒಟ್ಟು ಹದಿನೆಂಟು ಮನೆಗಳಿವೆ. ಬಹುತೇಕ ವಿವಿಧ ಪ್ರಬೇಧಗಳು ಅಂದರೆ ಮಧ್ವ, ಮುರುಕನಾಡು, ಅಯ್ಯಂಗಾರ್, ಅಯ್ಯರ್ ಹೀಗೆ ಅನೇಕ ಪ್ರಬೇಧ ಸೇರಿದ ಬ್ರಾಹ್ಮಣ ಮತಸ್ಥರೆ ಜಾಸ್ತಿ. ನಾನು ಈ ವಠಾರದ ಎದುರಿಗಿನ ಮಾಡಿ ಮೇಲಿನ ಇಪ್ಪತ್ತು ಇಂಟೂ ಹದಿನೈದು ಕೋಣೆ ಹಿಡಿದಿದ್ದೀನಿ. ಹಿಡಿದೊಡನೆಯೆ ನನಗು ಆ ಕಿಟಕಿಗೂ ಲವ್. ಬೇರೇನೂ ಮಾಡಲಾಗದಂತೆ ಸೆಳೆದಿಟ್ಟಿರುವ ಆ ಕಿಟಕಿಯಿಂದ ನೋಡಿದರೆ , ಆ ಹದಿನೆಂಟು ಮನೆಗಳ ಇತಿಹಾಸ ಬರೆಯುವಷ್ಟು ಮಾಹಿತಿಯೇನೊ ದಕ್ಕುತ್ತದೆ. ಆದರೇನು ಮಾಡಲಿ, ನಾನು ಆ ಕಿಟಕಿ ತೆಗೆಯೋಕ್ಕೆ ಹಾವಳಿಮುಕ್ತವಾಗಿ ಇರೋ ಅವಕಾಶವೇ ಬಹಳ ಕಡಿಮೆ.ಹೋಗಲೀಂದ್ರೆ ನನಗೂ ಬಾಹ್ಯ ಪ್ರಪಂಚಕ್ಕೂ ಸಂಪರ್ಕ ಇಲ್ಲವೆ ಇಲ್ಲಾನ್ನಬಹುದು. ಬ್ರಹ್ಮಚಾರಿ ಶತಮರ್ಕಟ. ಮಾತನಾಡಿದರೆ ಎಲ್ಲಿ ಏನಂಟಿಕೊಳ್ಳುತ್ತದೋ ಏನಾಗಿ ಹೋಗುತ್ತದೊ ಎಂಬಂತ ಅಂಜುಕುಳಿ ಸ್ವಭಾವದ ಮಂದಿಯೇ ಹೆಚ್ಚು. ಆದ್ದರಿಂದಲೇ ನಾನು ಮನುಷ್ಯ ಮುಟ್ಟಿದ ಗುಬ್ಬಿ.

ದಿಟ ಗುಬ್ಬಿಯಂತೆಯೆ ನಾನು ಅಂಜಿಕೊಂಡಿದ್ದೇನೆ. ಗಾಬರಿಯಾಗಿದ್ದೇನೆ. ಸಂಪರ್ಕ, ಸಹವಾಸವಾಗಲಿ ಏನೊಂದೂ ಬೇಡವೇ ಬೇಡ ಎಂಬ ನಿರ್ಧಾರ ಬಹಳ ಗಟ್ಟಿಯಾಗಿದೆ. ಆಫೀಸಾಯ್ತು- ರೂಮಾಯ್ತು-ಕಿಟಕಿಯಾಯ್ತು. ಕಿಟಕಿ ಇಲ್ಲದಿದ್ದರೆ ಹಾಸಿಗೆ - ಪುಸ್ತಕಗಳಾಯ್ತು. ಅಪರೂಪಕ್ಕೊಮ್ಮೆ ಕಾಫಿ ತಿಂಡಿ ಮಾಡಿಕೊಳ್ಳಲು ಬೇಸರವಾಗಿ ವಠಾರದ ಹುಡುಗರನ್ನು ಕರೆದು ಫ್ಲಾಸ್ಕು ಕೊಟ್ಟು ಹೋಟೆಲ್ಲಿಗೆ ಅಟ್ಟುತ್ತೇನೆ. ಆ ಹುಡುಗರೂ ಸಹ " ಮಾಮ" ಕೇಳಿದ್ದನ್ನು ಸಲೀಸಾಗಿ ಮಾಡಿಕೊಡುತ್ತವೆ. ಹಾಗೆ ಮಾಡಿ ಕೊಡೋದಕ್ಕೂ ಆ ಹುಡುಗರ ತಾಯ್ತಂದೆಯರ ವಿರೋಧ. " ಆ ರೂಮಿಗೆ ಹೋಗ್ಬೇಡಾಂತ ನಿನಗೆ ಎಷ್ಟು ಸಲ ಹೇಳೋದು?"ಅಂತ ಮಕ್ಕಳನ್ನ ದಂಡಿಸಿದ ವರದೀನ ಹುಡುಗರೇ ಬಹಳ ಪ್ರಾಂಪ್ಟಾಗಿ ತರ್‍ತಾರೆ. ಹಾಳಾಗಿ ಹೋಗಲೀಂತ ಬಾಹ್ಯ ಸಂಪರ್ಕ ಬೇಡಾಂತ ನಾನು ನನ್ನ ರೂಂನಲ್ಲಿರೋ ವಸ್ತುಗಳನ್ನೆ- ನಿರ್ಜೀವ ವಸ್ತುಗಳನ್ನೇ ಪ್ರೀತಿಸಲಾ‌ಅರಂಭಿಸಿದ್ದೇನೆ. ಅದರಲ್ಲೂ ಐ ಪ್ರಿಫರ್ ಜಸ್ಟ್ ದಿ ಬ್ಲಡಿ ವಿಂಡೋ.

ಹಾಗೆ ಹೇಳೋಕ್ಕೋದರೆ ಈ ಗುಬ್ಬೀನ ಮನುಷ್ಯ ಮುಟ್ಟೇ ಇಲ್ಲ.ಮುಟ್ಟೋಕಿದ್ದಾಗಲೇ ಮುದುಡಿ ಹೋದದ್ದು. ಒಮ್ಮೆ ಏನಾಯ್ತೂಂದರೆ , ಆಫೀಸಿನಿಂದ ಹೀಗೆ ಬರ್‍ತಿದ್ದಾಗ ಈ ವಠಾರದಲ್ಲಿ ಅರವತ್ತು ವರ್ಷಗಳಿಂದ ಸಂಸಾರ ಹೂಡಿರೋ ಚೂಡನಾಥಯ್ಯರ್ ನನ್ನನ್ನು ನೋಡಿದೊಡನೆಯೆ ಕೈಬೀಸಿ ಎತ್ತರದ ಧ್ವನಿಯಲ್ಲಿ " ಬಾರಯ್ಯ ಇಲ್ಲಿ.." ಎಂದು ಕೂಗಿದರು. ಕೂಗಿದ ಧಾಟಿಗೆ ನಾನು ದಿಗ್ಭ್ರಮಿಸಿ ಹೋದೆನಾದರೂ ಮರ್ಯಾದೆಯಿಂದ ಅವರ ಬಳಿ ಹೋಗಿ ನಿಂತೆ.ಎಷ್ಟೇ ಆಗಲಿ ವಯೋವೃದ್ಧರು. ಕನ್ನಡದಲ್ಲಿ ಕಥೆಗಳನ್ನು ಒಂದಾನೊಂದು ಕಾಲದಲ್ಲಿ ಬರೆದು ಅಲ್ಲೊಂದು ಇಲ್ಲೊಂದು ಪ್ರಕಟಿಸಿರೋ ಕಥೆಗಾರರು ಬೇರೆ. ನನ್ನನ್ನು ನಖಶೀಖಾಂತ ನೋಡಿದ ಆತ "ನೀನೆಯೋ ಆ ಮಲಯಾಳಿಗಳ ಮನೆ ಮೇಲಿರೋ ರೂಮಿನಲ್ಲಿರೋನು?" ಎಂದು ಕೇಳಿ ನಾನು ಮತ್ತಷ್ಟು ದಿಗ್ಭ್ರಮಿಸಿ ಹೋಗುವಂತೆ ಮಾಡಿದ್ಡರು. ತಮ್ಮ ಜನಿವಾರದಿಂದ ಬೆನ್ನ ತುರಿಕೆಯನ್ನು ಕಡಿಯುತ್ತಾ, ನಾನು ಹೌದೆಂದ್ದಷ್ಟೇ ಹೇಳಿ ಅಲ್ಲಿ ನಿಲ್ಲದೆ ಹೊರಟು ಬಂದೆ. ಬೆನ್ನ ಹಿಂದೆಯೇ " ಈಗಿನ ಕಾಲದ ಹುಡುಗರು . ಹಿರಿಯರೂಂದರೆ ಭಯ ಭಕ್ತೀನ್ನೋದೆ ಇಲ್ಲ. ಒಬ್ಬಂಟಿ, ಕರೆದು ಮಾತಾಡ್ಸೋಣ ಅಂದರೆ ಧಿಮಾಕು" ಎಂದು ಗೊಣಗಿಕೊಂಡ ಟೀಕೆ ಬಂದಿತ್ತು. ಹೀಗೆ ಇದೆ ರೀತಿ ಒಬ್ಬರ ಕಾಲನ್ನು ಮತ್ತೊಬ್ಬರು ಕಡಿಯುತ್ತಾ ಕುಳಿತಿರೋದೊ ಅಥವ ಯಾರಾದರೂ ಹೆಂಗಸರು ಬಟ್ಟೆ ಒಗೆಯುತ್ತಲೋ, ಆರ ಹಾಕುತ್ತಲೋ ಅಥವ ಯಾವುದಾದ್ರೂ ಮನೆ ಮಾಮಿಗಳು ಸಂಡಿಗೆ ಒಣ ಹಾಕುತ್ತಲೋ, ಇನ್ನಾರದೋ ಮನೆಯಲ್ಲಿ ಸತ್ಯನಾರಾಯಣ ಪೂಜೆ, ಇಲ್ಲವೆ ಮದುವೆ ಮುಂಜಿ ಸಂಭ್ರಮ ಇರುವ ಮಾಮೂಲಿ ದೃಶ್ಯಗಳು ನನ್ನ ಕಿಟಕಿಯಾಚೆ. ದರಿದ್ರ ಎಲ್ಲಾ ಮಾಮೂಲೆ. ಈ ಜಗತ್ತಿನಲ್ಲಿ ಬೇರೇನಾದರೂ ಜರುಗಲು ಸಾಧ್ಯವೆ ಎಂಬ ಉದಾಸೀನದಿಂದಲೂ ನಾನು ಕಿಟಕಿಯನ್ನು ತೆಗೆಯಲು ನಿರಾಕರಿಸಿದ್ದೂ ಉಂಟು.
*
*
*
ನಾನಿರುವ ರೂಮಿನ ಕೇಳಗಡೆ ಮನೆಯಲ್ಲಿರುವಾಕೆ ಒಂದು ದೊಡ್ಡ ಫ್ಯಾಕ್ಟರಿ ಆಸ್ಪತ್ರೆಯಲ್ಲಿ ಡಾಕ್ಟರಾಗಿದ್ದಾರೆ. ಕೇರಳದವರು. ಜೊತೆಯಲ್ಲಿ ಐದು ವರ್ಷದ ಮಗ. ತಾಯಿ-ತಂದೆ ಅಷ್ಟೆ. ಗಂಡ ಇಸ್ರೋದ ವಿಜ್ಞಾನಿ. ಕೊಚ್ಚಿನ್‌ನಲ್ಲಿದ್ದಾರಂತೆ. ವಾರಕ್ಕೊಮ್ಮೆ-ತಿಂಗಳಿಗೊಮ್ಮೆ ಬರುತ್ತಿರುತ್ತಾರಂತೆ. ಆತ ಬಂದಾಗ ಮಾತ್ರ ಆಕೆ ಕಾಣ ಸಿಗುವುದು. ಗಂಡನೊಂದಿಗೆ ಸಿನಿಮಾಕ್ಕೋ ಮತ್ತೊಂದಕ್ಕೋ ಹೋಗುತ್ತಿರುತ್ತಾರೆ. ನಾನು ಅವರನ್ನು ನೋಡಿದೊಡನೆಯೆ ತಲೆ ತಗ್ಗಿಸಿ ಹೊರಟು ಹೋಗುತ್ತಿರುತ್ತೇನೆ. ಎಂದೂ ಅದರ ಬಗೆಗೆ ತಲೆ ಕೆಡಿಸಿಕೊಳ್ಳೋಕ್ಕೆ ಹೋಗಿಲ್ಲ.ಅವರೂ ಅಷ್ಟೆ. ಇದೇ ಬೀದಿಲಿರೋ ನನ್ನ ಸಹೊದ್ಯೋಗಿ ಮಿತ್ರನ ಹೆಂಡತಿಗೂ ಈಕೆಗೂ ಸ್ವಲ್ಪ ಸಂಪರ್ಕ.ಅವರಿಬ್ಬರ ಭೇಟಿಯ ವಿವರಗಳನ್ನು ನನ್ನ ಸಹೊದ್ಯೋಗಿಮಿತ್ರ ಸಂದರ್ಭಾನುಸಾರ ಹೇಳುತ್ತಿರುತ್ತಾನೆ. ಹಾಗೆ ತಿಳಿದು ಬಂದ ವಿವರಗಳೆ ಈಗ ನಾನು ಇಲ್ಲಿ ದಾಖಲಿಸಿರುವುದು. ಸಹೊದ್ಯೋಗಿಮಿತ್ರನ ಹೆಂಡತಿಗೂ ಈಕೆಗೂ ಆಗಾಗ್ಗೆ ಜಗಳವಾದದ್ದೂ ಉಂಟು-ಮನಸ್ತಾಪ ಬೆಳೆದದ್ದೂ ಉಂಟು.
*
*
*
ಈ ಬಾರಿ ಬಹಳ ದಿನಗಳವರೆಗೆ ಕಿಟಕಿಯನ್ನು ಮುಚ್ಚೇ ಇದ್ದೆ. ಒಂದು ದಿನ ಎಲ್ಲವೂ ಶಾಂತವಾಗಿದ್ದಾಗ ಬೆಳ್ಳಂಬೆಳಿಗ್ಗೆ ಚುಮುಚುಮು ಬೆಳಕಿನಲ್ಲಿ ಬಿಸಿ ಬಿಸಿ ಕಾಫಿ ಮಾಡಿ ಕಿಟಕಿ ತೆಗೆದಾಗ ಆಶ್ಚರ್ಯ ಕಾದಿತ್ತು.ಆ ಕತ್ತಲೆಯ ಬೆಳಕಿನಲ್ಲೂ ಸ್ಪಷ್ಟವಿತ್ತು.ಇನ್ನೂ ಬೀದಿ ದೀಪ ಉರಿಯುತ್ತಿತ್ತು.ನಾನಾಕೇನ ಇಲ್ಲಿಯವರೆಗೂ ಕಂಡೇ ಇರಲಿಲ್ಲ. ಆ ಕ್ಷಣ ಯಾರಿರಬಹುದು ಎಂಬ ಕುತೂಹಲ ಹುಟ್ಟಿ ತಕ್ಷಣವೆ ಯಾರಾದರೇನಂತೆ ಎಂಬ ಉದಾಸೀನವೂ ಹುಟ್ಟಿ ಕುತೂಹಲ ಕ್ಷೀಣಿಸಿಹೋಯ್ತು.ಅದರ ಹಿನ್ನೆಲೆಯಲ್ಲಿ ಆಕೆ ಚೂಡನಾಥಯ್ಯರ್‌ರ ಮನೆ ಮುಂದಿನ ಅಂಗೈ ಅಗಲದ ಅಂಗಳವನ್ನು ತೊಳೆದು ರಂಗೋಲಿ ಹಾಕುತ್ತಿದ್ದುದರಿಂದ ಆಕೆ ಚೂಡನಾಥಯ್ಯರ್ ಮನೆಗೆ ಬಂದಿರುವಾಕೆ ಇರಬಹುದೆನ್ನುವ ಅಲ್ಪ ಸಮಾಧಾನಕರ ತೀರ್ಮಾನವೂ ಮೂಡಿಬಂತು.
ಯಾರಿರಬಹುದು?- ಕುತೂಹಲವನ್ನು ಉಪೇಕ್ಷಿಸಿದ ಮಾತ್ರಕ್ಕೆ ಸಾಯುತ್ತದೆಯೆ? ಅಂದು ಸಂಜೆಯೆ ವಠಾರದ ಹುಡುಗರನ್ನ ಹೋಟೆಲ್ಲಿಗೆ ಅಟ್ಟುವ ಮುನ್ನ ಕೇಳಿದೆ:
" ಲೋ, ಚೂಡನಾಥಯ್ಯರ್ ಮನೆಗೆ ಹೊಸದಾಗಿ ಬಂದಿದ್ದಾರಲ್ಲ, ಯಾರೋ ಅದು?"
" ಅಂದರೆ ..?"- ಮುಗ್ಧವಾದ ಪ್ರತಿ ಪ್ರಶ್ನೆ.
"ಹೆಂಗಸು..ಹೊಸದಾಗಿ ಬಂದಿದ್ದಾರಲ್ಲ.."
" ಅವರಾ..ಅವರು ಮನ್ನಿ.."
"ಮನ್ನಿ ಅಂದರೆ?"
"ಮನ್ನಿ ಅಂದರೆ ಮನ್ನಿ. ಅವರು ಆಗಲೆ ಬಂದು ಬಹಳ ದಿನಗಳಾದವು...."
- ಇನ್ನೂ ಹೆಚ್ಚಿಗೆ ತೋಡಿದರೆ ಹುಡುಗನಿಗೆ ಅವನ ತಾಯ್ತಂದೆಯರು ನನ್ನ ವಿರುದ್ಧ ನೀಡಿರುವ ಎಚ್ಚರಿಕೆಯನ್ನ ತೀವ್ರಗೊಳಿಸಿದಂತಾಗುತ್ತದೆ ಎಂದು ನಾನು ಸುಮ್ಮನಾಗಿ ಹುಡುಗನನ್ನು ಹೋಟೆಲ್ಲಿಗೆ ಅಟ್ಟಿದೆ.
*
*
*
ಇನ್ನೊಂದು ದಿನ, ಇನ್ನೂ ಚಿಕ್ಕ ಹುಡುಗನಿಗೆ ಕಾಫಿ ಯಾತ್ರೆಗೆ ಕಳಿಸುವ ಮುನ್ನ ಇನ್ನಷ್ಟು ಮಾಹಿತಿ ಗಿಟ್ಟಿಸಿದ್ದರಲ್ಲಿ- ಆಕೆ ಚೂಡನಾಥಯ್ಯರ್‌ರ ಸೊಸೆ ಎಂದು ತಿಳಿದು ಬಂತು. ಚೂಡನಾಥಯ್ಯರ್‌ರ ಮಗ ವೈದ್ಯನಾಥನ್ ಸಹ ಅಪ್ಪನಷ್ಟಲ್ಲದಿದ್ದರೂ ಸ್ವಲ್ಪ ಅಹಂಕಾರಿಯೇ ಎಂದನ್ನಬಹುದು. ಯಾವುದೋ ಫ್ಯಾಕ್ಟರಿಯಲ್ಲಿ ಅಕೌಂಟೆಂಟ್. ಅವನು ಸ್ಕೂಟರಿನಲ್ಲಿ ಹೋಗುವಾಗ ನಾನು ಎದುರಾದರೆ ಕಡೇಪಕ್ಷ ಮುಗುಳ್ನಗೆಯಾದರೂ ನಗುತ್ತಿದ್ದ. ಆಪ್ಪನಂತೆ ಗಂಟು ಮುಖದವನಲ್ಲ. ನನ್ನ ಅವನ ಸಂಬಂಧ ಆ ಮುಗುಳ್ನಗೆಯ ಮಿತಿಯಾಚೆ ಬೆಳೆಯಲೇ ಇಲ್ಲ.

ಒಂದು ದಿನ ವಠಾರದ ತಲೆ ಬಾಗಿಲಿನಲ್ಲಿ ಆಕೆ ಬೇರೊಬ್ಬ ಹೆಂಗಸಿನೊಂದಿಗೆ ಮಾತನಾಡುತ್ತಿದ್ದುದ್ಡು, ನಾನು ಲಬ್ಬೆಯ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ಕೊಳ್ಳುತ್ತಿದ್ದಾಗ ಕಾಣಿಸಿತು. ಸ್ವಲ್ಪ ಹತ್ತಿರದಿಂದ ನೋಡುವ ಎಂದು ಹೆಜ್ಜೆ ಹಾಕುತ್ತಿದ್ದಂತೆಯೆ, ನನಗೆ ಹೆಸರು ಗೊತ್ತಿರದ ನಮ್ಮ ಡಾಕ್ಟರ್ ಹೆಂಗಸು ಬರುತ್ತಿದ್ದುದನ್ನ ಗಮನಿಸಿದ ಪೆಟ್ಟಿಗೆ ಅಂಗಡಿ ಮುಂದೆ ಸಿಗರೇಟ್ ಹಚ್ಚಿದ ಪಟಾಲಂನವನೊಬ್ಬ ಇನ್ನೊಬ್ಬನಿಗೆ:

"ನೋಡೊ ಒಳ್ಳೆ ಮಲಯಾಳಿ ಫಿಗರ್ ಬರ್‍ತಾ‌ಇದೆ..." ಎಂದು ಹುಸಿ ನಕ್ಕದ್ದನ್ನನುಸರಿಸಿ ಕಿಸಕ್ಕೆಂದು ಪ್ರತಿಕ್ರಿಯಿಸಿದ್ದ ಇನ್ನೊಬ್ಬ "ಮಲಯಾಳಿ ಹೆಂಗಸೆಂದರೆ ಒಳ್ಳೆ ಖುಷಿ ಕೊಡ್ತಾರಂತೆ ಕಣೊ. ಅವರ ರಾಜ್ಯದಲ್ಲಿ ಎಲ್ಲಾ ತಳಕಬಳಕ. ಗಂಡು ಹೆಣ್ಣು ಸಹ, ಐ ಮೀನ್ ಹಾಸಿಗೇಲಿ.." ಎಂದಿದ್ದ. ಈ ಮಾಮೂಲಿ ಪಟಾಲಂಗೆ ಬೇರೇನೂ ಕೆಲಸವಿಲ್ಲ, ಹೋಗಿ ಬರೋರ್‍ನ ಚುಡಾಯಿಸೋದು ಬಿಟ್ಟರೆ.

ನಾನು ವಠಾರದ ತಲೆ ಬಾಗಿಲನ್ನ ಹಾದು ಅವರ ಕಣ್ಣಿಗೆ ಬೀಳದೆ ಅವರ ಸಂಭಾಷಣೆ ಕೇಳುವಂತೆ ಮರೆಯಾಗಿ ನಿಂತೆ. ಮನ್ನಿಯ ಸಂಭಾಷಣೆಯಲ್ಲಿ ಹೆಚ್ಚು ತಮಿಳು- ಅಲ್ಲಲ್ಲಿ ಒಳ್ಳೆ ಪ್ರೌಢಿಮೆಯ ಇಂಗ್ಲೀಷ್ ನುಸುಳುತ್ತಿತ್ತು. ಅದು ದೊಡ್ಡ ಸಂಭಾಷಣೆಯೇನೂ ಅಲ್ಲ. ಹರಕು ಮುರುಕು ತಮಿಳು ನನಗೂ ಗೊತ್ತಿದ್ದರಿಂದ ಸಂಗ್ರಹಿಸಲಾದ ವಿವರಗಳೆಂದರೆ:

ಆಕೆ ಸೊಸೆಯಾಗಿ ಬಂದ ಹೊಸತರಲ್ಲಿ ಮಾವನವರ ಮನೆಯಲ್ಲಿ ಹೆಚ್ಚಾಗಿ ಕನ್ನಡ ಬಳಕೆಯಲ್ಲಿದ್ದನ್ನ, ತತ್‌ಕ್ಷಣ ಆ ಬಳಕೆಗೆ ಒಗ್ಗದೆ ಇರೋದು, ತಾನು ತನ್ನ ತವರಿನಲ್ಲಿ ಮಾಡುತ್ತಿದ್ದ ಅಡಿಗೆಗೆ ಮನೆಯವರು ಒಗ್ಗದೆ ಇರೋದು, ಅವರ ಅಡಿಗೆಯನ್ನ ತಾನು ಎಷ್ಟೇ ಚೆನ್ನಾಗಿ ಮಾಡಿದರೂ ಮನೆಯವರ ಮೂದಲಿಕೆ, ತಾನು ಇಂಗ್ಲೀಷಿನಲ್ಲಿ ಬರೆದ ಕತೇನ ಓದಿ- " ನೀನು ಏನೇ ಬರೆದರೂ ಕನ್ನಡದಲ್ಲಿ ಬರೆ, ಬರದಿದ್ದರೆ ಕಲಿತುಕೋ, ಆ ದರಿದ್ರ ಕೊಂಗಾಟವನ್ನ ಬಿಟ್ಟು ಬಿಡು. ಆಗಲೇ ನಮಗೆ ಹೆಮ್ಮೆ." ಎಂದು ಅತ್ತೆ, ಮಾವ, ಗಂಡ ಎಲ್ಲರೂ ಛೇಡಿಸಿದ್ದು, ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡಿದ್ದ ಮಾಮಿ- ಮನ್ನಿಯ ಮದ್ರಾಸ್ ವಿಶ್ವವಿದ್ಯಾಲಯದ ಇಂಗ್ಲೀಷ್ ಗರ್ವವನ್ನ ಮುರಿಯೋ ನಿರ್ಧಾರದ ಧಾಟೀಲಿ- " ಹೌದಮ್ಮ ನೀನು ನಿನ್ನ ಗಂಡನ ಮನೆಗೆ ಬಂದ್ಮೇಲೆ ಗಂಡನ ಮನೆಯ ಆಚಾರ ವಿಚಾರಗಳಿಗೆ ಹೊಂದ್ಕೋ ಬೇಕು.ಆಗಲೆ ತವರಿಗೂ ಕೀರ್ತಿ. ನಿನ್ನ ಮಾವ- ಅತ್ತೆ - ಗಂಡ ಹೇಳೋದನ್ನ ಕೇಳು...ಅದೇ ನ್ಯಾಯ..." ಎಂದು ತೀರ್ಪಿತ್ತಿದ್ದರು.
*
*
*
ಅದೇನಾಯ್ತೋ ಏನೋ ಮೊಟ್ಟ ಮೊದಲ ಬಾರಿಗೆ ನನ್ನ ಆತ್ಮೀಯ ಕೋಣೆ ಅಸಹ್ಯವಾಯಿತು. ರಾತ್ರಿ ಮಲಗಿದಾಗ ಕಣ್ಮುಚ್ಚಿದೊಡನೆ ಮನ್ನಿಯ ಮುಖ, ಎಂ.ಎ ಇಂಗ್ಲೀಷ್ ಮನ್ನಿಯ ಮುಖ, ಇಲ್ಲಿಗೆ ಬಂದಾಗ‌ಎಷ್ಟೊಂದು ಕ್ಯೂಟ್ ಆಗಿದ್ದಳು. ಈಗ ಸಣ್ಣಗೆ ಬಡಕಲು - ಬಡಕಲಾಗಿ...ಇದರೊಂದಿಗೆ ಯಾರ ಮೇಲೋ ದ್ವೇಷ, ಚೂಡನಾಥಯ್ಯರ್ ಮೇಲೆ? ಉಹೂಂ. ಮನ್ನಿ ಅತ್ತೆ- ಗಂಡನ ಮೇಲೆ? ಊಹುಂ. ಹಾಗಾದರೆ ಯಾರ ಮೇಲೆ? ಅರ್ಥವಾಗದ ತಳಮಳ. ಎಷ್ಟೇ ಸೂಕ್ಷ್ಮವಾದರೂ ತಳಮಳದ - ದ್ವೇಷದ ಹಿನ್ನೆಲೆ ಅರ್ಥವಾಗುವ - ಸ್ಫುಟವಾಗುವ ಲಕ್ಷಣ ಕಾಣಲಿಲ್ಲ. ಎಂದೋ ಯಾರೋ ಬಿಟ್ಟಿ ಕೊಟ್ಟಿದ್ದರೆಂದು ತಂದು ಬಿಸಾಕಿದ್ದ ಬಹಳ ದಿನಗಳು ಓದದೆ ಇದ್ದ ಗೋಕಾಕ್ ಸಮಿತಿ ವರದಿಯ ಪೂರ್ಣ ಪಾಠ ಅದಾಗಿತ್ತು. ಅದರಲ್ಲಿ ಮನಸ್ಸನ್ನು ತೊಡಗಿಸಲಿಕ್ಕೇ ಆಗಿರಲಿಲ್ಲ. ಬೇರೆ ಯಾವುದೇ ಪುಸ್ತಕ ಇರಲಿಲ್ಲ. ಬಹಳ ಬೇಗನೆ ಹಾಸಿಗೆ ಹಾಸಿ ಉರುಳಿಕೊಂಡಿದ್ದೆ, ನಿದ್ದೆ ಬಾ ಎಂದರೂ ಎಲ್ಲಿಂದ ಬಂದಾತು?

ಮೆಲ್ಲನೆದ್ದು ಕಿಟಕಿ ತೆಗೆದಾಗ ಮನ್ನಿ ವಠಾರದ ತಲೆ ಬಾಗಿಲ ಜಗಲಿ ಮೇಲೆ ಮೂರ್‍ನಾಲ್ಕು ಪುಡಿ ಹುಡುಗರೊಂದಿಗೆ ಕುಳಿತಿದ್ದುದು ಕಾಣಿಸಿತು. ಕತೆ ಹೇಳುತ್ತಿದ್ದಳೆನೊ. ಹುಡುಗರಿಗೆ ತಮಿಳು ಅರ್ಥವಾಗುತ್ತಿತ್ತೋ ಅಥವ ಹರಕು ಮುರುಕು ಕನ್ನಡದಲ್ಲೇ ಹೇಳುತ್ತಿದ್ದಳೇನೊ. ಒಂದೆರಡು ನಿಮಿಷ ಹಾಗೆ ನೋಡುತ್ತಿದ್ದಾಗ ಆಕೆಯ ಗಂಡ ಬಂದು ಏನನ್ನೋ ಹೇಳುತ್ತಿದ್ದ. ಅವನು ಹಾವಭಾವ ನೋಡಿದರೆ ಸಿಟ್ಟಾಗಿದ್ದನೆಂದು ಕಾಣುತ್ತದೆ. ಆಕೆ ಎದ್ದು ಒಳ ಹೊರಟು ಹೋದಳು. ಪಾಪ ಮನ್ನಿ.

ಮನ್ನಿ, ಎಂಥಾ ಹೆಸರು? ಮುದ್ದಾಗಿ ಕರೆಯುವ ರೀತಿಯೋ ಅದು? ಹಾಗಾದರೆ ನಿಜವಾದ ಹೆಸರೇನೊ? ನಿಜವಾಗಿಯೂ ಒಬ್ಬ ವ್ಯಕ್ತಿಯ ಹೆಸರು ತಿಳಿದು ಕೊಳ್ಳಬೇಕೆನ್ನಿಸಿದ್ದು ಆಗಲೆ!

ಒಂದು ನಿಮಿಷ ಕಿಟಕಿಯಾಚೆ ನೋಡುತ್ತಿದ್ದೆ. ನಿರ್ಜನವಾದ ನಿರ್ಜೀವವಾದ ಬೀದಿ. ಮಂಕು ವಿದ್ಯುತ್ ಬೆಳಕಲ್ಲಿ ಖಾಲಿಖಾಲಿಯಾದ ಆ ಬೀದಿಯನ್ನ ಕಾಣಲಾಗದೆ ಕಿಟಕಿಯನ್ನ ರೋಷದಿಂದ ಪಟ್ಟೆಂದು ಶಬ್ಧ ಬರುವ ಹಾಗೆ ಮುಚ್ಚಿದೆ. ಪ್ರಥಮ ಬಾರಿಗೆ ಆ ಕಿಟಕಿಯ ಬಗೆಗೆ ದ್ವೇಷ ಉಮ್ಮಳಿಸಿಕೊಂಡು ಬಂದಿತ್ತು.

ಮಲಗಿದಾಗ ಕನಸಿನಲ್ಲಿ ತನ್ನ ಸಹೋದ್ಯೋಗಿಮಿತ್ರನ ಹೆಂಡತಿ ಅಬ್ಬರಿಸಿ " ನಿಮ್ಮ ರೂಮು ಕೆಳಗಿದಾಳಲ್ಲ, ಆ ಮಲೆಯಾಳದ ಮಿಟಕಲಾಡಿ, ಆಕೆಗೇನು ಗರ್ವಾರೀ, ಯುಗಾದಿ ಹಬ್ಬ , ಬಂದು ಅರಿಶಿನ ಕುಂಕುಮ ಇಟ್ಟುಕೊಡು ಹೋಗೂಂತ ಕರೆದರೆ ಬರಲೇ ಇಲ್ಲ. ಇನ್ನೊಂದು ದಿನ ಓಣಂ ಹಬ್ಬ- ನಮ್ಮ ಮನೆಗೆ ಊಟಕ್ಕೆ ಬನ್ನೀಂತ ಕರೀತಾಳಲ್ರಿ . ನಾಚಿಕೆ ಇಲ್ಲದೋಳು. ನಾನು ಹೋಗ್ತೀನ...ಹುಡುಗರ ಮೇಲೆ ಅದೆಂತಾ ಮೋಡಿ ಮಾಡಿದ್ದಾಳೊ, ಹೋಗ್ತೀವೀಂತ ಹಠ ಹಿಡಿದರು, ನಾಲ್ಕು ತದುಕಿ ಸುಮ್‌ನಾಗಿಸ್ದೆ. ಎಂಥಾ ಧಿಮಾಕೂ ರೀ ಆಕೇದು..." ಎಂದು ಕೂಗಡಿದಳು. ಎಲ್ಲೋ ಇದೆ ಮಾತು ಕೇಳಿದ್ದೆ ಈಗಾಗಲೆ.

ಬೆಳಗಿನ ತನಕ ಅದೇ ರೀತಿಯ ಅಬ್ಬರ. ಕೆಟ್ಟಕೆಟ್ಟದಾಗಿ ನನ್ನ ಕನಸಿನಲ್ಲಿ ನಡೆದೇ ಇತ್ತು. ಬೆಳಿಗ್ಗೆ ಸಂಪೂರ್ಣ ಎಚ್ಚರಾದಾಗ ನಾನು ಉಗಾದಿ ಹಬ್ಬದೂಟಕ್ಕೆ ಸಹೋದ್ಯೋಗಿಮಿತ್ರನ ಮನೆಗೆ ಹೋಗಿದ್ದಾಗ ಆಕೆ ಆಡಿದ್ದ ಮಾತುಗಳೇ ಕನಸಿನಲ್ಲಿ ಬಂದದ್ದೆಂದು ಖಚಿತವಾಗಿತ್ತು. ಇದ್ಯಾಕೆ ಹೀಗೆ ಕನಸಿನಲ್ಲಿ ಪುನರಾವರ್ತನೆಯಾಯಿತೋ ತಿಳಿಯದು. ಎದ್ಡು ಹೊರಗಡೆ ಬಾಗಿಲ ಬಳಿ ಬಿದ್ದಿದ್ದ ಪೇಪರ್ ತಂದು ಬಿಡಿಸಿದೆ. ಕನ್ನಡವನ್ನು ಎಲ್ಲ ಹಂತಗಳಲ್ಲೂ ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂಬ ಮುಖ್ಯಮಂತ್ರಿಗಳ ಮಾಮೂಲಿ ಹೇಳಿಕೆ ಶೀರ್ಷಿಕೆಯಾಗಿ ಪ್ರಕಟಗೊಂಡಿದ್ದುದು ನನ್ನ ಕಣ್ಣಿಗೆ ಪ್ರಪ್ರಥಮವಾಗಿ ಬಡಿದು- ಪೇಪರನ್ನ ಓದದೆ ಹಾಗೇ ಬಿಸಾಕಿದೆ.
*
*
*
ಕಿಟಕಿಯ ಮೇಲಿನ ದ್ವೇಷ, ತೀವ್ರವಾಗಿದ್ದರೂ ಚಟ ಸುಮ್ಮನೆ ಬಿಟ್ಟಾತೆ. ಬಹಳ ದಿನಗಳ ನಂತರ ಒಂದು ಬೆಳಿಗ್ಗೆ ತೆಗೆದಾಗ ಮೊದಲು ಗಮನ ಸೆಳೆದದ್ದು ಬೀಗ ತೆಗೆಯದೆ ಬಿಮ್ಮೆಂದು ಇದ್ದ ಲಬ್ಬೆಯ ಪೆಟ್ಟಿಗೆ ಅಂಗಡಿ. ಒಂದು ದಿನವೂ ಮುದುಕ , ಸಮಯಕ್ಕೆ ಸರಿಯಾಗಿ ತೆಗೆವುದು ತಪ್ಪಿಸದಿದ್ದವ ಇಂದೇಕೆ ತೆಗೆಯಲಿಲ್ಲ? ಆರೋಗ್ಯ ಸರಿ ಇಲ್ಲದಿರಬಹುದು ಎಂದು ಸುಮ್ಮನಾದೆ. ಐದಾರು ದಿನಗಳಾದರೂ ತೆಗೆಯಲೇ ಇಲ್ಲ. ಆಮೇಲೊಂದು ದಿನ ಅವನ ಅಂಗಡಿಯ ಬೆಂಚುಗಳನ್ನೆ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ ಮಾಮೂಲಿ ಪಟಾಲಂ ಸಿಕ್ಕಿದಾಗ ವಿಚಾರಿಸಿದೆ. ಅವರು ಹೇಳಿದಷ್ಟನ್ನ ಇಲ್ಲಿ ದಾಖಲಿಸುತ್ತಿದ್ದೇನೆ:"ಆ ಲಬ್ಬೆ ನನ್ಮಗನಿಗೆ ಬಹಳ ಗಾಂಚಾಲಿ ಸಾರ್, ಕನ್ನಡದಲ್ಲಿ ಮಾತೋಡೋಂದರೆ ಬರಾಕಿಲ್ಲ ಅಂತಾನೆ. ಅದಕ್ಕೆ ಯದ್ವಾ ತದ್ವ ದಬಾಯಿಸಿದ್ದಕ್ಕೆ, ಬಂದು ಗಲಾಟೆ ಮಾಡ್ತಾರೇಂತ ಪೊಲೀಸ್ ಕಂಪ್ಲೇಂಟ್ ಮಾಡ್ದಾಂತ ಗೊತ್ತಾಯ್ತು., ಅಷ್ಟೆ , ಅಂಗಡೀನೆಲ್ಲ ಉಡೀಸ್ ಮಾಡ್ಬಿಟ್ವಿ. ಊರಿಗೆ ಓಡಿಹೋದ ಆ ಕಂಜಿವೆಳ್ಳಂ ನನ್ಮಗ..." ಎಂದು ಕೇಕೆ ಹಾಕಿದರು.

ಪೊಲೀಸ್ನೋರ್‍ದು ಒಂದು ವರ್ಶನ್ ಇದೆ: " ಈ ತುಡುಗು ಮುಂಡೇವು ಸಿಗರೇಟು, ಬಾಳೆ ಹಣ್ಣು, ಟೀ ಅದೂ ಇದೂಂತ ಆಗ ಕೊಡ್ತೀವಿ ಈಗ ಕೊಡ್ತೀವೀಂತ ಮುನ್ನೂರ್ ರೂಪಾಯಿ ಸಾಲ ಉಳಿಸಿಕೊಂಡರಂತೆ. ಒಂದು ದಿನ ಜಬರ್ದಸ್ಥ್‌ನಲ್ಲೇ ಕೇಳಿದ್ನಂತೆ. ಇವ್ರೆಲ್ಲ ಸೇರ್ಕೊಂಡು ಮುಂಡೇ ಮಗನೆ ನಮ್ ದೇಶ್ದಲ್ಲಿ ಬಂದು ಕೆರಕೊಂಡು ತಿಂತೀಯಾಂತ ಅಂಗಡೀನೆಲ್ಲ ಲೂಟಿ ಮಾಡವ್ರೆ..."

ನಾನು ಏನನ್ನು ಪ್ರತಿಕ್ರಿಯಿಸಲಿಲ್ಲ. ಇದರ ಹಿನ್ನೆಲೆಗೆ ಈ ಹುಡುಗರಿಗೆ ಪ್ರೋತ್ಸಾಹವಾಗಿ ಚೂಡನಾಥಯ್ಯರ್ ಇದ್ದರೂನ್ನೋದು ನಿಜ. ಯಾಕಂದ್ರೆ ಅವರು ಆ ಹುಡುಗರನ್ನ ಗುಂಪು ಕಟ್ಟಿಕೊಂಡು ಆಗಾಗೆ ಮಾತಾಡುತ್ತಿದ್ದುದನ್ನು ನಾನೇ ನೋಡಿದ್ದೀನಿ.

ಇನ್ನೂ ಒಂದು ದಿನ , ಡಾಕ್ಟರಮ್ಮನೂ ಕೆಲಸಕ್ಕೆ ರಾಜೀನಾಮೆ ಕೊಟ್ಟು ಗಂಡನ್ನ ಹೋಗಿ ಸೇರಿಕೊಂಡರಂತೆ. ಅದಕ್ಕೂ ಚೂಡನಾಥಯ್ಯರ್‌ರವರ ವ್ಯಂಗ್ಯ ಇಲ್ಲದಿಲ್ಲ: " ಪಾಪ ಎಷ್ಟು ದಿನಾಂತ ತಾನೆ ಗಂಡನ್ನ ಬಿಟ್ಟಿರ್‍ತಾಳೆ ಹೇಳಿ.." ಆಕೆ ಬೆಂಗಳೂರು ಬಿಡುವುದಕ್ಕೆ ಚೂಡನಾಥಯ್ಯರ್ ಕಲ್ಪಿಸುವ ಕಾರಣ ಇಷ್ಟು. ಮೇಲ್ನೋಟಕ್ಕೆ ಅದಷ್ಟೆ - ಅದರಷ್ಟೆ ನಿಜ ಅನ್ನಿಸುವುದು ಬೇರೊಂದಿಲ್ಲ. ಒಳಕ್ಕೆ ಇಳಿದರೆ ಆ ಮಲಯಾಳಿ ಹೆಂಗಸು ಎಷ್ಟು ಪಾಡು ಪಟ್ಟಿದ್ದಳೋ...

ನಾನು ಕಿಟಕೀನ ಮತ್ತೆ ಪುನಃ ಬಹಳ ದಿನಗಳು ತೆಗೆಯಲೇ ಇಲ್ಲ. ಅಸಲಿಗೆ ರೂಮೆ ಸೇರುತ್ತಿರಲಿಲ್ಲ. ಬೆಳೆಗ್ಗೆ ಹೋದರೆ ಇನ್ಯಾವಾಗಲೋ ಬಂದು ರೂಮು ಸೇರಿಕೊಳ್ಳುತ್ತಿದ್ದೆ. ಇದ್ದಷ್ಟು ಗಳಿಗೆಯೂ ಆ ರೂಮು ನನ್ನ ಕೊರಳು ಹಿಚುಕುತ್ತಿದ್ದ ಅನುಭವ, ಥೂ ಅಂತ ಉಗೀಬೇಕೂನ್ನಿಸುತ್ತೆ.

ಎಷ್ಟೇ ಅಸಹ್ಯವಾದರೂ ಕಿಟಕೀನ ಇತ್ತಿಚೆಗೆ ತೆಗೆದೇ ಇರ್‍ತೀನಿ. ಅದೂ ಇಲ್ಲದಿದ್ದರೆ ಒಳಗಿನ ಧಗೆಗೆ ಸುಟ್ಟು ಹೋದೇನೋ ಎಂಬ ಭಯ. ಆಗೊಮ್ಮೆ ಈಗೊಮ್ಮೆ ತಂಪು ಗಾಳಿಯಾದರೂ ಬೀಸುತ್ತಿರಲಿ ಅನ್ನೋ ಆಸೆ.

ಆಗೊಮ್ಮೆ ಈಗೊಮ್ಮೆ ಮನ್ನಿ ಕಾಣಿಸ್ತಾ ಇರ್‍ತಾಳೆ. ಆದರೆ ಅವಳು ಹುಡುಗರ ಜೊತೆ ಮಾತಾಡಿದ್ದು ಕಾಣಿಸಲೇ ಇಲ್ಲ. ಆ ಹುಡುಗರೂ ಅಷ್ಟೆ. ಆಕೇನ ನೋಡಿದೊಡನೆ ಓಡಿ ಹೋಗಿ ಕಾಲುಗಳನ್ನ ತಬ್ಬಿಕೊಂಡು ಮನ್ನಿ ಮನ್ನೀಂತ ಲಲ್ಲೆಗರೆಯೋಲ್ಲ. ಇನ್ನೂ ಸಣ್ಣಗಾಗಿದ್ದಾಳೆ. ಆಗಾಗ ತನ್ನ ಮನೇಲಿ ಯಾರೂ ಇಲ್ಲದಾಗ ಹುಚ್ಚು ಹಿಡಿದ ಹಾಗೆ ಕೈಯಲ್ಲಿ ಯಾವುದೋ ಪುಸ್ತಕ ಹಿಡಿದುಕೊಂಡು ಹಾಲ್‌ನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತ ಜೋರಾಗಿ ಒದುತ್ತಾ ಇರುತ್ತಾಳೆ. ಬಹುಶಃ ` ಲರ್ನ್ ಕನ್ನಡ ಬಯ್ ಯುವರ್ ಸೆಲ್ಫ್ ' ಇರಬೇಕು. ಮದ್ರಾಸ್ ಯೂನಿವರ್ಸಿಟಿಯ ಎಂ.ಎ ಇಂಗ್ಲೀಶ್ ಮಾಡಿದ್ದಾಳೇನ್ನೊದರ ಲಕ್ಷಣ ಈಗಂತೂ ಕೊಂಚವೂ ಇಲ್ಲ. ಬಂದ ಹೊಸತರಲ್ಲಿ ಕಪ್ಪಗಿದ್ದರೂ ಎಷ್ಟೊಂದು ಲಕ್ಷಣವಾಗಿದ್ದಳು...

ಒಂದೆರಡು ದಿನ ನಾನು ಊರಲ್ಲಿರಲಿಲ್ಲ. ಪತ್ರಿಕೇಲಿ ಬಂದ ಸುದ್ಧಿಯನ್ನು ನಿರ್ಭಾವುಕನಾಗಿ ಇಲ್ಲಿ ದಾಖಲಿಸುತ್ತಿದ್ದೇನೆ.:

ಮೈಸೂರು,ಏ.೨೪- ಶಂಕರಪುರಂ ಬಡಾವಣೆಯ ವಠಾರವೊಂದರಲ್ಲಿ ಗೃಹಿಣಿಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದು ವರ್ಷದ ಹಿಂದೆ ತಾನೆ ಮದುವೆಯಾಗಿದ್ದ ಆಕೆಗೆ ಆಕೆಯ ಅತ್ತೆ, ಮಾವ, ಗಂಡ ವರದಕ್ಷಿಣೆಯ ತಗಾದೆ ತೆಗೆದು ಅವಳನ್ನು ಪ್ರತಿನಿತ್ಯ ಹಿಂಸಿಸಿದ್ದಾರೆಂದು ಕೋಲಾರದಲ್ಲಿರುವ ಆಕೆಯ ತಂದೆ ಹಾಗು ಮದ್ರಾಸಿನ ಕಾಲೇಜೊಂದರಲ್ಲಿ ಅಧ್ಯಾಪಕನಾಗಿರುವ ಆಕೆಯ ಅಣ್ಣ ಆರೋಪಿಸಿದ್ದಾರೆ.

ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
*
*
*
ನಾನು ಪುನಃ ಎಂದಿಗೂ ಆ ಕಿಟಕೀನ ತೆಗೀಲೆ ಇಲ್ಲ. ಮನ್ನಿ ಎಂದರೆ ತಮಿಳಿನಲ್ಲಿ ` ಅತ್ತಿಗೆ' ಎಂದರ್ಥ ಎಂಬುದನ್ನು ಇತ್ತೀಚೆಗೆ ತಾನೆ ತಿಳಿದುಕೊಂಡೆ. ಹಾಗೆಯೇ ಆಕೆಯ ಹೆಸರನ್ನೂ ಪತ್ರಿಕೆಗಳ ವರದಿಗಳ ಮುಖಾಂತರವೇ ತಿಳಿದುಕೊಂಡದ್ದು. ಬಹಳ ಮುದ್ದಾದ ಅಂದವಾದ ಹೆಸರು- ಇಳಂಗೊಡಿ. ಇಳಂಗೊಡಿ ಎಂದರೆ ಎಳೆಯ ಬಳ್ಳಿಯಂತೆ.

ನಾನು ಕಿಟಕಿ ತೆಗೀಲೆ ಇಲ್ಲ ಅಂತೆ ಹೇಳಿದೆನಲ್ಲವೆ? ಯಾಕೆಂದರೆ ನಾನು ಒಂದಾನೊಮ್ಮೆ ಗಾಢವಾಗಿ ಪ್ರೀತಿಸಿದ್ದ ಆ ರೂಮು ಬಿಟ್ಟು ಬಹಳ ದೂರದಲ್ಲಿ ಬೇರೊಂದು ರೂಮು ಹಿಡಿದಿದ್ದೀನಿ.!

ಈ ರೂಮಲ್ಲಿ ಕಿಟಕಿಗಳೆ ಇಲ್ಲ. ಗವಾಕ್ಷಿಯಂತದೇ ಎಂಥದೋ ಒಂದು ಇದೆ, ಬಹಳ ಎತ್ತರದಲ್ಲಿರೋ ಅದನ್ನು ನಾನು ತೆಗೆಯೋ ಸಂದರ್ಭವೇ ಇಲ್ಲ.
ಈ ರೂಮತೂ ನನ್ನ ಕೊರಳನ್ನ ಹಿಚುಕುತ್ತಾ ಇದೆ. ನಾನು ಇಲ್ಲೇ ಸತ್ತೋಗ್ತೀನೇನೋ ಅಂತನ್ನಿಸ್ತಿದೆ.
ಮನ್ನಿ ಆತಹತ್ಯೆಗೆ ಅವರಪ್ಪ ಹೇಳಿದ ಹಾಗೆ ಬರೀ ವರದಕ್ಷಿಣೆ ಬಾಕಿ ಮಾತ್ರ ಕಾರಣವೋ ಅಥವ ಬೇರಿನ್ನೇನಾದರು ಇತ್ತೆ? ನನಗಂತೂ ಸ್ಪಷ್ಟವಾಗಿಲ್ಲ. ಅದರ ಬಗೆಗಿನ ಪ್ರಶ್ನೆಗಳೂ ಈ ರೂಮಿನೊಂದಿಗೆ ಕೂಡಿಕೊಂಡು ಕೊರಳನ್ನು ಹಿಚುಕುತ್ತಲೇ ಇದೆ.

ತುಷಾರ ಮಾಸ ಪತ್ರಿಕೆಯಲ್ಲಿ ಪ್ರಕಟ- ಜೂನ್-೧೯೮೬